ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಪಿಎಸ್‌ಸಿ: ಉತ್ತೀರ್ಣರಾದ ರಾಜ್ಯದ ಅಭ್ಯರ್ಥಿಗಳು

Last Updated 4 ಜುಲೈ 2015, 19:39 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಲೋಕಸೇವಾ ಆಯೋಗವು 2014ನೇ ಸಾಲಿನಲ್ಲಿ ನಡೆಸಿದ ನಾಗರಿಕ ಸೇವೆ ಪರೀಕ್ಷೆಯಲ್ಲಿ ಉತ್ತೀರ್ಣರಾದ ರಾಜ್ಯದ ಅಭ್ಯರ್ಥಿಗಳ ಪ್ರತಿಕ್ರಿಯೆ ಮತ್ತು ವಿವರ ಕೆಳಕಂಡಂತಿದೆ. ಬೆಂಗಳೂರಿನ ಪಿಇಎಸ್‌ ಎಂಜಿನಿಯರಿಂಗ್‌ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿರುವ ನಿತೀಶ್‌, ಕಳೆದ ಸಾಲಿನ ನಾಗರಿಕ ಸೇವೆ ಪರೀಕ್ಷೆಯಲ್ಲಿ 547ನೇ ರ‍್ಯಾಂಕ್‌ ಪಡೆದಿದ್ದರು.

‘ನಾಲ್ಕನೇ ತರಗತಿವರೆಗೆ ಹುಟ್ಟೂರು ಉಡುಪಿಯಲ್ಲಿ ಓದಿದ್ದೆ. ಬಳಿಕ ಚಿತ್ರದುರ್ಗದ ನವೋದಯ ಶಾಲೆಗೆ ಸೇರಿಕೊಂಡಿದ್ದೆ. ನಾಗರಿಕ ಸೇವೆಗೆ ಸೇರಬೇಕು ಎಂಬ ಆಸೆ ಚಿಗೊರೊಡೆದದ್ದೇ ಅಲ್ಲಿ’ ಎಂದು ನಿತೀಶ್‌  ಮನದಾಳ ಬಿಚ್ಚಿಟ್ಟರು. ‘ತಂದೆ ರಾಮಕೃಷ್ಣ ಹೆಬ್ಬಾರ್‌ ಅವರು ಕರ್ಣಾಟಕ ಬ್ಯಾಂಕಿನಲ್ಲಿ ವ್ಯವಸ್ಥಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ತಾಯಿ ಭಾರತಿ ಹೆಬ್ಬಾರ್‌ ಗೃಹಿಣಿ’ ಎಂದು ತಿಳಿಸಿದರು. ‘ಸದ್ಯ ನಾನು ಶಿಮ್ಲಾದಲ್ಲಿ ಇದ್ದೇನೆ. ಭಾರತೀಯ ಲೆಕ್ಕಪತ್ರ ಮತ್ತು ಪರಿಶೋಧನೆ ಸೇವೆಗೆ ಸಂಬಂಧಿಸಿ ತರಬೇತಿ ಪಡೆಯುತ್ತಿದ್ದೇನೆ’ ಎಂದು ನಿತೀಶ್‌ ಹೇಳಿದರು.

ನಂಬಲು ಸಾಧ್ಯವಾಗಲಿಲ್ಲ: ‌‘ಐಎಎಸ್‌ ಅಧಿಕಾರಿ ಆಗಬೇಕು ಎಂಬುದು ನನ್ನ ಬಾಲ್ಯದ ಕನಸಾಗಿತ್ತು. ಮೊದಲ ನೂರು ರ‍್ಯಾಂಕ್‌ಗಳಲ್ಲಿ ಸ್ಥಾನ ಪಡೆಯುವ ಗುರಿ ನಿಶ್ಚಯ ಮಾಡಿಕೊಂಡಿದ್ದೆ. ಆದರೆ, ಯಾವಾಗ 31ನೇ ರ‍್ಯಾಂಕ್‌ ಬಂದಿರುವ ವಿಷಯ ಗೊತ್ತಾಯಿತೊ ಕೆಲಕಾಲ ನಂಬಲು ಸಾಧ್ಯವಾಗಲಿಲ್ಲ’ ಎಂದು ಬಿ. ಫೌಜಿಯಾ ತರನಮ್‌ ತಿಳಿಸಿದರು.

‘ನಮ್ಮ ಕುಟುಂಬದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದವಳು ನಾನೇ ಮೊದಲಿಗಳು. ಅಲ್ಲದೇ ಸರ್ಕಾರಿ ಸೇವೆಗೆ ಸೇರುತ್ತಿರುವುದು ಕೂಡ ನಾನೇ ಮೊದಲು’ ಎಂದರು. ಫೌಜಿಯಾ ಅವರು ನಗರದ ಜ್ಯೋತಿನಿವಾಸ ಕಾಲೇಜಿನಲ್ಲಿ ಬಿ.ಕಾಂ ಹಾಗೂ ಕ್ರೈಸ್ಟ್‌ ವಿಶ್ವವಿದ್ಯಾಲಯದಲ್ಲಿ ಪಿಜಿಡಿಎಂ ಮುಗಿಸಿದ್ದಾರೆ. ಅಲ್ಲದೇ ‘ಸುಸ್ಥಿರ ಅಭಿವೃದ್ಧಿ’ ವಿಷಯದಲ್ಲಿ ಪಿ.ಜಿ. ಡಿಪ್ಲೊಮಾ ಮಾಡಿದ್ದಾರೆ.

‘2012ರಿಂದ ಭಾರತೀಯ ಕಂದಾಯ ಸೇವೆಯಲ್ಲಿ  (ಐಆರ್‌ಎಸ್‌) ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ.  ಐಎಎಸ್‌ಗೆ ಇದು ನನ್ನ ಮೂರನೇ ಪ್ರಯತ್ನವಾಗಿತ್ತು. ಐಎಎಸ್‌ ನನ್ನ ಕನಸಾಗಿತ್ತು’ ಎಂದರು. ‘ನನ್ನ ತಾಯಿ ಗೃಹಿಣಿ. ತಂದೆ ಸಣ್ಣ ಉದ್ಯಮಿಯಾಗಿದ್ದಾರೆ’ ಎಂದು ಹೇಳಿದರು.

434ನೇ ರ‍್ಯಾಂಕ್‌ ಗಳಿಸಿರುವ ಮಲ್ಲಿಕಾರ್ಜುನ ವಿ. ಮಾಮನಿ ಅವರು ಉತ್ತರ ಕರ್ನಾಟಕದ ಪ್ರಭಾವಿ ರಾಜಕೀಯ ಮನೆತನಕ್ಕೆ ಸೇರಿದವರು. ಇವರ ಚಿಕ್ಕಪ್ಪ ಆನಂದ ಮಾಮನಿ ಅವರು ಬೆಳಗಾವಿ ಜಿಲ್ಲೆ ಸವದತ್ತಿ ಯಲ್ಲಮ್ಮ  ಕ್ಷೇತ್ರದ ಶಾಸಕರಾಗಿದ್ದಾರೆ. ಇವರ ತಂದೆ ರಾಜಣ್ಣ ಮಾಮನಿ ಅವರು 2004ರಲ್ಲಿ ಇದೇ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.

ಜನಸೇವೆಯ ಕನವರಿಕೆ: ‘ಕೃಷಿ ಕುಟುಂಬದಲ್ಲಿ ಹುಟ್ಟಿ, ಹಳ್ಳಿಯ ಜೀವನವನ್ನು ಬಹಳ ಹತ್ತಿರದಿಂದ ನೋಡಿರುವ ನನಗೆ, ಕಚೇರಿಯಲ್ಲಿ ಕುಳಿತು ನಿರ್ವಹಿಸುವ ಹುದ್ದೆ ಇಷ್ಟವಿಲ್ಲ. ಜನರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡುವಾಸೆ ಇದೆ’ ಈ ಸಲದ ಯುಪಿಎಸ್‌ಸಿ ಪರೀಕ್ಷೆಯಲ್ಲಿ 931ನೇ ರ‍್ಯಾಂಕ್‌ ಗಳಿಸಿರುವ ಸಾಗರ ತಾಲ್ಲೂಕಿನ ಬ್ಯಾಕೋಡು ಗ್ರಾಮದ ಪ್ರಿಯಾ ಶೆಟ್ಟಿ ಅವರ ಮನದಾಳದ ಮಾತಿದು.

ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ ಪೂರೈಸಿರುವ ಪ್ರಿಯಾ ಕಳೆದ ಮೂರು ವರ್ಷಗಳಿಂದ ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸಿ, 3ನೇ ಪ್ರಯತ್ನದಲ್ಲಿ ಯಶ ಕಂಡಿದ್ದಾರೆ. 2012ರಲ್ಲಿ ಬೆಂಗಳೂರಿನಲ್ಲಿ ಆರು ತಿಂಗಳು ತರಬೇತಿ ಪಡೆದ ಪ್ರಿಯಾ, ನಂತರ ದೆಹಲಿಯ ಪ್ರತಿಷ್ಠಿತ ತರಬೇತಿ ಕೇಂದ್ರದಲ್ಲಿ ಪರೀಕ್ಷೆ ತಾಲೀಮು ಕೈಗೊಂಡವರು.

ಕಳೆದ ಬಾರಿ ಸಂದರ್ಶನ ಎದುರಿಸಿದ್ದ ಪ್ರಿಯಾ ಅವರು ಕೇವಲ 11 ಅಂಕಗಳಿಂದ ಅವಕಾಶ ಕಳೆದುಕೊಂಡಿದ್ದರು. ‘ಇದೀಗ ಬಂದಿರುವ ರ‍್ಯಾಂಕ್‌ ನನಗೆ ತೃಪ್ತಿ ತಂದಿಲ್ಲ. ಹಾಗಂತ, ನಾನು ಕೈಚೆಲ್ಲಿ ಕುಳಿತುಕೊಳ್ಳುವುದಿಲ್ಲ. ಬದಲು, ರ‍್ಯಾಂಕ್‌   ಸುಧಾರಿಸಲು ಪ್ರಯತ್ನಿಸುತ್ತೇನೆ. ಐಎಎಸ್‌ ಅಧಿಕಾರಿಯಾಗಿ ಜನಸೇವೆ ಮಾಡಬೇಕು ಎನ್ನುವುದೇ ನನ್ನ ಗುರಿ’ ಎಂದರು.
*

‘ಪ್ರೇರಣೆ ನೀಡಿದ ಅಪ್ಪ, ಅಮ್ಮ’
‘ತಂದೆ– ತಾಯಿ ಅವರೇ ನನ್ನ ಸಾಧನೆಗೆ ಪ್ರೇರಣೆ. ಚಿಕ್ಕಂದಿನಿಂದಲೂ ಬಡವರಿಗೆ ಸಹಾಯ ಮಾಡಬೇಕು ಎಂಬ ಹಂಬಲವಿತ್ತು. ಐಎಎಸ್‌ ಪರೀಕ್ಷೆಯಲ್ಲಿ ಉತ್ತೀರ್ಣನಾದರೆ ಅದು ಸಾಧ್ಯವಾಗಲಿದೆ ಎಂಬ ಇಚ್ಛೆಯಿಂದ ಸತತ ಪರಿಶ್ರಮಪಟ್ಟೆ. ಎಲ್ಲಿಯೂ ತರಬೇತಿ ಪಡೆದುಕೊಳ್ಳದೇ ಸ್ವಂತ ಅಭ್ಯಾಸ ನಡೆಸಿದೆ. ಮೆಡಿಕಲ್‌ ಸೈನ್ಸ್‌ ವಿಷಯವನ್ನೇ ಐಚ್ಛಿಕವಾಗಿ ತೆಗೆದುಕೊಂಡ ಕಾರಣ ಉತ್ತಮ ರ್‍ಯಾಂಕ್‌ ತೆಗೆದುಕೊಳ್ಳಲು ಸಾಧ್ಯವಾಯಿತು.’
– ಡಾ.ವಿನೋದ್‌ ಕುಮಾರ್‌
291ನೇ ರ‍್ಯಾಂಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT