ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಮ್ಯಾ, ಡಿ.ಕೆ.ಸುರೇಶ್ ಭರ್ಜರಿ ಗೆಲುವು

ಮಂಡ್ಯ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಉಪ ಚುನಾವಣೆ
Last Updated 24 ಆಗಸ್ಟ್ 2013, 11:42 IST
ಅಕ್ಷರ ಗಾತ್ರ

ಬೆಂಗಳೂರು: ಆಡಳಿತಾರೂಢ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ನೇರ ಹಣಾಹಣಿಗೆ ವೇದಿಕೆಯಾಗಿದ್ದ ಮಂಡ್ಯ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾದ ನಟಿ ರಮ್ಯಾ ಮತ್ತು ಡಿ.ಕೆ.ಸುರೇಶ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಜೆಡಿಎಸ್ ಭದ್ರಕೋಟೆ ಛಿದ್ರ ಮಾಡಿರುವ 'ಕೈ' ತನ್ನ ಪ್ರತಿಷ್ಠೆ ಕಾಯ್ದುಕೊಂಡಿದೆ.

ಮಂಡ್ಯ ಕ್ಷೇತ್ರದಲ್ಲಿ ಚಲಾವಣೆಯಾದ ಒಟ್ಟು 9,42,000 ಮತಗಳಲ್ಲಿ ರಮ್ಯಾ (ದಿವ್ಯ ಸ್ಪಂದನ) ಅವರು 4,84,085 ಮತ ಪಡೆಯುವ ಮೂಲಕ ತಮ್ಮ ಪ್ರತಿಸ್ಪರ್ಧಿ ಜೆಡಿಎಸ್ ಅಭ್ಯರ್ಥಿ ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು (4,16,474) ಅವರನ್ನು 67,611 ಮತಗಳ ಅಂತರದಿಂದ ಸೋಲಿಸುವ ಮೂಲಕ ಜೆಡಿಎಸ್ ಭದ್ರಕೋಟೆಯ ಮೇಲೆ 'ಕೈ' ಪತಾಕೆ ಹಾರಿಸಿದ್ದಾರೆ.

ಇನ್ನೂ, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಚಲಾವಣೆಯಾದ ಒಟ್ಟು 10,52,083 ಮತಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ ಡಿ.ಕೆ. ಸುರೇಶ್ ಅವರು 5,78,608 ಮತಗಳನ್ನು ಪಡೆದು ತಮ್ಮ ಪ್ರತಿಸ್ಪರ್ಧಿಯಾದ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ (4,41,601 ಮತ) ಅವರನ್ನು 1,37,007 ಮತಗಳ ಭಾರಿ ಅಂತರದಿಂದ ಪರಾಭವಗೊಳಿಸಿದರು.

ಈ ಉಪ ಚುನಾವಣೆ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದರೆ, ಜೆಡಿಎಸ್‌ಗೆ ತನ್ನ ಭದ್ರಕೋಟೆ ಉಳಿಸಿಕೊಳ್ಳುವ ಸಂಕಷ್ಟ ತಂದೊಡ್ಡಿತ್ತು. ಕೊನೆಗೂ ಇದರಲ್ಲಿ ಕಾಂಗ್ರೆಸ್ ಮೆಲುಗೈ ಸಾಧಿಸಿದೆ.

ಎಚ್.ಡಿ.ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ತೆರವಾದ ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಅವರ ಪತ್ನಿ ಅನಿತಾ ಅವರನ್ನು ಕಣಕ್ಕೆ ಇಳಿಸಲಾಗಿತ್ತು. ಕಾಂಗ್ರೆಸ್ ವತಿಯಿಂದ ಡಿ.ಕೆ. ಶಿವಕುಮಾರ್ ಅವರ ಸಹೋದರ ಡಿ.ಕೆ.ಸುರೇಶ ಸ್ಪರ್ಧಿಸಿದ್ದರು. ಇವರಲ್ಲದೆ, 11 ಮಂದಿ ಪಕ್ಷೇತರರು ಕಣದಲ್ಲಿದ್ದರು.

ಎನ್.ಚೆಲುವರಾಯಸ್ವಾಮಿ ಅವರ ರಾಜೀನಾಮೆಯಿಂದ ತೆರವಾದ ಮಂಡ್ಯ ಕ್ಷೇತ್ರದಲ್ಲಿ ಜೆಡಿಎಸ್ ಪಾಂಡವಪುರದ ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಅವರನ್ನು ಕಣಕ್ಕೆ ಇಳಿಸಿದರೆ, ಇವರಿಗೆ ಪೈಪೋಟಿ ನೀಡಲು ಕಾಂಗ್ರೆಸ್ ನಟಿ ರಮ್ಯಾ ಅವರನ್ನು ಅಖಾಡಕ್ಕೆ ಇಳಿಸಿತ್ತು.







 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT