ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಜೆಗಳ ಮಹಾಪೂರ

Last Updated 25 ಡಿಸೆಂಬರ್ 2015, 19:30 IST
ಅಕ್ಷರ ಗಾತ್ರ

‘ಬ್ಯಾಂಕ್ ಸೇವೆ ಮೂರೇ ದಿನ’ (ಪ್ರ.ವಾ., ಡಿ. 21) ತಲೆಬರಹ ಓದಿ  ಯಾರೂ ಆಶ್ಚರ್ಯಪಡಬೇಕಾಗಿಲ್ಲ. ಏಕೆಂದರೆ ಮೊದಲೆ ಈ ಪಾಟಿ ರಜೆಗಳು ತುಂಬಿ ತುಳುಕಾಡುವಾಗ ಮೊನ್ನೆ ಮೊನ್ನೆ ತಿಂಗಳಿಗೆರಡು ಶನಿವಾರಗಳೂ ಬ್ಯಾಂಕಿಗೆ ರಜೆಯೆಂದು ಘೋಷಿಸಲಾಗಿ ರಜೆಗಳು ಸುನಾಮಿ ತೆರದಿ ಉಕ್ಕಿವೆ. ಪರವಾಗಿಲ್ಲ ಬಿಡಿ. ತಿಂಗಳಲ್ಲಿ ಉಳಿದ ಎರಡು ಅಥವಾ ಮೂರು ಶನಿವಾರಗಳು ಪೂರ್ಣ ಕೆಲಸದ ದಿನಗಳು ಅಂತ ಗ್ರಾಹಕರು ಸಮಾಧಾನಪಟ್ಟುಕೊಳ್ಳ ಬೇಕಷ್ಟೆ. ಏಕೆಂದರೆ ಬಿಸಿ ತಟ್ಟುವುದೇ ಅವರಿಗೆ.

ನಮ್ಮ ಮನೆ ಬಳಿಯ ಪಾರ್ಕಿನ ಕಲ್ಲು ಬೆಂಚಿನ ಮೇಲೆ ಕುಳಿತಿದ್ದ ವೃದ್ಧರೊಬ್ಬರ ಚಡಪಡಿಕೆ ಹೇಳತೀರದ್ದಾಗಿತ್ತು. ‘ಏನಾಯ್ತು ಸಾರ್, ಆರೋಗ್ಯ ತಾನೆ’ ಅಂತ ವಿಚಾರಿಸಿದೆ. ‘ಅಲ್ಲಯ್ಯ, ಅದೇನೊ ಗಾದೆ ಉಂಟಲ್ಲ ಹಾಗೆ ನಮ್ಮಂಥ ನಿವೃತ್ತರಿಗೆ ಲೈಬ್ರರಿ ಅಲ್ವೆ ತಾಣ? ಆದ್ರೆ ಇವೊತ್ತು ಎರಡನೆ ಮಂಗಳವಾರ ಅನ್ನೋದೆ ಮರೆತೋಯ್ತು... ನಿನ್ನೆ ಸೋಮವಾರ ಹೇಗೂ ರಜೆ. ಹಿಂದೆ ಎಲ್ಲಾ ಸರ್ಕಾರಿ ಆಫೀಸಿನ ಹಾಗೆ ಲೈಬ್ರರಿಗೂನೂ ಎರಡನೆ ಶನಿವಾರ ರಜೆ ಇತ್ತಪ್ಪ. ಹೀಗೆ ಬದಲಿಸಿದ್ರು... ಸರಣೀ ಅನ್ನೋದುಂಟಲ್ಲ!’ ಎಂದರು ಅವರು ಮಾರ್ಮಿಕವಾಗಿ. ‘ಅಟೆಂಡೆನ್ಸ್ ರಿಜಿಸ್ಟರ್ ನೋಡಿರಲಿಲ್ಲ. ನಂಗೆ ಇನ್ನೂ ಒಂದು ರಜೆ ಬಾಕಿ ಉಳಿದಿದೆ. ಇನ್ನು ನಾನು ಆಫೀಸಿಗೆ ಬರೋದು ಮುಂದಿನ ವರ್ಷವೆ ಬಿಡು’– ಮೊನ್ನೆ ಸಿಟಿ ಬಸ್ಸಿನಲ್ಲಿ ಕಿವಿಗೆ ಬಿದ್ದ ಸಂಭಾಷಣೆಯಿದು.

ತಿಂಗಳಲ್ಲಿ ಎಷ್ಟು ರಜೆಗಳು ಎನ್ನುವ ಬದಲು ಎಷ್ಟು ಕೆಲಸದ ದಿನಗಳು ಎನ್ನುವಂಥ ಸ್ಥಿತಿಗತಿ ಒದಗಿದೆ. ವಾರದ ಯಾವುದೇ ಒಂದೆರಡು ದಿನಗಳು ರಜೆ ಬಂದರೆ ಮುಗಿಯಿತು. ಉಳಿದ ದಿನಗಳಿಗೆ ರಜೆ ಹಾಕಿ ತುಂಬಿ ಇಡೀ ವಾರ ಬಿಡುವು ಪಡೆದುಕೊಳ್ಳುವುದು ಕರಗತವಾಗಿದೆ. ನಮಗೆ ಇಷ್ಟು ರಜೆಗಳು ಬೇಕೇ? ಪ್ರತಿ ಭಾನುವಾರ ಹೇಗೆ ಜಾಗತಿಕ ರಜೆಯಾಯಿ ತೆನ್ನಲು ಒಂದು ವೃತ್ತಾಂತ ಜನಪ್ರಿಯವಾಗಿದೆ. ಲಂಡನ್ನಿನ ಖಾಸಗಿ ಸಂಸ್ಥೆಯೊಂದರ ನೌಕರ ಅಲ್ಲಿನ ಮುಖ್ಯಸ್ಥನಲ್ಲಿ ತನ್ನ ಮನದಳಲು ಹೇಳಿಕೊಂಡನಂತೆ: ‘ಸರ್, ವಾರಪೂರ್ತಿ ದುಡಿಯುತ್ತೇನೆ. ನನ್ನ ಬಳಿ ಇರುವುದು ಒಂದೇ ಜೊತೆ ಬಟ್ಟೆ. ನನ್ನ ಬಟ್ಟೆ ಒಗೆದು, ಒಣಗಿಸಿ, ಇಸ್ತ್ರಿ ಮಾಡಿಕೊಳ್ಳುವ ಸಲುವಾಗಿ ವಾರ ಕ್ಕೊಂದು ದಿನ ದಯವಿಟ್ಟು ಪುರಸತ್ತು ನೀಡಿ’.

ಮುಖ್ಯಸ್ಥನಿಗೆ ಮನ ಕರಗಿ ಅದಕ್ಕೊಪ್ಪಿದ. ಭಾನು ವಾರವೆಂದರೆ ವಿಶ್ವದೆಲ್ಲಡೆ ರಜಾದಿನ ಎಂದಾಯಿತು.  ಭಾನುವಾರದ ಜೊತೆಗೆ ಎರಡನೇ ಶನಿವಾರದಂದೂ ರಜೆ ಸರಿಯೆನ್ನೋಣ. ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿ, ಸಂವಿಧಾನ ಶಿಲ್ಪಿ ಬಿ.ಆರ್. ಅಂಬೇಡ್ಕರ್ ಜಯಂತಿ, ಸ್ವಾತಂತ್ರ್ಯೋತ್ಸವ ದಿನಚಾರಣೆ, ಗಣರಾಜ್ಯೋತ್ಸವ ದಿನಾಚರಣೆ- ಈ ನಾಲ್ಕು ದಿನಗಳು ಮಾತ್ರವೆ ಒಂದು ವರ್ಷದಲ್ಲಿ ಸಾರ್ವತ್ರಿಕ ರಜಾ ದಿನಗಳನ್ನಾಗಿಸುವುದು ಯುಕ್ತ. ಈ ನಿಲುವಿಗೆ ಇತ್ತೀಚೆಗೆ  ವ್ಯಾಪಕ ಬೆಂಬಲ ದೊರಕುತ್ತಿರುವುದು ಪ್ರಗತಿಪರ ಬೆಳವಣಿಗೆ.

ಎಲ್ಲ ಧರ್ಮಗಳೂ ಕಾಯಕಕ್ಕೆ ಮೊದಲ ಆದ್ಯತೆ ಯನ್ನು ನೀಡುತ್ತವೆ. ‘ನೀನು ನಿನ್ನ ಪಾಲಿನ ಕರ್ತವ್ಯ ನಿರ್ವಹಿಸು. ಅದೇ ಯಶಸ್ಸಿನ ಹಾದಿ. ಅದೇ ಸ್ವರ್ಗ’ ಎಂದು ಸಾರುತ್ತವೆ. ‘ಕಾಯಕದಲಿ ನಿರತನಾದೊಡೆ ಗುರುದರ್ಶನವಾದರೂ ಮರೆಯಬೇಕು’ ಎನ್ನುವುದು ಶರಣ ಸಂದೇಶ. ‘ನಿನ್ನ ಕರ್ತವ್ಯ ನೀನು ನಿರ್ವಹಿಸು’ ಎನ್ನುವ ಹಿತೋಕ್ತಿ ಭಗವದ್ಗೀತೆಯದು. ಎಂದಮೇಲೆ ಮಾಡಬೇಕಾದ ಕೆಲಸವನ್ನು ಬದಿಗಿಟ್ಟು ಇಡೀ ದಿನ– ಸಂದರ್ಭ ಯಾವುದೇ ಇರಲಿ– ರಜೆಯೆಂಬ ಪರಿಕಲ್ಪನೆಯೆ ಅರ್ಥರಹಿತ. ಸರಣಿಯಲ್ಲಿ ಇಂತಿಷ್ಟು ರಜೆಗಳು ಬರುತ್ತವೆ... ಮನೆ ರಿಪೇರಿ ಮಾಡಿಸಬಹುದು, ಸುಣ್ಣ ಬಣ್ಣ ಹೊಡೆಸಬಹುದು. ಮನೆಗೆ ಅಗತ್ಯ ಪರಿಕರಗಳನ್ನು ಖರೀದಿಸಬಹುದು, ಪ್ರವಾಸ ಹೋಗಿ ಬರಬಹುದು, ಕಾರು ಕಲಿಯಬಹುದು ಮುಂತಾದ ಲೆಕ್ಕಾಚಾರಗಳೆ ಹೆಚ್ಚೆನ್ನುವುದು ನಿಷ್ಠುರ ಸತ್ಯ.

ಜಪಾನ್ ಮೇಲಿಂದ ಮೇಲೆ ಪ್ರಾಕೃತಿಕ ವಿಕೋಪಗಳಿಗೆ ತುತ್ತಾಗುವ ದೇಶ. ಭೂಕಂಪ, ಸುನಾಮಿ, ಜ್ವಾಲಾಮುಖಿಗಳ ತಾಂಡವವನ್ನು ಮೆಟ್ಟಿ ನಿಂತವರು ಅಲ್ಲಿನ ಜನ. ಅವರ ಕರ್ತೃತ್ವ ಶಕ್ತಿ ಎಷ್ಟರ ಮಟ್ಟಿನದೆಂದರೆ ಪ್ರತಿ ಬಾರಿ ಅನಾಹುತ ಸಂಭವಿಸಿ ದಾಗಲೂ ಇದು ಅಸ್ತಿತ್ವದ ಒಂದು ಭಾಗವೆನ್ನುವಂತೆ  ಅವರು ಬದುಕು ಕಟ್ಟಿಕೊಳ್ಳುತ್ತಾರೆ. ಅಚ್ಚರಿ ಅದಲ್ಲ. ಅಭಿವೃದ್ಧಿಶೀಲ ದೇಶಗಳಿಗೂ ಜಪಾನ್ ಸಹಾಯಹಸ್ತ ನೀಡುತ್ತದೆ!

ಇದೇನೂ ಪವಾಡವಲ್ಲ. ಎಂತಹುದೆ ಸನ್ನಿವೇಶ ದಲ್ಲೂ ಅಲ್ಲಿನ ಪ್ರಜೆಗಳು ತಮ್ಮ ದುಡಿಮೆ ಸ್ಥಗಿತ ಗೊಳಿಸುವುದಿಲ್ಲ. ನೌಕರರು ಬೇಡಿಕೆ ಮುಂದಿಡಲು ಸಂಪು ಎಂದರೆ ಹೆಚ್ಚನ ಅವಧಿ ಕೆಲಸ. ಸಾಧು– ಸಂತರು, ಸಾಧಕರು, ಕಲಾವಿದರು, ವಿಜ್ಞಾನಿಗಳು, ಸಾಹಿತಿಗಳು,  ಧೀಮಂತರು, ತಂತ್ರಜ್ಞರು ಮೊದಲಾದ ಶ್ರೇಷ್ಠರು ಎಲ್ಲ ಸಮುದಾಯಗಳಲ್ಲೂ ಸಂದಿದ್ದಾರೆ, ಸಲ್ಲುತ್ತಿದ್ದಾರೆ. ಮೂಲತಃ ಅವರು ಆಯಾ ಸಮುದಾಯಕ್ಕೆ ಮಾತ್ರವಲ್ಲದೆ ಇಡೀ ದೇಶ, ಅಷ್ಟೇಕೆ ವಿಶ್ವಕ್ಕೆ ಸೇರಿದವರು. ಮಹನೀಯರಿಗೆ ನಿಜವಾಗಿ ಗೌರವ ಅರ್ಪಿತವಾಗುವುದು ಅವರು ಹಾಕಿಕೊಟ್ಟ ಹಾದಿಯಲ್ಲಿ ಸಾಗುವುದರಿಂದ.

ಅವರ ನಡೆ ನುಡಿಗಳ ಪಾಲನೆಯಿಂದ. ಅವರಿಂದ ಪ್ರಭಾವಿತರಾಗುವು ದರಿಂದ. ಅವರ ಜೀವನವೆ ಸಂದೇಶವಾಗುವುದ ರಿಂದ. ರಜೆಯ ಆಚೆಗೂ ಸಂಪನ್ನರನ್ನು ಆದರ್ಶ ವನ್ನಾಗಿಸಿಕೊಳ್ಳಬಹುದು. ನಮ್ಮ ನಂಬಿಕೆ, ಆಚರಣೆ ಗಳು ಯಾವುದೆ ಇರಲಿ. ನಮ್ಮ ಕರ್ತವ್ಯ, ಹೊಣೆ ಗಾರಿಕೆಗಳಿಗಿರುವ ವ್ಯವಧಾನವನ್ನು ಅವು ಅತಿಕ್ರಮಿಸ ಬಾರದು. ಉದಾತ್ತರು, ಉನ್ನತರ ಸ್ಮರಣೆ ನಿಮಿತ್ತ ರಜೆಗಳಿಗೆ ಸರ್ಕಾರವನ್ನು ಒತ್ತಾಯಿಸಹೊರಟರೆ ವರ್ಷದ ಎಲ್ಲ ದಿನಗಳಲ್ಲೂ ರಜೆ ಘೋಷಿಸ ಬೇಕಾದೀತು! ಶಿಕ್ಷಣತಜ್ಞ ಡಾ.ಎಚ್. ನರಸಿಂಹಯ್ಯ ಅವರು ತಾವು ಗತಿಸಿದಾಗ ಯಾವುದೇ ಶಿಕ್ಷಣ ಸಂಸ್ಥೆಗೂ ರಜೆ ಕೊಡಬಾರದೆಂದು ಹೇಳಿದ್ದುದು ಅನುಪಮ.

ರಜೆಗಳ ಮಹಾಪೂರದ ಇನ್ನೊಂದು ಮಗ್ಗುಲು ನೋಡೋಣ.  ಅಮೆರಿಕದ ಖ್ಯಾತ ಪರ್ತಕರ್ತೆ, ಟಿ.ವಿ. ಕಲಾವಿದೆ ಜಿಯಾಡ ಡೇ ಲಾರೆಂಟಿಸ್‌ರ ‘ರಜೆಗಳು ಒತ್ತಡವನ್ನೇ ಸೃಷ್ಟಿಸುತ್ತವೆ, ಸಡಗರವನ್ನು ಸರಳೀಕರಿಸುವುದೇ ಜಾಣತನ’ ಎನ್ನುವ ನುಡಿ ಅರ್ಥಪೂರ್ಣ. ಸ್ವಾರಸ್ಯವೆಂದರೆ ದೀರ್ಘ ರಜೆಯಲ್ಲಿ ಇರುವವರಲ್ಲಿ ಕೆಲವರಾದರೂ ರಜೆ ಕಡಿತಗೊಳಿಸಿ, ಕರ್ತವ್ಯ ತಾಣದಲ್ಲಿ ದಿಢೀರನೆ ಪ್ರತ್ಯಕ್ಷರಾಗಿ ‘ಮನೆಯಲ್ಲಿ ಕೂತು ಮಾಡುವುದೇನು’ ಅಂತ ರಾಗ ಎಳೆಯುವುದುಂಟು!

ಸಾಲು ರಜೆ. ಎಗ್ಗಿಲ್ಲದ ಬಿಡುವೂ ಒಂದು ಬಗೆಯ ಬಂಧನವೆ ತಾನೆ. ರಜೆ ಮುಗಿದು ಕಾರ್ಯಕ್ಷೇತ್ರಕ್ಕೆ ಮರಳಿದಾಗ ಕೈ, ಕಾಲು ಮರಗಟ್ಟಿರುತ್ತವೆ. ಎಂದಿನಂತೆ ಕೆಲಸಕ್ಕೆ ಹೊಂದಿಕೊಳ್ಳಲು ಮನಸ್ಸಿಗೆ ಸಮಯ ಹಿಡಿಸುತ್ತದೆ.  ಮೇಜಿನ ಮೇಲೆ ಕಡತಗಳ ರಾಶಿ. ಅರ್ಜಿ, ಅಹವಾಲುದಾರರು, ಗ್ರಾಹಕರಿಗೆ ಉಪಟಳವಾಯಿತಲ್ಲ ಎನ್ನುವ ಬೇಸರೆ. ರಜೆ ಬೇಡವೆಂದಲ್ಲ. ಅವು ಅವ್ಯಾಹತವಾಗದಂತೆ ಕಡಿವಾಣ ಅಗತ್ಯ.  ನಿಲ್ಲಿ ರಜೆಗಳೆ... ಅಷ್ಟು ಕಡತ ಕರಗಿಸಿ ಎನ್ನೋಣವೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT