ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಮ್ಯಾ ಅತ್ಯಂತ ಕಿರಿಯ ವಯಸ್ಸಿನ ಸಂಸದೆ

ಮಂಡ್ಯ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದ ಮೊದಲ ಮಹಿಳೆ
Last Updated 24 ಆಗಸ್ಟ್ 2013, 10:35 IST
ಅಕ್ಷರ ಗಾತ್ರ

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ನಟಿ, ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ಅವರು, ಮಂಡ್ಯ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದ ಮೊದಲ ಮಹಿಳೆ ಹಾಗೂ ಸಂಸತ್ತಿನ ಅತಿ ಕಿರಿಯ ವಯಸ್ಸಿನ ಸಂಸದೆ ಎಂಬ ಕೀರ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ನಟಿ, ಕಾಂಗ್ರೆಸ್ ಅಭ್ಯರ್ಥಿ ರಮ್ಯಾ (ದಿವ್ಯ ಸ್ಪಂದನ) ತಮ್ಮ ಪ್ರತಿಸ್ಪರ್ಧಿ ಜೆಡಿ(ಎಸ್) ಪಕ್ಷದ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ವಿರುದ್ಧ 67,611 ಮತಗಳ ಬಾರಿ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಒಟ್ಟು ಚಲಾವಣೆಯಾದ 9,42,453 ಮತಗಳ ಪೈಕಿ ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ಅವರು 4,48,085 ಮತ ಪಡೆದಿದ್ದರೆ, ಜೆಡಿಎಸ್ ಅಭ್ಯರ್ಥಿ ಸಿ.ಎಸ್. ಪುಟ್ಟರಾಜು ಅವರು 4,16,474 ಮತ ಗಳಿಸಿದ್ದಾರೆ.

ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಮೇಲುಕೋಟೆಯನ್ನು ಹೊರತುಪಡಿಸಿದರೆ, ಉಳಿದ ಕ್ಷೇತ್ರಗಳಲ್ಲಿ ರಮ್ಯಾ ಅವರೇ ಹೆಚ್ಚಿನ ಮತಗಳನ್ನು ಪಡೆದಿದ್ದಾರೆ. ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರಿದ್ದು, ಅವರು ಪ್ರತಿನಿಧಿಸುವ ಯಾವುದೇ ಕ್ಷೇತ್ರದಲ್ಲಿಯೂ ಜೆಡಿಎಸ್ ಮುನ್ನಡೆ ಪಡೆದುಕೊಂಡಿಲ್ಲ ಎನ್ನುವುದು ಗಮನಾರ್ಹ.

ಮೊದಲ ಸುತ್ತಿನಿಂದಲೇ ಮುನ್ನಡೆಯನ್ನು ಸಾಧಿಸಿದ ರಮ್ಯಾ ಅವರು, ಕೊನೆಯವರೆಗೂ ಗೆಲುವಿನ ಅಂತರವನ್ನು ಹೆಚ್ಚಿಸಿಕೊಳ್ಳುತ್ತಲೇ ಸಾಗಿದರು.

`ನನ್ನನ್ನು ಬಾರಿ ಮತಗಳ ಅಂತರದಿಂದ ಗೆಲ್ಲಿಸಿದ್ದಕ್ಕೆ ಮತದಾರರಗೆ ಕೃತಜ್ಞಳಾಗಿದ್ದೇನೆ. ನನ್ನ ಕೌಟುಂಬಿಕ ಹಿನ್ನೆಲೆ ಕುರಿತು ಪ್ರಶ್ನಿಸಿದವರಿಗೆ ಮತದಾರರೇ ಉತ್ತರಿಸಿದ್ದಾರೆ. ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ' ಎಂದು ರಮ್ಯಾ ಅವರು ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.

ಮಂಡ್ಯ ಲೋಕಸಭಾ ಕ್ಷೇತ್ರವು ಮೈಸೂರು ಜಿಲ್ಲೆಯ ಕೃಷ್ಣರಾಜನಗರ ವಿಧಾನಸಭಾ ಕ್ಷೇತ್ರ ಒಳಗೊಂಡಂತೆ ಒಟ್ಟು 8 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಆ. 21ರಂದು ನಡೆದ ಮತದಾನದಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿ ಶೇ 58.28 ರಷ್ಟು ಮತ ಚಲಾವಣೆ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT