ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದವ್‌ಗೆ ಅಶುತೋಷ್‌ ಪಂಚ ಪ್ರಶ್ನೆ

Last Updated 28 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ತೆರೆಯ ಮರೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ  ತೊಡ­ಗಿದ್ದ ಯೋಗೇಂದ್ರ ಯಾದವ್‌  ಕೊನೆ­ಗೊಂದು ದಿನ ಸಾಕ್ಷಿ ಸಮೇತ ಸಿಕ್ಕು ಬಿದ್ದಾಗ  ಗೌರವಯುತವಾಗಿ ಪಕ್ಷದಿಂದ ನಿರ್ಗಮಿ­ಸಲು ತನಗೆ ಅವಕಾಶ ಮಾಡಿಕೊಡು­ವಂತೆ ಎಎಪಿ ಮುಖಂಡ  ಅರವಿಂದ್‌ ಕೇಜ್ರಿ­ವಾಲ್‌ ಅವರಿಗೆ ದುಂಬಾಲು ಬಿದ್ದಿದ್ದರು ಎಂದು ಪಕ್ಷದ ಮುಖಂಡ ಹಾಗೂ ಮಾಜಿ ಪತ್ರಕರ್ತ ಅಶುತೋಷ್‌ ಬಹಿರಂಗಗೊಳಿಸಿದ್ದಾರೆ.

ಯಾದವ್‌ ಅವರನ್ನು ತಮ್ಮ ಅತ್ಯಂತ ನೆಚ್ಚಿನ ಬಂಟ ಎಂದು ನಂಬಿದ್ದ ಕೇಜ್ರಿ­ವಾಲ್‌ ಕೂಡ ಅವರನ್ನು ಕ್ಷಮಿಸಿದ್ದರು. ಆದರೆ, ಅದಾದ ನಂತರ ಪಕ್ಷದ ವರ್ಚಸ್ಸು ಮತ್ತು ಕೇಜ್ರಿವಾಲ್‌ ಗೌರವಕ್ಕೆ  ಧಕ್ಕೆ ತರುವ ಸುದ್ದಿಗಳನ್ನು ಯಾದವ್‌ ಮಾಧ್ಯಮಗಳಲ್ಲಿ ಹರಿಬಿಡತೊಡಗಿದರು.ಆರಂಭದಲ್ಲಿ ಇದನ್ನು ನಿರ್ಲಕ್ಷಿಸಲಾಯಿತು. ಕೊನೆಗೆ ಈ ಎಲ್ಲ ಕೃತ್ಯಗಳ ಹಿಂದೆ ಯಾದವ್‌ ಕೈವಾಡವಿರುವುದು ಬಯಲಾಯಿತು ಎಂದು  ಅವರು ಹೇಳಿದರು.

ಯಾದವ್‌ ಅವರಿಗೆ ಅಶುತೋಷ್‌ ಬರೆದ ಬಹಿರಂಗ ಪತ್ರದಲ್ಲಿ  ಐದು ಪ್ರಶ್ನೆಗಳನ್ನು  ಕೇಳಿದ್ದಾರೆ.
1. ನಿಮಗೆ ಹರಿಯಾಣದ ಮುಖ್ಯ­ಮಂತ್ರಿ­ಯಾಗುವ ಭಾರಿ ಮಹತ್ವಾಕಾಂಕ್ಷೆ ಇತ್ತು. ಅದಕ್ಕಾಗಿ ಪಕ್ಷದ ಹರಿಯಾಣ ಉಸ್ತುವಾರಿಯನ್ನಾಗಿ ನೇಮಕ ಮಾಡು­ವಂತೆ ಕೇಜ್ರಿವಾಲ್‌ ಅವರಿಗೆ ದುಂಬಾಲು ಬಿದ್ದಿರಲಿಲ್ಲವೇ?  ಅವರು ಹಿಂದೆಮುಂದೆ ನೋಡದೆ ನಿಮ್ಮನ್ನು ಆ ರಾಜ್ಯದ  ಉಸ್ತುವಾರಿಯಾಗಿ ನೇಮಕ ಮಾಡಿರಲಿಲ್ಲವೇ? ಆಗ ಅವರು ಪಕ್ಷದ ಎಲ್ಲ ಕಾರ್ಯಕರ್ತರು, ಮುಖಂಡರ ಅಭಿಪ್ರಾಯ ಪಡೆದು ನಿಮ್ಮನ್ನು ನೇಮಕ ಮಾಡಿದ್ದರೆ? ಆ ಸಂದರ್ಭದಲ್ಲಿ  ಪಕ್ಷ­ದೊಳಗಿನ ಪ್ರಜಾಪ್ರಭುತ್ವದ  ಬಗ್ಗೆ ತುಟಿ ಬಿಚ್ಚದ ನಿಮಗೆ ಈಗ ಆ ಬಗ್ಗೆ ಮಾತನಾಡುವ ನೈತಿಕ ಹಕ್ಕು ಇದೆಯೇ?

2. ಹರಿಯಾಣ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಕೇಜ್ರಿವಾಲ್‌ ಒಪ್ಪಿಗೆ ನೀಡದಿದ್ದಾಗ ನೀವು ಅವರ ವಿರುದ್ಧ  ತಿರುಗಿ ಬಿದ್ದಿದ್ದು ಸುಳ್ಳೇ? ಲೋಕಸಭಾ ಚುನಾವಣೆಯಲ್ಲಿ ಆಯ್ದ ಕೆಲವು ಸ್ಥಾನಗಳಲ್ಲಿ ಮಾತ್ರ ಸ್ಪರ್ಧಿಸೋಣ ಎಂಬ ಕೇಜ್ರಿವಾಲ್  ಅಭಿಪ್ರಾಯ ಕಡೆಗಣಿಸಿ  ಬಹುತೇಕ ಲೋಕಸಭಾ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದಿರಿ. ಆ ಮೂಲಕ  ಪಕ್ಷದ ಹೀನಾಯ ಸೋಲಿಗೆ ಕಾರಣರಾದಿರಿ.  ಆದರೆ, ಸೋಲಿಗೆ ಕೇಜ್ರಿವಾಲ್  ಅವರನ್ನು ಹೊಣೆ ಮಾಡಿ ನೀವು ಬಚಾವ್‌ ಆದಿರಿ.

3. ಪಕ್ಷದ ಕಾರ್ಯಕಾರಿಣಿ ಮತ್ತು  ಕೇಜ್ರಿವಾಲ್‌ ಅಸಮ್ಮತಿಯ ಹೊರತಾಗಿಯೂ ಹರಿಯಾಣ ವಿಧಾನಸಭೆಯ ಚುನಾವಣೆಯಲ್ಲಿ ನೀವು ಮತ್ತು ಪ್ರಶಾಂತ್ ಭೂಷಣ್‌ ಪಕ್ಷವನ್ನು ಬಲವಂತವಾಗಿ ಕಣಕ್ಕೆ ನೂಕಿದಿರಿ. ಅರವಿಂದ್‌ ನಿರೀಕ್ಷೆ ನಿಜವಾಗಿತ್ತು. ಪಕ್ಷ ಹೀನಾಯವಾಗಿ ಸೋತಿತ್ತು. ಪಕ್ಷಕ್ಕೆ ಗೆಲುವು ಸಾಧ್ಯವಿಲ್ಲ ಎಂಬ ಸತ್ಯ ಗೊತ್ತಿದ್ದರೂ  ನಿಮ್ಮ ರಾಜಕೀಯ ಮಹತ್ವಾಕಾಂಕ್ಷೆಗಾಗಿ ಪಕ್ಷ ಬಲವಂತವಾಗಿ ಚುನಾವಣೆ ಎದುರಿಸುವಂತಾಯಿತು.   ಅಂದು ಪಕ್ಷದ ಒಮ್ಮತದ ಅಭಿಪ್ರಾಯಕ್ಕೆ ಗೌರವ ಕೊಡದ  ನೀವು ಇಂದು ಆಂತರಿಕ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತಿರುವುದು ವಿಪರ್ಯಾಸ.

4. ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್‌ ಜೈಲು ಸೇರಿದಾಗ ಲೋಕಸಭಾ  ಚುನಾವಣೆ ಸೋಲಿನ ಪರಾಮರ್ಶೆಗೆ ನೀವು ಭಾರಿ ಉತ್ಸಾಹ ತೋರಿದಿರಿ. ನಾವೆಲ್ಲ ಕೇಜ್ರಿವಾಲ್‌ ಜೈಲಿನಲ್ಲಿದ್ದಾರಲ್ಲ ಎಂದು ಕೊರಗುತ್ತಿದ್ದರೆ, ನಿಮಗೆ ಪಕ್ಷದ ಕಳಪೆ ಸಾಧನೆ ಬಗ್ಗೆ ಪರಾಮರ್ಶೆ ಮುಖ್ಯವಾಗಿತ್ತು. ಅರವಿಂದ್‌ ಜೈಲಿನಿಂದ ಹೊರಬಂದ ನಂತರ ಫಲಿತಾಂಶದ ಬಗ್ಗೆ ಚರ್ಚಿಸೋಣ ಎಂದರೂ ನಿಮ್ಮ ಆತುರ ನಮಗೆಲ್ಲ ಆಶ್ಚರ್ಯ ಮೂಡಿಸಿತ್ತು. ಪರಾಮರ್ಶೆಗೆ ಒತ್ತಡ ಹೇರುತ್ತಿದ್ದ ನಿಮ್ಮ  ಉದ್ದೇಶವೇ ಬೇರೆ ಆಗಿತ್ತು ಎನ್ನುವುದು ಎಲ್ಲರಿಗೂ ಗೊತ್ತಿತ್ತು. 

ಮಾಧ್ಯಮಗಳಲ್ಲಿ ಪಕ್ಷ ಮತ್ತು ಅರವಿಂದ್‌ ಕೇಜ್ರಿವಾಲ್‌ ಘನತೆಗೆ ಚ್ಯುತಿ ತರುವ ಸುದ್ದಿಗಳು ಪುಂಖಾನುಪುಂಖ­ವಾಗಿ ಪ್ರಕಟವಾಗ ತೊಡಗಿದಾಗ ಇದರ ಹಿಂದೆ ನಿಮ್ಮ ಕೈವಾಡ ಇರುವುದು ಸ್ಪಷ್ಟವಾಗಿತ್ತು. ಈ ಬಗ್ಗೆ ನಿಮ್ಮನ್ನು ಕೇಳಿದಾಗ  ಏನೂ ಗೊತ್ತಿಲ್ಲದ ಅಮಾಯಕನಂತೆ ನಟಿಸಿದಿರಿ. 

5. ಸಾಕ್ಷಿ ಸಮೇತರಾಗಿ ಸಿಕ್ಕುಬಿದ್ದಾಗ ರಾಜಕೀಯ ಜೀವನ ಕೊನೆಯಾಯಿತು ಎಂದು ಭಾವಿಸಿ, ಗೌರವಯುತ ನಿರ್ಗಮನಕ್ಕೆ ಅವಕಾಶ ಕಲ್ಪಿಸಿಕೊಡುವಂತೆ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಬೇಡಿಕೊಂಡಿದ್ದು ಸುಳ್ಳೆ? ನಿಮ್ಮ ತಪ್ಪನ್ನು ಮನ್ನಿಸಿ ಕ್ಷಮಿಸಿದ್ದು ಇದೇ ಅರವಿಂದ್‌ ಕೇಜ್ರಿವಾಲ್‌ ಅಲ್ಲವೇ?  ಅದು ಅವರ ದೊಡ್ಡತನವಲ್ಲದೇ ಮತ್ತಿನ್ನೇನು? ಆಮ್ ಆದ್ಮಿ ಪಕ್ಷದೊಳಗಿನ ಆಂತರಿಕ ಸಂಘರ್ಷಕ್ಕೆ ಕಾರಣರಾದ ಕಾಣದ ಕೈಗಳು ಯಾರವು ಎಂಬ ಸತ್ಯ ಒಂದಿಲ್ಲ ಒಂದು ದಿನ ಹೊರ ಬರಲೇ ಬೇಕು.

ಎಎಪಿ ಅವಕಾಶ ಕಳೆದುಕೊಳ್ಳಬಾರದು
ನವದೆಹಲಿ,(ಪಿಟಿಐ): ಚುನಾವಣೆ ವೇಳೆ ದೆಹಲಿ ಜನರಿಗೆ ನೀಡಿದ ಆಶ್ವಾಸನೆಗಳನ್ನು ಈಡೇರಿಸುವತ್ತ ಎಎಪಿ ನಾಯಕರು ಗಮನ ಹರಿಸಬೇಕು.   ಜನರು ಭಾರಿ ಭರವಸೆಯೊಂದಿಗೆ ಕೇಜ್ರಿವಾಲ್‌ ಅವರಿಗೆ ಮತ ನೀಡಿದ್ದಾರೆ. ಅಪ್ರಬುದ್ಧ ರಾಜಕೀಯ ದಸೆಯಿಂದ ಜನಸೇವೆ ಅವಕಾಶವನ್ನು ಆಪ್‌ ನಾಯಕರು  ಕಳೆದುಕೊಳ್ಳಬಾರದು ಎಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ ಹೇಳಿದ್ದಾರೆ.

ಆಮ್ ಆದ್ಮಿ ಪಕ್ಷದ ಒಳಜಗಳ ಪಕ್ಷಕ್ಕಿಂತ ದೆಹಲಿ ಜನರ ಮೇಲೆ ಹೆಚ್ಚಿನ ದುಷ್ಪರಿಣಾಮ ಬೀರುತ್ತದೆ ಕಾಂಗ್ರೆಸ್‌ ವಕ್ತಾರ ಅಭಿಷೇಕ್‌ ಮನು ಸಿಂಘ್ವಿ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದು ಗೂಂಡಾಗಿರಿ. ಪ್ರಜಾಸತ್ತೆಯ ಕೊಲೆ. ನಾವು ಹಗಲಿರುಳು ದುಡಿದು  ಕಟ್ಟಿದ, ಮತ ಹಾಕಿ ಗೆಲ್ಲಿಸಿದ ಪಕ್ಷ ಇದಲ್ಲ.
- ಧರ್ಮವೀರ್‌ ಗಾಂಧಿ, ಎಎಪಿ ಉಚ್ಚಾಟಿತ ನಾಯಕ

ನಮ್ಮ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ಪಕ್ಷ ಹೋಳಾಗಲು ಬಿಡುವುದಿಲ್ಲ. ಎಲ್ಲವನ್ನೂ ಮೆಟ್ಟಿನಿಂತು ಪಕ್ಷವನ್ನು ಮತ್ತೊಮ್ಮೆ ಕಟ್ಟುತ್ತೇವೆ
- ಆನಂದ ಕುಮಾರ್, ಎಎಪಿ ಉಚ್ಚಾಟಿತ ನಾಯಕ

ಎಎಪಿ ಘಟನಾವಳಿಗಳು
* ಮಾರ್ಚ್‌ 4: ಎಎಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ರಾಜಕೀಯ ವ್ಯವಹಾರ ಸಮಿತಿಯಿಂದ ಭೂಷಣ್‌, ಯಾದವ್‌ ಉಚ್ಚಾಟನೆಗೆ ನಿರ್ಧಾರ

* ಮಾರ್ಚ್ 5: ಮಯಾಂಕ್‌ ಗಾಂಧಿ ಬ್ಲಾಗ್‌ನಲ್ಲಿ ಕೇಜ್ರಿ ಬಣದ ವಿರುದ್ಧ ಆರೋಪ
* ಮಾರ್ಚ್‌ 10: ಭೂಷಣ್‌, ಯಾದವ್‌ ಅವರಿಂದ ಪಕ್ಷ ವಿರೋಧಿ ಚಟುವಟಿಕೆ  ಸಿಸೋಡಿಯಾ ಹೇಳಿಕೆ. ಭೂಷಣ್‌, ಯಾದವ್‌ ಜೋಡಿಯಿಂದ ಪಕ್ಷದಲ್ಲಿ ಸುಧಾರಣೆ ತರಲು ಆಗ್ರಹ
* ಮಾರ್ಚ್‌ 16: ಚಿಕಿತ್ಸೆ ನಂತರ ಮರಳಿದ ಕೇಜ್ರಿವಾಲ್‌
* ಮಾರ್ಚ್‌ 17: ಸಂಜಯ್‌ ಸಿಂಗ್‌, ಅಶುತೋಷ್‌ ಮತ್ತು ಆಶೀಶ್‌ ಖೇತಾನ್‌ ಅವರಿಂದ ಕೇಜ್ರಿವಾಲ್‌ ಜತೆ ಮಾತುಕತೆ, ಉಭಯ ಬಣಗಳ ನಡುವೆ ತೇಪೆ ಹಚ್ಚಲು ಯತ್ನ.
* ಮಾರ್ಚ್‌ 25: ಆಂತರಿಕ ಲೋಕಪಾಲ ಅಡ್ಮಿರಲ್‌ ರಾಮದಾಸ್‌ ಅವರಿಂದ ಕೇಜ್ರಿವಾಲ್‌ ಭೇಟಿ
* ಮಾರ್ಚ್‌ 26: ಕೇಜ್ರಿವಾಲ್‌, ಭೂಷಣ್‌ ಬಣಗಳ ನಡುವೆ ಸಂಧಾನ ವಿಫಲ, ಮುರಿದುಬಿದ್ದ ಮಾತುಕತೆ
* ಮಾರ್ಚ್‌ 27: ಉಭಯ ಬಣಗಳಿಂದ ಪ್ರತ್ಯೇಕ ಪತ್ರಿಕಾಗೋಷ್ಠಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT