ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಶ್ರಾವಣ ರಂಗೋತ್ಸವ

Last Updated 31 ಜುಲೈ 2016, 19:30 IST
ಅಕ್ಷರ ಗಾತ್ರ

ಶ್ರಾವಣ ಮಾಸ ಎಂದಾಕ್ಷಣ ನಿಮ್ಮ ಮನಸ್ಸಿನಲ್ಲಿ ಮೂಡುವ ಭಾವಗಳಾವುವು? ಹಸಿರು, ಸಮೃದ್ಧಿ, ಸಂತಸ, ಹಬ್ಬ... ಶ್ರಾವಣ ಮಾಸವನ್ನು ಮತ್ತಷ್ಟು ರಂಗಾಗಿಸಲು ರಂಗ ಶ್ರಾವಣ ರಂಗೋತ್ಸವ ಸಜ್ಜಾಗಿದೆ.

‘ಪದ’ ರಂಗ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ರಂಗ ಶ್ರಾವಣ ರಂಗೋತ್ಸವ ಆಯೋಜಿಸಿದೆ. ಶ್ರಾವಣ ಮಾಸದಲ್ಲಿ ನಾಟಕ ಪ್ರಿಯರಿಗಾಗಿ ರಂಗೋತ್ಸವ ನಡೆಸಲಾಗುತ್ತಿದೆ. ಈ ಬಾರಿಯ ರಂಗೋತ್ಸವದಲ್ಲಿ ಹಲವು ವೈಶಿಷ್ಟ್ಯಗಳಿವೆ.

ಏಕವ್ಯಕ್ತಿ ರಂಗ ಪ್ರಯೋಗದ ನಾಟಕಗಳು, ಗಾಯನೋತ್ಸವ, ನೃತ್ಯ, ಭರತನಾಟ್ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಹಿರಿಯ ರಂಗ ಕಲಾವಿದರಾದ ಶ್ರೀನಿವಾಸ ಪ್ರಭು, ಕೃಷ್ಣಮೂರ್ತಿ ಕವತ್ತಾರ್, ರಂಗಾಯಣ ಮಂಗಳ, ಕಗ್ಗೆರೆ ಮಂಜುನಾಥ್‌ ಏಕವ್ಯಕ್ತಿ ರಂಗ ಪ್ರದರ್ಶನ ನೀಡಲಿದ್ದಾರೆ. ‘ಸಾಮಿಯ ಸ್ವಗತ’, ‘ಸಾಯುವವನೇ ಚಿರಂಜೀವಿ’, ‘ಕೊನೆ ಅಂಕ’ ಏಕವ್ಯಕ್ತಿ ನಾಟಕಗಳು ಪ್ರದರ್ಶನಗೊಳ್ಳಲಿವೆ.

ಏಕವ್ಯಕ್ತಿ ರಂಗ ಪ್ರಯೋಗದಲ್ಲಿ ಒಬ್ಬನೇ ಕಲಾವಿದ ಒಂದೂವರೆ ಗಂಟೆಗಳ ಕಾಲ ವಿವಿಧ ಪಾತ್ರಗಳನ್ನು ನಿರ್ವಹಿಸುತ್ತಾನೆ. ಏಕವ್ಯಕ್ತಿ– ಏಕಾಂಕ ಪ್ರದರ್ಶದಲ್ಲಿ ಆರಂಭದಿಂದ ಅಂತ್ಯದವರೆಗೆ ಎಲ್ಲಿಯೂ ಬಿಡುವಿಲ್ಲ, ಪರದೆ ಎಳೆಯುವುದಿಲ್ಲ. ನಾಟಕ ನಿರಂತರವಾಗಿ ನಡೆಯುತ್ತದೆ. ರಂಗಶ್ರಾವಣ ಕಳೆದ ಮೂರು ವರ್ಷಗಳಿಂದ ಜರುಗುತ್ತಿದೆ. ಈ ಬಾರಿ  ಚಿತ್ರಕಲಾ ಶಿಬಿರವನ್ನೂ  ಏರ್ಪಡಿಸಲಾಗಿದೆ.

ಶಿಬಿರದಲ್ಲಿ ಲಕ್ಷ್ಮಿನಾರಾಯಣ್, ಸತೀಶ್, ಪ್ರಿಯಾ, ಓ.ವೆಂಕಟೇಶ್, ಸಿದ್ದರಾಮ, ಕೊಪ್ಪರ್, ರವಿನಾಯಕ್, ಮೌನೇಶ್, ಕುಮಾರ್, ಬದರಿನಾರಾಯಣ್ ಪುರೋಹಿತ, ಭೀಮೇಶಪ್ಪ ಕಬ್ಬೇರ್, ರಾಮಪ್ಪ, ವಿ ಮಲ್ಲಿಕಾರ್ಜುನ ಅಪ್ಪಗುಂಡಿ, ಫಕ್ರುದ್ದೀನ್, ರಾಮಚಂದ್ರ ಹೆಗಡೆ ಚಿತ್ರ ಬಿಡಿಸಲಿದ್ದಾರೆ.

ಚಿತ್ರಕಲಾ ಶಿಬಿರದಲ್ಲಿ ಬಹುತೇಕ ಉತ್ತರ ಕರ್ನಾಟಕದ ಕಲಾವಿದರು ಭಾಗವಹಿಸಲಿದ್ದಾರೆ.  ಕರ್ನಾಟಕ ಲಲಿತಕಲಾ ಅಕಾಡೆಮಿಯ ಅಧ್ಯಕ್ಷರಾದ ಎಂ.ಎಸ್.ಮೂರ್ತಿ ಚಿತ್ರಕಲಾ ಶಿಬಿರ ಉದ್ಘಾಟಿಸಲಿದ್ದಾರೆ.

ಮಲ್ಲಿಕಾರ್ಜುನ ಕೆಂಕೆರೆ, ಶಂಕರ್ ಭಾರತೀಪುರ, ಲಕ್ಷ್ಮೀನಾರಾಯಣ್ ಜನಪದ, ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಆಗಸ್ಟ್ 1ರಂದು ಸಂಜೆ 6ಕ್ಕೆ ಸಚಿವ ಟಿ.ಬಿ.ಜಯಚಂದ್ರ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ನಿರ್ದೇಶಕ ಟಿ.ಎಸ್.ನಾಗಾಭರಣ ಅಧ್ಯಕ್ಷತೆ ವಹಿಸಲಿದ್ದಾರೆ.

ರಂಗ-ನಾಟಕ ಎಂದರೆ ಅಲ್ಲಿ ನಟರು – ಗಾಯಕರು ಇರಬೇಕು. ಈ ಬಾರಿಯ ರಂಗ ಶ್ರಾವಣದಲ್ಲಿ ಗಾಯನ, ಚಿತ್ರಕಲಾ ಶಿಬಿರಕ್ಕೆ ಪ್ರಾಶಸ್ತ್ಯ ಕೊಡಲಾಗಿದೆ ಎಂಬುದು ಆಯೋಜಕರ ಮಾತು.

ಆಗಸ್ಟ್ 1ರಿಂದ 4ರವರೆಗೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರತಿದಿನ ಸಂಜೆ 6ಕ್ಕೆ ವಿವಿಧ ನಾಟಕಗಳು ಪ್ರದರ್ಶನಗೊಳ್ಳಲಿವೆ.

‘ಪದ’ ಹುಟ್ಟಿದ ಪರಿ
ಪದ ಎಂದರೆ ಮಾತು, ಪದ ಎಂದರೆ ಹಾಡು. ನಾಟಕವೆಂದರೆ ಮಾತು, ಹಾಡು, ಕಲೆ ಎಲ್ಲದ ಸಮ್ಮಿಳನ. ಹಾಗಾಗಿ ರಂಗಸಂಸ್ಥೆಗೆ ಪದ ಎಂಬ ಹೆಸರಿಟ್ಟೆ. ಎನ್ನುತ್ತಾರೆ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಡಿ.ದೇವರಾಜ್.

ಡಿ.ದೇವರಾಜು ರಂಗಭೂಮಿಯಲ್ಲಿ 25 ವರ್ಷಗಳ ಅನುಭವ ಹೊಂದಿದ್ದಾರೆ. ಕಥಾ ಕೀರ್ತನ, ಗಾಯನ, ನಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಿರುತೆರೆ ನಿರ್ದೇಶನದ ಅನುಭವವೂ ಇವರಿಗಿದೆ.

‘ಪದ’ ರಂಗತಂಡದಲ್ಲಿ ಹೊಸ ಕಲಾವಿದರಿಗೆ, ಎಲೆಮರೆಯ ಕಾಯಿಯಂತಿರುವ ಕಲಾವಿದರಿಗೆ ಹೆಚ್ಚು ಅವಕಾಶ ಕೊಡಲಾಗುತ್ತಿದೆ. ನನ್ನ ಹೊಸ ಆಲೋಚನೆಗಳಿಗೆ ರೂಪ ಕೊಡಲು ನನ್ನದೇ ಕಲಾತಂಡ ಬೇಕು ಎನಿಸಿತು. ಕಿರುತೆರೆಯಿಂದ ಮತ್ತೆ ರಂಗಭೂಮಿ ಕಡೆ ಹೊರಳಿದೆ ಎನ್ನುತ್ತಾರೆ ದೇವರಾಜ್.

‘ಪದ’ ರಂಗತಂಡ ಹುಟ್ಟಿ ಐದು ವರ್ಷವಾಯಿತು. ಈ ತಂಡವು ರಂಗಮುಂಗಾರು, ದೇಸಿ ರಂಗೋತ್ಸವ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸಿದೆ. ಹೊರ ರಾಜ್ಯ, ಗಡಿನಾಡಿನಲ್ಲಿಯ ತನ್ನ ಛಾಪು ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT