ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಶಾಲೆಯ ಪ್ರಖರ ಬೆಳಕು

ಅಂಕದ ಪರದೆ
Last Updated 30 ಡಿಸೆಂಬರ್ 2015, 19:30 IST
ಅಕ್ಷರ ಗಾತ್ರ

ನಗರದ ಮಲ್ಲೇಶ್ವರದಲ್ಲಿರುವ ‘ಎಂಇಎಸ್ ರಂಗ ಶಾಲೆ’ಯನ್ನು ತರಬೇತಿ ಶಾಲೆಯಾಗಿ ಮತ್ತು ಒಂದು ತಂಡದ ರೀತಿಯಲ್ಲೂ ನೋಡಬಹುದು. ತುಮಕೂರಿನಲ್ಲಿ ಸಂಘಟಿಸಿದ್ದ ಜಿಲ್ಲಾ ಮಟ್ಟದ ನಾಟಕೋತ್ಸವದಲ್ಲಿ ‘ಕಾಲಜ್ಞಾನಿ ಕನಕ’ ಪ್ರಯೋಗ ನೀಡಿದ್ದ ತಂಡವಿದು. ‘ನಾಟಕ ಮನೆ’ಯ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದಲ್ಲದೆ ಕರ್ನಾಟಕ ನಾಟಕ ಅಕಾಡೆಮಿಯ ನಾಟಕೋತ್ಸವಗಳಲ್ಲಿ ಪಾಲ್ಗೊಳ್ಳುವುದು  ‘ಎಂಇಎಸ್ ರಂಗ ಶಾಲೆ’ಗೆ ಸಂಪ್ರದಾಯವೇ ಆಗಿದೆ.

‘ಕಾಲಜ್ಞಾನಿ ಕನಕ’, ‘ಸಾಕ್ರೆಟಿಸ್’, ‘ಬೆಪ್ಪ ತಕಡಿ ಬೋಳೇಶಂಕರ’, ‘ಸದಾರಮೆ’, ‘ಕರ್ಣಭಾರ’, ‘ಮಡಿವಾಳ ಮಾಚಿದೇವ’, ‘ಎಲುವು ರಾಜನ ಮಡದಿ’, ‘ಊರು ಭಂಗ’ ಮತ್ತಿತರ ನಾಟಕಗಳು ರಂಗಶಾಲೆಯ ಅಂಗಳದಿಂದ ಕಾಣಿಸುತ್ತವೆ. ಇವು ವಿದ್ಯಾರ್ಥಿಗಳ ಕಲಿಕೆಯ ನಾಟಕಗಳಾಗುವ ಜತೆಗೆ ಹೊಸ ನಾಟಕಗಳನ್ನು ಕಟ್ಟುವ ತುಡಿತವಾಗಿಯೂ ಕಾಣುತ್ತವೆ. ಹಿರಿಯ ರಂಗಕರ್ಮಿಗಳಾದ ಗೋಪಾಲಕೃಷ್ಣ ನಾಯರಿ, ವಾಲ್ಟೇರ್ ಡಿಸೋಜ, ವಿ. ರಾಮಮೂರ್ತಿ, ಸುಬ್ರಹ್ಮಣ್ಯ ಅವರಂಥ ಅನುಭವಿಗಳು ಶಾಲೆಯ ರಂಗ ಚಟುವಟಿಕೆಗಳನ್ನು ಪ್ರೋತ್ಸಾಹಿಸಿದ್ದಾರೆ. ಈ ಕಾರಣದಿಂದಲೂ ಒಂದು ಶಾಲೆಯ ರೂಪವನ್ನು ಮೀರಿ ಇದನ್ನು ನೋಡಬಹುದು.

ಹಿರಿಯ ರಂಗಕರ್ಮಿಗಳ ಕನಸು: 2002ರಲ್ಲಿ ‘ಎಂಇಎಸ್ ರಂಗಶಾಲೆ’ ಆರಂಭವಾಯಿತು. ಶಾಲೆಯ ಆರಂಭಕ್ಕೆ ಮುಂಚೂಣಿಯಲ್ಲಿ ನಿಂತಿದ್ದು ಹಿರಿಯ ರಂಗಕರ್ಮಿ ವಿಮಲಾ ರಂಗಾಚಾರ್ ಮತ್ತು ಕಾಲೇಜಿನ ಇಂದಿನ ಉಪಾಧ್ಯಕ್ಷ ಶೇಷಾದ್ರಿ ಅಯ್ಯಂಗಾರ್. ಈಗಾಗಲೇ ಸುಮಾರು 250–300 ವಿದ್ಯಾರ್ಥಿಗಳು ಶಾಲೆಯಿಂದ ಹೊರಹೋಗಿದ್ದು, ಬಹುಪಾಲು ಜನರು ಸಾಂಸ್ಕೃತಿಕ ಲೋಕದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ವಿವಿಧ ಕಾಲೇಜುಗಳಲ್ಲಿ ರಂಗಭೂಮಿಯ ವಿಷಯವಾಗಿ ಪಾಠ ಮಾಡುತ್ತಿದ್ದಾರೆ. ನಂಜಪ್ಪ ದೊಡ್ಡಮಧುರೆ, ಅಪೇಕ್ಷಾ ಮತ್ತಿತರರು ಕಿರುತೆರೆಯಲ್ಲಿ ನಟಿಸುತ್ತಿದ್ದಾರೆ.

‘ರಂಗಭೂಮಿಯನ್ನು ಬೆಳೆಸಬೇಕು, ಯುವ ಸಮುದಾಯ ಅಪೇಕ್ಷಿಸುವ ರೀತಿಯಲ್ಲಿ ಸೌಲಭ್ಯಗಳನ್ನು ಕೊಡಬೇಕು ಮತ್ತು ಒಂದು ಶಿಕ್ಷಣವಾಗಿ ಪ್ರಮಾಣ ಪತ್ರ ಸಿಕ್ಕರೆ ರಂಗಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರಿಗೆ ಅನುಕೂಲವೂ ಆಗುತ್ತದೆ ಎನ್ನುವ ಕಾರಣಕ್ಕೆ ಶಾಲೆ ಆರಂಭಿಸಿದೆವು. ಶಾಲೆಯಲ್ಲಿ ರಂಗಚಟುವಟಿಕೆಗಳನ್ನು ನಡೆಸಲು ವೇದಿಕೆ ಇದ್ದ ಕಾರಣಕ್ಕೂ ನಾನು ಮತ್ತು ವಿಮಲಾ ರಂಗಾಚಾರ್ ಈ ಬಗ್ಗೆ ಆಲೋಚಿಸಿದೆವು. ನಂತರ ಗೋಪಾಲಕೃಷ್ಣ ನಾಯರಿ, ಶ್ರೀನಿವಾಸ ಮೂರ್ತಿ ರಂಗಶಾಲೆಯನ್ನು ಮುನ್ನಡೆಸಿದರು.

ಆರಂಭದಲ್ಲಿ ಎರಡು ವರುಷದ ಪದವಿ ಮಾಡಿದೆವು. ಕೆಲವು ತಾಂತ್ರಿಕ ಕಾರಣಗಳಿಂದ ತೊಂದರೆ ಆಯಿತು. 45 ವಿದ್ಯಾರ್ಥಿಗಳು ನನ್ನ ಮನೆಯ ಮುಂದೆ ಪ್ರತಿಭಟನೆ ನಡೆಸಿದರು. ಆಗ ಎಸ್ಸೆಸ್ಸೆಲ್ಸಿ ಬೋರ್ಡ್‌ ವ್ಯಾಪ್ತಿಯಲ್ಲಿತ್ತು. ಈಗ ಹಂಪಿ ದೂರಶಿಕ್ಷಣ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿದೆ. ಯಕ್ಷಗಾನ, ಜನಪದ ಕಲೆ ಹೀಗೆ ಬೇರೆ ಬೇರೆ ಕಲಾಪ್ರಕಾರಗಳನ್ನು ಹೇಳಿಕೊಡಲಾಗುತ್ತದೆ’ ಎಂದು ಶಾಲೆಯ ಬಗ್ಗೆ ವಿವರ ನೀಡುವರು ಶೇಷಾದ್ರಿ ಅಯ್ಯಂಗಾರ್.

ಏಳು ವರುಷಗಳಿಂದ ಅಶ್ವತ್ಥ್ ನಾರಾಯಣ್ ರಂಗಶಾಲೆಯ ಸಂಯೋಜಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇದು ಸಂಜೆಯ ಕಾಲೇಜು. ಸಂಜೆ 5 ಗಂಟೆಯಿಂದ ರಾತ್ರಿ 8.30ರ ವರೆಗೆ ಕಲಿಕೆ. ಮಂಜುನಾಥ್ ಭಟ್, ಲವಕುಮಾರ್, ಪವಿತ್ರಾ, ಡಾ. ಮಲ್ಲೇಶ್, ಗೋವಿಂದರಾಜು ನಾಟಕ ಶಾಲೆಯ ಶಿಕ್ಷಕರು. ಸದ್ಯ 25 ಮಂದಿ ವಿದ್ಯಾರ್ಥಿಗಳಿದ್ದಾರೆ. ಬೇರೆ ವೃತ್ತಿಗಳಲ್ಲಿ ತೊಡಗಿದ್ದು ರಂಗಭೂಮಿ ಬಗ್ಗೆ ಆಸಕ್ತರಾಗಿದ್ದವರು, ತೆರೆಯಲ್ಲಿ ಕಾಣಿಸಿಕೊಳ್ಳಲು ಕೊಂಚ ಅನುಭವ ಬೇಕು ಎನ್ನುವವರು, ಕಿರುತೆರೆಯಲ್ಲಿ ನಟಿಸುತ್ತಿರುವವರು, ಹವ್ಯಾಸಿಗಳು ಇಲ್ಲಿನ ವಿದ್ಯಾರ್ಥಿಗಳು.

ತಾಂತ್ರಿಕ ಕಲಿಕೆ
ಇಲ್ಲಿ ಬೆಳಕು, ಪ್ರಸಾಧನ, ವೇದಿಕೆ ವಿನ್ಯಾಸದ ಬಗ್ಗೆಯೂ ಕಲಿಸಿಕೊಡಲಾಗುತ್ತದೆ. ಒಂದು ವರುಷದ ಕೋರ್ಸ್. ಕಲಿಕೆಗಾಗಿ ಪ್ರತಿ ವರುಷ ಎರಡು ನಾಟಕಗಳು ಇರುತ್ತವೆ.  ಹಿರಿಯ ರಂಗಕರ್ಮಿಗಳು ಶಾಲೆಯ ಶಿಬಿರಗಳಲ್ಲಿ ಮತ್ತು ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾಹಿತಿ ನೀಡುತ್ತಾರೆ. ಕನ್ನಡ ನಾಟಕ ನಡೆದು ಬಂದ ದಾರಿ, ಭಾರತೀಯ, ಪಾಶ್ಚಿಮಾತ್ಯ ನಾಟಕ ಪ್ರಕಾರ ಮತ್ತಿತರ ಪಠ್ಯಗಳು ಕಲಿಕೆಗಿ ಇವೆ. ಈ ವರುಷ ರಾಜಪ್ಪ ದಳವಾಯಿ ಅವರ ‘ಎಲುವು ರಾಜನ ಮಡದಿ’ ನಾಟಕವನ್ನು ಕೈಗೆತ್ತಿಕೊಳ್ಳಲಾಗಿದೆ. ಕೆಲವು ಸಂದರ್ಭದಲ್ಲಿ ಈ ಹಿಂದಿನ ನಾಟಕಗಳನ್ನು ರಂಗಶಾಲೆ ವಿದ್ಯಾರ್ಥಿಗಳು ಮರು ನಿರೂಪಿಸುತ್ತಾರೆ.

‘ಈ ಹಿಂದೆ ಎರಡು ವರುಷದ ಅವಧಿಯ ಕೋರ್ಸ್ ಇತ್ತು. ಆಗ ಒಂದು ವರುಷ ಪೂರ್ಣವಾಗಿ ವಿದ್ಯಾರ್ಥಿಗಳೇ ನಾಟಕಗಳನ್ನು ಮಾಡಬೇಕಿತ್ತು. ಇಲ್ಲಿಯವರೆಗೂ 250ಕ್ಕೂ ಹೆಚ್ಚು ಪ್ರದರ್ಶನಗಳನ್ನು ರಂಗಶಾಲೆಯಿಂದ ನೀಡಿದ್ದೇವೆ. ಮೇಕಪ್, ಹಿನ್ನೆಲೆಯಲ್ಲಿ ಕೆಲಸ ಮಾಡುವವರು, ಈಗಾಗಲೇ ರಂಗಭೂಮಿಯಲ್ಲಿ ತೊಡಗಿಸಿಕೊಂಡಿರುವವರು ನಮ್ಮ ವಿದ್ಯಾರ್ಥಿಗಳಲ್ಲಿ ಅರ್ಥ ಭಾಗ ಇರುತ್ತಾರೆ. ಮೇಕಪ್ ಸೇರಿದಂತೆ ಹಿನ್ನೆಲೆಯ ಕೆಲಸಗಳು ಪ್ರಮುಖವಾಗುತ್ತವೆ.

ಉದಾಹರಣೆಗೆ ಪಾತ್ರಧಾರಿ ಗಡ್ಡ ಅಂಟಿಸಿಕೊಂಡಿದ್ದಾನೆ. ಆಗ ಅವನಿಗೆ ಕೆಲವು ಮಾಹಿತಿಗಳು ಇರಬೇಕು. ಹೀಗೆ ಸಣ್ಣ ಪುಟ್ಟ ಅಂಶಗಳನ್ನು ಮನದಟ್ಟು ಮಾಡಿಕೊಡಲು ಹಿನ್ನೆಲೆಯ ಬಗ್ಗೆ ತರಬೇತಿ ನೀಡುತ್ತೇವೆ. ಕೆಲವರು ರಂಗಕಲಿಕೆಗಾಗಿ ಶಾಲೆಗೆ ಸೇರಿಕೊಂಡರೆ, ಮತ್ತೆ ಕೆಲವರು ಪ್ರಮಾಣ ಪತ್ರಕ್ಕಾಗಿ ಸೇರಿಕೊಳ್ಳುವರು’ ಎನ್ನುತ್ತಾರೆ ರಂಗಶಾಲೆಯ ಸಂಯೋಜಕ ಅಶ್ವತ್ಥ್ ನಾರಾಯಣ್.
*
ನನ್ನ ಲ್ಯಾಬ್‌
ಎಂ.ಪಿ.ಎಲ್. ಶಾಸ್ತ್ರಿ, ಶೇಷಾದ್ರಿ ಅಯ್ಯಂಗಾರ್ ಮತ್ತು ವಿಮಲಾ ರಂಗಾಚಾರ್ ಅವರು ಸಂಸ್ಥೆಯ ಆಡಳಿತ ಮಂಡಳಿಯವರು. ಇವರು ರಂಗಭೂಮಿ ಅಷ್ಟೇ ಅಲ್ಲದೆ ಸಾಂಸ್ಕೃತಿಕವಾಗಿಯೂ ಪ್ರಮುಖರು. ರಂಗಶಾಲೆ ಮಾಡಬೇಕು ಎನ್ನುವುದು ಅವರ ಅಂತರ್ಗತದಲ್ಲಿತ್ತು. ಉಪನ್ಯಾಸಕರಾಗಿದ್ದ ಜೆ. ಶ್ರೀನಿವಾಸಮೂರ್ತಿ ಕೂಡ ಆಸಕ್ತಿ ತೋರಿಸಿದ್ದರು.

ಶಾಲೆ ರೂಪುಗೊಂಡು ಕೆಲವು ವರುಷಗಳಾಗಿದ್ದರೂ ಅದಕ್ಕೂ ಪೂರ್ವದಲ್ಲಿಯೇ ಇಲ್ಲಿ ರಂಗಚಟುವಟಿಕೆಗಳು ಜರುಗುತ್ತಿದ್ದವು. ಕಾ.ವೆಂ. ರಾಜಗೋಪಾಲ್ ಅವರು ರಂಗಭೂಮಿ ಮತ್ತು ಸಾಂಸ್ಕೃತಿಕ ಲೋಕದಲ್ಲಿ ದೊಡ್ಡ ಹೆಸರು. ಶಾಲೆಯ ಪ್ರಾಚಾರ್ಯರಾಗಿದ್ದವರು. ಅವರು ವಿದ್ಯಾರ್ಥಿಗಳನ್ನು ಶಿಕ್ಷಕರನ್ನು ಕೂಡಿಸಿಕೊಂಡು ನಾಟಕಗಳನ್ನು ಮಾಡುತ್ತಿದ್ದರು. ಆರಂಭದಲ್ಲಿ ನಮ್ಮ ಗರಡಿಯ ಮುಖ್ಯಸ್ಥರು ಅವರು. ಎಂಇಎಸ್ ಆಡಳಿತ ಸಂಸ್ಥೆಗೆ ಸ್ವತಃ ರಂಗಚಟುವಟಿಕೆಗಳನ್ನು ಗ್ರಹಿಸುವ ಸಾಂಸ್ಕೃತಿಕ ಆತ್ಮ ಇದೆ.

ನಾನು ಶಾಲೆಯ ಹಳೆಯ ವಿದ್ಯಾರ್ಥಿ. ಡಿಗ್ರಿ ಕಲಿತಿದ್ದು ಇಲ್ಲಿಯೇ. ಎನ್‌ಎಸ್‌ಡಿ ಮುಗಿಸಿ ಬಂದ ನಂತರ ನನ್ನ ಹುಡುಕಾಟದ ಸ್ಥಳವಾಗಿ ಶಾಲೆ ಸಿಕ್ಕಿತು. ನನಗೆ ದಟ್ಟ ತಿರುವು ಕೊಟ್ಟ ಸಂಸ್ಥೆ. ಒಂದು ರೀತಿಯ ಲ್ಯಾಬ್‌ನಂತೆ. ಒಂದಿಷ್ಟು ದಶಕ ಅವ್ಯಾಹತವಾಗಿ ಕೆಲಸ ಮಾಡಿದೆ. ನಾನು ಕಾಯಂ ಹುದ್ದೆಯಲ್ಲಿ ಇರಲು ಇಷ್ಟಪಡುವುದಿಲ್ಲ. ಇತ್ತೀಚಿನ ವರುಷಗಳವರೆಗೂ ಗೌರವ ನಿರ್ದೇಶಕನಾಗಿ ಕೆಲಸ ಮಾಡಿದೆ. ಎನ್‌ಎಸ್‌ಡಿಯಲ್ಲಿ ಪ್ರಮುಖ ನಟಿಯಾಗಿ ಗುರ್ತಿಸುವ ಸವಿತಾ ಬಿ. ಎಂಇಎಸ್‌ನ ವಿದ್ಯಾರ್ಥಿ. ರಂಗಶಾಲೆ ನಷ್ಟದಲ್ಲಿ ನಡೆಯುತ್ತಿದ್ದರೂ ಶೇಷಾದ್ರಿ ಅಯ್ಯಂಗಾರ್ ಮತ್ತು ವಿಮಲಾ ರಂಗಾಚಾರ್ ಉಳಿಸಿಕೊಂಡಿದ್ದಾರೆ. ನನಗೆ ಈ ಶಾಲೆಯಲ್ಲಿ ಕೆಲಸ ಮಾಡಿದ ಹೆಮ್ಮೆ ಇದೆ. ಈಗಲೂ ನಾನು ರಂಗಶಾಲೆಯ ಕೆಲಸಗಳಿಗೆ ಹೊರಗಿನಿಂದ ಸ್ಪಂದಿಸುತ್ತೇನೆ.
–ಗೋಪಾಲಕೃಷ್ಣ ನಾಯರಿ,
ಹಿರಿಯ ರಂಗಕರ್ಮಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT