ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಜನರಿಂದ ಮಾತ್ರ ಬದಲಾವಣೆ ಸಾಧ್ಯ: ದೊರೆಸ್ವಾಮಿ

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಮಾರಂಭ
Last Updated 23 ಏಪ್ರಿಲ್ 2014, 10:15 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಅನ್ಯಾಯ, ಅಕ್ರಮ ಮತ್ತು ಭ್ರಷ್ಟಾಚಾರ ವ್ಯಾಪಿಸುತ್ತಿರುವ ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಯುವಜನರೇ ಆಶಾಕಿರಣವಾಗಿದ್ದು, ಎಲ್ಲವನ್ನೂ ಅವರು ದಿಟ್ಟವಾಗಿ ಎದುರಿಸಿ ಮೆಟ್ಟಿ ನಿಲ್ಲಬೇಕು ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆ­ಸ್ವಾಮಿ ತಿಳಿಸಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಮಂಗಳವಾರ ನಡೆದ ಸಾಂಸ್ಕೃತಿಕ ಚಟುವಟಿಕೆಗಳ ಸಮಾ­ರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಸುಭದ್ರ ಮತ್ತು ಸುಂದರ ದೇಶ ನಿರ್ಮಿಸಬೇಕಿದ್ದರೆ, ಭ್ರಷ್ಟಾ­ಚಾರವನ್ನು ಸಂಪೂರ್ಣವಾಗಿ ತೊಡೆದು ಹಾಕಬೇಕು ಎಂದರು.

ರಾಜಕಾರಣಿಗಳೇ ಜನರನ್ನು ಮತ್ತು ಇಡೀ ವ್ಯವಸ್ಥೆಯನ್ನು ಭ್ರಷ್ಟಗೊಳಿಸು­ತ್ತಿದ್ದು, ಅವರಿಗೆ ತಕ್ಕ ಪಾಠ ಕಲಿಸಬೇಕಿದೆ. ಜಾಗೃತ ಯುವಜನರು ಎಚ್ಚೆತ್ತುಕೊಂಡು ಸಾಮಾಜಿಕ ಅವ್ಯವಸ್ಥೆ ವಿರುದ್ಧ ಹೋರಾಟ ನಡೆಸಿದಲ್ಲಿ ಮಾತ್ರವೇ ಭ್ರಷ್ಟಾಚಾರರಹಿತ ಸಮಾಜ ನಿರ್ಮಿಸ­ಬಹುದು ಎಂದು ಅವರು ತಿಳಿಸಿದರು.

ವರ್ಷಗಳು ಕಳೆದಂತೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕ್ಷೀಣಗೊಳಿಸುವ ಪ್ರಯತ್ನ ವ್ಯವಸ್ಥಿತವಾಗಿ ನಡೆಯುತ್ತಿದ್ದು, ಇದಕ್ಕೆಲ್ಲ ಪೂರ್ಣಪ್ರಮಾಣದಲ್ಲಿ ಕಡಿವಾಣ ಹಾಕಬೇಕಿದೆ. ಏನೂ ಮಾಡಿದರೂ ನಡೆದುಬಿಡುತ್ತದೆ ಎಂಬ ಮನೋಭಾವ ರಾಜಕಾರಣಿಗಳಲ್ಲಿ ಬಲವಾಗಿ ಬೇರೂ­ರಿದೆ ಎಂದರು.

ದೇಶದ ಬಗ್ಗೆ ಅಭಿಮಾನ, ಕಾಳಜಿ ಮತ್ತು ಕಳಕಳಿ ಹೊಂದಿದವರಿಗೆ ಮಾತ್ರವೇ ಭದ್ರ ತಳಪಾಯದಡಿಯಲ್ಲಿ ಸುಭದ್ರ ದೇಶ ನಿರ್ಮಿಸಲು ಸಾಧ್ಯವಾಗುತ್ತದೆ. ಭವಿಷ್ಯದ ಭಾರತ ಹೇಗಿರಬೇಕು ಎಂಬ ಪರಿಕಲ್ಪನೆ ಇಂದಿನ ಯುವಜನರಲ್ಲಿ ಇರಬೇಕು ಮತ್ತು ಅವರೇ ದೇಶವನ್ನು ಸಮರ್ಥವಾಗಿ ಮುನ್ನಡೆ­ಸಬೇಕು ಎಂದು ಅವರು ತಿಳಿಸಿದರು.

ಖಾಸಗಿ ಶಿಕ್ಷಣ ಸಂಸ್ಥೆಗಳ ಅತಿಯಾದ ಹಾವಳಿಯಿಂದಾಗಿ ಕನ್ನಡ ಶಾಲೆಗಳು ಮುಚ್ಚುವಂತಹ ಪರಿಸ್ಥಿತಿ ಎದುರಾಗಿದೆ. ಅತ್ಯುತ್ತಮ ಶಿಕ್ಷಣ ಸರ್ಕಾರಿ ಕನ್ನಡ ಶಾಲೆಗಳಲ್ಲಿಯೇ ಸಿಗುತ್ತದೆ ಎಂಬುದನ್ನು ಪೋಷಕರು ಅರಿಯಬೇಕು. ನಾನು ಸೇರಿದಂತೆ ದೇಶದ ಬಹುತೇಕ ಖ್ಯಾತ­ನಾಮರು ಮತ್ತು ಮಹನೀಯರು ಸರ್ಕಾರಿ ಶಾಲೆಗಳಲ್ಲಿ ಕಲಿತುಕೊಂಡೇ ಜೀವನದಲ್ಲಿ ಯಶಸ್ಸು ಕಂಡಿದ್ದೇವೆ. ಸರ್ಕಾರಿ ಶಾಲೆಗಳು ತಮ್ಮದೇ ಆದ ಮಹತ್ವ ಕಾಯ್ದುಕೊಂಡಿವೆ ಎಂದು ಅವರು ತಿಳಿಸಿದರು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ­ವರಿಗೆ ಇದೇ ಸಂದರ್ಭದಲ್ಲಿ ಬಹುಮಾನ­ಗಳನ್ನು ವಿತರಿಸಲಾಯಿತು. ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ.ಜಿ.ಕೃಷ್ಣನ್‌ ಮಾತನಾಡಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ದಿವ್ಯಾ ವಿ.ಗೋಪಿನಾಥ್, ಸಾಹಿತಿ ಕೆ.ವೈ.­ನಾರಾಯಣಸ್ವಾಮಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಎಸ್‌.­ಕೃಷ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT