ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಕರಲ್ಲಿ ರಾಷ್ಟ್ರಪ್ರಜ್ಞೆ ಯ ಜಾಗೃತಿ ಅಗತ್ಯ

ಶರನ್ನವರಾತ್ರಿ ದಸರಾ ದರ್ಬಾರ್‌: ರಂಭಾಪುರಿ ಶ್ರೀ ಅಭಿಮತ
Last Updated 2 ಅಕ್ಟೋಬರ್ 2014, 6:07 IST
ಅಕ್ಷರ ಗಾತ್ರ

ಅರಸೀಕೆರೆ: ಬೆಳೆಯುತ್ತಿರುವ ಯುವ ಜನಾಂಗ ಈ ರಾಷ್ಟ್ರದ ನಿಜವಾದ ಅಮೂಲ್ಯ ಸಂಪತ್ತು. ಯುವ ಜನಾಂಗದಲ್ಲಿ ರಾಷ್ಟ್ರಪ್ರಜ್ಞೆ ಮತ್ತು ಕ್ರಿಯಾಶೀಲತೆ ಬೆಳೆಸುವ ಅಗತ್ಯವಿದೆ. ಅದ್ಭುತ ಶಕ್ತಿಯಿರುವ ಯುವ ಜನಾಂಗದಲ್ಲಿ ಸ್ವಾಭಿಮಾನ, ಸಾಮರಸ್ಯ ಬೆಳೆಸುವ ಜೊತೆಗೆ ರಾಷ್ಟ್ರಪ್ರಜ್ಞೆ ಜಾಗೃತಗೊಳಿಸುವ ಮಹತ್ಕಾರ್ಯ ನಡೆಯಬೇಕಿದೆ ಎಂದು ಬಾಳೆಹೊನ್ನೂರು ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಬುಧವಾರ ತಿಳಿಸಿದರು.

ಪಟ್ಟಣದ ಬಸವ ರಾಜೇಂದ್ರ ಪ್ರೌಢಶಾಲೆಯ ಆವರಣದಲ್ಲಿ ಶರನ್ನವರಾತ್ರಿ, ದಸರಾ ಮಹೋತ್ಸವ ಹಾಗೂ ಶಿವಾದ್ವೈತ ದಸರಾ ಸಮ್ಮೇಳನದ ಸಾನ್ನಿಧ್ಯ ವಹಿಸಿ ಅವರು ಬುಧವಾರ ಆಶೀರ್ವಚನ ನೀಡಿದರು.

ಮನುಷ್ಯ ಹೊರಗಿನ ಶ್ರೀಮಂತಿಕೆಗಿಂತ ಹೃದಯ ಶ್ರೀಮಂತಿಕೆಯನ್ನು ಹೆಚ್ಚಿಸಿಕೊಳ್ಳಬೇಕಿದೆ. ಮನುಷ್ಯ ಆಸೆ– ಆಮಿಷಗಳಿಗೆ ಬಲಿಯಾಗಿ ಪಶುವಿನಂತಾಗಿದ್ದಾನೆ. ದಾರಿ ತಪ್ಪಿದವರಿಗೆ ಅರಿವಿನ ಮಾರ್ಗ ತೋರಿ ಜಾಗೃತಗೊಳಿಸುವ ಶಕ್ತಿ ಗುರುವಿಗಿದೆ ಎಂದು ಅವರು ತಿಳಿಸಿದರು.
ಭಗವಂತನ ಸೃಷ್ಟಿಯಲ್ಲಿ ಮೂರು ಶಕ್ತಿಗಳಿವೆ. ಬ್ರಹ್ಮಶಕ್ತಿ, ವಿಷ್ಣುಶಕ್ತಿ ಮತ್ತು ಶಿವಶಕ್ತಿ. ಬ್ರಹ್ಮಶಕ್ತಿಯಿಂದ ಹೊಸತನವನ್ನು ಹುಟ್ಟು ಹಾಕಬಹುದು, ವಿಷ್ಣುಶಕ್ತಿಯಿಂದ ಹಳೆಯದನ್ನು ಉಳಿಸಿಕೊಂಡು ಬರಬಹುದು, ಶಿವಶಕ್ತಿಯಿಂದ ಬದಲಾವಣೆ ತರಬಹುದು. ಈ ಮೇಲಿನ ಮೂರು ಶಕ್ತಿಗಳು ಗುರುಶಕ್ತಿಯಲ್ಲಿ ಅಡಕವಾಗಿವೆ ಎಂದು ಅವರು ಹೇಳಿದರು.

ತನಗಾಗಿ ತಾನು ಬದುಕುವುದು ದೊಡ್ಡತನವಲ್ಲ. ಪರಹಿತಕ್ಕಾಗಿ ಶ್ರಮಿಸುವುದು ನಿಜವಾದ ಧರ್ಮ. ವೀರಶೈವ ಸಂಸ್ಕೃತಿಯಲ್ಲಿ ಪ್ರಾಚೀನ ಕಾಲದಿಂದ ಗುರು ಪರಂಪರೆ ಬೆಳೆದು ಬಂದಿದೆ.

ರೇಣುಕಾಚಾರ್ಯರ ಜೀವನ ವಿಕಾಸದ ಚಿಂತನೆಗಳು ಮತ್ತು ಅವರ ಆದರ್ಶಗಳು ಎಲ್ಲ ಕಾಲಕ್ಕೂ ಅನ್ವಯಿಸುತ್ತವೆ ಎಂದು ಅವರು ಹೇಳಿದರು.

ಹೊನ್ನಾಳಿ ಹಿರೆಕಲ್ಮಠದ ಒಡೆಯರ್‌ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರಿಗೆ ರಂಭಾಪುರಿ ಸ್ವಾಮೀಜಿ ‘ಶಿವಾಚಾರ್ಯ ರತ್ನ’ ಪ್ರಶಸ್ತಿ ನೀಡಿ ಗೌರವಿಸಿದರು.

ಹಾಸನದ ಕುಮಾರಿ ಗಾನವಿ ವೀರಭದ್ರಪ್ಪ ಭರತನಾಟ್ಯ ಪ್ರದರ್ಶನ ನೀಡಿದರು. ದೊಡ್ಡಗುಣಿ ಹಿರೇಮಠದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ಯಸಳೂರು ತೆಂಕಲಗೋಡು ಬೃಹನ್ಮಠದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ತಿಪಟೂರು ಷಡಕ್ಷರಿ ಮಠದ ರುದ್ರಮುನಿ ಸ್ವಾಮೀಜಿ, ಶಾಸಕ ಕೆ.ಎಂ. ಶಿವಲಿಂಗೇಗೌಡ, ಮಾಜಿ ಶಾಸಕರಾದ ಕೆ.ಪಿ. ಪ್ರಭುಕುಮಾರ್‌, ಜಿ.ಎಸ್‌. ಪರಮೇಶ್ವರಪ್ಪ, ಎ.ಎಸ್‌. ಬಸವರಾಜು, ಕೆ.ವಿ. ನಿರ್ವಾಣಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT