ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಪಿಎಸ್‌ಸಿ ಎಡಬಿಡಂಗಿ ನಿಲುವು

Last Updated 22 ಮಾರ್ಚ್ 2013, 19:59 IST
ಅಕ್ಷರ ಗಾತ್ರ

ಸುಧಾರಣೆಯ ಹೆಸರಿನಲ್ಲಿ ಕೇಂದ್ರ ಲೋಕಸೇವಾ ಆಯೋಗ ಜಾರಿಗೊಳಿಸಲು ಹೊರಟಿರುವ ಆಕ್ಷೇಪಾರ್ಹ ಪ್ರಸ್ತಾವಗಳನ್ನು ಕೈಬಿಟ್ಟಿರುವುದಾಗಿ ಸರ್ಕಾರ ಪ್ರಕಟಿಸಿದೆ. ಪ್ರಮುಖ ನೀತಿ ನಿರೂಪಣಾ ಪ್ರಸ್ತಾವಗಳನ್ನು ಸರ್ಕಾರ ಎಷ್ಟು ಬೇಗ ಒಪ್ಪಿಕೊಳ್ಳುತ್ತದೆ ಹಾಗೂ ಅಷ್ಟೇ ಸಲೀಸಾಗಿ ಕೈಬಿಡುತ್ತದೆ ಎಂಬುದನ್ನು ನೋಡಿದಾಗ, ನೀತಿ ನಿರೂಪಕರಾದ ಗಣ್ಯರಿಗೆ ಬದ್ಧತೆ ಮತ್ತು ಗಂಭೀರತೆಯ ಕೊರತೆ ಇರುವುದು ಎದ್ದು ಕಾಣುತ್ತದೆ. ಆಡಳಿತ ಸೇವಾ ಪರೀಕ್ಷೆಗಳಲ್ಲಿ ಭಾರತೀಯ ಭಾಷೆಗಳ ಪ್ರಾಮುಖ್ಯ ತಗ್ಗಿಸುವ ಕೇಂದ್ರ ಯುಪಿಎಸ್‌ಸಿ ಪ್ರಯತ್ನ ಭಾಷಾ ವೈವಿಧ್ಯಕ್ಕೆ ನಾವು ಹಿಂದಿನಿಂದಲೂ ತೋರುತ್ತಾ ಬಂದ ಬದ್ಧತೆಯನ್ನು ತಗ್ಗಿಸುವಂತಿತ್ತು.

ಸುಧಾರಣೆಯ ಹೆಸರಿನಲ್ಲಿ ಯುಪಿಎಸ್‌ಸಿ ಜಾರಿಗೊಳಿಸಲು ಹೊರಟಿದ್ದ ನೀತಿ, ಇಂದಿನ ಕಾಲಕ್ಕೆ ಸರಿಹೊಂದುವ ಪ್ರತಿಷ್ಠಿತ ಅಧಿಕಾರಿಶಾಹಿಯನ್ನು ರೂಪಿಸುವಲ್ಲಿ ಭಾರತೀಯ ಭಾಷೆಗಳ ಕೊಡುಗೆ ಏನೂ ಇಲ್ಲ ಎಂಬ ನಿರ್ಧಾರಕ್ಕೆ ಬಂದಿರುವುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಸಾರ್ವಜನಿಕರ ಜತೆ ರಾಜಕೀಯ ಪಕ್ಷಗಳು ಕೂಡಾ ಯುಪಿಎಸ್‌ಸಿ ನಿರ್ಧಾರದ ವಿರುದ್ಧ ಧ್ವನಿ ಎತ್ತಿರುವ ಹಿನ್ನೆಲೆಯಲ್ಲಿ ಅದು ತನ್ನ ಪ್ರಸ್ತಾವವನ್ನು ಕೈಬಿಟ್ಟಿದೆ. ನಮ್ಮ ರಾಜಕೀಯ ಪಕ್ಷಗಳು ಕೂಡ, ಸಾರ್ವಜನಿಕ ಜೀವನದಲ್ಲಿ ಭಾರತೀಯ ಭಾಷೆಗಳ ಪ್ರಾಮುಖ್ಯವನ್ನು  ಮನಗಂಡಿರುವುದಕ್ಕಿಂತ ಹೆಚ್ಚಾಗಿ ಚುನಾವಣಾ ಲೆಕ್ಕಾಚಾರದಿಂದ ಈ ಪ್ರತಿಭಟನೆಗಳನ್ನು ನಡೆಸಿದ್ದವು ಎಂಬುದು ಬೇರೆ ವಿಷಯ.

ಯುಪಿಎಸ್‌ಸಿ ಪ್ರಸ್ತಾವದ ಬಗ್ಗೆ ನಾವು ಏಕೆ ಜಾಗೃತರಾಗಬೇಕು ಎಂಬ ಪ್ರಶ್ನೆಯನ್ನು ಹಾಕಿಕೊಂಡು, ಒಮ್ಮೆ ಅದರಲ್ಲಿದ್ದ ನಿಬಂಧನೆಗಳ ಕುರಿತು ಗಮನಹರಿಸೋಣ.

1. ಉದ್ದೇಶಿತ ನೀತಿ ಜಾರಿಗೊಂಡಿದ್ದರೆ, ಅಭ್ಯರ್ಥಿಗಳು ಇನ್ನು ಮುಂದೆ ಇಂಗ್ಲಿಷ್‌ನಲ್ಲಿ ಮಾತ್ರ ತೇರ್ಗಡೆಗೆ ನಿಗದಿಯಾದ ಅಂಕ ಗಳಿಸಿದರೆ ಸಾಕು. ಅರ್ಹತಾ ಪರೀಕ್ಷೆಯಲ್ಲಿ ಭಾರತೀಯ ಭಾಷೆಯೊಂದರಲ್ಲಿ ತೇರ್ಗಡೆಯಾಗಬೇಕೆಂಬುದು ಕಡ್ಡಾಯವಾಗಿದ್ದ ಈ ಹಿಂದಿನ ನಿಯಮವನ್ನು ಕೈಬಿಡಲಾಗಿತ್ತು. ಅಲ್ಲದೇ ಈಗ, ಅರ್ಹತಾ ಪರೀಕ್ಷೆಯಲ್ಲಿ (ಪೂರ್ವಭಾವಿ ಪರೀಕ್ಷೆಯಲ್ಲಿ) ಇಂಗ್ಲಿಷ್‌ನಲ್ಲಿ ಗಳಿಸಿದ ಅಂಕಗಳನ್ನು ಅಂತಿಮ ಪರೀಕ್ಷೆಯ ಅಂಕಗಳಿಗೆ ಸೇರಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಮುಂಚೆ ಈ ನಿಯಮ ಇರಲಿಲ್ಲ.

2. ಅಭ್ಯರ್ಥಿಗಳು ಪದವಿ ಹಂತದಲ್ಲಿ ಪ್ರಾದೇಶಿಕ ಭಾಷೆಯನ್ನು ಪಠ್ಯವಾಗಿ ಅಧ್ಯಯನ ಮಾಡಿದ್ದರೆ ಮಾತ್ರ ಅದನ್ನು ಪೂರ್ವಭಾವಿ ಪರೀಕ್ಷೆಯಲ್ಲಿ ಐಚ್ಛಿಕ ವಿಷಯವಾಗಿ ಆಯ್ಕೆ ಮಾಡಿಕೊಳ್ಳಬಹುದಿತ್ತು.

3. ಅಭ್ಯರ್ಥಿಗಳು ಸಂವಿಧಾನದ 8ನೇ ಪರಿಚ್ಛೇದದಲ್ಲಿ ಅಡಕವಾಗಿರುವ ಯಾವುದೇ ಭಾರತೀಯ ಭಾಷೆಯಲ್ಲಿ ಅಂತಿಮ ಪರೀಕ್ಷೆ ಬರೆಯಬೇಕೆಂದರೆ ಪದವಿ ಹಂತದಲ್ಲಿ ಆ ಭಾಷೆ ಅವರ ಕಲಿಕೆಯ ಮಾಧ್ಯಮವಾಗಿರಬೇಕಿತ್ತು. ಅಷ್ಟೇ ಅಲ್ಲ, ಕನಿಷ್ಠ 25 ವಿದ್ಯಾರ್ಥಿಗಳು ನಿರ್ದಿಷ್ಟ ಭಾರತೀಯ ಭಾಷೆಯಲ್ಲಿ ಅಂತಿಮ ಪರೀಕ್ಷೆ ತೆಗೆದುಕೊಳ್ಳಲು ಮುಂದಾದರೆ ಮಾತ್ರ ಅದಕ್ಕೆ ಅವಕಾಶ ನೀಡಲಾಗುತ್ತಿತ್ತು.

ಈ ಪ್ರಸ್ತಾವಗಳನ್ನು ನೋಡಿದರೆ, ಆಡಳಿತ ಸೇವಾ ಅಧಿಕಾರಿಗೆ ಭಾರತೀಯ ಭಾಷೆ ಗೊತ್ತಿರುವ ಅಗತ್ಯವಿಲ್ಲ ಎಂಬುದು ಯುಪಿಎಸ್‌ಸಿ ಭಾವನೆ ಎಂಬುದು ನಿಚ್ಚಳವಾಗುತ್ತದೆ. ಆದರೆ, ಬಹುಪಾಲು ಜನರಿಗೆ ಇಂಗ್ಲಿಷ್ ಹೊರಗಿನ ಭಾಷೆಯಾಗಿರುವ ನಮ್ಮಂತಹ ದೇಶದಲ್ಲಿ ಈ ಪ್ರಸ್ತಾವಗಳು ವಿಪರ್ಯಾಸವಲ್ಲದೆ ಮತ್ತೇನೂ ಅಲ್ಲ. ಆಡಳಿತ ಸೇವಾ ವ್ಯವಸ್ಥೆ ಜಾರಿಗೆ ತಂದ ಬ್ರಿಟಿಷರೇ, ಆಡಳಿತ ಸೇವಾ ಅಧಿಕಾರಿಗೆ ಭಾರತೀಯ ಭಾಷೆಯ ಉತ್ತಮ ಜ್ಞಾನವಿರಬೇಕು ಎಂಬುದನ್ನು ಕಡ್ಡಾಯಗೊಳಿಸಿದ್ದರೆಂಬುದನ್ನು ನೋಡಿದಾಗ ಈ ವಿಪರ್ಯಾಸ ಇನ್ನಷ್ಟು ತಮಾಷೆ ಎನಿಸುತ್ತದೆ.

ಎರಡನೇ ಮತ್ತು ಮೂರನೇ ನಿಬಂಧನೆಗಳನ್ನು ಎಲ್ಲಾ ಅಭ್ಯರ್ಥಿಗಳಿಗೂ ಅನ್ವಯಿಸದಿದ್ದುದನ್ನು ನೋಡಿದರೆ, ಭಾರತೀಯ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಇಚ್ಛಿಸುವವರ ಉತ್ಸಾಹಕ್ಕೆ ತಣ್ಣೀರು ಎರಚಲೆಂದೇ ಯುಪಿಎಸ್‌ಸಿ ಗೊಂದಲಕಾರಿ ನಿಲುವು ತಳೆದಿತ್ತು ಎಂಬುದು ಸ್ಪಷ್ಟವಾಗಿ ವ್ಯಕ್ತವಾಗುತ್ತದೆ (ಉದಾಹರಣೆಗೆ ಹೇಳುವುದಾದರೆ, ಎಂಜಿನಿಯರ್‌ಗಳು ಮತ್ತು ವೈದ್ಯರಿಗೆ ರಾಜ್ಯಶಾಸ್ತ್ರ ಅಥವಾ ಇತಿಹಾಸವನ್ನು ಐಚ್ಛಿಕ ವಿಷಯವಾಗಿ ಆಯ್ದುಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು). ಪ್ರಾದೇಶಿಕ ಭಾಷೆ, ಪ್ರಾದೇಶಿಕ ಸಾಹಿತ್ಯ ವಿಷಯಗಳಲ್ಲಿ ಅಂಕ ಗಳಿಕೆ ಸುಲಭ ಅಥವಾ ಪದವಿ ಹಂತದಲ್ಲಿ ತರಬೇತಿ ಇಲ್ಲದೆಯೂ ಈ ವಿಷಯಗಳನ್ನು ನಿಭಾಯಿಸಬಹುದು ಎಂದು ಯುಪಿಎಸ್‌ಸಿ ಭಾವಿಸಿದ್ದೇ ಆದರೆ, ಆಗ ಸಮಸ್ಯೆಯನ್ನು ಬೇರೆ ರೀತಿ ಪರಿಹರಿಸಬೇಕಿತ್ತೇ ಹೊರತು, ಅಸಮರ್ಥನೀಯ ನಿಬಂಧನೆಗಳ ಮೂಲಕ ಅಲ್ಲ. (ಹೇಗಿದ್ದರೂ, ವಿಜ್ಞಾನ ಕಲಿತ ಅಭ್ಯರ್ಥಿಗಳು ಅಂಕ ಗಳಿಕೆ ಸುಲಭವೆಂದು, ಮುಂಚಿನಿಂದಲೂ ಮಾನವ ಶಾಸ್ತ್ರ, ಸಮಾಜಶಾಸ್ತ, ಸಾರ್ವಜನಿಕ ಆಡಳಿತ,ರಾಜ್ಯಶಾಸ್ತ್ರ, ಇತಿಹಾಸದಂತಹ ಸಮಾಜ ವಿಜ್ಞಾನ ವಿಷಯಗಳನ್ನು ಐಚ್ಛಿಕ ವಿಷಯವಾಗಿ ಆಯ್ಕೆ ಮಾಡಿಕೊಳ್ಳುತ್ತಲೇ ಬಂದಿದ್ದಾರೆ).

ಇಂಗ್ಲಿಷ್ ಸ್ಪರ್ಧಾತ್ಮಕ ಭಾಷೆ ಹಾಗೂ ಹೊಸ ಪೀಳಿಗೆಯ ಆಡಳಿತ ಸೇವಾ ಅಧಿಕಾರಿಗಳ ಅಧ್ಯಯನ ಭಾಷೆ ಎಂಬುದು ಸರ್ಕಾರದ ಭಾವನೆಯಾಗಿರುವುದು ನಿಸ್ಸಂಶಯ. ಆಡಳಿತ ನಡೆಸುವವರಿಗೆ ಇಂಗ್ಲಿಷ್ ಜ್ಞಾನ ಅಗತ್ಯ ಹೌದಾದರೂ, ಪ್ರಾದೇಶಿಕ ಭಾಷೆಗಳ ಪ್ರಾಮುಖ್ಯವನ್ನು ಸಂಪೂರ್ಣವಾಗಿ ಕಡೆಗಣಿಸಿದ್ದನ್ನು ಒಪ್ಪಿಕೊಳ್ಳಲಾಗದು. ವಾಸ್ತವವಾಗಿ,  ಆಡಳಿತ ಸೇವಾ ಅಧಿಕಾರಿಗಳಿಗೆ ಪ್ರಾದೇಶಿಕ ಭಾಷೆಯ ಜ್ಞಾನ ಇಲ್ಲವೆಂದಾದರೆ, ಅದನ್ನು ಊನತೆ ಎಂದು ಭಾವಿಸುವುದೇ ಸೂಕ್ತ. ಜ್ಞಾನಪೀಠ ಪುರಸ್ಕೃತ ಲೇಖಕ ಯು.ಆರ್.ಅನಂತಮೂರ್ತಿ ಅವರು 1976ರಲ್ಲಿ ಬರೆದ `ಬರ' ಕತೆ ಈ ಸಂದರ್ಭದಲ್ಲಿ ನೆನಪಾಗುತ್ತದೆ- ಒಳ್ಳೆಯ ಇಂಗ್ಲಿಷ್ ಬಲ್ಲ ನಗರದ ಹಿನ್ನೆಲೆಯ ಐಎಎಸ್ ಅಧಿಕಾರಿ, ತನ್ನ ಜಿಲ್ಲೆಯ ಸಾಮಾಜಿಕ, ರಾಜಕೀಯ ವಾಸ್ತವಗಳನ್ನು ಅರಿಯಲು ಅಸಮರ್ಥನಾಗುತ್ತಾನೆ; ಆದರೆ ಅದೇ ವೇಳೆ, ಸ್ಥಳೀಯ ರಾಜಕೀಯ ಕಾರ್ಯಕರ್ತನೊಬ್ಬ ಅವನ್ನು ಗ್ರಹಿಸುವಲ್ಲಿ ಪರಿಣತನಾಗಿರುತ್ತಾನೆ- ಎಂಬುದನ್ನು ಈ ಕಥೆ ಪರಿಣಾಮಕಾರಿಯಾಗಿ ಸೆರೆಹಿಡಿದಿದೆ.

ಯುಪಿಎಸ್‌ಸಿ ಪ್ರಸ್ತಾವದಲ್ಲಿದ್ದ ಎರಡು ಸಂಗತಿಗಳು ನಮ್ಮನ್ನು ಕಾಡುತ್ತವೆ. ಮೊದಲನೆಯದಾಗಿ, ಈಗ ಪ್ರಾದೇಶಿಕ ಭಾಷೆಯನ್ನು ಬೋಧನೆಯ ಮಾಧ್ಯಮವಾಗಿಸಿಕೊಂಡಿರುವ ಸರ್ಕಾರಿ ಶಾಲೆಗಳಲ್ಲಿನ ಕಲಿಕೆಯ ಬಗ್ಗೆ ಯುಪಿಎಸ್‌ಸಿಗೆ ವಿಶ್ವಾಸ ಇಲ್ಲ ಎನ್ನುವ ನಿರ್ಧಾರಕ್ಕೆ ಬರಬೇಕಾಗುತ್ತದೆ. ಈ ಶಾಲೆಗಳಿಂದ ಕಲಿತು ಹೊರಬರುವ ಬಹುಸಂಖ್ಯೆಯ ವಿದ್ಯಾರ್ಥಿಗಳು ಆಡಳಿತ ಸೇವಾ ಅಧಿಕಾರಿಗಳಾಗಲು ನಾಲಾಯಕ್ ಎಂಬುದೂ ಯುಪಿಎಸ್‌ಸಿ ಭಾವನೆಯಾಗಿದೆ. ಇದು ಲಜ್ಜೆಗೇಡಿನ ಪೂರ್ವಗ್ರಹವಲ್ಲದೆ ಬೇರೇನೂ ಅಲ್ಲ.

ಎರಡನೆಯದಾಗಿ, ಸರ್ಕಾರಿ ಶಾಲೆಗಳಲ್ಲಿ ಕಲಿಯುವ ಬಹುತೇಕ ಮಕ್ಕಳು ಕಡಿಮೆ ಆದಾಯದ, ಕೆಳಜಾತಿಗಳು ಹಾಗೂ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾದ್ದರಿಂದ ಅಂತಹ ಹಿನ್ನೆಲೆಯ ಅಭ್ಯರ್ಥಿಗಳಿಗೆ ಆಡಳಿತ ಸೇವೆ ಪ್ರವೇಶವನ್ನು ನಿರಾಕರಿಸಿದಂತಾಗುತ್ತದೆ. ಜತೆಗೆ, ಆರ್ಥಿಕ ದುರ್ಬಲರ ಮತ್ತು ಸಾಮಾಜಿಕ ದುರ್ಬಲರ ಕಷ್ಟನಷ್ಟಗಳ ಪರಿಚಯ ಅಷ್ಟಾಗಿ ಇಲ್ಲದ ಮೇಲುಸ್ತರದ ಹಾಗೂ ಮೇಲ್ಜಾತಿಯ ಅಭ್ಯರ್ಥಿಗಳಿಗೆ ಮಾತ್ರ ಆಡಳಿತ ಸೇವಾ ವಲಯಕ್ಕೆ ರಹದಾರಿ ಒದಗಿಸಿದಂತಾಗುತ್ತದೆ.

ಪ್ರಾದೇಶಿಕ ಭಾಷಾ ಕಲಿಕೆಯ ಮಹತ್ವ ಪ್ರತಿಪಾದಿಸಿದ ಗಾಂಧಿ, ಟ್ಯಾಗೋರ್, ಕುವೆಂಪು, ಮಾಸ್ತಿ ಮತ್ತಿತರರು ಇವತ್ತು ಬದುಕಿದ್ದಿದ್ದರೆ ಯುಪಿಎಸ್‌ಸಿ ಪ್ರಸ್ತಾವಗಳನ್ನು ಕಂಡು ನಗುತ್ತಿದ್ದರೋ ಏನೋ. ಇಂತಹ ಯೋಚನೆಯ ಒಂದು ಎಳೆ ಕೂಡ ಅವರಲ್ಲಿ ಯಾವ ಕ್ಷಣದಲ್ಲೂ ಮೂಡಿರಲು ಸಾಧ್ಯವಿಲ್ಲ. ಇವರೆಲ್ಲರೂ, ನಮ್ಮ ಸಮಾಜವನ್ನು ವಸಾಹತುಶಾಹಿ ಆಡಳಿತದ ಮಾನಸಿಕ ಆಘಾತಗಳಿಂದ ಮುಕ್ತಗೊಳಿಸುವ ಸಂಕಲ್ಪ ಹೊಂದಿದ್ದರು. ಅವರೆಲ್ಲರಿಗೂ, ಭಾರತೀಯ ಭಾಷೆಯು ಸೃಜನಶೀಲ ಚಿಂತನೆಯ ಸ್ಫೂರ್ತಿಯ ಆಕರವಾಗಿತ್ತು; ನಮ್ಮ ಲಿಖಿತ ಮತ್ತು ಮೌಖಿಕ ಬೌದ್ಧಿಕ ಪರಂಪರೆಗಳ ಜತೆಗೆ ನಿರಂತರವಾದ ಅವಿನಾಭಾವ ಸಂಬಂಧ ಹೊಂದಿರಲು ಭಾರತೀಯ ಭಾಷೆ ಅತ್ಯಗತ್ಯ ಎಂಬುದನ್ನು ಅವರು ಮನಗಂಡಿದ್ದರು. ರಾಷ್ಟ್ರದಲ್ಲಿ ಹೊಸಹೊಸ ಸಾಮಾಜಿಕ ಮತ್ತು ರಾಜಕೀಯ ಸಂವಾದಗಳ ಸಾಧ್ಯತೆಗಳನ್ನು ಸೃಷ್ಟಿಸಲು ನಮ್ಮ ಭಾಷೆಗಳು ವಿಪುಲ ಅವಕಾಶಗಳನ್ನು ಒದಗಿಸುತ್ತವೆ ಎಂಬುದು ಅವರೆಲ್ಲರ ನಂಬಿಕಯಾಗಿತ್ತು.

ಆದರೆ, ಇವತ್ತಿನ ನಮ್ಮ ರಾಜಕೀಯ ಗಣ್ಯರು ಭಾಷೆ ಎಂಬುದನ್ನು ರಾಷ್ಟ್ರ ಹಾಗೂ ವಿದೇಶಗಳಲ್ಲಿ ಉದ್ಯೋಗ ಪಡೆದು ಸಾಮಾಜಿಕವಾಗಿ ಮೇಲೆ ಬರಲು ಇರುವ ಒಂದು ಸಾಧನ ಎಂಬ ಸಂಕುಚಿತ ದೃಷ್ಟಿಯಲ್ಲಿ ನೋಡುತ್ತಿದ್ದಾರೆ. ಭಾಷೆ ಎಂದರೆ, ನಾಗರಿಕ ಸ್ಮೃತಿಯ ಭಂಡಾರವೆಂಬ ಅಥವಾ ಸೃಜನಶೀಲ ಅಭಿವ್ಯಕ್ತಿಯ ಪ್ರಮುಖ ಸಾಧನ ಎಂಬ ವಿಶಾಲ ದೃಷ್ಟಿಕೋನ ಅವರಲ್ಲಿ ಇಲ್ಲವೇ ಇಲ್ಲ. ಭಾಷೆ ಮತ್ತು ಶಿಕ್ಷಣವನ್ನು ಆರ್ಥಿಕ ಬೆಳವಣಿಗೆಯ ಸಾಧನವೆಂದು ಪ್ರತಿಬಿಂಬಿಸುವ ಲಾಬಿ ಇತ್ತೀಚಿನ ವರ್ಷಗಳಲ್ಲಿ ಪ್ರಬಲವಾಗಿದೆ. 2000ರಲ್ಲಿ  ಪ್ರಧಾನಿಯಾಗಿದ್ದ ವಾಜಪೇಯಿ ಮತ್ತು ರಾಷ್ಟ್ರೀಯ ಜ್ಞಾನ ಆಯೋಗದ ಮನವಿ ಮೇರೆಗೆ ಮುಕೇಶ್ ಅಂಬಾನಿ ಮತ್ತು ಕುಮಾರಮಂಗಲಂ ಬಿರ್ಲಾ ಅವರು ಸಿದ್ಧಪಡಿಸಿದ `ಶಿಕ್ಷಣ ಸುಧಾರಣೆಗೆ ನೀತಿ ನಿರೂಪಣಾ ರೂಪುರೇಷೆ'ಯನ್ನೇ ನೋಡಬಹುದು. ಇದು ಕೂಡ ಭಾರತೀಯ ಭಾಷೆಗಳಿಗೆ ಯಾವ ಪ್ರಾಮುಖ್ಯವನ್ನೂ ನೀಡಿಲ್ಲ (ಅಂಬಾನಿ ಮತ್ತು ಬಿರ್ಲಾ ಅವರಂತಹ ಉದ್ಯಮಿಗಳು ಹೇಗೆ ಮತ್ತು ಏಕೆ ಭಾರತೀಯ ಶಿಕ್ಷಣ ಕುರಿತು ವರದಿ ಸಿದ್ಧಪಡಿಸುತ್ತಾರೆ ಎಂಬುದರಲ್ಲಿ ರಹಸ್ಯವೇನೂ ಇಲ್ಲ). ಇದರ ಜತೆಗೆ, ಇಂಗ್ಲಿಷ್ ಮಾಧ್ಯಮದ ಶಿಕ್ಷಣದ ಬಗ್ಗೆ ಪೋಷಕರಲ್ಲಿ ಬೆಳೆಯುತ್ತಿರುವ ಗೀಳು ಸಮಸ್ಯೆಯನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ. ಇವೆಲ್ಲದರ ಹಿನ್ನೆಲೆಯಲ್ಲಿ ನೋಡಿದರೆ, ಯುಪಿಎಸ್‌ಸಿ ಪ್ರಸ್ತಾವ ದೊಡ್ಡ ಸಮಸ್ಯೆಯೊಂದರ ಭಾಗವೆಂಬಂತೆ ಗೋಚರವಾಗುತ್ತದೆ.

ನಮ್ಮ ಭಾಷೆಗಳು ಇತ್ತೀಚಿನ ವರ್ಷಗಳಲ್ಲಿ ಇಂತಹ ಸಂಕಷ್ಟವನ್ನು ಎದುರಿಸಿರಲಿಲ್ಲ. ನೀತಿ ನಿರೂಪಿಸುವ ಗಣ್ಯರು, ಭಾಷೆ ಮತ್ತು ಶಿಕ್ಷಣ ಕುರಿತ ತಮ್ಮ ಮನೋಭಾವಗಳನ್ನು ತಾವಾಗಿಯೇ ಬದಲಿಸಿಕೊಳ್ಳುವ ಸಾಧ್ಯತೆ ಇಲ್ಲ. ಹೀಗಾಗಿ ನಾವು, ಭಾರತೀಯ ಭಾಷೆಗಳನ್ನು ಪೋಷಿಸುವ ಹಾಗೂ ನೀತಿ ನಿರೂಪಕರಾದವರು ನಮ್ಮನ್ನು ಆಲಿಸುವಂತೆ ಮಾಡುವ ಮಾರ್ಗೋಪಾಯಗಳನ್ನು ಹುಡುಕಬೇಕಾಗಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT