ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಜನೆಯ ಜತೆ ಸಂದೇಶವ ಬೆರೆಸಿ...

Last Updated 25 ಜುಲೈ 2016, 19:30 IST
ಅಕ್ಷರ ಗಾತ್ರ

ಮಗಳು ಮದುವೆಯಾಗಿ ದೂರದ ಅಮೆರಿಕಕ್ಕೆ ಹೊರಟಿದ್ದಾಳೆ. ತನ್ನವನನ್ನು ಸೇರುವ ತವಕದ ಸಂಭ್ರಮ ಆಕೆಯದು. ಇತ್ತ ಮಗಳ ಬದುಕಿಗೆ ಒಂದು ಒಳ್ಳೆಯ ನೆಲೆ ಸಿಗುತ್ತದೆ ಎಂಬ ನೆಮ್ಮದಿಯಿದ್ದರೂ ಆಕೆಯನ್ನು ಬಿಟ್ಟಿರಬೇಕಲ್ಲ ಎಂಬ ನೋವು ಅಪ್ಪನನ್ನು ತೀವ್ರವಾಗಿ ಕಾಡುತ್ತಿದೆ. ಅದನ್ನು ಆಕೆಯೆದುರು ವ್ಯಕ್ತಪಡಿಸಲಾಗದ ಅಸಹಾಯಕ ಸ್ಥಿತಿ ಆತನದು. ಆತನ ತೊಳಲಾಟ ಅದೆಷ್ಟೋ ಅಪ್ಪಂದಿರ ವಾಸ್ತವದ ನೋವೂ ಹೌದು.
***
ಗಂಡನನ್ನು ಕಳೆದುಕೊಂಡ ಆಕೆ ಕೂಲಿ ಮಾಡಿ ಮಗನನ್ನು ಪ್ರತಿಷ್ಠಿತ ಶಾಲೆಗೆ ಕಳುಹಿಸುತ್ತಿದ್ದಾಳೆ. ತನ್ನ ಸಹಪಾಠಿಗಳ ಅಮ್ಮಂದಿರಂತೆ ತನ್ನಮ್ಮನಲ್ಲ. ಆಕೆಗೆ ಇಂಗ್ಲಿಷ್‌ ಬಾರದು ಎಂಬ ಚಿಕ್ಕದೊಂದು ತಿರಸ್ಕಾರ ಮಗನಲ್ಲಿ ಮೂಡಿದೆ. ಮಗನಿಗಾಗಿ ಅಮ್ಮ ಎಷ್ಟೋ ಸಂಕಟಗಳನ್ನು ಸಹಿಸಿಕೊಂಡವಳು. ತನ್ನ ಬದುಕಿನ ಅನುಭವಗಳನ್ನು ಆಕೆ ಹಂಚಿಕೊಂಡಾಗ ಮಗನಲ್ಲಿ ಆಕೆ ಬೇರೆಯವರಿಗಿಂತ ಶ್ರೇಷ್ಠಳು ಎಂಬ ಸತ್ಯ ಅರಿವಾಗುತ್ತದೆ.
***
ಕಳ್ಳನೊಬ್ಬ ಪೊಲೀಸರಿಂದ ತಪ್ಪಿಸಿಕೊಂಡು ಓಡುತ್ತಿದ್ದಾನೆ. ಆತ ಬಚ್ಚಿಟ್ಟುಕೊಳ್ಳುವುದು ಕಣ್ಣು ಕಾಣದ ಹೂವಾಡಗಿತ್ತಿಯೊಬ್ಬಳ ಅಂಗಡಿಯಲ್ಲಿ. ಆತನದು ಕದ್ದು ತಿನ್ನುವುದೇ ಉದ್ಯೋಗ. ಆಕೆ ಕಣ್ಣು ಕಾಣದಿದ್ದರೂ, ಹೂ ಮಾರಿ ಜೀವನ ಸಾಗಿಸುವವಳು. ಪ್ರಪಂಚ ಸುಂದರವಾಗಿದೆ. ಅದನ್ನು ತನ್ನ ಕಣ್ಣುಗಳಿಂದ ನೋಡುವಂತಾಗಬೇಕು ಎನ್ನುವುದು ಆಕೆಯ ದೊಡ್ಡ ಆಸೆ. ಅದಕ್ಕಾಗಿ ದುಡಿದ ಹಣವನ್ನೆಲ್ಲಾ ಕೂಡಿಡುತ್ತಿದ್ದಾಳೆ. ಅದನ್ನು ನೋಡುವ ಕಳ್ಳ ಅದನ್ನು ಲಪಟಾಯಿಸುವ ಹೊಂಚು ಹಾಕಿದ್ದಾನೆ. ಆದರೆ ಕಣ್ಣು ಕಾಣದ ಆಕೆ ತನ್ನ ಒಳನೋಟದಿಂದ ಆತನ ಕಣ್ಣು ತೆರೆಸುತ್ತಾಳೆ.
***
‘ಝೀ ಕನ್ನಡ’ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಡ್ರಾಮಾ ಜ್ಯೂನಿಯರ್ಸ್‌’ ಕಾರ್ಯಕ್ರಮದಲ್ಲಿ ವೀಕ್ಷಕರನ್ನು ಭಾವುಕರನ್ನಾಗಿಸಿದ ಕೆಲ ತುಣುಕುಗಳಿವು. ಪುಟ್ಟ ಮಕ್ಕಳ ಮುಗ್ಧ ಮಾತುಗಳು ರಂಜಿಸುವಂತೆ, ಅವರ ‘ಡ್ರಾಮಾ’ಗಳ ವಸ್ತುಗಳ ವೈವಿಧ್ಯವೂ ಗಮನ ಸೆಳೆಯುತ್ತವೆ. ಇಲ್ಲಿ ಮನರಂಜನೆಯೇ ಮುಖ್ಯವಾದರೂ ನಗಿಸುವ ಜತೆ ಚಿಂತನೆಗೆ ಹಚ್ಚುವ ಸಂಗತಿಗಳೂ ಕಾಣಿಸುತ್ತವೆ.

ತಂಡದ ಕೆಲಸ
‘ಡ್ರಾಮಾ ಜೂನಿಯರ್ಸ್‌’ನಲ್ಲಿ ಒಂದು ವಸ್ತುವನ್ನಿಟ್ಟುಕೊಂಡು ಸನ್ನಿವೇಶ ಮತ್ತು ಸಂಭಾಷಣೆ ಹೊಸೆಯಲು, ಅದನ್ನು ಮಕ್ಕಳಿಗೆ ಅರ್ಥವಾಗುವಂತೆ ವಿವರಿಸಿ ತಾಲೀಮು ಮಾಡಿಸಲು ಮತ್ತು ಅಂತಿಮವಾಗಿ ವಸ್ತ್ರ, ಬೆಳಕಿನ ವಿನ್ಯಾಸ, ರಂಗಸಜ್ಜಿಕೆಗೆ ತರುವವರೆಗೆ ಹಲವು ತಂಡಗಳು ಕೆಲಸ ಮಾಡುತ್ತಿವೆ. ಶರಣಯ್ಯ ನಿರ್ದೇಶನದ ಜವಾಬ್ದಾರಿ ವಹಿಸಿದರೆ, ನಾಲ್ವರು ಬರಹಗಾರರ ತಂಡ ಹರ್ಷಪ್ರಿಯ ಅವರ ನೇತೃತ್ವದಲ್ಲಿ ಪ್ರಸಂಗಗಳನ್ನು ಹೊಸೆಯುತ್ತದೆ. ಪ್ರೋಗ್ರಾಮಿಂಗ್‌ ತಂಡವೂ ಇದರಲ್ಲಿ ಪಾಲ್ಗೊಳ್ಳುತ್ತದೆ.

ಸಿದ್ಧವಾದ ಸ್ಕ್ರಿಪ್ಟ್‌ ನಾಲ್ವರು ಮೆಂಟರ್‌ಗಳ ಬಳಿ ಹೋಗುತ್ತದೆ. ಮೆಂಟರ್‌ಗಳಾದ ಮಂಜುನಾಥ್‌ ಬಡಿಗೇರ್‌, ಹರೀಶ್‌, ವಿಕ್ರಂ ಸೂರಿ ಮತ್ತು ಪ್ರಭು ಅವರು ಸ್ಕ್ರಿಪ್ಟ್‌ಗೆ ಅನುಗುಣವಾಗಿ ಬಾಲ ಕಲಾವಿದರನ್ನು ಆಯ್ಕೆ ಮಾಡಿ, ಅವರಿಗೆ ತಾಲೀಮು ನೀಡುತ್ತಾರೆ.

ಮನರಂಜನೆಯ ಜತೆ ಸಂದೇಶ
‘ಕಾರ್ಯಕ್ರಮದ ಮೂಲ ಉದ್ದೇಶ ಮನರಂಜನೆ ಆದರೂ, ಪ್ರತಿ ಸಂಚಿಕೆಯಲ್ಲಿ ಒಂದಾದರೂ ಗಂಭೀರ ಸಾಮಾಜಿಕ ಸಂಗತಿಯನ್ನು ತರುತ್ತೇವೆ. ವೀಕ್ಷಕರಿಗೆ ಬೋರ್ ಆಗದಂತೆ ಒಳ್ಳೆಯ ಸಂದೇಶವನ್ನು ನೀಡುವುದು, ನಮ್ಮ ಕಲೆ, ಸಂಸ್ಕೃತಿ ಮತ್ತು ಸಾಮಾಜಿಕ ಮೌಲ್ಯಗಳನ್ನು ಬಿಂಬಿಸುವ ಕಳಕಳಿಯೂ ಇದರಲ್ಲಿದೆ. ತೀರಾ ಕೆಳಮಟ್ಟಕ್ಕೆ ಇಳಿಯದ, ದ್ವಂದ್ವಾರ್ಥಕ್ಕೆ ಎಡೆಮಾಡಿಕೊಡದಂತಹ ಘನವಾದ ಹಾಸ್ಯ ನೀಡುವ ಕೆಲಸವನ್ನೂ ಎಚ್ಚರಿಕೆಯಿಂದ ನಿಭಾಯಿಸುತ್ತಿದ್ದೇವೆ’ ಎನ್ನುತ್ತಾರೆ ನಿರೂಪಕ ಮಾಸ್ಟರ್‌ ಆನಂದ್‌.

ಅವರ ಮಾತುಗಳನ್ನು ಸ್ಕ್ರಿಪ್ಟ್‌ ಸಿದ್ಧಪಡಿಸುವ ಮತ್ತು ಕಾರ್ಯಕ್ರಮದ ವಿವಿಧ ವಿಭಾಗಗಳಲ್ಲಿ ತೊಡಗಿಸಿಕೊಂಡಿರುವ ಪ್ರದ್ಯುಮ್ನ ನರಹಳ್ಳಿ ಒಪ್ಪಿಕೊಳ್ಳುತ್ತಾರೆ.‘ಕಾರ್ಯಕ್ರಮ ಶುರು ಮಾಡಿದಾಗ ಗಂಭೀರ ವಿಚಾರಗಳು ಮಕ್ಕಳಿಗೆ ಅರ್ಥವಾಗದಿರುವುದರಿಂದ ಲಘುವಾದ ಅಂಶಗಳೇ ಇರಲಿ ಎಂದುಕೊಂಡಿದ್ದೆವು. ಆದರೆ ಅವರು ನಮಗಿಂತಲೂ ಮುಂದಿದ್ದಾರೆ. ನಾವು ಅಂದುಕೊಂಡಷ್ಟು ಮುಗ್ಧರಲ್ಲ. ಅವರಷ್ಟು ನಮಗೇ ತಿಳಿದಿಲ್ಲವೇನೋ ಎನಿಸುತ್ತದೆ. ನಾವು ಒಂದು ದಿನವಿಡಿ ಕುಳಿತು ಬಾಯಿಪಾಠ ಮಾಡುವಂಥದ್ದನ್ನು ಒಂದು ಗಂಟೆಯಲ್ಲಿ ಮಾಡುತ್ತಾರೆ. ಅವರ ಗ್ರಹಿಕೆಯ ಸಾಮರ್ಥ್ಯ ಅಷ್ಟು ಚೆನ್ನಾಗಿದೆ. ನಮ್ಮ ಅದೃಷ್ಟಕ್ಕೆ ಅದ್ಭುತ ಪ್ರತಿಭೆಯುಳ್ಳ ಮಕ್ಕಳೇ ಸಿಕ್ಕಿದ್ದಾರೆ’ ಎಂದು ಅವರು ಹೇಳುತ್ತಾರೆ.

ಕುವೆಂಪು ಅವರ ‘ಜಲಗಾರ’ ನಾಟಕದ ಅನುಭವವನ್ನು ಉದಾಹರಣೆಯಾಗಿ ನೀಡುತ್ತಾರೆ. ‘ವೃತ್ತಿಪರ ಕಲಾವಿದರೂ ನಾಟಕದ ವಿಷಯಗಳನ್ನು ಅನುಭವಿಸಿ ಅಭಿನಯಿಸಲು ಕಷ್ಟಪಡುತ್ತಾರೆ. ಆದರೆ ಈ ಮಕ್ಕಳ ಅಭಿನಯ ನಮಗೆ ಅಚ್ಚರಿ ಮೂಡಿಸುತ್ತದೆ. ಅವರಿಗೆ ಈ ರೀತಿಯದ್ದೊಂದು ಸಾಮಾಜಿಕ ಪರಿಸ್ಥಿತಿ ನಮ್ಮಲ್ಲಿದೆ. ಅದನ್ನು ಅವರು ಹೀಗೆ ಚಿತ್ರಿಸಿದ್ದಾರೆ ಎಂದು ವಿವರಿಸಿರುತ್ತೇವಷ್ಟೇ. ಅದನ್ನು ಅನುಭವಿಸಿ ಅಭಿನಯಿಸುವ ಪರಿ ಅದ್ಭುತವೆನಿಸುತ್ತದೆ’ ಎನ್ನುತ್ತಾರೆ.

ಹಾಸ್ಯ– ಮನರಂಜನೆಯ ಜತೆಗೆ, ಬೋಧನೆಯ ಮಟ್ಟಕ್ಕೆ ಹೋಗದೆ, ಲಘುವಾಗಿ ನೀಡುವ ಸಂದೇಶಗಳು ಜನರನ್ನು ಸುಲಭವಾಗಿ ತಲುಪುತ್ತವೆ. ಅದು ಈ ಕಾರ್ಯಕ್ರಮದಿಂದ ಸಾಧ್ಯವಾಗುತ್ತಿದೆ ಎನ್ನುವುದು ಅವರ ಅಭಿಪ್ರಾಯ.

ವೀಕೆಂಡ್‌ ವಿತ್ ರಮೇಶ್‌ ಸ್ಫೂರ್ತಿ
ರಿಯಾಲಿಟಿ ಷೋಗಳೆಂದರೆ ಸೆನ್ಸೇಷನ್ ಮೂಡಿಸುವ, ವಿವಾದ ಸೃಷ್ಟಿಸುವ ಕಾರ್ಯಕ್ರಮಗಳು ಎಂಬ ಕಲ್ಪನೆಯಿತ್ತು. ಅದನ್ನು ಬದಲಿಸುವುದು ನಮ್ಮ ಗುರಿಯಾಗಿತ್ತು ಎನ್ನುತ್ತಾರೆ ಪ್ರದ್ಯುಮ್ನ.‌‌ ಯಾವುದೇ ವಿವಾದವಿಲ್ಲದೆ, ಉತ್ತಮ ಸಂಗತಿಗಳ ಮೂಲಕ ಸ್ಫೂರ್ತಿ ತುಂಬುವ ಕಾರ್ಯಕ್ರಮ ಇರಬೇಕು. ಅದನ್ನು ನೋಡಿದವರು ಖುಷಿಯಿಂದ ಮಲಗಬೇಕು. ಅಂತಹ ಎನರ್ಜಿ ನೀಡಿದ್ದು ‘ವೀಕೆಂಡ್‌ ವಿತ್ ರಮೇಶ್‌’ ಕಾರ್ಯಕ್ರಮ ಎಂದು ಅವರು ನೆನಪಿಸಿಕೊಳ್ಳುತ್ತಾರೆ.

‘ವೀಕೆಂಡ್ ವಿತ್ ರಮೇಶ್’ ಹೊಸ ಅಲೆ ಸೃಷ್ಟಿಸಿತು. ಇಂತಹ ಕಾರ್ಯಕ್ರಮಗಳಿಂದ ಸಮಾಜಕ್ಕೆ ಪ್ರೇರಣೆಯಾದರೆ ನಮಗೂ ವೃತ್ತಿ ತೃಪ್ತಿ ಸಿಗುತ್ತದೆ. ನಮಗೆ ಮತ್ತು ಸಂಸ್ಥೆಗೂ ಇದರಿಂದ ಒಳ್ಳೆಯ ಹೆಸರು. ಈ ಯಶಸ್ಸು ‘ಡ್ರಾಮಾ ಜೂನಿಯರ್ಸ್‌’ಗೂ ಸ್ಫೂರ್ತಿ ನೀಡಿತು.  ಒಳಿತನ್ನೇ ಜನ ಹೆಚ್ಚು ಇಷ್ಟಪಡುತ್ತಾರೆ ಎಂಬುದನ್ನು ಈ ಕಾರ್ಯಕ್ರಮಗಳು ಸಾಬೀತುಪಡಿಸಿವೆ ಎನ್ನುತ್ತಾರೆ ಪ್ರದ್ಯುಮ್ನ.

ಮುಗ್ಧತೆಯಿಂದ ಬರುವ ಅಭಿನಯ
‘ಈ ಮಕ್ಕಳದು ಕಲ್ಪನೆಯಿಂದ ರೂಪುಗೊಳ್ಳುವ ಅಭಿನಯವಲ್ಲ, ಮುಗ್ಧತೆಯಿಂದ ಬರುವಂಥದ್ದು. ಚಿಕ್ಕ ಹುಡುಗನಿಗೆ 60 ವರ್ಷದವನ ಪಾತ್ರ ನಿರ್ವಹಿಸಲು ಅನುಭವ, ತಿಳಿವಳಿಕೆ ಬೇಕು. ಆದರೆ ಈ ಮಕ್ಕಳಿಗೆ ಯಾವುದನ್ನೂ ಅರ್ಥ ಮಾಡಿಸಿ ವಿವರಿಸಲು ಸಾಧ್ಯವಿಲ್ಲ. ಅದೇ ನಮ್ಮೆದುರಿಗಿನ ದೊಡ್ಡ ಸವಾಲು. ಅನುಕರಣೆಯೇ ಅವರ ಅಭಿನಯ.

ವಿಷಯಕ್ಕೆ ಅನುಗುಣವಾಗಿ ಅವರ ಹಾವ–ಭಾವ, ಮಾತಿನ ಶೈಲಿ ಇತ್ಯಾದಿಗಳನ್ನು ಅಭಿನಯಿಸಿ ತೋರಿಸುತ್ತೇವೆ. ಅದನ್ನು ಅವರು ಅನುಕರಿಸುತ್ತಾರೆ. ಅಗತ್ಯಕ್ಕೆ ತಕ್ಕಂತೆ ಕಾನ್ಸೆಪ್ಟ್‌ಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುತ್ತೇವೆ. ಹರಿಕಥೆ, ಯಕ್ಷಗಾನದ ವಸ್ತುಗಳನ್ನು ನಾನೇ ಅಳವಡಿಸಿದ್ದೆ’ ಎನ್ನುತ್ತಾರೆ ಮಕ್ಕಳಿಗೆ ಅಭಿನಯದ ಕಲೆ ಹೇಳಿಕೊಡುತ್ತಿರುವ ರಂಗಕರ್ಮಿ ಮಂಜುನಾಥ ಬಡಿಗೇರ್‌.

ತೆರೆಯ ಹಿಂದೆ ಶ್ರಮಿಸುವವರು
ಡ್ರಾಮಾ ಜ್ಯೂನಿಯರ್ಸ್‌ ಷೋ ಇನ್ನೂ ಒಂದು ತಿಂಗಳು ನಡೆಯಲಿದೆ. ನಿರ್ದೇಶನ ತಂಡದಲ್ಲಿ ಶರಣಯ್ಯ ಟಿ. ಸಹಾಯಕ ನಿರ್ದೇಶಕರಾಗಿ  ಕಾರ್ತೀಕ್‌ ಹುಂಡಿಮಾಳ್‌, ಅಂಬಿಕಾ ಹಾಗೂ ಆಶಾ ಇದ್ದಾರೆ. ಮೆಂಟರ್‌ಗಳಾಗಿ ಮಂಜುನಾಥ ಬಡಿಗೇರ್‌, ಪ್ರಭು, ವಿಕ್ರಂ ಸೂರಿ ಹಾಗೂ ಹರೀಶ್‌ ಶ್ರಮಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT