ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಶಸ್ಸಿನ ಹಾದಿಯಲ್ಲಿ ಹೊಸ ಪ್ರಯೋಗ

Last Updated 26 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಯುವ ಆಟಗಾರರ ಪ್ರತಿಭೆ ಶೋಧಿಸಿ ಸಮರ್ಥ ಆಟಗಾರರನ್ನು ರಾಷ್ಟ್ರಮಟ್ಟಕ್ಕೆ ಆಯ್ಕೆ ಮಾಡುವುದಕ್ಕಾಗಿಯೇ ರಾಜ್ಯದಲ್ಲಿ ಆರಂಭಿಸಲಾದ ಟೂರ್ನಿಗಳು ಸಂಘಟಕರ ಆಶಯಕ್ಕೆ ತಕ್ಕಂತೆ ಯಶಸ್ಸಿನ ಹಾದಿಯಲ್ಲಿ ಹೆಜ್ಜೆ ಹಾಕಿವೆ. ಯುವ ಆಟಗಾರರು ನಿರೀಕ್ಷೆಗೂ ಮೀರಿದ ಸಾಮರ್ಥ್ಯ ಪ್ರದರ್ಶಿಸಿ ಕರ್ನಾಟಕದ ಹೆಸರನ್ನು ಬೆಳಗುವ ಭರವಸೆ ಮೂಡಿಸಿದ್ದಾರೆ.

ಪತ್ರಿಕೆಯಲ್ಲಿ ಪ್ರಕಟಣೆ ನೋಡಿ ಆಟಗಾರರನ್ನು ಬೆಂಗಳೂರಿಗೆ ಕರೆದುಕೊಂಡು ಹೋಗುವ, ಅಲ್ಲಿ ಎರಡು ದಿನ ಇದ್ದು ಆಯ್ಕೆಗಾಗಿ ಆಸೆಗಣ್ಣಿನಿಂದ ಕಾಯುವ ಕಾಲವೊಂದಿತ್ತು. ವಾಪಸಾಗುವಾಗ ಆಯ್ಕೆ ಪ್ರಕ್ರಿಯೆ ಬಗ್ಗೆ ದೂರುಗಳು, ಅಸಮಾಧಾನದ ಮಾತುಗಳು ಸಾಮಾನ್ಯವಾಗಿದ್ದವು. ರಾಜ್ಯದ ಕಿರಿಯರ ಕಬಡ್ಡಿಗೆ ಸಂಬಂಧಿಸಿ ಮೂರು ವರ್ಷಗಳ ಹಿಂದೆ ಇಂಥ ಪರಿಸ್ಥಿತಿ ಇತ್ತು. ಇಂಥ ಆಯ್ಕೆ ಪ್ರಕ್ರಿಯೆಯಿಂದ ಎಲ್ಲ ಭಾಗದ ಗ್ರಾಮೀಣ ಆಟಗಾರರನ್ನು ಗುರುತಿಸಲು ಸಾಧ್ಯವಾಗುವುದಿಲ್ಲ ಎಂಬುದು ಮನವರಿಕೆಯಾಗಿ ರಾಜ್ಯ ಅಮೆಚೂರ್ ಕಬಡ್ಡಿ ಸಂಸ್ಥೆ ಹಮ್ಮಿಕೊಂಡ ರಾಜ್ಯ ಮಟ್ಟದ ಟೂರ್ನಿಗಳು ಈಗ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿವೆ. ಕನಿಷ್ಠ ರಾಜ್ಯ ಮಟ್ಟದಲ್ಲಾದರೂ ಸಾಮರ್ಥ್ಯ ಪ್ರದರ್ಶಿಸಲು ಅವಕಾಶ ಸಿಗುವುದರೊಂದಿಗೆ ಸುಲಭವಾಗಿ ಆಯ್ಕೆಗಾರರ ಗಮನ ಸೆಳೆಯಲು ಸಾಧ್ಯವಾಗುತ್ತದೆ ಎಂಬುದು ಈ ಟೂರ್ನಿಗಳ ವೈಶಿಷ್ಟ್ಯ.

ಆರು ದಶಕಗಳ ಹಿಂದೆ ರಾಷ್ಟ್ರೀಯ ಕಬಡ್ಡಿ ಫೆಡರೇಷನ್ ಆರಂಭವಾದ ಸಂದರ್ಭದಲ್ಲೇ ರಾಜ್ಯದಲ್ಲೂ ಕಬಡ್ಡಿ ಸಂಸ್ಥೆ ಅಸ್ತಿತ್ವಕ್ಕೆ ಬಂದಿತ್ತು. ಆದರೆ ಎಲ್ಲ ಜಿಲ್ಲೆಗಳು ಸದಸ್ಯತ್ವ ಹೊಂದಿರಲಿಲ್ಲ. ಈ ಕಾರಣದಿಂದ ಆಯ್ಕೆ ಟ್ರಯಲ್ಸ್‌ಗೆ ಯಾರೂ ಹೆಚ್ಚು ಒತ್ತು ನೀಡುತ್ತಿರಲಿಲ್ಲ. ಮಹಾರಾಷ್ಟ್ರ, ತಮಿಳುನಾಡು, ಕೇರಳ ಮುಂತಾದ ನೆರೆ ರಾಜ್ಯಗಳಲ್ಲಿ ರಾಜ್ಯ ಮಟ್ಟದ ಟೂರ್ನಿಗಳನ್ನು  ನಡೆಸುವ ಮೂಲಕವೇ ರಾಜ್ಯ ತಂಡವನ್ನು ಕಟ್ಟಲಾಗುತ್ತಿತ್ತು. ರಾಜ್ಯದ ಜೂನಿಯರ್ ಬಾಲಕರು 70ರ ದಶಕದಲ್ಲಿ ಮತ್ತು ಬಾಲಕಿಯರು 2004ರಲ್ಲಿ ರಾಷ್ಟ್ರೀಯ ಚಾಂಪಿಯನ್ ಆದದ್ದು ಬಿಟ್ಟರೆ ಹೆಚ್ಚಿನ ಸಾಧನೆ ಕಂಡುಬರಲಿಲ್ಲ. ಪ್ರತಿಭೆಗಳಿದ್ದೂ ರಾಷ್ಟ್ರಮಟ್ಟದಲ್ಲಿ ಅದನ್ನು ಪ್ರದರ್ಶಿಸುವುದಕ್ಕೆ ಅವಕಾಶ ನೀಡಲಾಗುತ್ತಿಲ್ಲ ಎಂಬ ಕೊರಗು ಕಾಡಿದ್ದರಿಂದ ಇತರ ರಾಜ್ಯಗಳ ಹಾದಿಯಲ್ಲೇ ನಡೆಯಲು ರಾಜ್ಯ ಸಂಸ್ಥೆ ನಿರ್ಧರಿಸಿತು. ರಾಜ್ಯಮಟ್ಟದ ಮೊದಲ ಟೂರ್ನಿಗೆ ಆತಿಥ್ಯ ವಹಿಸಿದ್ದು ಹಾವೇರಿ ಜಿಲ್ಲೆಯ ಬ್ಯಾಡಗಿ. 2012ರಲ್ಲಿ ಸಬ್ ಜೂನಿಯರ್ ಮತ್ತು ಜೂನಿಯರ್ ಬಾಲಕ-–ಬಾಲಕಿಯರ ಟೂರ್ನಿ ಅಲ್ಲಿ ನಡೆದಿತ್ತು. ಕಳೆದ ವರ್ಷ ಜೂನಿಯರ್ ಬಾಲಕ-–ಬಾಲಕಿಯರ ಟೂರ್ನಿ ಚಿತ್ರದುರ್ಗದಲ್ಲಿ ಮತ್ತು ಸಬ್ ಜೂನಿಯರ್ ಟೂರ್ನಿ ದಕ್ಷಿಣ ಕನ್ನಡದ ವಿಟ್ಲದಲ್ಲಿ ನಡೆದಿತ್ತು. ಈ ಬಾರಿ ಹುಬ್ಬಳ್ಳಿಯಲ್ಲಿ ಜೂನಿಯರ್ ವಿಭಾಗದ ಟೂರ್ನಿ ನಡೆದಿದೆ. ಸಬ್ ಜೂನಿಯರ್ ವಿಭಾಗದವರ ಶಕ್ತಿ ಪ್ರದರ್ಶನಕ್ಕೆ ತುಮಕೂರು ವೇದಿಕೆಯಾಗಿತ್ತು.

ಹೊಸ ಪ್ರಯೋಗ ಆರಂಭವಾದ ನಂತರ ಮೂರು ವರ್ಷಗಳಲ್ಲಿ ರಾಜ್ಯದ ಯುವ ಕಬಡ್ಡಿ ಸಾಕಷ್ಟು ಪ್ರಗತಿ ಕಂಡಿದೆ ಎಂಬುದು ‘ಹುಡುಗರ’ ಆಟವನ್ನು ಹತ್ತಿರದಿಂದ ನೋಡುತ್ತಿರುವವರ ಅನಿಸಿಕೆ. ಹೊಸ ಪ್ರಯೋಗಕ್ಕೆ ಒಂದೇ ವರ್ಷದಲ್ಲಿ ಫಲ ಸಿಕ್ಕಿದೆ. ಕಳೆದ ಬಾರಿ ರಾಷ್ಟ್ರೀಯ ಜೂನಿಯರ್ ಟೂರ್ನಿಯಲ್ಲಿ ಬಾಲಕಿಯರ ತಂಡ ರನ್ನರ್ ಅಪ್ ಆಗಿದ್ದರೆ ಬಾಲಕರ ತಂಡ ಕ್ವಾರ್ಟರ್ ಫೈನಲ್ ವರೆಗೆ ತಲುಪಿತ್ತು. ಈ ಬಾರಿ ರಾಜ್ಯದ ತಂಡಗಳು ಇನ್ನಷ್ಟು ಬಲಿಷ್ಠವಾಗಿದ್ದು ಪ್ರಶಸ್ತಿ ಎತ್ತಿ ಹಿಡಿಯಲು ಸಮರ್ಥವಾಗಿವೆ ಎಂಬ ಭರವಸೆ ಮೂಡಿದೆ. ಹುಬ್ಬಳ್ಳಿಯಲ್ಲಿ ನಡೆದ ಟೂರ್ನಿಯಲ್ಲಿ ಯುವ ಆಟಗಾರರು ಆಡಿದ ವಿಧಾನ ಕಂಡ ಪ್ರತಿಯೊಬ್ಬರಲ್ಲೂ ಕನಸಿನ ಬೀಜ ಮೊಳಕೆಯೊಡೆದಿದೆ.

ಹಳೆಯ ಆಯ್ಕೆ ಪದ್ಧತಿಗೂ ಈಗಿನ ರೀತಿಗೂ ಅಜಗಜಾಂತರವಿದೆ. ಹೊಸ ವಿಧಾನ ಜಾರಿಗೆ ಬಂದ ನಂತರ ಸಾಕಷ್ಟು ಪ್ರತಿಭೆಗಳು ಬೆಳಕಿಗೆ ಬರುತ್ತಿದ್ದಾರೆ. ಇದು ರಾಜ್ಯ ಕಬಡ್ಡಿಗೆ ಸಂಬಂಧಿಸಿ ಅತ್ಯಂತ ಮಹತ್ವದ ಬೆಳವಣಿಗೆ. ಹಿಂದೆ ಆಯ್ಕೆ ಪ್ರಕ್ರಿಯೆ ನಡೆಯುವ ವಿಷಯ ಪತ್ರಿಕೆಗಳ ಮೂಲಕ ತಿಳಿದು ಆಟಗಾರರು ಬಂದರಾಯಿತು, ಇಲ್ಲದಿದ್ದರೆ ಇಲ್ಲ. ಈಗ ಹಾಗಲ್ಲ. ತಂಡವನ್ನು ಸಜ್ಜು ಮಾಡಿ ಕಳುಹಿಸುವ ಜವಾಬ್ದಾರಿ ಸಂಸ್ಥೆಗಳ ಮೇಲಿದೆ. ಜಿಲ್ಲೆಗಾಗಿ ಆಡಿ ಗೆಲ್ಲಬೇಕೆಂಬ ಛಲ ಆಟಗಾರರಲ್ಲೂ ಮೂಡುತ್ತಿದೆ. ಇದೆಲ್ಲವೂ ನಮ್ಮಲ್ಲಿ ಕಬಡ್ಡಿಯನ್ನು ಎತ್ತರಕ್ಕೆ ಕೊಂಡೊಯ್ಯಲು ಖಂಡಿತ ಸಹಕಾರಿಯಾಗಲಿದೆ. ಪ್ರೋ ಕಬಡ್ಡಿಯಿಂದಾಗಿ ಕಬಡ್ಡಿಯ ಕಡೆಗೆ ಜನರ ಒಲವು ಕೂಡ ಹೆಚ್ಚಿದೆ. ಸೂಕ್ತ ತರಬೇತಿ, ಪ್ರೋತ್ಸಾಹ ನೀಡಿ ಯುವಕರನ್ನು ಸಜ್ಜುಗೊಳಿಸಲು ಇದು ಸಕಾಲ.

–ಬಿ.ಸಿ.ರಮೇಶ್‌, ಅಂತರರಾಷ್ಟ್ರೀಯ ಮಾಜಿ ಆಟಗಾರ

ಆಳ್ವಾಸ್‌ನಂಥ ಕ್ರೀಡಾ ಪ್ರಿಯ ಶಿಕ್ಷಣ ಸಂಸ್ಥೆಗಳಲ್ಲಿ ತರಬೇತಿ ಪಡೆಯುತ್ತಿರುವ ಕರಾವಳಿ ತಂಡಗಳು, ಭಾರತೀಯ ಕ್ರೀಡಾ ಪ್ರಾಧಿಕಾರ, ಕ್ರೀಡಾ ವಸತಿ ನಿಲಯಗಳಲ್ಲಿ ಕಬಡ್ಡಿ ಕಲಿಯುತ್ತಿರುವ ಬೆಂಗಳೂರು, ಧಾರವಾಡ, ಕೋಲಾರ ಮತ್ತಿತರ ಜಿಲ್ಲೆಗಳ ತಂಡಗಳ ಆಟಗಾರರು ಈ ಬಾರಿಯ ಟೂರ್ನಿಯಲ್ಲಿ ಅಪ್ರತಿಮ ಪ್ರದರ್ಶನ ನೀಡಿ ಹೊಸ ತಲೆಮಾರಿನ ಮೂಲಕ ಕಬಡ್ಡಿ ಮರುಹುಟ್ಟು ಪಡೆಯುತ್ತದೆ ಎಂಬ ಆಸೆಯ ಬೀಜ ಬಿತ್ತಿದ್ದಾರೆ. ಕೋಲಾರ ಜಿಲ್ಲಾ ತಂಡದ ವಿರುದ್ಧ ನಡೆದ ಸೆಮಿಫೈನಲ್‌ನ ಗೋಲ್ಡನ್ ರೈಡ್ ಸಂದರ್ಭದಲ್ಲಿ ಉಡುಪಿ ತಂಡದವರು ತೋರಿದ ಧೈರ್ಯ ಮತ್ತು ತಕ್ಷಣದಲ್ಲಿ ಯೋಜನೆ ರೂಪಿಸಿ ಪಂದ್ಯ ಗೆದ್ದ ವಿಧಾನ ಮಣ್ಣಿನ ಮಕ್ಕಳ ಆಟದ ವೈಭವವನ್ನು ಎತ್ತಿ ಹಿಡಿದಿತ್ತು.

ಹೆಚ್ಚಿದ ಉತ್ಸಾಹ, ಜವಾಬ್ದಾರಿ
1972ರಲ್ಲಿ ರಾಷ್ಟ್ರೀಯ ಕಬಡ್ಡಿ ಫೆಡರೇಷನ್ ಭಾರತೀಯ ಅಮೆಚೂರ್ ಕಬಡ್ಡಿ ಫೆಡರೇಷನ್ ಆಗಿ ಮಾರ್ಪಾಟಾಯಿತು. ರಾಜ್ಯದಲ್ಲೂ ಅಮೆಚೂರ್ ಕಬಡ್ಡಿ ಸಂಸ್ಥೆ ಅಸ್ತಿತ್ವಕ್ಕೆ ಬಂತು. ಆರಂಭದ ವರ್ಷಗಳಲ್ಲಿ ಕೇವಲ 14 ಜಿಲ್ಲೆಗಳು ಮಾತ್ರ ಇದರಲ್ಲಿ ಸದಸ್ಯತ್ವ ಹೊಂದಿದ್ದವು. ಆದರೆ ರಾಜ್ಯ ಮಟ್ಟದಲ್ಲಿ ಟೂರ್ನಿಗಳು ಆರಂಭಗೊಂಡ ನಂತರ ಇನ್ನಷ್ಟು ಜಿಲ್ಲೆಗಳಲ್ಲಿ ಅಮೆಚೂರ್ ಕಬಡ್ಡಿ ಸಂಸ್ಥೆಗಳು ಹುಟ್ಟಿಕೊಂಡವು. ರಾಜ್ಯ ಸಂಸ್ಥೆಯ ಪದಾಧಿಕಾರಿಗಳ ಆಯ್ಕೆಗೆ ಈ ಹಿಂದೆ ರಾಜ್ಯದ 85 ಕ್ಲಬ್‌ಗಳು ಮತ ಹಾಕುತ್ತಿದ್ದವು. ಈಗ ಪ್ರತಿ ಜಿಲ್ಲೆಯಲ್ಲಿ ಎರಡು ಮತಗಳಿವೆ. ಹೀಗಾಗಿ ಹೆಚ್ಚು ಹೆಚ್ಚು ಜಿಲ್ಲೆಗಳನ್ನು ಸಂಸ್ಥೆಯ ವ್ಯಾಪ್ತಿಗೆ ತರುವ ಪ್ರಯತ್ನವೂ ನಡೆಯುತ್ತಿದೆ. ಕಳೆದ ಬಾರಿ ಕೊಡಗು, ರಾಮನಗರ, ಚಿಕ್ಕಬಳ್ಳಾಪುರ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳು ಸೇರ್ಪಡೆಯಾಗುವುದರೊಂದಿಗೆ ಈಗ ಸಂಸ್ಥೆಯಲ್ಲಿ ಒಟ್ಟು 23 ಜಿಲ್ಲೆಗಳು ಇವೆ. ಸದಸ್ಯತ್ವ ಹೆಚ್ಚಿದಷ್ಟು ಹೋರಾಟದ ಕಳೆ ಹೆಚ್ಚುತ್ತದೆ ಎಂದೇ ಅರ್ಥ. ರಾಜ್ಯ ತಂಡಕ್ಕೆ  ಅತ್ಯುತ್ತಮ ಆಟಗಾರರನ್ನು ಆಯ್ಕೆ ಮಾಡಲು ಇದು ಪರೋಕ್ಷವಾಗಿ ನೆರವಾಗುತ್ತದೆ. ತಂಡವನ್ನು ಸಜ್ಜುಗೊಳಿಸಿ ರಾಜ್ಯ ಮಟ್ಟಕ್ಕೆ ಕರೆದುಕೊಂಡು ಹೋಗಬೇಕಾದ, ಜಯ ಗಳಿಸಲು ಸೂಕ್ತ ತರಬೇತಿ ನೀಡಬೇಕಾದ ಜವಾಬ್ದಾರಿ ಜಿಲ್ಲಾ ಸಂಸ್ಥೆಗಳ ಕಾರ್ಯದರ್ಶಿಗಳದ್ದು. ಹೀಗಾಗಿ ಅವರು ಚುರುಕಿನಿಂದ ಕಾರ್ಯನಿರ್ವಹಿಸಬೇಕಾಗುತ್ತದೆ. ಇದು ಕೂಡ ಕಬಡ್ಡಿಯ ಬೆಳವಣಿಗೆಗೆ ನೆರವಾಗುತ್ತದೆ. ಹುಬ್ಬಳ್ಳಿ ಟೂರ್ನಿ ಮುಗಿದ ಕೂಡಲೇ ಧಾರವಾಡ ಜಿಲ್ಲೆಯ ಶಾಲಾ ಕಾಲೇಜುಗಳಲ್ಲಿ ಕಬಡ್ಡಿ ತರಬೇತಿ ನೀಡಲು ಜಿಲ್ಲಾ ಸಂಸ್ಥೆ ಯೋಜನೆ ಹಾಕಿಕೊಂಡಿರುವುದು ಇಂಥ ಬೆಳವಣಿಗೆಯ ಒಂದು ಭಾಗ.

ಸಹಜ ಶಕ್ತಿ ಗುರುತಿಸಬೇಕು

ರಾಜ್ಯದ ಜೂನಿಯರ್ ಬಾಲಕರ ತಂಡದ ತರಬೇತುದಾರರಾಗಿದ್ದ, ಕೋಲಾರ ತಂಡದ ಕೋಚ್‌ ಶ್ರೀನಿವಾಸ ರಾಜು ಯುವಕರ ಸಹಜ ಶಕ್ತಿಯ ಮೇಲೆ ನಂಬಿಕೆ ಇರಿಸಿಕೊಂಡಿದ್ದಾರೆ. ‘ಕೆಲವು ಜಿಲ್ಲೆಗಳಲ್ಲಿ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿಭಾವಂತ ಆಟಗಾರರು ಇದ್ದಾರೆ. ಅವರನ್ನು ಗುರುತಿಸಲು ಈಗಿನ ಪದ್ಧತಿ ಪೂರಕವಾಗಿದೆ. ಸಹಜವಾಗಿ ‘ಫಿಟ್’ ಆಗಿರುವವರು ಮತ್ತು ಶ್ರಮವಹಿಸಿ ಆಡುವವರನ್ನು ಆಯ್ಕೆ ಮಾಡಿ ತರಬೇತಿ ನೀಡಿದರೆ ರಾಜ್ಯದಲ್ಲಿ ಬಲಿಷ್ಠ ತಂಡವನ್ನು ಕಟ್ಟಲು ಸಾಧ್ಯ’ ಎಂಬುದು ಶ್ರೀನಿವಾಸ ಅವರ ಅನಿಸಿಕೆ.

ರಾಜ್ಯ ಟೂರ್ನಿ ಆರಂಭಗೊಂಡ ನಂತರ ಜೂನಿಯರ್ ವಿಭಾಗದ ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿಯನ್ನು ಯಾರಿಗೂ ಬಿಟ್ಟುಕೊಡದ ದಕ್ಷಿಣ ಕನ್ನಡ ಜಿಲ್ಲಾ ತಂಡಕ್ಕೆ ಹಂಸವತಿ ಕೋಚ್. ‘ಹೊಸ ವಿಧಾನದ ಆಯ್ಕೆ ಪ್ರಕ್ರಿಯೆಯಿಂದಾಗಿ ರಾಜ್ಯದ ಕಬಡ್ಡಿಗೆ ಹೊಸ ಕಳೆ ಬಂದಿದೆ. ಪ್ರತಿಭೆಗಳು ಹೊರಹೊಮ್ಮಲು ಟೂರ್ನಿಗಳು ನೆರವಾಗುತ್ತಿವೆ. ಜಿಲ್ಲೆಯ ಗೆಲುವಿಗಾಗಿ ಆಡುವುದರಿಂದ ಆಟಗಾರರ ಛಲ ಹೆಚ್ಚಿದೆ. ಪ್ರತಿ ತಂಡ ಕನಿಷ್ಠ ಎರಡು ಪಂದ್ಯ ಆಡುವುದರಿಂದ ಪ್ರತಿಭೆಗಳನ್ನು ಗುರುತಿಸಲು ಟೂರ್ನಿ ಸಹಕಾರಿ’ ಎನ್ನುತ್ತಾರೆ ಹಂಸವತಿ.

‘ಜಿಲ್ಲಾ ಸಂಸ್ಥೆಗಳನ್ನು ಜಾಗೃತಗೊಳಿಸಿದ್ದು ಹಾಗೂ ಕಾರ್ಯದರ್ಶಿಗಳಲ್ಲಿ ಚುರುಕು ಮೂಡಿಸಿದ್ದು ರಾಜ್ಯ ಟೂರ್ನಿಗಳ ಮಹತ್ವದ ಸಾಧನೆ. ಪ್ರತಿಭೆಗಳಿದ್ದೂ ರಾಜ್ಯ ಮಟ್ಟದಲ್ಲಿ ಆಡಲು ಅವಕಾಶವಿಲ್ಲದವರಿಗೆ ಈ ಟೂರ್ನಿಗಳು ಆಶಾಕಿರಣವಾಗಿವೆ. ಗ್ರಾಮೀಣ ಪ್ರತಿಭೆಗಳಿಗೆ ರಾಜ್ಯ ಮಟ್ಟದಲ್ಲಾದರೂ ಆಡಲು ಸಾಧ್ಯವಾಗುತ್ತಿದೆ ಎಂಬುದು ಮಹತ್ವದ ಬೆಳವಣಿಗೆಯೇ ಸರಿ’ ಎಂಬುದು ಬಾಲಕರ ವಿಭಾಗದ ಚೊಚ್ಚಲ ಪ್ರಶಸ್ತಿ ಗೆದ್ದ ಉಡುಪಿ ತಂಡದ ಕೋಚ್ ಸತೀಶ ನಾಯಕ ಅವರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT