ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ಆಟಗಾರರಿಗೆ ಆಮ್ಲಾ ಬಳಗದ ಸವಾಲು

ಇಂದಿನಿಂದ ಅಧ್ಯಕ್ಷರ ಇಲೆವನ್– ದ. ಆಫ್ರಿಕಾ ನಡುವಣ ಅಭ್ಯಾಸ ಪಂದ್ಯ
Last Updated 29 ಅಕ್ಟೋಬರ್ 2015, 19:46 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಗೂ ಮುನ್ನ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡವು ಶುಕ್ರವಾರದಿಂದ ಆರಂಭವಾಗಲಿರುವ ಅಭ್ಯಾಸ ಪಂದ್ಯದಲ್ಲಿ  ಮಂಡಳಿ ಅಧ್ಯಕ್ಷರ  ಇಲೆವನ್ ತಂಡದ ಯುವ ಆಟಗಾರರನ್ನು ಎದುರಿಸಲಿದೆ.

ಚೇತೇಶ್ವರ್ ಪೂಜಾರ ನಾಯಕತ್ವದ ತಂಡದಲ್ಲಿ ರಾಷ್ಟ್ರೀಯ ತಂಡದ ಕದ ತಟ್ಟುತ್ತಿರುವ ಉದಯೋನ್ಮುಖ ಪ್ರತಿಭೆ ಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಪಂದ್ಯವು ಯುವ ಆಟಗಾರರ ಸಾಮರ್ಥ್ಯ ಪ್ರದರ್ಶನದ ವೇದಿಕೆಯಾಗಿದೆ. ಟ್ವೆಂಟಿ–20 ಮತ್ತು ಏಕದಿನ ಸರಣಿಗಳಲ್ಲಿ ಭರ್ಜರಿ ಜಯ ಸಾಧಿಸಿರುವ ದಕ್ಷಿಣ ಆಫ್ರಿಕಾ ಬಳಗವು ಅನುಭವಿ ಹಾಶೀಮ್ ಆಮ್ಲಾ ನಾಯಕತ್ವದಲ್ಲಿ ಕಣಕ್ಕಿಳಿಯಲಿದೆ.

ಪ್ರಸಕ್ತ ಪ್ರವಾಸದುದ್ದಕ್ಕೂ ತಮ್ಮ ಅಬ್ಬರದ ಬ್ಯಾಟಿಂಗ್ ಮೂಲಕ ಆತಿಥೇಯ ತಂಡದ ನಿದ್ದೆಗೆಡಿಸಿರುವ ಎ.ಬಿ. ಡಿವಿಲಿಯರ್ಸ್, ಫಾಫ್ ಡು ಪ್ಲೆಸಿಸ್ , ಜೆ.ಪಿ. ಡುಮಿನಿ ಅವರ ರನ್ ದಾಹಕ್ಕೆ ಕಡಿವಾಣ ಹಾಕುವ ಸವಾಲು ಪೂಜಾರ ಬಳಗದ ಮುಂದಿದೆ. 

ರಾಜಸ್ತಾನದ ಮಧ್ಯಮವೇಗಿ ನಾಥು ಸಿಂಗ್, ಮುಂಬೈನ ಶಾರ್ದೂಲ್ ಠಾಕೂರ್, ಸ್ಪಿನ್ನರ್‌ಗಳಾದ ಕರಣ್ ಶರ್ಮಾ, ಜಯಂತ್ ಯಾದವ್ ಮತ್ತು ಕುಲದೀಪ್ ಯಾದವ್ ಅವರಿಗೆ ಇದು ಅಗ್ನಿಪರೀಕ್ಷೆಯೂ ಹೌದು.  ಚೈನಾಮೆನ್ ಶೈಲಿಯ ಬೌಲಿಂಗ್ ಮಾಡುವ ಕುಲ ದೀಪ್  ಮತ್ತು ಆಫ್‌ಸ್ಪಿನ್ನರ್ ಜಯಂತ್ ಯಾದವ್ ಅವರಲ್ಲಿ ಯಾರಿಗೆ ಕಣಕ್ಕಿಳಿಯಲು ಅವಕಾಶ ಸಿಗಲಿದೆ ಎಂಬುದನ್ನು ಕಾದು ನೋಡಬೇಕು.

ಮಂಡಳಿಯ ಬ್ಯಾಟಿಂಗ್ ಸಾಲು ಆಶಾದಾಯಕವಾಗಿದೆ. ನಾಯಕ ಪೂಜಾರ, ಕರ್ನಾಟಕದ ಕೆ.ಎಲ್. ರಾಹುಲ್, ಕರುಣ್ ನಾಯರ್, ಶ್ರೇಯಸ್ ಅಯ್ಯರ್, ನಮನ್ ಓಜಾ, ಕೆಳ ಕ್ರಮಾಂಕದಲ್ಲಿ ಒಂದಿಷ್ಟು ರನ್ ಸೇರಿಸುವ ಸಾಮರ್ಥ್ಯ ಇರುವ ಜಯಂತ್ ಯಾದವ್     ತಂಡದ ಮೊತ್ತ ಹೆಚ್ಚಿಸಲು ಕಾಣಿಕೆ ನೀಡಬಲ್ಲರು.

ಆದರೆ, ಬಿರುಗಾಳಿ ವೇಗದ ಎಸೆತಗಳನ್ನು ಹಾಕುವ ಅನುಭವಿ ಡೇಲ್ ಸ್ಟೇಯ್ನ್, ಕಗಿಸೊ ರಬಾಡ, ಸ್ಪಿನ್ನರ್ ಇಮ್ರಾನ್ ತಾಹೀರ್ ಅವರ ಎದುರು ತಮ್ಮ ಬ್ಯಾಟಿಂಗ್ ಕಲೆಯನ್ನು ತೋರಿಸಬೇಕಿದೆ.

ಎರಡೂ ಸರಣಿ ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿರುವ ದಕ್ಷಿಣ ಆಫ್ರಿಕಾ ತಂಡದ ಬೌಲರ್ ಮಾರ್ನೆ ಮಾರ್ಕೆಲ್ ಮತ್ತು ಬ್ಯಾಟ್ಸ್‌ಮನ್ ಜೆ.ಪಿ. ಡುಮಿನಿಗೆ ಈ ಪಂದ್ಯವು ಫಿಟ್‌ನೆಸ್ ಟೆಸ್ಟ್ ಕೂಡ ಹೌದು. ಏಕದಿನ ಸರಣಿಯ ಸಂದರ್ಭದಲ್ಲಿ ಗಾಯಗೊಂಡಿದ್ದ ಅವರು  ಕೊನೆಯ ಎರಡು ಪಂದ್ಯಗಳಲ್ಲಿ ಆಡಿರಲಿಲ್ಲ. ಈ ಪಂದ್ಯದಲ್ಲಿ ಅವರು ಉತ್ತಮ ಸಾಮರ್ಥ್ಯ ಸಾಬೀತುಪಡಿಸಿದರೆ ಟೆಸ್ಟ್‌ನಲ್ಲಿ ಸ್ಥಾನ ಗಿಟ್ಟಿಸುವುದು ಖಚಿತ.

ಇಲ್ಲಿಯ ಸಿಸಿಐ ಕ್ರೀಡಾಂಗಣದಲ್ಲಿ  ಶುಕ್ರವಾರ ಮತ್ತು ಶನಿವಾರ ನಡೆಯುವ ಪಂದ್ಯದಲ್ಲಿ ಬಲಿಷ್ಠ ಪ್ರವಾಸಿ ತಂಡದ ಎದುರು ಭಾರತದ ಉದಯೋನ್ಮುಖ ಆಟಗಾರರ ಸಾಮರ್ಥ್ಯ ಹೊರಬೀಳಲಿದೆ.

ತಂಡಗಳು ಇಂತಿವೆ: ಮಂಡಳಿ ಅಧ್ಯಕ್ಷರ ಇಲೆವನ್ : ಚೇತೇಶ್ವರ್ ಪೂಜಾರ (ನಾಯಕ), ಕೆ.ಎಲ್. ರಾಹುಲ್, ಉನ್ಮುಕ್ತ್ ಚಾಂದ್, ಕರುಣ್ ನಾಯರ್, ಶ್ರೇಯಸ್ ಅಯ್ಯರ್, ನಮನ್ ಓಜಾ, ಹಾರ್ದಿಕ್ ಪಾಂಡ್ಯ, ಜಯಂತ್ ಯಾದವ್, ಕುಲದೀಪ್ ಯಾದವ್, ಶಾರ್ದೂಲ್ ಠಾಕೂರ್, ನಾಥುಸಿಂಗ್, ಕರಣ್ ಶರ್ಮಾ, ಶೇಲ್ಡನ್ ಜಾಕ್ಸನ್.

ದಕ್ಷಿಣ ಆಫ್ರಿಕಾ: ಹಾಶೀಮ್ ಆಮ್ಲಾ (ನಾಯಕ), ಎ.ಬಿ. ಡಿವಿಲಿಯರ್ಸ್ (ಉಪನಾಯಕ), ತೆಂಬಾ ಬಾವುಮಾ, ಜೆ.ಪಿ. ಡುಮಿನಿ, ಫಾಫ್ ಡು ಪ್ಲೆಸಿಸ್, ಡೀನ್ ಎಲ್ಗರ್, ಸಿಮೊನ್ ಹಾರ್ಮರ್, ಇಮ್ರಾನ್ ತಾಹೀರ್, ಮಾರ್ನೆ ಮಾರ್ಕೆಲ್ , ವರ್ನಾನ್ ಫಿಲ್ಯಾಂಡರ್, ಡೇನ್ ಪೀಡ್, ಕಗಿಸೊ ರಬಾಡ, ಡೇಲ್ ಸ್ಟೇಯ್ನ್, ಸ್ಟಿಯಾನ್ ವ್ಯಾನ್ ಜಿಲ್, ಡೇನ್ ವಿಲಾಸ್.

ತಂಡದಲ್ಲಿ ರಾಜ್ಯದ ಇಬ್ಬರು
ಕರ್ನಾಟಕದ ಕೆ.ಎಲ್. ರಾಹುಲ್ ಮತ್ತು ಕರುಣ್ ನಾಯರ್  ಅಭ್ಯಾಸ ಪಂದ್ಯದಲ್ಲಿ ಆಡುವ ಅವಕಾಶ ಪಡೆದಿದ್ದಾರೆ. ಟೆಸ್ಟ್‌ ತಂಡದಲ್ಲಿ ಸ್ಥಾನ ಗಳಿಸಿರುವ ಕೆ.ಎಲ್. ರಾಹುಲ್‌ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಆಡುವರು. ಆದರೆ, ಕರುಣ್ ನಾಯರ್ ಅಭ್ಯಾಸ ಪಂದ್ಯದಲ್ಲಿ ಮಾತ್ರ ಸ್ಥಾನ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT