ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಜಾನ್ ನಂತರ ವರಿಷ್ಠರ ಭೇಟಿ ಭರವಸೆ

ಭಿನ್ನಮತೀಯ ಶಾಸಕರಿಂದ ಎಸ್.ಎಂ. ಕೃಷ್ಣ ಭೇಟಿ
Last Updated 28 ಜೂನ್ 2016, 22:30 IST
ಅಕ್ಷರ ಗಾತ್ರ

ಬೆಂಗಳೂರು: ಸಚಿವ ಸಂಪುಟ ಪುನರ್‌ರಚನೆಯ ನಂತರ ಕಾಂಗ್ರೆಸ್ ಪಕ್ಷದಲ್ಲಿ ಕಾಣಿಸಿಕೊಂಡಿದ್ದ ಅಸಮಾಧಾನ ತಣ್ಣಗಾಗುತ್ತಿರುವ ಮಧ್ಯೆ, ಭಿನ್ನಮತೀಯ ಶಾಸಕರಾದ ಖಮರುಲ್ ಇಸ್ಲಾಂ ಮತ್ತು ಡಾ.ಎ.ಬಿ. ಮಾಲಕರೆಡ್ಡಿ ಪಕ್ಷದ ಹಿರಿಯ ಮುಖಂಡ ಎಸ್.ಎಂ. ಕೃಷ್ಣ ಅವರನ್ನು ಮಂಗಳವಾರ ಭೇಟಿ ಮಾಡಿ ಚರ್ಚೆ ನಡೆಸಿರುವುದು ಕುತೂಹಲ ಕೆರಳಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ್ದ ಈ ಇಬ್ಬರೂ ನಾಯಕರು ಸದಾಶಿವ ನಗರದಲ್ಲಿರುವ  ಕೃಷ್ಣ  ಅವರ  ನಿವಾಸಕ್ಕೆ ತೆರಳಿ, ಭಿನ್ನಮತೀಯ ಶಾಸಕರ ಬೆಂಬಲಕ್ಕೆ ನಿಲ್ಲುವಂತೆ ಮನವಿ ಮಾಡಿದ್ದಾರೆ.
‘ಮಂತ್ರಿ ಮಂಡಲ ಪುನರ್‌ರಚನೆ ಸಂದರ್ಭದಲ್ಲಿ ಸಿದ್ದರಾಮಯ್ಯ ನಮ್ಮನ್ನು ಕಡೆಗಣಿಸಿದ್ದಾರೆ. ಹೈಕಮಾಂಡ್ ಮಟ್ಟದಲ್ಲಿ ಈ ಬಗ್ಗೆ ಚರ್ಚೆ ನಡೆಸಬೇಕು’ ಎಂದು ಕೃಷ್ಣ ಅವರಲ್ಲಿ ಕೇಳಿಕೊಂಡಿದ್ದಾರೆ ಎನ್ನಲಾಗಿದೆ.

ಅನಂತರ ಸುದ್ದಿಗಾರರ ಜೊತೆ ಮಾತನಾಡಿದ ಖಮರುಲ್ ಇಸ್ಲಾಂ, ‘ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳುವುದು ಬೇಡ. ತಾಳ್ಮೆಯಿಂದ ಇರಿ. ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ರಂಜಾನ್ ಮುಗಿದ ನಂತರ ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿ ಮಾಡೋಣ’ ಎಂದು ಕೃಷ್ಣ ಅವರು ತಿಳಿಸಿದ್ದಾರೆ ಎಂದು ಹೇಳಿದರು.

‘1999ರಲ್ಲಿ ಕೃಷ್ಣ ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಂದೆ. ಗುಲಾಮ್ ನಬಿ ಆಜಾದ್ ಮತ್ತು ಸೋನಿಯಾ ಗಾಂಧಿಯವರ ನಾಯಕತ್ವದಲ್ಲಿ ನಾನು ಈ ಪಕ್ಷದಲ್ಲಿ ಮೂರು ಬಾರಿ ಸಚಿವನಾಗಿದ್ದೇನೆ. ಆದರೆ ನನ್ನನ್ನು ಏಕಾಏಕಿ ಸಚಿವ ಹುದ್ದೆಯಿಂದ ತೆಗೆದು ಹೈದರಾಬಾದ್-ಕರ್ನಾಟಕ ಹಾಗೂ ಮುಂಬೈ-ಕರ್ನಾಟಕ ಭಾಗದ ಅಲ್ಪಸಂಖ್ಯಾತ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ. ಈ ವಿಷಯವನ್ನು ಹೈಕಮಾಂಡ್ ಗಮನಕ್ಕೆ ತರಲಾಗುವುದು’ ಎಂದು ಅವರು ತಿಳಿಸಿದರು.

‘ನಾಯಕತ್ವ ಬದಲಾವಣೆ ಶ್ರೀನಿವಾಸ ಪ್ರಸಾದ್‌ ಅವರ ವೈಯಕ್ತಿಕ ವಿಚಾರ, ನಮ್ಮ ವಿಚಾರವಲ್ಲ. ಅಲ್ಪಸಂಖ್ಯಾತರಿಗೆ ನ್ಯಾಯ ಒದಗಿಸುವುದು ನಮ್ಮ ಆದ್ಯತೆ’ ಎಂದು ಖಮರುಲ್‌ ಇಸ್ಲಾಂ ಹೇಳಿದರು. ‘ಹೈದರಾಬಾದ್-ಕರ್ನಾಟಕ, ಮುಂಬೈ- ಕರ್ನಾಟಕ ಭಾಗದಲ್ಲಿ 11 ಸಂಸತ್ ಸದಸ್ಯರು, 55 ಶಾಸಕರಿದ್ದಾರೆ. ಅಲ್ಲಿನ ನಮ್ಮ ಸಮುದಾಯದವರ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ನಮಗೆ ನಾಯಕತ್ವ ಬದಲಾವಣೆಗಿಂತ ನಮ್ಮ ಜನರಿಗೆ ನ್ಯಾಯ ಒದಗಿಸುವುದು ಮುಖ್ಯ’ ಎಂದು ನುಡಿದರು.

ಮಂತ್ರಿ ಮಂಡಲ ಪುನರ್‌ ರಚನೆ ನಂತರ ದೊಡ್ಡಮಟ್ಟದಲ್ಲಿ ಕಾಂಗ್ರೆಸ್‌ನಲ್ಲಿ ಎದ್ದಿದ್ದ ಭಿನ್ನಮತ ಈಗ ಬಹುತೇಕ ಶಮನವಾಗಿದೆ. ಸಚಿವ ಸ್ಥಾನ ಕಳೆದುಕೊಂಡ ಶ್ರೀನಿವಾಸ್ ಪ್ರಸಾದ್, ಖಮರುಲ್ ಇಸ್ಲಾಂ, ಎ. ಬಿ. ಮಾಲಕರೆಡ್ಡಿ ಮತ್ತು ಕೆಲವು ಶಾಸಕರು ಮಾತ್ರ ಈಗಲೂ ಭಿನ್ನಮತೀಯ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಉಳಿದ ಶಾಸಕರು ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನದ ಆಮಿಷಕ್ಕೆ ಒಳಗಾಗಿ ಭಿನ್ನಮತೀಯ ಚಟುವಟಿಕೆಯಿಂದ ದೂರ ಉಳಿದಿದ್ದಾರೆ ಎನ್ನಲಾಗಿದೆ.

ಭಿನ್ನರ ಸಂಖ್ಯೆ ಎಷ್ಟೇ ಇರಲಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿದೇಶ ಪ್ರವಾಸ ಮುಗಿಸಿ ಬಂದ ನಂತರ ಅವರನ್ನು ಭೇಟಿ ಮಾಡಿ ಎಲ್ಲವನ್ನೂ ಅವರ ಗಮನಕ್ಕೆ ತರಲು ಈ ಭಿನ್ನ ಶಾಸಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT