ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಶಸ್ಸು ಕಾಣುವುದೇ ಪ್ಲಾಸ್ಟಿಕ್‌ ಮನಿ ಯೋಜನೆ

Last Updated 7 ಜುಲೈ 2015, 19:51 IST
ಅಕ್ಷರ ಗಾತ್ರ

ತಿಂಗಳ ಶಾಪಿಂಗ್ ಮಾಡುವುದರಿಂದ ಹಿಡಿದು, ದಿನದ ತರಕಾರಿ ತರುವವರೆಗೆ; ಅಪರೂಪದ ಚಲನಚಿತ್ರ ನೋಡುವುದರಿಂದ ಹಿಡಿದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತಹ ಅನಿವಾರ್ಯ ಸಂದರ್ಭಗಳಲ್ಲಿ; ವಾಹನಗಳಿಗೆ ಡೀಸೆಲ್–ಪೆಟ್ರೊಲ್‌ ತುಂಬಿಸುವಾಗ; ಮನೆ ಬಾಗಿಲಿಗೆ ಅಡುಗೆ ಅನಿಲ ಸಿಲಿಂಡರ್ ಬಂದಾಗ... ಈ ಎಲ್ಲ ಸಂದರ್ಭಗಳಲ್ಲಿಯೂ ಇನ್ನು ಮುಂದೆ ನಗದು ಹಣವನ್ನು ಹೊರಗೆ ತೆಗೆಯಬೇಕಾದ ಪ್ರಮೆಯ ಇರುವುದಿಲ್ಲ!

ನಿಮ್ಮಲ್ಲಿನ ಪ್ಲಾಸ್ಟಿಕ್‌ ಮನಿ ಅರ್ಥಾತ್‌ ಡೆಬಿಟ್/ಕ್ರೆಡಿಟ್ ಕಾರ್ಡ್ ಈ ಎಲ್ಲಾ  ವಹಿವಾಟುಗಳಿಗೆ ಹಣ ಪಾವತಿಸುವ ಕೆಲಸವನ್ನು ನಿರ್ವಹಿಸಲಿದೆ!

ನಗದು ರಹಿತ ಆರ್ಥಿಕತೆಗೆ ಹೆಚ್ಚಿನ ಬಲ ತುಂಬುವ ಉದ್ದೇಶದಿಂದ ಕೇಂದ್ರ ಸರ್ಕಾರ ‘ಪ್ಲಾಸ್ಟಿಕ್ ಮನಿ’ ಮಂತ್ರವನ್ನು ಜಪಿಸುತ್ತಿದೆ. ಇದರಿಂದ ಅಕ್ರಮವಾಗಿ ಮುಚ್ಚಿಟ್ಟ ‘ಮನಿ’ ಕೂಡ ಬಯಲಿಗೆ ಬರಲಿದೆ. ಬ್ಯಾಂಕುಗಳಲ್ಲಿ ಹಣ ತುಂಬಲಿದೆ. ದೇಶದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ.  ಇದಷ್ಟೇ ಅಲ್ಲ, ಈ ಯೊಜನೆಯ ಆಳ ಇನ್ನೂ ದೊಡ್ಡದಿದೆ. ಅದೇನೇ ಇರಲಿ, ಸಾಮಾನ್ಯ ಜನರಿಗೆ ಈ  ಯೋಜನೆ ಫಲಪ್ರದ ಎನ್ನುವುದರಲ್ಲಿ ಮಾತ್ರ ಅನುಮಾನವಿಲ್ಲ.

ತೆರಿಗೆ ವಿನಾಯಿತಿ-ಶುಲ್ಕ ವಿನಾಯಿತಿ
ಯೋಜನೆಯ ಪ್ರಮುಖ ಆಕರ್ಷಣೆ ಎಂದರೆ ತೆರಿಗೆ ವಿನಾಯಿತಿ ಹಾಗೂ ಶುಲ್ಕ ವಿನಾಯಿತಿ ಪ್ರಯೋಜನಗಳು. ಪ್ರಸ್ತುತ ಕಾರ್ಡ್‌ ಬಳಸಿದ್ದಕ್ಕೆ ನಾವು ಹೆಚ್ಚುವರಿ ಹಣ ತೆರುತ್ತೇವೆ. ಯಾವುದೇ ಉದ್ದೇಶಕ್ಕೆ ಕಾರ್ಡ್ ಸ್ವ್ಯಾಪ್ ಮಾಡಿದಾಗ ವ್ಯವಹಾರ ಶುಲ್ಕ (transaction charges) ರೂಪದಲ್ಲಿ ಹಣ ಕಡಿತವಾಗುತ್ತದೆ. ಕೆಲವು ಸೇವೆಗಳಿಗೆ ಈ ಕಡಿತದಿಂದ ವಿನಾಯಿತಿ ನೀಡುವ ಜತೆಗೆ ಬಹುಮಾನವಾಗಿ ತೆರಿಗೆ ವಿನಾಯಿತಿಯನ್ನೂ ಘೋಷಿಸುವ ಯೋಜನೆ ಸರ್ಕಾರದ ಮುಂದಿದೆ.  ಇನ್ನೂ ಕೆಲವು ಸೇವೆಗಳಲ್ಲಿ ಕಾರ್ಡ್‌ಗಳ ಮೂಲಕ ಹಣ ಪಾವತಿಸಿದರೆ ದರ ಕಡಿತದ ಬೋನಸ್ ನೀಡುವುದೂ ಸಹ ಪಟ್ಟಿಯಲ್ಲಿದೆ. ಹೀಗಾದಲ್ಲಿ ಗ್ರಾಹಕರಿಗಂತೂ ಇದು ಅನುಕೂಲವೆ. ಆದರೆ ವರ್ತಕರು ಎಷ್ಟರ ಮಟ್ಟಿಗೆ ಈ ಯೋಜನೆಯನ್ನು ಸ್ವಾಗತಿಸುತ್ತಾರೆ ಎನ್ನುವುದನ್ನು ನೋಡಬೇಕು.

ವರ್ತಕರಿಗಿದು ಸಂಕಷ್ಟದ ವಿಷಯ
ಈ ಬೆಳವಣಿಗೆಗೆ ವರ್ತಕರಿಂದ, ಉದ್ಯಮಿಗಳಿಂದ ದೊಡ್ಡ ಮಟ್ಟದ ವಿರೋಧ ವ್ಯಕ್ತವಾಗುವ ಸಾಧ್ಯತೆಯೂ ಇದೆ. ಒಂದು ವೇಳೆ ಇದು ಕಡ್ಡಾಯವಾದಲ್ಲಿ ಕಾರ್ಡ್‌ ಬಳಕೆ ವರ್ತಕರ ಪಾಲಿಗೆ ನುಂಗಲೂ ಆಗದ, ಉಗುಳಲೂ ಆಗದ ಕೆಂಡದುಂಡೆಯಾಗುವುದು ಸತ್ಯ.ಬಹಳಷ್ಟು ವರ್ತಕರು ತಮ್ಮ ಒಟ್ಟು ವಹಿವಾಟಿನಲ್ಲಿ ಅರ್ಧದಷ್ಟು ಲೆಕ್ಕವನ್ನು ಮಾತ್ರವೇ ಸರ್ಕಾರದ ಇಲಾಖೆಗಳಿಗೆ ತೋರಿಸುತ್ತಾರೆ. ಹೆಚ್ಚೆಂದರೆ ಶೇ 80ರಷ್ಟು ಲೆಕ್ಕವನ್ನು ತೋರಿಸುವವರೂ ಒಂದಷ್ಟು ಮಂದಿ ಇರಬಹುದು.

ಆದರೆ, ಮುಂದಿನ ದಿನಗಳಲ್ಲಿ ಡೆಬಿಟ್‌/ಕ್ರೆಡಿಟ್‌ ಕಾರ್ಡ್‌ ಮೂಲಕವೇ ವ್ಯಾಪಾರ ವಹಿವಾಟು ಕಡ್ಡಾಯವಾಗುವುದರಿಂದ ಎಲ್ಲ ಮಾರಾಟ-ಖರೀದಿಗಳ ವಿವರಗಳನ್ನೂ ಸರ್ಕಾರಕ್ಕೆ ನೀಡಿ ತೆರಿಗೆ ಕಟ್ಟಬೇಕಾಗಿ ಬರುತ್ತದೆ. ಹಾಗಾಗಿ, ಪ್ಲಾಸ್ಟಿಕ್‌ ಮನಿ ಬಳಕೆ ಕಡ್ಡಾಯಕ್ಕೆ ವರ್ತಕ ಸಮೂಹದಿಂದ ವಿರೋಧ ವ್ಯಕ್ತವಾಗುವ ನಿರೀಕ್ಷೆ ಇದೆ. ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ₹1 ಲಕ್ಷ ಮೀರಿದ ಚಿನ್ನಾಭರಣ ಖರೀದಿಗೆ ಪ್ಯಾನ್‌ ಕಾರ್ಡ್‌ ಬಳಕೆ ಕಡ್ಡಾಯ ಎಂಬ ನಿಯಮಕ್ಕೆ ದೇಶದ ಚಿನಿವಾರ ಪೇಟೆಯಿಂದ ವಿರೋಧ ವ್ಯಕ್ತವಾಗಿತ್ತು ಎಂಬುದನ್ನು ನೆನಪಿಸಿಕೊಳ್ಳಬಹುದು.


ಹಾಗಾಗಿ, ಗ್ರಾಹಕರ ಖರೀದಿ ವಹಿವಾಟಿನ ವೇಳೆ ಶೇ 50ಕ್ಕಿಂತ ಹೆಚ್ಚಿನ ಹಣ ಪಾವತಿಯನ್ನು ವ್ಯಾಪಾರಿಗಳು ಕಾರ್ಡ್‌ಗಳ ಮೂಲಕವೇ ಸ್ವೀಕರಿಸಿದರೆ, ಅವರು ಕಟ್ಟಬೇಕಾದ ಮೌಲ್ಯವರ್ಧಿತ ತೆರಿಗೆಯಲ್ಲಿ (ವ್ಯಾಟ್‌ನಲ್ಲಿ) ಕಡಿತ ಮಾಡುವ ಯೋಜನೆಯೂ ಸರ್ಕಾರದ ಮುಂದಿದೆ. 

ಆದರೆ ಅದು ಎಷ್ಟರ ಮಟ್ಟಿಗೆ ವ್ಯಾಪಾರಿಗಳಿಗೆ ಸಮಾಧಾನ ತರುತ್ತದೆ ಎನ್ನುವುದು ಮುಂದೆ ತಿಳಿಯಲಿದೆ. ದೊಡ್ಡ ಮಟ್ಟದ ವಹಿವಾಟು ನಡೆಸುವ ವಾಣಿಜ್ಯೋದ್ಯಮಿಗಳಿಗಂತೂ ಕಾರ್ಡ್‌ ಬಳಕೆ ಕಡ್ಡಾಯ ನಿಯಮ ಒಪ್ಪಿಕೊಳ್ಳುವುದು ಬಹಳ ಕಷ್ಟ.ಈ ಬಗ್ಗೆ ಹಣಕಾಸು ತಜ್ಞರ, ವರ್ತಕರ, ಬ್ಯಾಂಕ್ ಅಧಿಕಾರಿಗಳ, ಜನಸಾಮಾನ್ಯರ ಪ್ರತಿಕ್ರಿಯೆ ಇಲ್ಲಿದೆ


ಬ್ಯಾಂಕಿನ ಕೆಲಸ ಸುಲಭ
ಇದರಿಂದ ಬ್ಯಾಂಕಿನ ಕೆಲಸಗಳು ಮತ್ತಷ್ಟು ಸುಲಭವಾಗುತ್ತವೆ. ಹಣದ ವ್ಯವಹಾರ ಕಡಿಮೆಯಾದಂತೆ ಬ್ಯಾಂಕಿನ ರಿಸ್ಕ್ ಸಹ ಕಡಿಮೆಯಾಗುತ್ತದೆ. ಅಲ್ಲದೇ ಅನೇಕ ಬ್ಯಾಂಕುಗಳು ಈಗ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್‌ಗಳ ವ್ಯವಹಾರವನ್ನು ಹೊರಗುತ್ತಿಗೆ ನೀಡಿವೆ. ಆ ಎಲ್ಲಾ ಕೆಲಸವನ್ನು ಬ್ಯಾಂಕ್ ಪರವಾಗಿ ಗುತ್ತಿಗೆದಾರರೇ ನಿರ್ವಹಿಸುತ್ತಾರೆ. ಹೀಗಾಗಿ ಬ್ಯಾಂಕಿಗೆ ಹೆಚ್ಚುವರಿ ಕೆಲಸದ ಹೊರೆಯಂತೂ ಬೀಳದು.

ಆದರೆ ಕಾರ್ಡ್ ಬಳಕೆ ಹೆಚ್ಚಾದಂತೆ ಕಾರ್ಡ್‌ಗಳ ದುರ್ಬಳಕೆಯ ಪ್ರಕರಣಗಳೂ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಅದರಲ್ಲೂ ಚಿಪ್ ಕಾರ್ಡ್ ದುರ್ಬಳಕೆಯನ್ನು ತಡೆಯುವುದು ಬಹಳ ಮುಖ್ಯವಾಗುತ್ತದೆ. ಬ್ಯಾಂಕ್ ಅಧಿಕಾರಿಗಳು, ಹಣಕಾಸು ತಜ್ಞರಿಂದ ಸಲಹೆ ಪಡೆದು ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕು ಎನ್ನುತ್ತಾರೆ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ನ ಮುರುಗೇಶ ಕಂಠಿ,

ತಿಂಗಳ ಬಜೆಟ್ ರೂಪಿಸಲು ಸಹಾಯ
ಈಗಾಗಲೇ ಸಾಕಷ್ಟು ವ್ಯವಹಾರಗಳಿಗೆ ಕಾರ್ಡ್ ಬಳಸುತ್ತೇವೆ. ಮುಂದೆ ಎಲ್ಲಾ ರೀತಿಯ ಅಂದರೆ, ಸಣ್ಣ ಪುಟ್ಟ ವ್ಯವಹಾರಗಳಿಗೂ ಕಾರ್ಡ್ ಬಳಸಬೇಕಾಗಿ ಬಂದರೆ ನಮ್ಮ  ಪ್ರತಿಯೊಂದು ವೆಚ್ಚದ ಲೆಕ್ಕವೂ ನಮಗೆ ಸಿಗುವಂತಾಗುತ್ತದೆ. ತಿಂಗಳ ಬಜೆಟ್ ರೂಪಿಸಲೂ ಸಹಾಯವಾಗುತ್ತದೆ.

ಆದರೆ ಕ್ರೆಡಿಟ್/ಡೆಬಿಟ್ ಕಾರ್ಡುಗಳ ದುರುಪಯೋಗವನ್ನು ತಡೆಯಲು ಏನಾದರೂ ಹೊಸ ಮಾರ್ಗಗಳನ್ನು ಕಂಡುಹಿಡಿಯಬೇಕಾಗುತ್ತದೆ. ನಮ್ಮ ಕಾರ್ಡನ್ನು ನಾವು ಹಾಗೂ ನಮ್ಮ ಮನೆಯವರು ಬಿಟ್ಟರೆ ಬೇರೆ ಯಾರೂ ಬಳಸಲು ಬರಬಾರದು. ಅಂತಹ ವ್ಯವಸ್ಥೆ ಬರಬೇಕು ಎನ್ನುತ್ತಾರೆ  ಗೃಹಿಣಿ ಸ್ಮಿತಾ ಅನಿಲ್ ಕುಮಾರ್.

ದಿನಗೂಲಿಯವರಿಗೇನು ಲಾಭ?
ದೊಡ್ಡ ಮೊತ್ತದ ಬಿಲ್ಲಿಂಗ್ ಅಥವಾ ಖರೀದಿ ಮಾಡಬೇಕಾದಾಗ ಡೆಬಿಟ್‌/ಕ್ರೆಡಿಟ್‌ ಕಾರ್ಡ್ ಬಳಸುವುದಷ್ಟೇ ಸೂಕ್ತ. ತರಕಾರಿ ತರುವುದಕ್ಕೂ, ಔಷಧಿ ಖರೀದಿಗೂ ಕಾರ್ಡನ್ನೇ ಬಳಸಿರಿ ಎಂದರೆ ಕಷ್ಟ. ಇಂತಹ ಕೆಲಸಗಳಿಗೆ ನಗದು ಹಣ ಕೊಡುವುದೇ ಸರಿಯಾದ ಮಾರ್ಗ. ಅದರಲ್ಲೂ ಕೂಲಿ ಕಾರ್ಮಿಕರಿಗೆ, ಕಡಿಮೆ ದುಡಿಮೆಯವರಿಗೆ ಈ ವ್ಯವಸ್ಥೆ ಸೂಕ್ತವಲ್ಲ. ಅಂದೇ ದುಡಿದು, ಅಂದೇ ಕೂಲಿ ಪಡೆದು, ಅಂದೇ ದಿನಸಿ ತಂದು ಹೊಟ್ಟೆ ಹೊರೆದುಕೊಳ್ಳುವವರಿಗೆ ಇಂತಹ ಕಾರ್ಡ್‌ಗಳ ಬಳಕೆಯ ವ್ಯವಹಾರವನ್ನು ಅರಗಿಸಿಕೊಳ್ಳುವುದು ಸುಲಭವಲ್ಲ. ಇದು ಮೇಲ್ವರ್ಗ ಮತ್ತು ಮಧ್ಯಮ ವರ್ಗದವರಿಗಷ್ಟೇ ಉಪಯೋಗ ಎನ್ನುತ್ತಾರೆ  ಗೃಹಿಣಿ ಹೇಮಲತಾ ಬಿ.ಗಿರಿಮಠ.

****
ಯೋಜನೆ ಲಾಭವೇನು?
*ದೇಶದ ಒಟ್ಟಾರೆ ಹಣಕಾಸು ವ್ಯವಹಾರಗಳ ಬಗ್ಗೆ ನಿಗಾ ವಹಿಸುವುದು
*ಗ್ರಾಹಕರ, ವರ್ತಕರ, ಉದ್ಯಮಿಗಳ ಹಾಗೂ ಹಣಕಾಸು ಸಂಸ್ಥೆಗಳ ವ್ಯವಹಾರಗಳ ಮೇಲೆ ಕಣ್ಣಿಡುವುದು
*ಗ್ರಾಹಕರ, ವರ್ತಕರ, ಉದ್ಯಮಿಗಳ ಹಾಗೂ ಬ್ಯಾಂಕುಗಳ ಹಣಕಾಸು ವ್ಯವಹಾರಗಳನ್ನು ಸುಲಭಗೊಳಿಸುವುದು
*ಬಚ್ಚಿಟ್ಟ ಕಪ್ಪು ಹಣವನ್ನು ಬಯಲಿಗೆಳೆಯುವುದು
*ತೆರಿಗೆ ವಂಚನೆಯನ್ನು ತಪ್ಪಿಸುವುದು
*ನಕಲಿ ನೋಟುಗಳು ಚಲಾವಣೆಯನ್ನು ತಡೆಯುವುದು
*ಗ್ರಾಹಕರ ಖರೀದಿ ಸಾಮರ್ಥ್ಯವನ್ನು ಅಳೆಯುವುದು
*ಒಟ್ಟಾರೆ ದೇಶದ ಹಣಕಾಸು ಮಾರುಕಟ್ಟೆ ವಹಿವಾಟಿನ ದತ್ತಾಂಶ ಸಂಗ್ರಹಿಸುವುದು

***
ಇತಿ-ಮಿತಿ; ಅಪಾಯ
*ದೇಶದಲ್ಲಿ ಸಾಕಷ್ಟು ಜನ ತೆರಿಗೆ ಕಾಯ್ದೆಯಡಿ ಬರದೇ ಇರುವ ಜನರಿದ್ದಾರೆ. ಅಂಥವರಿಗೆ ತೆರಿಗೆ ವಿನಾಯಿತಿ ಲಾಭ ತಟ್ಟುವುದಿಲ್ಲ
*ದೊಡ್ಡ ಮಟ್ಟದಲ್ಲಿ ಕಪ್ಪು ಹಣವನ್ನು ಹೊಂದಿರುವ ರಾಜಕಾರಣಿಗಳು, ಉದ್ಯಮಿಗಳು, ಅಧಿಕಾರಿಗಳು ಈ ಯೋಜನೆಯನ್ನು ತಡೆಯಲು ಪ್ರಭಾವ ಬೀರಬಹುದು
*ವರ್ತಕರಿಂದಲೂ ತೀವ್ರ ವಿರೋಧ ವ್ಯಕ್ತವಾಗಬಹುದು
*ಕಾರ್ಡ್‌ಗಳ ದುರ್ಬಳಕೆ ಪ್ರಕರಣ ಹೆಚ್ಚಬಹುದು

***
ದೊಡ್ಡ ವಹಿವಾಟಿನ ಮೇಲೆ ಕಣ್ಣು
ಸರ್ಕಾರದ ಪ್ಲಾಸ್ಟಿಕ್ ಮನಿ ಯೋಜನೆಯನ್ನು ತಪ್ಪಾಗಿ ಗ್ರಹಿಸಬಾರದು. ಪ್ರತಿಯೊಂದು ವಹಿವಾಟೂ ಡೆಬಿಟ್‌/ಕ್ರೆಡಿಟ್‌ ಅಥವಾ ರೂಪೇ ಕಾರ್ಡ್ ಮೂಲಕವೇ ನಡೆಯಬೇಕು ಎಂದರೆ ತರಕಾರಿ, ಹೂವು, ಹಣ್ಣು ತರುವುದಕ್ಕೂ ಕಾರ್ಡ್ ಬಳಸಬೇಕು ಎನ್ನುವುದಲ್ಲ. ಇಂತಹ ಸಣ್ಣ ಪುಟ್ಟ ವಹಿವಾಟುಗಳ ಮೇಲೆ ಖಂಡಿತವಾಗಿಯೂ ಸರ್ಕಾರದ ಕಣ್ಣಿಲ್ಲ. ಸರ್ಕಾರ ಮುಖ್ಯವಾಗಿ ನಿಗ್ರಹಿಸಲು ಹೊರಟಿರುವುದು ದೊಡ್ಡ ದೊಡ್ಡ ವಹಿವಾಟುಗಳನ್ನು.

ಉದಾಹರಣೆಗೆ ನನ್ನ ಮಗಳ ಮದುವೆಗೆ ನಾನು ಒಂದು ಕೋಟಿ ರೂಪಾಯಿ ರೇಷ್ಮೆ ಸೀರೆ ಖರೀದಿಸಿ ಕೊಡಬಹುದು. ಕೋಟ್ಯಂತರ ಮೌಲ್ಯದ ಚಿನ್ನದ ಆಭರಣ, ಮನೆಯ ಸಲಕರಣೆಗಳನ್ನು ಖರೀದಿಸಿ ಕೊಡಬಹುದು, ಅದಕ್ಕೆಲ್ಲ ನಾನು ಲೆಕ್ಕ ಕೊಡಬೇಕಾಗಿಲ್ಲ. ಇಂತಹ ವ್ಯವಹಾರಗಳ ಮೇಲೆ ಕಣ್ಣಿಡುವುದು ಸರ್ಕಾರದ ಉದ್ದೇಶ. ಯಾವುದೇ ಲೆಕ್ಕ ಇಲ್ಲದೇ, ಮನೆಯಲ್ಲಿ ಕೂಡಿಟ್ಟ ಕಪ್ಪು ಹಣವನ್ನು ಹೇಗೆಲ್ಲ ಖರ್ಚು ಮಾಡಬಹುದು. ಅದನ್ನು ತಡೆಯುವುದು ಈ ಯೋಜನೆಯ ಉದ್ದೇಶ. ಇದು ಸಫಲವಾದಲ್ಲಿ ದೇಶಕ್ಕೆ ದೊಡ್ಡ ಮಟ್ಟದ ಲಾಭವಿದೆ.
-ಮಿಮಿ ಪಾರ್ಥಸಾರಥಿ,ಹಣಕಾಸು ಸಲಹೆಗಾರರು, ವ್ಯವಸ್ಥಾಪಕ ನಿರ್ದೇಶಕಿ, ಸಿನ್ಹಾಸಿ ಕನ್ಸಲ್ಟೆಂಟ್

***
ಲಾಭವಿದೆ, ಕಾಯ್ದು ನೋಡಬೇಕು

ನಗದು ವಹಿವಾಟಿಗೆ ಬದಲು ಕ್ರೆಡಿಟ್‌/ಡೆಬಿಟ್‌ ಕಾರ್ಡ್‌ ಬಳಕೆ ಕಡ್ಡಾಯ ಯೋಜನೆಯನ್ನು ಮೊದಲು ತೆರಿಗೆ ಕಾಯ್ದೆಯಡಿ ತರಬೇಕು. ನಂತರವಷ್ಟೇ ಇದರ ಸಮಸ್ಯೆ-ಸವಾಲುಗಳು ಅರಿವಿಗೆ ಬರಲು ಸಾಧ್ಯ. ಮೇಲ್ನೋಟಕ್ಕೆ ಇದರಲ್ಲಿ ವಾಣಿಜ್ಯ ಲೋಕಕ್ಕೆ ಲಾಭವಂತೂ ಇದೆ. ಸರ್ಕಾರಕ್ಕೂ ಬಹಳ ಪ್ರಯೋಜನವಿದೆ. ಜನರಿಗೂ ಈ ಪ್ರಯೋಜನದಲ್ಲಿ ಪಾಲು ಸಿಗುತ್ತದೆ. ಅಲ್ಲದೇ ಇದರಿಂದ ಬ್ಯಾಂಕುಗಳ ತಿಜೋರಿ ತುಂಬುವುದರಿಂದ ದೇಶದ ಆರ್ಥಿಕತೆಯೂ ಸುಧಾರಿಸುತ್ತದೆ.

ಆದರೆ ಕಪ್ಪುಹಣವನ್ನು ನೆಲಮನೆಯ ಪೆಟ್ಟಿಗೆಗಳಲ್ಲೊ, ವಿದೇಶಿ ಬ್ಯಾಂಕುಗಳಲ್ಲಿಯೊ ಬಚ್ಚಿಟ್ಟುಕೊಂಡು ಕುಳಿತ ರಾಜಕಾರಣಿಗಳಿಗೆ, ದೊಡ್ಡ ಉದ್ಯಮಿಗಳಿಗೆ, ಅಧಿಕಾರಿಗಳಿಗೆ ಈ ನಿಮಯ ಬಹಳ ಕಹಿ ಎನಿಸಬಹುದು. ಹಣದ ಬಳಕೆ ಕಡಿಮೆ ಆದಲ್ಲಿ ಅವರ ಕಪ್ಪು ಹಣ ನಿಷ್ಪ್ರಯೋಜಕ ಆಗಲಿದೆ. ಈ ಯೋಜನೆ ಯಾವುದೇ ಅಡಚಣೆ ಇಲ್ಲದೇ ಜಾರಿಯಾದಲ್ಲಿ ಖಂಡಿತ ಇದೊಂದು ಅತ್ಯುತ್ತಮ ಯೋಜನೆಯಾಗಲಿದೆ. ಆದರೆ ಮುಂದಿನ ಹೆಜ್ಜೆಯನ್ನು ಕಾದು ನೋಡಬೇಕಷ್ಟೆ.
-ಐ.ಎಸ್. ಪ್ರಸಾದ್, ಎಫ್‌ಕೆಸಿಸಿಐ ಕೇಂದ್ರ ತೆರಿಗೆ ಸಮಿತಿ ಅಧ್ಯಕ್ಷ

***
ಫೋಟೊ ಕಾರ್ಡ್ ಮಾಡಿ

ಸರ್ಕಾರದ ಈ ಯೋಜನೆಯನ್ನು ನಮ್ಮ ಸಂಘ ಸ್ವಾಗತಿಸುತ್ತದೆ. ಡೆಬಿಟ್/ಕ್ರೆಡಿಟ್‌ ಕಾರ್ಡ್ ಬಳಕೆ ಹೊಸದೇನೂ ಅಲ್ಲ. ಈಗಾಗಲೇ ಶೇ 60ರಷ್ಟು ಕಾರ್ಡ್‌ಗಳ ಬಳಕೆ ಇದೆ. ₹1 ಲಕ್ಷಕ್ಕಿಂತ ಅಧಿಕ ಮೊತ್ತದ ವಹಿವಾಟನ್ನು ಕಾರ್ಡ್ ಮೂಲಕವೇ ಮಾಡಲಾಗುತ್ತದೆ. ಆದರೆ ಸಣ್ಣ ಪುಟ್ಟ ಶುಲ್ಕಗಳನ್ನೂ ಕಾರ್ಡ್ ಮೂಲಕ ಪಡೆಯಬೇಕು ಎನ್ನುವುದು ಸರ್ಕಾರದ ಆಶಯ.

ಯಾವುದೇ ಯೋಜನೆಯನ್ನು ಜಾರಿಗೆ ತರುವ ಮೊದಲು ಸರ್ಕಾರ ಅದರ ಲಾಭ-ನಷ್ಟಗಳನ್ನು, ಅಡಚಣೆ-ಅಪಾಯಗಳನ್ನೂ ಅವಲೋಕಿಸಬೇಕು. ಈಗಾಗಲೇ ಕಾರ್ಡ್ ಬಳಸಲು ಜನ ಹೆದರುವಂತಹ ಸ್ಥಿತಿ ಇದೆ. ಮರೆತು ಕಾರ್ಡ್ ಎಲ್ಲೊ ಉಳಿದರೆ, ಕಳೆದು ಹೋದರೆ, ದುರುಪಯೋಗವಾದರೆ ಏನು ಮಾಡುವುದು? ಎಂಬ ಭಯದಿಂದಲೇ ಕೆಲವರು ಕಾರ್ಡ್ ಬಳಕೆಯಿಂದ ದೂರು ಉಳಿಯುತ್ತಾರೆ.

ಇನ್ನು, ಕಾರ್ಡ್ ಮೇಲಿರುವ ಸಹಿಯನ್ನು ಯಾರಾದರೂ ನಕಲು ಮಾಡಬಹುದು. ಕಾರ್ಡ್ ಬಳಕೆಗೆ ಉತ್ತೇಜನ ನೀಡಬೇಕು ಎಂದಾದರೆ ಫೋಟೊ ಕಾರ್ಡ್ ಗಳನ್ನು ಪರಿಚಯಿಸುವುದು ಸೂಕ್ತ. ಈ ಬಗ್ಗೆ ಈಗಾಗಲೇ ನಮ್ಮ ಸಂಘದ ವತಿಯಿಂದ ಬ್ಯಾಂಕುಗಳಿಗೆ ಪತ್ರ ಬರೆದಿದ್ದೇವೆ. ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
-ಜಗದೀಶ ಹೇಮ್ರಜಾನಿ, ಕಾರ್ಯದರ್ಶಿ, ಜಯನಗರ ಕಾಂಪ್ಲೆಕ್ಸ್ ವರ್ತಕರ ಸಂಘ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT