ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರವಿವರ್ಮನ ಕುಂಚದ ಭಾವಲೋಕದ ಬಿಂಬಗಳು

Last Updated 22 ಜುಲೈ 2016, 19:30 IST
ಅಕ್ಷರ ಗಾತ್ರ

ಗಣೇಶ ವಿ.ಶಿವಸ್ವಾಮಿ ವೃತ್ತಿಯಲ್ಲಿ ವಕೀಲರು. ತಮ್ಮ 13ನೇ ವಯಸ್ಸಿನಿಂದಲೇ ರಾಜಾ ರವಿವರ್ಮನ ಲಿಥೋಗ್ರಫಿ ಕಲಾಕೃತಿಗಳನ್ನು ಸಂಗ್ರಹಿಸುವ ಹವ್ಯಾಸ ರೂಢಿಸಿಕೊಂಡರು. ಕಳೆದ 25 ವರ್ಷಗಳಿಂದ ಈ ಕಾಯಕ ಮುಂದುವರಿಸಿಕೊಂಡು ಬಂದಿದ್ದಾರೆ.

ಇದುವರೆಗೆ ಲಭ್ಯವಿರುವ ರವಿವರ್ಮನ 131 ಕಲಾಕೃತಿಗಳ ಪೈಕಿ 126 ಲಿಥೋಗ್ರಫಿ ಕಲಾಕೃತಿಗಳು ಗಣೇಶ್‌ ಅವರ ವೈಯಕ್ತಿಕ ಸಂಗ್ರಹದಲ್ಲಿವೆ. ಕಳೆದ ಒಂದು ವರ್ಷದಿಂದ ‘ರಾಜಾ ರವಿವರ್ಮ ಹೆರಿಟೇಜ್‌ ಫೌಂಡೇಶನ್‌’ನ ಗೌರವ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ರವಿವರ್ಮನ ಕಲಾಕೃತಿಗಳ ಕುರಿತಾದ ತಮ್ಮ ವ್ಯಾಮೋಹ, ಕಾಳಜಿ, ಪ್ರತಿಷ್ಠಾನದ ಕಾರ್ಯವೈಖರಿಗಳ ಕುರಿತು ಗಣೇಶ್‌ ಇಲ್ಲಿ ಮಾತನಾಡಿದ್ದಾರೆ.

*ರಾಜಾ ರವಿವರ್ಮನ ಕಲಾಕೃತಿಗಳತ್ತ ಆಸಕ್ತಿ ಹುಟ್ಟಿಕೊಂಡಿದ್ದು ಹೇಗೆ?
ಎಲ್ಲ ಮನೆಯಲ್ಲಿಯೂ ಇರುವಂತೆ ನಮ್ಮ ಮನೆಯಲ್ಲಿಯೂ ಲಕ್ಷ್ಮೀ ಮತ್ತು ಸರಸ್ವತಿ ಚಿತ್ರಗಳಿದ್ದವು. ಒಮ್ಮೆ ನನ್ನ ದೊಡ್ಡಮ್ಮ ಬಂದು ಸರಸ್ವತಿ ಫೋಟೊವನ್ನು ತೆಗೆದುಕೊಂಡು ಹೋದರು.

ಆಗ ನನ್ನಮ್ಮ ಲಕ್ಷ್ಮಿಯ ಜತೆಗಿದ್ದ ಸರಸ್ವತಿಯ ಚಿತ್ರ ಹೋಯಿತಲ್ಲಾ ಎಂದು ಬೇಸರ ಮಾಡಿಕೊಂಡರು. ಆಗ ನಾನು ‘ನಾವೂ ಒಂದು ಸರಸ್ವತಿ ಚಿತ್ರ ಕೊಂಡುಕೊಳ್ಳೋಣ’ ಎಂದು ಸಮಾಧಾನ ಮಾಡಿ, ಅಂಗಡಿಗೆ ಹೋದೆ.

ಆಗ ನಾನಿನ್ನೂ 13 ವರ್ಷದ ಚಿಕ್ಕ ಹುಡುಗ. ಆ ಅಂಗಡಿಯ ಮಾಲೀಕ ಸರಸ್ವತಿಯದೇ ಎರಡು ರೀತಿಯ ಚಿತ್ರಗಳನ್ನು ತೋರಿಸಿದರು. ಅವೆರಡೂ ನಮ್ಮ ಮನೆಯಲ್ಲಿದ್ದ ಚಿತ್ರಗಳಿಗಿಂತ ಭಿನ್ನವಾಗಿತ್ತು. ನಾನು ‘ಇವಲ್ಲ, ನನಗೆ ರವಿ ವರ್ಮ ಬಿಡಿಸಿದ ಸರಸ್ವತಿಯೇ ಬೇಕು’ ಎಂದೆ. ಆಗ ಮಾಲೀಕರು ‘ಇದು ರವಿವರ್ಮನೇ ಬಿಡಿಸಿದ್ದು. ಅಪರೂಪದ ಚಿತ್ರಗಳು’ ಎಂದರು.

ಆಗ ನನಗೆ ‘ರವಿರ್ಮನೆ ಬಿಡಿಸಿದ್ದೇ ಮೂರು ರೀತಿಯ ಸರಸ್ವತಿಗಳಿವೆಯಾ?’ ಕುತೂಹಲ ಹುಟ್ಟಿಕೊಂಡಿತು. ಇನ್ನೂ ಎಷ್ಟು ಚಿತ್ರಗಳು ಹೀಗೆ ಇರಬಹುದು ಎಂದು ಆಸಕ್ತಿ ಬೆಳೆಯತೊಡಗಿತು. ರವಿವರ್ಮನ ಕಲಾಕೃತಿಗಳ ಕಡೆಗಿನ ಒಲವು ಹುಟ್ಟಿಕೊಂಡಿದ್ದು ಹೀಗೆ.

*ರವಿವರ್ಮನ ಕೃತಿಗಳ ಸಂಗ್ರಹದ ಅನುಭವ ಹಂಚಿಕೊಳ್ಳಿ
ದಿನದಿಂದ ದಿನಕ್ಕೆ ರವಿವರ್ಮನ ಕಲಾಕೃತಿಗಳ ಕುರಿತು ಆಸಕ್ತಿ ಬೆಳೆಯುತ್ತ  ಹೋಯಿತು. ನಂತರ ನಾನು ವಕೀಲನಾಗಿ ವೃತ್ತಿ ಆರಂಭಿಸಿದಾಗ ಬೇರೆ ಬೇರೆ ಸ್ಥಳಗಳಿಗೆ ತೆರಳಬೇಕಾಗಿ ಬರುತ್ತಿತ್ತು. ನಾನು ಹೋದಲ್ಲೆಲ್ಲ ಬಿಡುವು ಮಾಡಿಕೊಂಡು ರವಿವರ್ಮನ ಕಲಾಕೃತಿಗಳನ್ನು ಅರಸಿಕೊಂಡು ಅಲೆಯುತ್ತೇನೆ.

ಹಾಗೆ ಹೋದಾಗಲೆಲ್ಲ ಜನರು ಬಿಸಾಕಿದ– ಸುಟ್ಟು ಹಾಕಿದ ಕಲಾಕೃತಿಗಳನ್ನು ಕಂಡೆ. ನಮ್ಮ ಕಲೆಗಳ ಬಗ್ಗೆ ಜನರಿಗಿರುವ ನಿರ್ಲಕ್ಷ್ಯ ನನ್ನನ್ನು ತೀವ್ರವಾಗಿ ಕಾಡತೊಡಗಿತು. ಅಮೂಲ್ಯ ಕಲಾಕೃತಿಗಳನ್ನು ರಕ್ಷಿಸುವುದೂ ಅಷ್ಟೇ ಮುಖ್ಯ ಅನಿಸತೊಡಗಿತು. ಆದ್ದರಿಂದ ಕಲೆಗಳನ್ನು ರಕ್ಷಿಸುವ ನಿಟ್ಟಿನಲ್ಲಿಯೂ ಕಾರ್ಯೋನ್ಮುಖನಾದೆ.


ಹೀಗೆ ನಾನು ಸಾಕಷ್ಟು ಸಂಖ್ಯೆಯ ಕಲಾಕೃತಿಗಳನ್ನು ರಕ್ಷಿಸಿದ್ದೇನೆ. ರವಿವರ್ಮನ ಕಲಾಕೃತಿಗಳನ್ನಷ್ಟೇ ಅಲ್ಲ, ಕರ್ನಾಟಕದವರೇ ಹಲವಾರು ಶ್ರೇಷ್ಠ ಕಲಾವಿದರ ಕಲಾಕೃತಿಗಳು ನಿರ್ಲಕ್ಷ್ಯಕ್ಕೆ ಒಳಗಾಗಿ ನಾಶವಾಗುತ್ತಿವೆ. ಅವುಗಳನ್ನೂ ಸಾಧ್ಯವಾದಷ್ಟೂ ರಕ್ಷಿಸಿದ್ದೇನೆ.

*‘ಲಿಥೋಗ್ರಫಿ’ ಕುರಿತು ಹೇಳಿ.
ಲಿಥೋಗ್ರಫಿ ಅಂದರೆ ನಕಲು ಮಾಡಿ ಮುದ್ರಿಸುವುದು ಎಂಬ ಸರಳ ರೀತಿಯಲ್ಲಿಯೇ ಅರ್ಥ ಮಾಡಿಕೊಳ್ಳುತ್ತಾರೆ. ಆದರೆ ಅದು ಅಷ್ಟು ಸುಲಭವಲ್ಲ.
ರವಿವರ್ಮನ ಮೂಲ ಕಲಾಕೃತಿಗಳನ್ನು ಕೊಂಡುಕೊಳ್ಳುವ ಶಕ್ತಿ ಎಲ್ಲರಿಗೂ ಇರುವುದಿಲ್ಲ. ರವಿವರ್ಮ ಬಿಡಿಸಿದ ಲಕ್ಷ್ಮಿಯ ಒರಿಜಿನಲ್‌ ಕಲಾಕೃತಿಯನ್ನು ನೋಡಬೇಕು ಎಂದರೆ ಬರೋಡಾ ಅರಮನೆಗೆ ಹೋಗಬೇಕು. ಅದೂ ಒಂದೆರಡು ನಿಮಿಷವಷ್ಟೇ ನೋಡಲು ಸಾಧ್ಯವಾಗುತ್ತದೆ.

ಆ ರವಿವರ್ಮ ನಮ್ಮ ಮನೆಗಳಿಗೆ ಬಂದಿರುವುದು ಲಿಥೋಗ್ರಾಫಿ ಮೂಲಕ. ಒರಿಜಿನಲ್‌ ಕಲಾಕೃತಿಯ ನಕಲೇ ಲಿಥೋಗ್ರಫಿ. ಆದರೆ ಇಂದಿನ ಕಾಲದ ಕಂಪ್ಯೂಟರ್‌ ನಕಲು ಮಾಡಿದ ಹಾಗಲ್ಲ. 1894ರಲ್ಲಿ ನಕಲು ಮಾಡುವ ಪ್ರಕ್ರಿಯೆ ಹೀಗಿರಲಿಲ್ಲ.

ಲಿಥೋ ಅಂದ್ರೆ ಗ್ರೀಕ್‌ನಲ್ಲಿ ಕಲ್ಲು ಎಂದು ಅರ್ಥ. ಆಗ ಒಂದು ಕಲಾಕೃತಿಗಳನ್ನು ನಕಲು ಮಾಡಲು ಸುಣ್ಣದ ಸ್ಲಾಬ್‌ ಬಳಸುತ್ತಿದ್ದರು.  ಒಂದು ಕಲಾಕೃತಿ ನಕಲು ಮಾಡಲು ಹದಿನಾರರಿಂದ ಮೂವತ್ತು ಸ್ಲಾಬ್‌ಗಳು ಬೇಕಾಗುತ್ತದೆ. ಒಂದೊಂದು ಸ್ಲಾಬ್‌ನಲ್ಲಿಯೂ ಒಂದೊಂದು ಬಣ್ಣ ಹಾಕುತ್ತಾರೆ. ಅದಾದ ಮೇಲೆ ಅವುಗಳನ್ನು ಸೇರಿಸಿ ಒಂದು ಕಲಾಕೃತಿ ರಚಿಸಲಾಗುತ್ತಿತ್ತು. ಅದೊಂದು ಕಠಿಣ ಪ್ರತಿಕ್ರಿಯೆ.

*ಈ ಪ್ರದರ್ಶನದಲ್ಲಿ ಎಷ್ಟು ಲಿಥೋಗ್ರಫಿ ಕಲಾಕೃತಿಗಳಿವೆ.
ಇಟಾಲಿಯನ್ ಸಂಸ್ಥೆಯೊಂದು ಮಾಡಿರುವ ಅಂದಾಜಿನ ಪ್ರಕಾರ ರವಿವರ್ಮನ 134 ಕಲಾಕೃತಿಗಳು ಇವೆ. ಈ ಪ್ರದರ್ಶನಲ್ಲಿ 131 ಕಲಾಕೃತಿಗಳು ಇವೆ. ನಾನು ಕಳೆದ 25 ವರ್ಷಗಳಿಂದ ರವಿವರ್ಮನ ಕಲಾಕೃತಿಗಳ ಲಿಥೋಗ್ರಫಿ ಸಂಗ್ರಹಿಸುತ್ತಿದ್ದೇನೆ. ಮಿಕ್ಕ ಮೂರು ಕಲಾಕೃತಿಗಳನ್ನು ನಾನು ನೋಡಿಯೇ ಇಲ್ಲ. ಅದು ಯಾವುದು ಅಂತಲೂ ಗೊತ್ತಿಲ್ಲ. ಆದ್ದರಿಂದ ನನ್ನ ಪ್ರಕಾರ 131 ಕಲಾಕೃತಿಗಳು ಮಾತ್ರ ಇರುವುದು. ಅವುಗಳಲ್ಲಿ 126 ನನ್ನ ವೈಯಕ್ತಿಕ ಸಂಗ್ರಹದಲ್ಲಿನ ಕಲಾಕೃತಿಗಳು. ಆ ಎಲ್ಲ ಕಲಾಕೃತಿಗಳೂ ಈಗ ಎನ್‌ಜಿಎಂಎದಲ್ಲಿ ಪ್ರದರ್ಶಿತಗೊಳ್ಳುತ್ತಿವೆ.

*ಕಲೆಗಳ ಬಗ್ಗೆ ಜಾಗೃತಿ ಮೂಡಿಸುವುದು ಹೇಗೆ?
ಕಲಾಕೃತಿಗಳ ಪ್ರದರ್ಶನ ಮಾಡುವುದೇ ಸೂಕ್ತ ದಾರಿ. ಈಗ ಎನ್‌ಜಿಎಂಎಯಲ್ಲಿ ನಡೆಯುತ್ತಿರುವ ಕಲಾಕೃತಿಗಳನ್ನು ನೋಡಲಿಕ್ಕೆ ಆ ಸಂಸ್ಥೆ ಕನಿಷ್ಠ ಶುಲ್ಕ ಇಟ್ಟಿದೆ.  ನಮ್ಮ ಕಲೆಯನ್ನು ಪ್ರಚಾರ ಮಾಡುವ ಪ್ರದರ್ಶನ ಇದು. ಜನರು ಬಂದು ನೋಡಬೇಕು. ಮನೆಯಲ್ಲಿಯೇ ಕುಳಿತುಕೊಂಡರೆ ಏನು ಮಾಡಲು ಸಾಧ್ಯ?
ಕನಿಷ್ಠ ಶುಲ್ಕ ಪಾವತಿಸಿ ಪ್ರದರ್ಶನಕ್ಕೆ ಬಂದರೆ ರವಿವರ್ಮನ ಅಪೂರ್ವ ಕಲಾ ಜಗತ್ತನ್ನು ನೋಡಿ ಮುದಗೊಳ್ಳಬಹುದು. ಕಲಾಕೃತಿಗಳ ಆಸ್ವಾದನೆಯಿಂದಲೆ ಅಭಿರುಚಿ ಬೆಳೆಯಲು ಸಾಧ್ಯ. ನಮ್ಮ ಪ್ರತಿಷ್ಠಾನವೂ ಪ್ರದರ್ಶನ–ಉಪನ್ಯಾಸಗಳ ಮೂಲಕವೇ ಜನರಲ್ಲಿ ಕಲೆಗಳ ಅಭಿರುಚಿಯನ್ನು ಬೆಳೆಸಲು ಯತ್ನಿಸುತ್ತಿದೆ.

*‘ರಾಜಾ ರವಿವರ್ಮ ಹೆರಿಟೇಜ್‌ ಫೌಂಡೇಶನ್‌’ ಕುರಿತು ಹೇಳಿ.
ಸೆಪ್ಟೆಂಬರ್‌ 2015ನಲ್ಲಿ ರಾಜಾ ರವಿವರ್ಮ ಅವರ ವಂಶದ ಭರಣಿ ತಿರುನಾಳ್‌ ರುಕ್ಮಿಣಿಬಾಯಿ ವರ್ಮ ಅವರು ‘ರಾಜಾ ರವಿವರ್ಮ ಹೆರಿಟೇಜ್‌ ಫೌಂಡೇಶನ್‌’ ಸ್ಥಾಪಿಸಿದರು. ನಾನೂ ಅದರ ಗೌರವ ಕಾರ್ಯದರ್ಶಿಯಾಗಿದ್ದೇನೆ. ಗೀತಾಂಜಲಿ ಮೈನಿ ಮತ್ತು ಜಯವರ್ಮ ಅವರೂ ಟ್ರಸ್ಟಿ ಆಗಿದ್ದಾರೆ.

ನಾವು ಈ ಪ್ರತಿಷ್ಠಾನದ ಮೂಲಕ ರವಿವರ್ಮನ ಕಲಾಕೃತಿಗಳ ಪ್ರದರ್ಶನ ಮಾಡುತ್ತೇವೆ. ಹಾಗೆ  ರವಿವರ್ಮನ ಕುರಿತು ಉಪನ್ಯಾಸಗಳನ್ನು ಏರ್ಪಡಿಸುತ್ತೇವೆ.  ಸಿನಿಮಾ, ಆಭರಣಗಳು, ವಸ್ತ್ರಗಳು, ಪೂಜೆ ಸಂಪ್ರದಾಯ, ರಾಜಕೀಯ ಹೀಗೆ ವಿವಿಧ ಕ್ಷೇತ್ರಗಳಲ್ಲಿ ರವಿವರ್ಮನ ಪ್ರಭಾವವನ್ನು ಗುರ್ತಿಸುವುದು ನಮ್ಮ ಮುಖ್ಯ ಉದ್ದೇಶಗಳಲ್ಲಿ ಒಂದು.

ಹಾಗೆಯೇ ಇಂದು ರವಿವರ್ಮನ ಹೆಸರಿನಲ್ಲಿ ಅನೇಕ ನಕಲು (fake) ಕಲಾಕೃತಿಗಳು ಪ್ರಕಟವಾಗುತ್ತಿವೆ. ನಾವು ರವಿವರ್ಮನ ಮೂಲ ಕಲಾಕೃತಿಗಳನ್ನು ದೃಢಿಕರಿಸುವ ಕೆಲಸವನ್ನು ಮಾಡುತ್ತೇವೆ. ಅದಕ್ಕಾಗಿ ಪ್ರತ್ಯೇಕ ವಿಭಾಗವನ್ನೇ ಆರಂಭಿಸುವ ಯೋಚನೆ ಇದೆ.

‘ರಾಜಾ ರವಿವರ್ಮ ರಾಯಲ್‌ ಲಿಥೋಗ್ರಫಿ ಆ್ಯಂಡ್‌ ಲೆಗಸಿ’ ಪ್ರದರ್ಶನ ರಾಷ್ಟ್ರೀಯ ಆಧುನಿಕ ಕಲಾ ಸಂಗ್ರಹಾಲಯದಲ್ಲಿ ‘ರಾಯಲ್‌ ಲಿಥೋಗ್ರಫಿ ಆ್ಯಂಡ್‌ ಲೆಗಸಿ’ ಎಂಬ ಹೆಸರಿನಲ್ಲಿ ರಾಜಾ ರವಿವರ್ಮ ಅವರ ಕಲಾಕೃತಿಗಳ ಪ್ರದರ್ಶನ ನಡೆಯುತ್ತಿದೆ.

ಕಲಾ ವಿದ್ವಾಂಸರಿಂದ ಉಪನ್ಯಾಸ, ಸಾಕ್ಷ್ಯಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ. ಜುಲೈ 30 ಮತ್ತು ಆಗಸ್ಟ್‌ 11ರಂದು ಬೆಳಿಗ್ಗೆ 11ಕ್ಕೆ ‘ಬಿಫೋರ್‌ ದ ಬ್ರಶ್‌ ಡ್ರಾಪ್ಡ್‌’ (ನಿರ್ದೇಶನ: ಅಪರ್ಣಾ ಗುಪ್ತ) ಮತ್ತು ‘ದ ಪ್ರಿನ್ಸ್‌ ಆಫ್‌ ಕಲರ್‌–ರಾಜಾ ರವಿ ವರ್ಮ’ (ನಿರ್ದೇಶನ: ವಿನೋದ್‌ ಮನ್‌ಕಾರ) ಸಿನಿಮಾಗಳ ಪ್ರದರ್ಶನ ಇರುತ್ತದೆ.

ಆಗಸ್ಟ್‌ 14ರವರೆಗೆ ಸೋಮವಾರ ಹೊರತುಪಡಿಸಿ ಉಳಿದ ದಿನಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ  ಸಾರ್ವಜನಿಕ ವೀಕ್ಷಣೆಗೆ ತೆರೆದಿರುತ್ತವೆ.

ವಿಳಾಸ: ರಾಷ್ಟ್ರೀಯ ಆಧುನಿಕ ಕಲಾ ಸಂಗ್ರಹಾಲಯ, ಮಾನಿಕ್ಯವೇಲು ಮ್ಯಾನ್‌ಷನ್‌, ಅರಮನೆ ರಸ್ತೆ. ಸಂಪರ್ಕ ಸಂಖ್ಯೆ: 080 22342338

*
ಕಲಾಕೃತಿಗಳನ್ನು ಸಂಗ್ರಹಿಸಲು ನನಗೆ 25 ವರ್ಷ ಬೇಕಾಯಿತು. ಅಲ್ಲದೇ ಇಲ್ಲಿ ಕೇವಲ ರವಿವರ್ಮನ ಕಲಾಕೃತಿಗಳನ್ನು ಪ್ರದರ್ಶಿಸುವುದಷ್ಟೇ ಅಲ್ಲ, ಅವುಗಳ ಕುರಿತು ಮಾಹಿತಿಯನ್ನೂ ಒದಗಿಸುತ್ತಿದ್ದೇವೆ.

ಚಿತ್ರದ ಹಿನ್ನೆಲೆ, ಆ ಚಿತ್ರದ ಎಳೆಯನ್ನು ರವಿವರ್ಮ ಯಾವ ಪುರಾಣ ಕೃತಿಯಲ್ಲಿನ ಯಾವ ಸಾಲಿನಿಂದ ತೆಗೆದುಕೊಂಡಿದ್ದಾನೆ ಎಂಬ ಕುರಿತೂ ವಿವರ ನೀಡಿದ್ದೇವೆ. ಅಲ್ಲದೇ ನಮ್ಮ ಪ್ರತಿಷ್ಠಾನಕ್ಕೆ ಒಂದೊಂದು ಕಲಾಕೃತಿಗಳ ಟೈಟಲ್‌ ಕಾರ್ಡ್‌ ರಚಿಸಲೂ ವರ್ಷಗಟ್ಟಲೇ ಸಮಯ ತಗುಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT