ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಜನೆಯ ಪಂಜರದೊಳಗೆ ಏನುಂಟು, ಏನಿಲ್ಲ?

Last Updated 1 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

* ಎಂಡಾಮೋಲ್ ಇಂಡಿಯಾ ಕುರಿತು ಸಂಕ್ಷಿಪ್ತವಾಗಿ ವಿವರಿಸಿ.
ಜಗತ್ತಿನ ಅತಿದೊಡ್ಡ ನಿರ್ಮಾಣ ಕಂಪೆನಿಗಳಲ್ಲಿ ಎಂಡಾಮೋಲ್‌ ಇಂಡಿಯಾ ಒಂದು. ಎಂಟೂವರೆ ವರ್ಷಗಳ ಹಿಂದೆ ಭಾರತದಲ್ಲಿ ಈ ಕಂಪೆನಿ ಶುರುವಾಗಿದೆ. ದಕ್ಷಿಣ ಭಾರತ ಸೇರಿದಂತೆ ದೇಶದ ಒಟ್ಟು ಒಂಬತ್ತು ಭಾಷೆಗಳಲ್ಲಿ ವಿವಿಧ ಬಗೆಯ ಕಾರ್ಯಕ್ರಮಗಳನ್ನು ನಿರ್ಮಾಣ ಮಾಡುತ್ತಿದ್ದೇವೆ. ‘ಬಿಗ್‌ಬಾಸ್‌’, ‘ಡೀಲ್‌ ಯಾ ನೋ ಡೀಲ್‌’, ‘ಲಾಫ್ಟರ್‌ ಚಾಲೆಂಜ್‌’ ನಾವು ನಿರ್ಮಿಸಿದ ಕೆಲ ಹೆಸರಾಂತ ಕಾರ್ಯಕ್ರಮಗಳು.

*ರಿಯಾಲಿಟಿ ಷೋ ಹೊರತುಪಡಿಸಿದರೆ ನಿಮ್ಮ ಇತರ ಚಟುವಟಿಕೆಗಳು ಯಾವುವು?
ಇಲ್ಲಿಯವರೆಗೆ ನಮ್ಮ ಕಾರ್ಯಕ್ಷೇತ್ರ ಕಿರುತೆರೆಗೆ ಸೀಮಿತವಾಗಿತ್ತು. ಈಗ ಸಿನಿಮಾ ಕ್ಷೇತ್ರಕ್ಕೂ ಕಾಲಿಟ್ಟಿದ್ದೇವೆ. ತೆಲುಗು ಮತ್ತು ತಮಿಳಿನಲ್ಲಿ ‘ಅನಾಮಿಕ’ ಹಾಗೂ ಹಿಂದಿಯಲ್ಲಿ ‘ಕಹಾನಿ’ ಚಿತ್ರ ನಿರ್ಮಾಣ ಮಾಡಿದ್ದೇವೆ.

*ಕನ್ನಡದಲ್ಲಿ ಬಿಗ್‌ಬಾಸ್‌ ಮೂರನೇ ಆವೃತ್ತಿಯ ಯೋಜನೆ ಇದೆಯೇ?
ಖಂಡಿತವಾಗಿಯೂ, ಒಂದು ಆವೃತ್ತಿ ಮುಗಿಯುತ್ತಿದ್ದಂತೆ ಸಹಜವಾಗಿಯೇ ಮುಂದಿನ ಕಾರ್ಯಕ್ರಮದ ಬಗ್ಗೆ ಮಾತುಗಳು ಕೇಳಿ ಬರುತ್ತವೆ. ಮೊದಲ ಆವೃತ್ತಿ ಹೆಸರು ಮಾಡಿತ್ತು. ಎರಡನೇ ಆವೃತ್ತಿ ಅದಕ್ಕಿಂತಲೂ ಹೆಚ್ಚಿನ ಖ್ಯಾತಿ ಗಳಿಸಿತು. ೮.೧ ಟಿಆರ್‌ಪಿ ಬಂದಿತ್ತು. ಮೂರನೇ ಆವೃತ್ತಿಯ ಕೆಲಸ ಈಗಾಗಲೇ ಆರಂಭಗೊಂಡಿದೆ. ಸ್ಪರ್ಧಾಳುಗಳನ್ನು ಗುರುತಿಸುವ ಕೆಲಸ ಚಾಲ್ತಿಯಲ್ಲಿದೆ. ಹಿಂದಿ ಬಿಗ್‌ಬಾಸ್‌ ಎಂಟನೇ ಆವೃತ್ತಿ ಮುಗಿದ ತಕ್ಷಣ ಮನೆಯ ಒಳ ವಿನ್ಯಾಸ ಬದಲಾವಣೆಯ ಕಾರ್ಯವೂ ಶುರುವಾಗುತ್ತದೆ.

*ಕನ್ನಡ ಬಿಗ್‌ಬಾಸ್‌ನ ಎರಡನೇ ಆವೃತ್ತಿ ನಟ–ನಿರೂಪಕರಿಗೆ ಸೀಮಿತವಾಗಿತ್ತು ಎಂಬ ಆರೋಪಗಳಿಗೆ ನಿಮ್ಮ ಪ್ರತಿಕ್ರಿಯೆ ಏನು?
ಮೊದಲನೇ ಆವೃತ್ತಿಯಲ್ಲಿ ಕೆಲ ವಿವಾದಾಸ್ಪದ ವ್ಯಕ್ತಿಗಳಿದ್ದುದರಿಂದ ಅದು ಸಾಕಷ್ಟು ಹೆಸರು ಮಾಡಿತ್ತು. ಎರಡನೇ ಆವೃತ್ತಿಯಲ್ಲಿ ನಟ–ನಿರೂಪಕರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಿದ್ದರಿಂದ ಈ ತರಹದ ಆರೋಪಗಳು ಕೇಳಿ ಬಂದಿವೆ. ಆದರೆ, ಪ್ರತಿ ಸಲ ಮಾಡಿದ್ದನ್ನೇ ಮಾಡಲು ಆಗುವುದಿಲ್ಲ. ಯಾವಾಗಲೂ ಒಂದೇ ಕಾರ್ಡ್‌ ನಡೆಯುವುದೂ ಇಲ್ಲ. ಕೆಲವೊಮ್ಮೆ ಈ ರೀತಿ ಆಗುತ್ತದೆ. ಆದರೆ, ಬರುವ ಸೀಸನ್‌ನಲ್ಲಿ ಈ ರೀತಿ ಆಗದಂತೆ ಎಚ್ಚರ ವಹಿಸಲಾಗುತ್ತದೆ. ಇಷ್ಟಾಗಿಯೂ ಎರಡನೇ ಆವೃತ್ತಿಯ ಟಿಆರ್‌ಪಿ ಸ್ಥಿರವಾಗಿತ್ತು. ಅಂತಿಮ ದಿನದ ಟಿಆರ್‌ಪಿ ೮.೪ಕ್ಕೆ ತಲುಪಿತ್ತು.

*ಎರಡನೇ ಆವೃತ್ತಿಯಲ್ಲಿ ಅಕುಲ್‌ ಬಾಲಾಜಿ ಅವರನ್ನು ಜಯಶಾಲಿ ಎಂದು ಘೋಷಿಸಿದ್ದರ ಬಗ್ಗೆ ಹಲವು ರೀತಿಯ ಆರೋಪಗಳಿವೆಯಲ್ಲ?
ಉತ್ತಮ ಅಂಶಗಳನ್ನು ಒಳಗೊಂಡ ಕಾರ್ಯಕ್ರಮ ನಿರ್ಮಾಣ ಮಾಡಿಕೊಡುವುದಷ್ಟೇ ನಮ್ಮ ಜವಾಬ್ದಾರಿ. ಕಾರ್ಯಕ್ರಮ ಪ್ರಸಾರದ ಹಕ್ಕು ಪಡೆದುಕೊಂಡಿರುವ ಚಾನೆಲ್‌ ಯಾವ ಸ್ಪರ್ಧಿಗೆ ಎಷ್ಟು ಮತಗಳು ಬಿದ್ದಿವೆ ಎನ್ನುವುದನ್ನು ನಿಖರವಾಗಿ  ದಾಖಲಿಸಲು ಮೂರನೇ ಸಂಸ್ಥೆಯೊಂದನ್ನು ನೇಮಿಸಿಕೊಂಡಿರುತ್ತದೆ. ಎಲ್ಲವೂ ಪಾರದರ್ಶಕವಾಗಿ ನಡೆಯುತ್ತದೆ. ಪ್ರತಿ ಕಾರ್ಯಕ್ರಮ ನಡೆದಾಗ ಈ ರೀತಿಯ ಆರೋಪಗಳು ಕೇಳಿ ಬರುವುದು ಸಾಮಾನ್ಯ.

*ಜನರಿಗೆ ಮನರಂಜನೆ ಒದಗಿಸುವುದು ಮುಖ್ಯವೋ ಅಥವಾ ಟಿಆರ್‌ಪಿ?
ನಿಜ ಹೇಳಬೇಕೆಂದರೆ ಎರಡೂ ಮುಖ್ಯ. ಒಂದು ಕಾರ್ಯಕ್ರಮ ಯಶಸ್ಸು ಗಳಿಸಿದೆಯೋ ಇಲ್ಲವೋ ಎಂಬುದನ್ನು ಟಿಆರ್‌ಪಿ ಆಧಾರದ ಮೇಲೆ ನಿರ್ಧಾರವಾಗುತ್ತದೆ. ಇದರಿಂದ ಎರಡನ್ನೂ ಗಮನಿಸುತ್ತೇವೆ.

*ಪ್ರತಿಯೊಂದು ಬಿಗ್‌ಬಾಸ್‌ ಕಾರ್ಯಕ್ರಮದಿಂದ ನೀವು ಕಲಿತಿದ್ದೇನು?
ಸೂಕ್ತ ಸ್ಪರ್ಧಿಗಳು ಇಲ್ಲದ ಕಾರಣ ಹಿಂದಿಯ ಕೆಲವು ಷೋಗಳಿಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದು ಹೀಗೆ ನಡೆಯುತ್ತದೆ ಎಂದು ಯಾರು ಊಹಿಸಲು ಸಾಧ್ಯವಾಗುವುದಿಲ್ಲ. ಪ್ರತಿ ದಿನ ಇದರ ಬಗ್ಗೆ ನಮ್ಮ ತಜ್ಞರು ಕೆಲಸ ಮಾಡುತ್ತಾರೆ. ಪ್ರತಿ ಬಾರಿ ಹೊಸದನ್ನು ಕೊಡಲು ಪ್ರಯತ್ನಿಸುತ್ತಿರುತ್ತಾರೆ. ಕೆಲವೊಮ್ಮೆ ನಡೆಯುತ್ತವೆ, ಕೆಲವು ಸಲ ನಡೆಯುವುದಿಲ್ಲ. ಯಾವುದು ಚೆನ್ನಾಗಿ ನಡೆಯುತ್ತದೆಯೋ ಅದಕ್ಕೆ ಇನ್ನಷ್ಟು ಹೆಚ್ಚಿನ ಒತ್ತು ಕೊಡುತ್ತೇವೆ.

ಉದಾಹರಣೆಗೆ ಕನ್ನಡದ ಎರಡನೇ ಆವೃತ್ತಿಯಲ್ಲಿ ನಟ–ನಿರೂಪಕರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು ಎಂಬ ಆರೋಪಗಳು ಬಂದಿದ್ದವು. ಮುಂಬರುವ ದಿನಗಳಲ್ಲಿ ಹಾಗಾಗದಂತೆ ಎಚ್ಚರ ವಹಿಸಿ ವಿವಿಧ ಕ್ಷೇತ್ರದವರನ್ನು ತೆಗೆದುಕೊಂಡು ಕಾರ್ಯಕ್ರಮ ರೂಪಿಸುತ್ತೇವೆ. ಹಿಂದಿ ಷೋ ಮಾಡುವಾಗಲೂ ಸಾಕಷ್ಟು ಪಾಠಗಳನ್ನು ಕಲಿತಿದ್ದೇವೆ.

ಮೊದಲ ಮೂರು ಸೀಸನ್‌ಗಳಲ್ಲಿ ಕಿರುತೆರೆಯ ನಟರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ನಂತರದ ಕೆಲ ಆವೃತ್ತಿಗಳಲ್ಲಿ ಮೋನಿಕಾ ಬೇಡಿ, ರಾಹುಲ್‌ ಮಹಾಜನ್‌, ರಾಜಾ, ಡಾಲಿ, ಇಮಾಮ್‌ ಸಿದ್ದಿಕಿ ಅವರಂತಹ ವಿವಾದಾಸ್ಪದ ವ್ಯಕ್ತಿಗಳಿದ್ದರು. ಇದರಿಂದ ಪ್ರತಿ ಕಾರ್ಯಕ್ರಮದಿಂದ ತಪ್ಪನ್ನು ತಿದ್ದಿಕೊಳ್ಳಲು ಪ್ರಯತ್ನಿಸುತ್ತೇವೆ.

*ಕಾರ್ಯಕ್ರಮದ ಹಕ್ಕನ್ನು ಚಾನೆಲ್‌ಗಳಿಗೆ ನೀಡುವಾಗ ಯಾವ ಮಾನದಂಡ ಅನುಸರಿಸುತ್ತೀರಿ?
ನಮ್ಮ ಕಾರ್ಯಕ್ರಮಕ್ಕೆ ಹೆಚ್ಚಿನ ಪ್ರಚಾರ, ಮಾರುಕಟ್ಟೆ ಮತ್ತು ಸರಣಿಯಾಗಿ ಅತ್ಯುತ್ತಮ ರೀತಿಯಲ್ಲಿ ಯಾವ ಚಾನೆಲ್‌ ನಡೆಸಿಕೊಂಡು ಹೋಗುತ್ತದೆ ಎನ್ನುವುದನ್ನು ಮುಖ್ಯವಾಗಿ ಪರಿಗಣಿಸುತ್ತೇವೆ. ಕನಿಷ್ಠ ಎರಡು ಮೂರು ಆವೃತ್ತಿಗಳಿಗಾದರೂ ಯಾವ ಚಾನೆಲ್‌ ಹೂಡಿಕೆ ಮಾಡಲು ಮುಂದೆ ಬರುತ್ತದೆಯೋ ಅದಕ್ಕೆ ಮೊದಲ ಆದ್ಯತೆ ನೀಡುತ್ತೇವೆ.

*ನಟ ಸಲ್ಮಾನ್‌ ಖಾನ್‌ ಅವರು ಬಿಗ್‌ಬಾಸ್‌ ಎಂಟನೇ ಆವೃತ್ತಿಯ ಮಧ್ಯದಲ್ಲೇ ಹೊರ ನಡೆದದ್ದು ಏಕೆ?
ಸಲ್ಮಾನ್‌ ಖಾನ್‌ ಕಾರ್ಯಕ್ರಮದ ಮಧ್ಯದಲ್ಲಿ ಹೋಗಿಲ್ಲ. ಅವರು ಕೊನೆಯ ಘಟ್ಟದಲ್ಲಿ ನಿಗದಿತ ಸಮಯದಲ್ಲೇ ಹೋಗಿದ್ದಾರೆ. ಈ ಬಾರಿಯ ಬಿಗ್‌ಬಾಸ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದರಿಂದ ಅದನ್ನು ಹಿಗ್ಗಿಸಿದ್ದೇವೆ. ಈ ರೀತಿ ಆಗಿರುವುದು ಜಗತ್ತಿನಲ್ಲೇ ಮೊದಲು. ಸಲ್ಮಾನ್‌ ಅವರೊಂದಿಗೆ ನಿಗದಿತ ಅವಧಿಯವರೆಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅದು ಕೊನೆಗೊಂಡಿತ್ತು.

ಪೂರ್ವನಿರ್ಧರಿತ ಚಿತ್ರಗಳ ಚಿತ್ರೀಕರಣಕ್ಕೆ ಅವರು ಹೋಗಬೇಕಿತ್ತು. ಇದರಿಂದ ಅವರನ್ನು ಇನ್ನಷ್ಟು ದಿನ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಸಲ್ಮಾನ್‌ ಅವರೇ ಕೊನೆವರೆಗೂ ಇದ್ದು ಕಾರ್ಯಕ್ರಮ ನಡೆಸಿಕೊಡಬೇಕು ಎಂಬ ಆಸೆ ನಮಗೂ ಇತ್ತು. ಆದರೆ, ನಾವು ಅಸಹಾಯಕರಾಗಿದ್ದೇವು.

*ಮನರಂಜನೆ ಹೆಸರಿನಲ್ಲಿ ೧೫ ಜನರನ್ನು ಸುಮಾರು ಮೂರು ತಿಂಗಳಿಗೂ ಹೆಚ್ಚು ಕಾಲ ಒಂದು ಮನೆಯಲ್ಲಿ ಪ್ರಾಣಿಗಳಂತೆ ಕೂಡಿ ಹಾಕುವುದು ಎಷ್ಟು ಸರಿ?
ನಾವು ಯಾವತ್ತೂ ಈ ರೀತಿ ಯೋಚಿಸಿಲ್ಲ. ಪ್ರತಿಯೊಬ್ಬರೂ ತಮ್ಮ ನೆರೆಯ ಮನೆಯಲ್ಲಿ ಏನು ನಡೆಯುತ್ತಿದೆ ಎಂದು ಯೋಚಿಸುತ್ತಾರೆ. ಅವರು ಮಾಂಸಾಹಾರಿಗಳೋ ಅಥವಾ ಸಸ್ಯಾಹಾರಿಗಳೋ ಎಂಬುದನ್ನು ತಿಳಿಯಬೇಕು ಎಂಬ ಕುತೂಹಲ ಇದ್ದೇ ಇರುತ್ತದೆ. ಪ್ರತಿದಿನ ರಾತ್ರಿ ೯ರಿಂದ ೧೦ಗಂಟೆಯವರೆಗೆ ಒಂದು ಮನೆಯಲ್ಲಿ ಅದೂ ಕೂಡ ಮೂರು ತಿಂಗಳವರೆಗೆ ಏನು ನಡೆಯುತ್ತಿದೆ ಎಂದು ತಿಳಿಯಲು ಯಾರು ತಾನೇ ಬಯಸುವುದಿಲ್ಲ. ಇದು ಆ ರೀತಿಯ ಕಾರ್ಯಕ್ರಮ ಹೊರತು ಮತ್ತಿನ್ನೇನೂ ಅಲ್ಲ.

*ಇತರ ಭಾಷೆಗಳಿಗೂ ಕಾರ್ಯಕ್ರಮ ವಿಸ್ತರಿಸುವ ಚಿಂತನೆ ಇದೆಯೇ?
ಹಿಂದಿ, ಕನ್ನಡ ಹಾಗೂ ಬಂಗಾಳಿ ಭಾಷೆಯಲ್ಲಿ ಈಗಾಗಲೇ ಬಿಗ್‌ಬಾಸ್‌ ಸಾಕಷ್ಟು ಜನಪ್ರಿಯಗೊಂಡಿದೆ. ಬರುವ ಮೇ ತಿಂಗಳಲ್ಲಿ ತೆಲುಗುವಿನಲ್ಲಿ ಬರಲಿದೆ. ನಂತರ ಕ್ರಮವಾಗಿ ತಮಿಳು, ಮಲಯಾಳಂ ಮತ್ತು ಮರಾಠಿಯಲ್ಲಿ ಮೂಡಿಬರಲಿದೆ.

*ಈ ಕಾರ್ಯಕ್ರಮದಿಂದ ಜನಸಾಮಾನ್ಯರಿಗೇನು ಪ್ರಯೋಜನ?
ಸಾಮಾನ್ಯ ಜನರಿಗೆ ಮನರಂಜನೆಯ ಹೊರತಾಗಿ ಒತ್ತಡದ ಪರಿಸ್ಥಿತಿಯಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಕಲಿಸಿಕೊಡುತ್ತದೆ. 

ಗೆಲುವು ಒಲಿಸಿಕೊಂಡ ಗೌತಮ್‌ 
ಹಿಂದಿ ಅವತರಣಿಕೆಯ ಬಿಗ್‌ಬಾಸ್‌ ಎಂಟನೇ ಆವೃತ್ತಿಯಲ್ಲಿ ಗೌತಮ್‌ ಗುಲಾಟಿ ವಿಜೇತರಾಗಿ ಹೊರಹೊಮ್ಮಿದ್ದಾರೆ. ಶನಿವಾರ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ಗೌತಮ್‌ ಅವರನ್ನು ಜಯಶಾಲಿ ಎಂದು ಘೋಷಿಸಲಾಯಿತು. ಕರೀಷ್ಮಾ ತನ್ನಾ, ಪ್ರೀತಂ ಸಿಂಗ್‌, ಡಿಂಪಿ ಮತ್ತು ಅಲಿ ಕುಲಿ ಮಿರ್ಜಾ ಅವರು ಅಂತಿಮ ಕಣದಲ್ಲಿದ್ದ ಇತರ ಸ್ಪರ್ಧಿಗಳು.

೧೩೨ ದಿನಗಳ ಸುದೀರ್ಘ ಕಾರ್ಯಕ್ರಮವನ್ನು ಆರಂಭದಲ್ಲಿ ಬಾಲಿವುಡ್‌ ಸ್ಟಾರ್‌ ಸಲ್ಮಾನ್‌ ಖಾನ್‌ ನಡೆಸಿಕೊಟ್ಟಿದ್ದರು. ನಿಗದಿತ ಅವಧಿಗಿಂತ ಹೆಚ್ಚಿಗೆ ವಿಸ್ತರಣೆಯಾದ ಕಾರಣ ಬಳಿಕ ಇದನ್ನು ನಿರ್ಮಾಪಕಿ ಫರ್‌್ಹಾ ಖಾನ್‌ ಮುಂದುವರೆಸಿದರು. ‘ಗುಲ್ಲು’ ಎಂದೇ ಜನಪ್ರಿಯವಾಗಿದ್ದ ಗೌತಮ್‌ ಅವರಿಗೆ ಫರ್‌್ಹಾ ಅವರು ₨೫೦ ಲಕ್ಷ ನಗದು ಹಾಗೂ ಟ್ರೋಫಿ ವಿತರಿಸಿದರು.

‘ನಾನು ಜಯಶಾಲಿಯಾಗಿದ್ದೇನೆ ಎಂದು ನಂಬಲು ಆಗುತ್ತಿಲ್ಲ. ಹಲವು ಏಳು ಬೀಳುಗಳಿಂದ ಕೂಡಿದ್ದ ಸುದೀರ್ಘ ಪಯಣ ಕೊನೆಗೊಂಡಿದೆ. ಈ ಅನುಭವ ನನ್ನ ಜೀವನದುದ್ದಕ್ಕೂ ಸಹಕಾರಿಯಾಗಲಿದೆ’ ಎಂದು ಗೆಲುವಿನ ಬಳಿಕ ಗೌತಮ್‌ ಹೇಳಿದರು. ಇದಕ್ಕೂ ಮುನ್ನ ನಟಿ ಸೋನಾಕ್ಷಿ ಸಿನ್ಹಾ ಬಾಲಿವುಡ್‌ ಹಾಡುಗಳಿಗೆ ಹೆಜ್ಜೆ ಹಾಕಿದರು. ಕಾರ್ಯಕ್ರಮದಲ್ಲಿ ಎಲ್ಲ ೧೫ ಸ್ಪರ್ಧಿಗಳು ಹಾಗೂ ಅಂತಿಮ ಕಣದಲ್ಲಿದ್ದವರ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT