ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಮ್ಜಾನ್‌ ವ್ರತಕ್ಕೆ ಭಂಗ ತಂದ ಶಿವಸೇನಾ ಸಂಸದ

Last Updated 23 ಜುಲೈ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ/ಐಎಎನ್‌ಎಸ್‌): ಕಳಪೆ ಊಟ ನೀಡಿದ್ದಕ್ಕಾಗಿ ಸಿಟ್ಟಿಗೆದ್ದ ಶಿವಸೇನಾ ಸಂಸದರೊಬ್ಬರು ಇಲ್ಲಿಯ ಮಹಾ­ರಾಷ್ಟ್ರ ಸದನದ ಮುಸ್ಲಿಂ ನೌಕರ­ರೊಬ್ಬರಿಗೆ ಬಲವಂತವಾಗಿ ಚಪಾತಿ ತಿನ್ನಿಸಲು ಹೋದ ಘಟನೆಗೆ ದೇಶ­ದಾದ್ಯಂತ ತೀವ್ರ ಖಂಡನೆ ವ್ಯಕ್ತವಾ­ಗಿದ್ದು, ಬುಧವಾರ ಸಂಸತ್ತಿ­ನಲ್ಲಿಯೂ ಕೋಲಾ­ಹಲಕ್ಕೆ ಕಾರಣ­ವಾಗಿದೆ.

ಮುಸ್ಲಿಂ ನೌಕರ ರಮ್ಜಾನ್‌ ಉಪ­ವಾಸ­ದಲ್ಲಿ ತೊಡಗಿಕೊಂಡಿರುವುದು   ಘಟ­­ನೆ ತೀವ್ರತೆ ಹೆಚ್ಚಿಸಿದೆ. ಘಟನೆ  ಹಿನ್ನೆ­ಲೆಯಲ್ಲಿ  ಕಾಂಗ್ರೆಸ್‌ ಪಕ್ಷ, ಎನ್‌ಡಿಎ ಸರ್ಕಾರದ ಮೇಲೆ ಹರಿ­ಹಾ­ಯ್ದಿದೆ. ದೇಶದ ಜಾತ್ಯತೀತ ನೆಲೆಗಟ್ಟಿನ ಮೇಲೆ ನಡೆದ ದಾಳಿ ಇದು ಎಂದು  ಟೀಕಿ­ಸಿದೆ. ಈ ವಿಚಾರವಾಗಿ ವಿರೋಧ­ಪಕ್ಷ­­ಗಳು ಗದ್ದಲ ಎಬ್ಬಿಸಿದ್ದರಿಂದ ಸಂಸ­ತ್ತಿನ ಉಭಯ ಸದನಗಳಲ್ಲೂ ಬುಧ­ವಾರ ಕಲಾಪ ಮುಂದೂಡ ಬೇಕಾಯಿತು.

ಒತ್ತಡಕ್ಕೆ ಮಣಿದ ಬಿಜೆಪಿ: ತನ್ನ ಪ್ರಮುಖ ಮಿತ್ರಪಕ್ಷವಾದ ಶಿವಸೇನೆ ಸಂಸದರು ಈ ಪ್ರಕರಣದಲ್ಲಿ ಭಾಗಿ­ಯಾಗಿದ್ದರಿಂದ ಮೊದಲಿಗೆ ಪ್ರತಿಕ್ರಿಯಿ­ಸಲು ನಿರಾಕರಿಸಿದ್ದ ಸರ್ಕಾರ, ವಿರೋಧ ಪಕ್ಷಗಳ ಒತ್ತಡಕ್ಕೆ ಮಣಿದು ಘಟನೆ ಕುರಿತು ತನಿಖೆ ನಡೆಸುವುದಾಗಿ ಸಂಸತ್ತಿನಲ್ಲಿ ಹೇಳಿಕೆ ನೀಡಿದೆ.

ಕೃತ್ಯ ಸಮರ್ಥಿಸಿಕೊಂಡ ಸಂಸದ:  ಈ ವಿವಾ­ದದ ಕೇಂದ್ರಬಿಂದು ಶಿವಸೇನಾ ಸಂಸದ ರಾಜನ್‌ ವಿಚಾರೆ ಈಗ ಕ್ಷಮೆ ಯಾಚಿಸಿದ್ದಾರೆ. ಆದರೆ, ತಮ್ಮ ಕೃತ್ಯ­ವನ್ನು ಸಮರ್ಥಿಸಿಕೊಂಡಿದ್ದಾರೆ. ನೌಕ­ರನು ತನ್ನ ಹೆಸರು ಸೂಚಿಸುವ  ಬ್ಯಾಡ್ಜ್‌ ಧರಿಸಿದ್ದರೂ ಆತನ ಧರ್ಮದ ಕುರಿತು ತಿಳಿದಿರಲಿಲ್ಲ ಎಂದು  ಹೇಳಿದ್ದಾರೆ.

ಉದ್ಧವ್‌ ಠಾಕ್ರೆ ಪ್ರತಿಕ್ರಿಯೆ: ಶಿವಸೇನಾ ನಾಯಕ ಉದ್ಧವ್‌ ಠಾಕ್ರೆ, ಈ ಸಣ್ಣ ಘಟನೆಗೆ ಕೋಮು ಬಣ್ಣ ಬಳಿಯಲು ಯತ್ನಿಸಲಾಗುತ್ತಿದೆ. ನಾವು ಹಿಂದುತ್ವ ಪ್ರತಿಪಾದಕರು ಎಂಬುದು ನಿಜ. ಆದರೆ ನಮಗೆ ಇತರ ಧರ್ಮಗಳ ಬಗ್ಗೆ ದ್ವೇಷದ ಭಾವನೆ ಇಲ್ಲ. ಇದು ನಮ್ಮ ಪಕ್ಷದ ಧ್ವನಿಯನ್ನು ಉಡುಗಿಸುವ ಯತ್ನವಲ್ಲದೆ ಬೇರೇನೂ ಅಲ್ಲ ಎಂದು ಹೇಳಿದ್ದಾರೆ.

ಗೃಹಸಚಿವ ರಾಜನಾಥ್‌ ಸಿಂಗ್‌ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ಈ ಬಗ್ಗೆ ಪ್ರತಿಕ್ರಿಯಿಸುವ ಗೋಜಿಗೆ ಹೋಗಿಲ್ಲ.

ಮಹಾರಾಷ್ಟ್ರ ಸದನದಲ್ಲಿ ನಡೆದದ್ದೇನು?: ಮಹಾರಾಷ್ಟ್ರ ಸದನದಲ್ಲಿ (ಮಹಾರಾಷ್ಟ್ರ ಸರ್ಕಾರದ ಅಧಿಕೃತ ಅತಿಥಿ ಗೃಹ)  ಕಳಪೆ ಆಹಾರ ಪೂರೈಕೆ ಮಾಡಲಾಗುತ್ತಿದೆ ಎಂದು ಸಿಟ್ಟಿಗೆದ್ದ ಶಿವಸೇನೆ ಸಂಸದ ರಾಜನ್‌ ವಿಚಾರೆ ಅವರು ಐಆರ್‌ಸಿಟಿಸಿ (ಭಾರತೀಯ ರೈಲ್ವೆ ಆಹಾರ ಪೂರೈಕೆ ಮತ್ತು ಪ್ರವಾಸೋದ್ಯಮ ನಿಗಮ) ಆಹಾರ ಪೂರೈಕೆ ಮೇಲ್ವಿಚಾರಕ ಅರ್ಷದ್‌ ಜುಬೈರ್‌ ಅವರ ಬಾಯಿಗೆ ಬಲವಂತ­ವಾಗಿ ಚಪಾತಿ ತುರುಕಿದ ದೃಶ್ಯ ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗಿತ್ತು.

ವಾರದ ಹಿಂದೆ ನಡೆದ ಈ ಘಟನೆ ಬುಧವಾರ ಕೆಲ ಪತ್ರಿಕೆಗಳಲ್ಲೂ ಪ್ರಕಟ­ವಾಗಿ ವಿವಾದ ಹೆಮ್ಮರ­ವಾಯಿತು. ಮಹಾರಾಷ್ಟ್ರ ಸದನದಲ್ಲಿ ಕಳಪೆ ಆಹಾರ ಪೂರೈಕೆ ಆಗುತ್ತಿರುವ ಕುರಿತ ರಾಜ್ಯಸಭೆಯ ಒಬ್ಬ ಸದಸ್ಯ ಸೇರಿದಂತೆ ಶಿವಸೇನೆಯ 11 ಲೋಕಸಭಾ ಸದಸ್ಯರು ಮಹಾರಾಷ್ಟ್ರ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಈ ಮೊದಲೇ ದೂರು ಸಲ್ಲಿಸಿದ್ದರು.

ನನಗೆ ಆತ ಮುಸ್ಲಿಂ ಸಮುದಾ­ಯ­­ದ­ವನೆಂದೂ ಅಥವಾ ರಮ್ಜಾನ್‌ ಉಪವಾಸ ಕೈಗೊಂಡಿದ್ದಾನೆಂದೂ ತಿಳಿದಿರಲಿಲ್ಲ. ಆತನಿಗೆ (ಆಹಾರ ಪೂರೈಕೆ  ಮೇಲ್ವಿ­ಚಾರಕ) ಕಳಪೆ ಆಹಾ­ರ­ವನ್ನು ನೀವು ತಿನ್ನು­ವಿರೇನು ಎಂದು ಕೇಳಿದೆನೇ ಹೊರತು ತಿನ್ನು­ವಂತೆ ಬಲವಂತ ಮಾಡಲಿಲ್ಲ. ಆದರೆ, ಇದು ಕೋಮು ವಿವಾದಕ್ಕೆ ತಿರುಗಿ­ರುವುದು ಖೇದದ ಸಂಗತಿ. ನಮಗೆ ಎಲ್ಲ ಸಮು­ದಾಯ­ದವರು ಮತ ನೀಡಿದ್ದಾರೆ. ನಾವು ಇಫ್ತಾರ್‌ ಕೂಟ­ಗಳಲ್ಲಿ ಭಾಗವಹಿಸುತ್ತೇವೆ
– ರಾಜನ್‌ ವಿಚಾರೆ

ಇಸ್ಲಾಂ ಧರ್ಮೀಯನ ರಮ್ಜಾನ್‌  ಉಪವಾಸ ವ್ರತವನ್ನು ಬಲವಂತವಾಗಿ ಮುರಿದಿದ್ದರೆ ಅದನ್ನು ನಾನು ಒಪ್ಪು­ವುದಿಲ್ಲ. ಹೀಗೆ ಮಾಡು­ವುದು ತಪ್ಪು
– ಎಲ್‌.ಕೆ. ಅಡ್ವಾಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT