ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾವುದೇ ತಪ್ಪು ಮಾಡಿಲ್ಲ: ಆಯುಕ್ತರ ಸ್ಪಷ್ಟನೆ, ದೂರು ನೀಡಲು ಚಿಂತನೆ

Last Updated 27 ಫೆಬ್ರುವರಿ 2015, 8:44 IST
ಅಕ್ಷರ ಗಾತ್ರ

ಮೈಸೂರು: ‘ಪಾಲಿಕೆ ಸಾಮಾನ್ಯ ಸಭೆಯಲ್ಲಿ ಕೆಲ ಸದಸ್ಯರು ನನ್ನನ್ನು ಅಗೌರವದಿಂದ ಕಂಡಿದ್ದರಿಂದ ನನಗೆ ನೋವಾಗಿದೆ. ಸಭೆಯಲ್ಲಿ ನನ್ನ ವಿರುದ್ಧ ನೇರವಾಗಿ ಆರೋಪ ಮಾಡಲಾಗಿದೆ. ಇದು ನಡಾವಳಿಗೆ ವಿರುದ್ಧವಾಗಿದೆ. ಈ ಸಂಬಂಧ ಕಾನೂನು ತಜ್ಞರ ಸಲಹೆ ಪಡೆದು ದೂರು ದಾಖಲಿಸಲು ಪರಿಶೀಲಿಸುವೆ. ಸರ್ಕಾರಕ್ಕೆ ಪತ್ರ ಸಹ ಬರೆಯುತ್ತೇನೆ ನಾನು ಯಾವುದೇ ತಪ್ಪು, ಅನ್ಯಾಯ ಮಾಡಿಲ್ಲ...’
–ಹೀಗೆ ಅಳಲು ತೋಡಿಕೊಂಡವರು ಮಹಾನಗರಪಾಲಿಕೆ ಆಯುಕ್ತ ಡಾ.ಸಿ.ಜಿ. ಬೆಟಸೂರಮಠ.

‘ನನ್ನ ವಿರುದ್ಧ ಸದಸ್ಯರು ಮಾಡಿರುವ ಆರೋಪಗಳು ಆಧಾರರಹಿತವಾದವು. ಪಾಲಿಕೆ ಆಯುಕ್ತನಾಗಿ ಕೆಲಸ ಮಾಡಬೇಕು ಎಂದು ನಾನು ಬಯಸಿ ಬಂದವನಲ್ಲ. ಸರ್ಕಾರ ಜವಾಬ್ದಾರಿ ನೀಡಿದೆ. ಅದನ್ನು ನಿರ್ವಹಿಸುತ್ತಿದ್ದೇನೆ.  ಸರ್ಕಾರ ಬೇಡ ಎಂದರೆ ಇಲ್ಲಿಂದ ಹೋಗುತ್ತೇನೆ. ಕೌನ್ಸಿಲ್ ಸಭೆಯಲ್ಲಿ ಅನಗತ್ಯವಾಗಿ ನನ್ನನ್ನು ನಿಂದಿಸಲಾಯಿತು. ಘಟನೆಯಿಂದ ಬೇಸತ್ತು ಸಭೆಯಿಂದ ನಾನು ಹೊರನಡೆಯಬಹುದಿತ್ತು. ಆದರೆ, ಸಭಾ ಗೌರವಕ್ಕೆ ಚ್ಯುತಿ ಬಾರದಿರಲಿ ಎಂದು ಸಭೆಯಲ್ಲೇ ಕುಳಿತೆ. ನನ್ನ ವಿರುದ್ಧ ಕೆಲ ಸದಸ್ಯರು ಮಾಡಿದ ಆರೋಪಕ್ಕೆ ಸಭೆಯಲ್ಲೇ ಉತ್ತರ ನೀಡಬೇಕೆಂದಿದ್ದೆ. ಆದರೆ, ಅದಕ್ಕೆ ಅವಕಾಶವೇ ಸಿಗಲಿಲ್ಲ. ಹೀಗಾಗಿ, ನನ್ನ ಮನದಾಳದ ಮಾತುಗಳನ್ನು ಅನಿವಾರ್ಯವಾಗಿ ಹಂಚಿಕೊಳ್ಳುತ್ತಿದ್ದೇನೆ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಆಡಳಿತದಲ್ಲಿ ಬಿಗಿಯಿಂದ ಇರಿಸು ಮುರುಸು: ‘ಪಾಲಿಕೆ ಆಯುಕ್ತನಾಗಿ ಬಂದ ಮೇಲೆ ನಾನು ಆಡಳಿತದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಆಡಳಿತ ಬಿಗಿಗೊಳಿಸಿದೆ. ಇದರಿಂದ ಕೆಲವರಿಗೆ ಇರಿಸು ಮುರುಸಾಗಿ, ಅಸಮಾಧಾನವಾಗಿರಬಹುದು. ಕಳಪೆ ಕಾಮಗಾರಿ, ಕಾಮಗಾರಿಯೇ ಮಾಡದ ಕೆಲಸಕ್ಕೆ ಬಿಲ್‌ಗಳನ್ನು ಪಾಸು ಮಾಡುವುದು ನನ್ನಿಂದ ಆಗುವುದಿಲ್ಲ. ಕಾಮಗಾರಿ ಅಪೂರ್ಣಗೊಂಡಿದ್ದರೆ ಸ್ಥಳಕ್ಕೆ ಹೋಗಿ ಪರಿಶೀಲಿಸಿ ಅಧಿಕಾರಿಗಳಿಗೆ ಸೂಚಿಸುತ್ತಿದ್ದೆ. ಇದು ಪಾಲಿಕೆ ಸದಸ್ಯರಿಗೆ ಆಗದೇ ಇರಬಹುದು. ನನ್ನ ವೈಯಕ್ತಿಕ ಸಮಸ್ಯೆಗಳನ್ನು ಬದಿಗೊತ್ತಿ ಹೆಚ್ಚು ಕೆಲಸ ಮಾಡುತ್ತಿದ್ದೆ. ಕೆಲಸದ ಅವಧಿ ಮುಗಿದರೂ ಹೆಚ್ಚಿನ ಸಮಯವನ್ನು ಕಚೇರಿಯಲ್ಲೇ ಕಳೆಯುತ್ತಿದ್ದೆ.
ಆಡಳಿತದಲ್ಲಿ ಬಿಗಿ ತರುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದೆ. ಆದರೆ, ನಿತ್ಯ ಸಭೆ ನಡೆಸುತ್ತಿದ್ದಾರೆ. ಆದರೆ, ಯಾವುದೇ ಕೆಲಸ ಆಗುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ. ಕೆಲಸದ ಅವಧಿ ಮುಗಿದ ಬಳಿಕ ಸಂಜೆ ಹೊತ್ತು ಇಲ್ಲವೇ ರಜಾದಿನಗಳಂದು ಸಭೆ ಮಾಡುತ್ತಿದ್ದೆ. ಆದರೆ, ಕಚೇರಿ ಕೆಲಸಕ್ಕೆ ಅಡ್ಡಿಯಾಗುವಂತೆ ಎಂದೂ ಸಭೆ ನಡೆಸಿಲ್ಲ’ ಎಂದರು.

ಅನುಮತಿ ಬೇಕಾಗಿಲ್ಲ: ನಾನು ಪಾಲಿಕೆ ಆಯುಕ್ತ. ದೂರು ಬಂದ ವಾರ್ಡಿಗೆ ತೆರಳಿ ಪರಿಶೀಲಿಸಲು ಸಂಬಂಧಪಟ್ಟ ವಾರ್ಡಿನ ಸದಸ್ಯರ ಅನುಮತಿ ಪಡೆಯುವ ಅಗತ್ಯ ಇಲ್ಲ’ ಎಂದರು.

ನಂದೀಶ್ ಪ್ರೀತಂ ಕೌನ್ಸಿಲ್‌ ಸಭೆಯಲ್ಲಿ ನಿಮ್ಮ ವಿರುದ್ಧ ಹರಿಹಾಯಲು ಏನು ಕಾರಣ ಎಂಬ ಪ್ರಶ್ನೆಗೆ, ‘ನಂದೀಶ್ ಪ್ರೀತಂ ಪ್ರತಿನಿಧಿಸುವ ವಾರ್ಡಿನ ಸಮಸ್ಯೆಗೆ ಸಂಬಂಧಿಸಿದಂತೆ ಸಾರ್ವಜನಿಕರು ದೂರು ನೀಡಿದ್ದರು. ಈ ದೂರನ್ನು ಪರಿಶೀಲಿಸಲು ಸ್ಥಳಕ್ಕೆ  ಹೋಗುವ ಮುನ್ನ ಅವರಿಗೆ ಕರೆ ಮಾಡಿದ್ದೆ. ಕರೆಯನ್ನು ಅವರು ಸ್ವೀಕರಿಸಲಿಲ್ಲ. ನಾನು ಹೋಗಿ ವಾರ್ಡನ್ನು ಪರಿಶೀಲಿಸಿ ಬಂದಿದ್ದೆ. ನನ್ನ ಕರ್ತವ್ಯ ನಾನು ಮಾಡಿದ್ದೇನೆ’ ಎಂದರು.

ಮತ್ತೆ ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ: ಮೂರು ವರ್ಷಗಳ ಹಿಂದೆ ನಡೆದ ಅವ್ಯವಹಾರ ಮತ್ತು ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಈಗ ತನಿಖೆ ನಡೆಯುತ್ತಿದೆ. ಅದಕ್ಕೆಲ್ಲ ನಾನು ಉತ್ತರ ನೀಡಬೇಕಿದೆ. ಈಗ ಕಣ್ಣು ಮುಚ್ಚಿ ಕಡತಕ್ಕೆ ಸಹಿ ಹಾಕಿದರೆ ಮುಂದೆ ಸದಸ್ಯರು ಮತ್ತು ನಾನು ತೊಂದರೆ ಎದುರಿಸಬೇಕಾಗುತ್ತದೆ. ಇದನ್ನು ಸದಸ್ಯರಿಗೆ ಮನವರಿಕೆ ಮಾಡಿಕೊಡಲು ಯತ್ನಿಸುತ್ತಿರುವೆ. ಎಲ್ಲವೂ ಒಂದು ಹಂತಕ್ಕೆ ಬರುತ್ತಿದೆ. ಮೂರು ವರ್ಷಗಳಿಂದ ಬಾಕಿ ಇದ್ದ ಆಸ್ತಿ ತೆರಿಗೆ ಸಂಗ್ರಹಕ್ಕೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ. ಪಾಲಿಕೆಗೆ ಆಯುಕ್ತನಾಗಿ ನಾನು ಬಂದರೆ ಆಡಳಿತ ಬಿಗಿ ಆಗುತ್ತದೆ ಎಂಬ ಮಾತು ಮೊದಲೇ ಕೇಳಿಬಂದಿತ್ತು’ ಎಂದು ತಿಳಿಸಿದರು.

ಅಧಿಕಾರಿಗಳ ಹುದ್ದೆ ಖಾಲಿ: ‘ಪಾಲಿಕೆಯ ಎಲ್ಲ ಕೆಲಸಗಳು ಎಂಜಿನಿಯರುಗಳ ವಿಭಾಗದ ಮೇಲೆ ನಿಂತಿದೆ. ಆದರೆ, ಕಾರ್ಯಪಾಲಕ ಎಂಜಿನಿಯರ್‌, ‘ಜೆ–ನರ್ಮ್‌ ಕಾರ್ಯಪಾಲಕ ಎಂಜಿನಿಯರ್‌ ಇಲ್ಲ. ಎಲೆಕ್ಟ್ರಿಕಲ್‌ ಎಂಜಿನಿಯರ್‌ ಹುದ್ದೆ ಖಾಲಿ ಇದೆ. ಜೂನಿಯರ್‌ ಎಂಜಿನಿಯರುಗಳ ಸಭೆ ನಡೆಸಿ ಕೆಲಸಕ್ಕೆ ಚಾಲನೆ ನೀಡಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT