ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಗೀಶ್ವರ್‌, ಬಬಿತಾಗೆ ಚಿನ್ನ

ಕುಸ್ತಿ: ಭಾರತದ ಸ್ಪರ್ಧಿಗಳ ಅಪೂರ್ವ ಪ್ರದರ್ಶನ
Last Updated 31 ಜುಲೈ 2014, 19:30 IST
ಅಕ್ಷರ ಗಾತ್ರ

ಗ್ಲಾಸ್ಗೊ (ಐಎಎನ್‌ಎಸ್‌): ಒಲಿಂಪಿಕ್ಸ್‌ನಲ್ಲಿ ಕಂಚು ಜಯಿಸಿದ್ದ ಯೋಗೀಶ್ವರ್‌ ದತ್‌ ಮತ್ತು ಬಬಿತಾ ಕುಮಾರಿ ಕಾಮನ್‌ವೆಲ್ತ್‌ ಕ್ರೀಡಾಕೂಟದ ಕುಸ್ತಿ ‘ಅಖಾಡ’ದಲ್ಲಿ ಭಾರತದ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತು ಮಾಡಿದರು.

2010ರ ಕಾಮನ್‌ವೆಲ್ತ್‌ ಕೂಟದಲ್ಲಿ ಚಿನ್ನ ಜಯಿಸಿದ್ದ ಯೋಗೀಶ್ವರ್‌ ಗುರುವಾರ ಇಲ್ಲಿ 65 ಕೆ.ಜಿ. ವಿಭಾಗದಲ್ಲಿ ಮತ್ತೊಂದು ಬಂಗಾರ ತಮ್ಮದಾಗಿಸಿಕೊಂಡರು. ಫೈನಲ್‌ ಪಂದ್ಯ ಶುರುವಾಗಿ ಒಂದು ನಿಮಿಷ 53 ಸೆಕೆಂಡ್‌ ಕಳೆಯುವಷ್ಟರಲ್ಲಿ ಅವರು 10–0ರಲ್ಲಿ ಕೆನಡಾದ ಜೆವೊನ್‌ ಬಲ್‌ಫೋರ್‌ ಎದುರು ಮುನ್ನಡೆ ಹೊಂದಿದ್ದರು. ಈ ವೇಳೆ ಭಾರತದ ಕುಸ್ತಿಪಟುವನ್ನು ವಿಜಯೀ ಎಂದು ಘೋಷಿಸಲಾಯಿತು.

2012ರಲ್ಲಿ ನಡೆದ ಏಷ್ಯನ್‌ ಕುಸ್ತಿ ಚಾಂಪಿಯನ್‌ಷಿಪ್‌ನ 60 ಕೆ.ಜಿ. ವಿಭಾಗದಲ್ಲೂ ಅವರು ಚಿನ್ನ ಜಯಿಸಿದ್ದರು. ಮಹತ್ವದ ವಿವಿಧ ಕ್ರೀಡಾಕೂಟಗಳಲ್ಲಿ ಯೋಗೀಶ್ವರ್‌ ಐದು ಬಂಗಾರದ ಪದಕಗಳನ್ನು ಭಾರತಕ್ಕೆ ತಂದುಕೊಟ್ಟಿದ್ದಾರೆ.

‘ಚಿನ್ನ’ದ ಬಬಿತಾ: ಮಹಿಳೆಯರ 55 ಕೆ.ಜಿ. ಫ್ರೀಸ್ಟೈಲ್‌ನಲ್ಲಿ ಬಬಿತಾ ಕುಮಾರಿ ಗುರುವಾರ ಎರಡನೇ ಚಿನ್ನ ತಂದುಕೊಟ್ಟರು.
ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ 24 ವರ್ಷದ ಬಬಿತಾ 9–2 ಪಾಯಿಂಟ್‌ಗಳಿಂದ ಕೆನಡಾದ ಬ್ರಿಟಾನಿ ಲವೆರ್‌ಡ್ಯೂರ್‌ ಎದುರು ಗೆಲುವಿನ ಸಂಭ್ರಮ ಆಚರಿಸಿಕೊಂಡರು.

ಹಿಂದಿನ ಕ್ರೀಡಾಕೂಟದಲ್ಲಿ ಬಬಿತಾ ಬೆಳ್ಳಿ ಗೆದ್ದಿದ್ದರು. ಕುಸ್ತಿಯಲ್ಲಿ ಒಟ್ಟಾರೆಯಾಗಿ ಗೆದ್ದ ನಾಲ್ಕನೇ ಚಿನ್ನದ ಪದಕವಿದು. ಹರಿಯಾಣದ ಈ ಕುಸ್ತಿಪಟು 2012ರಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲೂ ಕಂಚು ಜಯಿಸಿದ್ದರು.

ಒಟ್ಟು ಹನ್ನೊಂದು ಪದಕ: ಭಾರತ ಕುಸ್ತಿಯಲ್ಲಿ ಒಟ್ಟು 11 ಪದಕಗಳನ್ನು ಜಯಿಸಿದೆ. ಐದು ಚಿನ್ನ, ಐದು ಬೆಳ್ಳಿ ಮತ್ತು ಒಂದು ಕಂಚು ಗೆದ್ದುಕೊಂಡಿದೆ.

ಗೀತಿಕಾಗೆ ರಜಕ ಪದಕ:
ಮಹಿಳೆಯರ 63 ಕೆ.ಜಿ. ವಿಭಾಗದ ಫ್ರೀಸ್ಟೈಲ್‌ನ ಫೈನಲ್‌ನಲ್ಲಿ ಸೋಲು ಕಂಡ ಜೆ. ಗೀತಿಕಾ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟರು.
ಪ್ರಶಸ್ತಿ ಸುತ್ತಿನಲ್ಲಿ ಕೆನಡಾದ ಡೇನಿ ಯೆಲ್ಲೆ ಲಾಪೆಜ್‌ ಎದುರು ಭಾರತದ ಕುಸ್ತಿಪಟು ಪರಾಭವಗೊಂಡರು.

ಸೆಮಿಫೈನಲ್‌ಗೆ ಭಾರತ
ಗ್ಲಾಸ್ಗೊ (ಪಿಟಿಐ):
ಭಾರತ ಹಾಕಿ ತಂಡ ಕಾಮನ್‌ವೆಲ್ತ್‌ ಕ್ರೀಡಾ ಕೂಟದ ಸೆಮಿಫೈನಲ್‌ ತಲುಪಿದೆ.
ಗುರುವಾರ ನಡೆದ ಲೀಗ್‌ ಹಂತದ ತಮ್ಮ ಕೊನೆಯ ಪಂದ್ಯದಲ್ಲಿ ಭಾರತದ ಆಟಗಾರರು 5–2 ಗೋಲುಗಳಿಂದ ದಕ್ಷಿಣ ಆಫ್ರಿಕ ತಂಡವನ್ನು

ಸೋಲಿಸಿದರು.

ಮೊದಲಾರ್ಧದಲ್ಲಿ ಅತ್ಯುತ್ತಮ ಸಾಮರ್ಥ್ಯ ತೋರಿದ ಭಾರತದ ಆಟಗಾರರು 4–0 ಗೋಲಿನ ಮುನ್ನಡೆ ಸಾಧಿಸಿದ್ದೊಂದು ವಿಶೇಷ. ಆಟ ಶುರುವಾದೊಡನೆ ಸತತ ಆಕ್ರಮಣಕ್ಕಿಳಿದ ಭಾರತದ ಪರ 4ನೇ ನಿಮಿಷದಲ್ಲಿಯೇ ವಿ.ರಘುನಾಥ್‌ ಗೋಲಿನ ಖಾತೆ ತೆರೆದರು. ಇದಾಗಿ ನಾಲ್ಕು ನಿಮಿಷಗಳಲ್ಲಿ ರೂಪಿಂದರ್‌ ಪಾಲ್‌ ಸಿಂಗ್‌ ಎರಡನೇ ಗೋಲು ಗಳಿಸಿದರು. ನಂತರ ಮೇಲುಗೈ ಕಾದುಕೊಂಡಿದ್ದ ಭಾರತದ ಪರ 22ನೇ ನಿಮಿಷದಲ್ಲಿ ರಮಣದೀಪ್‌ ಸಿಂಗ್‌ ಮೂರನೇ ಗೋಲು ತಂದಿತ್ತರು. 26ನೇ ನಿಮಿಷದಲ್ಲಿ ಎಸ್‌.ವಿ.ಸುನಿಲ್‌ ಗೋಲುಗಳ ಅಂತರವನ್ನು 4–0 ಗೋಲುಗಳಿಗೆ ಏರಿಸಿದರು.

ಆಕಾಶ್‌ದೀಪ್‌ ಸಿಂಗ್‌ ಅವರು 58ನೇ ನಿಮಿಷದಲ್ಲಿ  ಎದುರಾಳಿ ಗೋಲು ಆವರಣದ ಬಲಅಂಚಿನಿಂದ ನೀಡಿದ ಚೆಂಡನ್ನು ಕರಾರುವಾಕ್ಕಾಗಿ ತಡೆದ ಮನ್‌ಪ್ರೀತ್‌ ಸಿಂಗ್‌ ಚೆಂಡನ್ನು ಗೋಲು ಪೆಟ್ಟಿಗೆಯೊಳಗೆ ಸೇರಿಸಿದರು.

ಮೊದಲಾರ್ಧದ ಗೋಲುಗಳ ಆತ್ಮವಿಶ್ವಾಸದಿಂದ ಭಾರತ ಉತ್ತರಾರ್ಧದಲ್ಲಿ ಒಂದಿನಿತು ಎಚ್ಚರ ತಪ್ಪಿದಂತೆ ಕಂಡು ಬಂದಿತು. ಇಂತಹ ಕ್ಷಣಗಳಲ್ಲಿ ಭಾರತದ ರಕ್ಷಣಾವ್ಯೂಹದಲ್ಲಿ ಕಂಡು ಬಂದ ದೌರ್ಬಲ್ಯದ ಸದುಪಯೋಗ ಪಡಿಸಿಕೊಂಡ ದಕ್ಷಿಣ ಆಫ್ರಿಕಾದ ಟೇನ್‌ ಪ್ಯಾಟನ್‌ ಮತ್ತು ಆಸ್ಟಿನ್‌ ಸ್ಮಿತ್‌ ಕ್ರಮವಾಗಿ 42ನೇ ಮತ್ತು 46ನೇ ನಿಮಿಷಗಳಲ್ಲಿ ತಲಾ ಒಂದು ಗೋಲು ಗಳಿಸಿದರು.

ಆ ನಂತರ ಭಾರತ ರಕ್ಷಣಾ ತಂತ್ರಕ್ಕೆ ಹೆಚ್ಚು ಒತ್ತು ನೀಡಿದ್ದರಿಂದ ದಕ್ಷಿಣ ಆಫ್ರಿಕಾದ ಆಟಗಾರರು ಯಶಸ್ಸು ಪಡೆಯಲು ಸಾಧ್ಯವಾಗಲೇ ಇಲ್ಲ.
ನಾಲ್ಕರ ಘಟ್ಟದಲ್ಲಿ ಭಾರತದ ಆಟಗಾರರು ನ್ಯೂಜಿಲೆಂಡ್‌ ತಂಡದ ವಿರುದ್ಧ ಆಡಲಿದ್ದಾರೆ.

ಜಾವೆಲಿನ್‌ ಎಸೆತ: ಅನು ರಾಣಿಗೆ ಎಂಟನೇ ಸ್ಥಾನ
ಗ್ಲಾಸ್ಗೊ (ಐಎಎನ್‌ಎಸ್‌): 
ಭಾರತದ ಅನು ರಾಣಿ ಮಹಿಳೆಯರ ಜಾವೆಲಿನ್‌ ಎಸೆತದ ಸ್ಪರ್ಧೆಯಲ್ಲಿ ನಿರಾಸೆ ಅನುಭವಿಸಿದರು.
ಮೊದಲ ಯತ್ನದಲ್ಲಿ 55.23ಮೀ. ದೂರ ಎಸೆದು ಮುಂದಿನ ಸುತ್ತುಗಳಲ್ಲಿ ಉತ್ತಮ ಪ್ರದರ್ಶನ ತೋರುವ ಭರವಸೆ ಮೂಡಿಸಿದ್ದರು.

ಆದರೆ, ಮೂರು, ನಾಲ್ಕು ಮತ್ತು ಆರನೇ ಸುತ್ತಿನಲ್ಲಿ  ಮೊದಲ ಸುತ್ತಿಗಿಂತಲೂ ಕಡಿಮೆ ಸಾಮರ್ಥ್ಯ ತೋರಿದರು. ಎರಡನೇ ಯತ್ನದಲ್ಲಿ 56.37ಮೀ. ದೂರ ಎಸೆದು ಎಂಟನೇ ಸ್ಥಾನ ಪಡೆದರು.

ಫಲಿತಾಂಶ: ಕಿಮ್ ಮಿಕ್ಲೆ (ಆಸ್ಟ್ರೇಲಿಯ) (ದೂರ: 65.96)–1,  ಸುನಿಟೆ ವಿಲ್‌ಜೋಯನ್‌ (ದೂರ: 63.19)–2,   ಲೀ ರಬೆರ್ಟ್ಸ್‌್ (ಆಸ್ಟ್ರೇಲಿಯ) (ದೂರ: 62.95)–3.

ಯೋಗೀಶ್ವರ್ ಪ್ರಮುಖ ಸಾಧನೆಗಳು

*2006ರ ದೋಹಾ ಏಷ್ಯನ್‌ ಕ್ರೀಡಾಕೂಟ: ಕಂಚು
*2012ರ ಲಂಡನ್ ಒಲಿಂಪಿಕ್ಸ್‌: ಕಂಚು
*2012ರ ಏಷ್ಯನ್‌ ಕುಸ್ತಿ ಚಾಂಪಿಯನ್‌ಷಿಪ್‌: ಚಿನ್ನ
*2010ರ ಕಾಮನ್‌ವೆಲ್ತ್‌ ಕೂಟ: ಚಿನ್ನ
*2014ರ ಕಾಮನ್‌ವೆಲ್ತ್ ಕೂಟ: ಚಿನ್ನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT