ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಯ ಹೆಸರು ಬದಲಾವಣೆ ಇತಿಹಾಸಕ್ಕೆ ಬಗೆದ ಅಪಚಾರ

Last Updated 4 ಸೆಪ್ಟೆಂಬರ್ 2015, 19:41 IST
ಅಕ್ಷರ ಗಾತ್ರ

ನವದೆಹಲಿಯಲ್ಲಿ ಔರಂಗಜೇಬ್‌ ರಸ್ತೆಯ ಹೆಸರನ್ನು ಎಪಿಜೆ ಅಬ್ದುಲ್‌ ಕಲಾಮ್‌ ರಸ್ತೆ ಎಂದು ಬದಲಿಸುವ ಮೂಲಕ ಅಲ್ಲಿನ ಮಹಾನಗರಪಾಲಿಕೆ ಅಗ್ಗದ ರಾಜಕೀಯ ನಡೆಸಿದೆ. ಸಾರ್ವಜನಿಕ ಸ್ಮೃತಿಯಿಂದ ಔರಂಗಜೇಬನ ಹೆಸರು ಅಳಿಸಿಹಾಕುವ  ಪ್ರಯತ್ನ ಇಲ್ಲಿದೆ. ಚಾರಿತ್ರಿಕ  ಘಟನೆಗಳಿಗೆ ಕೋಮು ಬಣ್ಣ ನೀಡುವ ಸಣ್ಣತನದ ರಾಜಕಾರಣ ಇದು.  ದೆಹಲಿಯ ಇತಿಹಾಸದ ಕಡೆಗೆ ಕಣ್ಣು ಹಾಯಿಸಿದರೆ, ಅಲ್ಲಿಂದ ಇಡೀ ಇಂಡಿಯಾವನ್ನು ಆಳಿದ  ಚಕ್ರವರ್ತಿಗಳು, ರಾಜಮಹಾರಾಜರ ವೈವಿಧ್ಯಮಯ ಜೀವನಚಿತ್ರಗಳು ಕಾಣಸಿಗುತ್ತವೆ. ಇತಿಹಾಸದ ಈ ಮೆರವಣಿಗೆಯಲ್ಲಿ ಮೊಘಲ್‌ ದೊರೆ ಔರಂಗಜೇಬ್‌ ಕೂಡಾ ಒಬ್ಬ ಪಾತ್ರಧಾರಿ. ಸುಮಾರು ಅರ್ಧಶತಮಾನ ಕಾಲ ದೆಹಲಿಯ ಸಿಂಹಾಸನದಲ್ಲಿ ಕುಳಿತು, ಬಹುದೊಡ್ಡ ಸಾಮ್ರಾಜ್ಯವನ್ನು ನಿಭಾಯಿಸಿದ ಔರಂಗಜೇಬನದ್ದು ಬಹುವರ್ಣದ ವ್ಯಕ್ತಿತ್ವ. ಅಲ್ಲಿ ಕೆಲವು ದೇವಾಲಯಗಳನ್ನು ನಾಶ ಮಾಡಿದ, ಜೆಜಿಯಾ ಕಂದಾಯವನ್ನು ಹಿಂದೂಗಳ ಮೇಲೆ ಹೇರಿದ ಅಸಹಿಷ್ಣು ನಡೆಗಳು ಕಾಣಿಸಿದಂತೆಯೇ, ಹಲವು ದೇವಾಲಯಗಳಿಗೆ ದತ್ತಿ ನೀಡಿದ, ಪಾನನಿಷೇಧ ಮಾಡಿದ ಗುಣಾತ್ಮಕ ನಡೆಗಳೂ ಇವೆ.

ಇತಿಹಾಸಕ್ಕೆ ಸಂದುಹೋದ ಒಬ್ಬ ರಾಜನನ್ನು ಅವನ ಕೆಲವೇ ನಡೆಗಳ ಮೂಲಕ ನಿರ್ಣಾಯಕವೆಂಬಂತೆ ದೂಷಿಸುವುದು, ಇತಿಹಾಸಕ್ಕೆ ಬಗೆಯುವ ಅಪಚಾರ. ಇತಿಹಾಸವನ್ನು ಸಂಕುಚಿತ ದೃಷ್ಟಿಯಿಂದ ನೋಡುವ ಹಿಂದೂ ಮೂಲಭೂತವಾದಿ ದೃಷ್ಟಿಕೋನದ ಫಲಶ್ರುತಿ ಇದು ಎನ್ನದೆ ನಿರ್ವಾಹವಿಲ್ಲ. ‘ಕೆಟ್ಟ ಮುಸ್ಲಿಮ್‌’ನನ್ನು ಅಮರ ನನ್ನಾಗಿ ಮಾಡುವ ಬದಲು ‘ಒಳ್ಳೆಯ ಮುಸ್ಲಿಮ್’ನನ್ನು ಅಮರನನ್ನಾಗಿಸುವ ಯತ್ನ ಇಲ್ಲಿದೆ.    ಸಜ್ಜನ ರಾಷ್ಟ್ರಪತಿಯಾಗಿದ್ದು, ರಾಷ್ಟ್ರದ ಸರ್ವಜನರ ಮನಗೆದ್ದ ದಿವಂಗತ ಎಪಿಜೆ ಅಬ್ದುಲ್‌ ಕಲಾಂ ಅವರ ಹೆಸರನ್ನು ಈ ಮೂಲಕ ವೃಥಾ ವಿವಾದಕ್ಕೆ ಎಳೆಯಲಾಗಿದೆ.  ಇತಿಹಾಸ ಸಂಕೀರ್ಣವಾಗಿದ್ದು ಹಲವು ಮಜಲುಗಳಿರುತ್ತವೆ ಎಂಬುದನ್ನು  ಮರೆಯುವುದು ಸರಿಯಲ್ಲ. 

1911ರಿಂದ 1931ರವರೆಗೆ ಬ್ರಿಟಿಷರು ನವದೆಹಲಿ ನಗರವನ್ನು ರೂಪಿಸಿದಾಗ ಇತಿಹಾಸದಲ್ಲಿ ಸಂದುಹೋದ ಎಲ್ಲ ದೊರೆಗಳನ್ನೂ, ಚಕ್ರವರ್ತಿಗಳನ್ನೂ ಯಾವುದೇ ರಾಗದ್ವೇಷವಿಲ್ಲದೆ ನೆನಪಿಸಿಕೊಂಡಿದ್ದಾರೆ. ಹೊಸ ನಗರದ ರಸ್ತೆ, ಪಾರ್ಕ್‌ಗಳಿಗೆ ದೆಹಲಿಯನ್ನು ಆಳಿದ ರಾಜ-ಮಹಾರಾಜರ ಹೆಸರುಗಳನ್ನಿಟ್ಟು ಇತಿಹಾಸಕ್ಕೆ ಮರುಜೀವ ಒದಗಿಸಿದ್ದಾರೆ. ಇತಿಹಾಸ, ಭೂಗೋಳ, ಕಲೆ, ಸಂಸ್ಕೃತಿಗೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದವರನ್ನು ಸ್ಮರಿಸಿದ್ದಾರೆ. ಹಾಗೆಂದೇ ದೆಹಲಿಯಲ್ಲಿ ಲೋಧಿ, ಮೊಘಲ್‌, ತುಘಲಕ್‌, ಹಿಂದೂ, ಮಂಗೋಲಿಯನ್‌, ಫಶ್ತೂನ್‌, ಪಠಾನ್‌, ರಜಪೂತ ರಾಜರ ಹೆಸರುಗಳ ರಸ್ತೆಗಳು, ಪಾರ್ಕ್‌ಗಳು ಈಗಲೂ ಇವೆ. ತಮ್ಮ ವಿರುದ್ಧ ಖಡಾಖಡಿ ಯುದ್ಧ ಮಾಡಿ, ಒಂದು ಹಂತದಲ್ಲಿ ತಮ್ಮನ್ನು ಭಾರತದಿಂದ ಬಹುತೇಕ ಹೊರದೂಡಿದ್ದ  ಔರಂಗಜೇಬನ ಹೆಸರನ್ನು ಹೊಸ ದೆಹಲಿಯ ರಸ್ತೆಗೆ ಇಡಲೂ ಬ್ರಿಟಿಷರು ಹಿಂಜರಿಯಲಿಲ್ಲ.

ಹೊಸ ನಗರವನ್ನು ಕಟ್ಟುವಾಗ ಅವರು ಧರ್ಮ, ಜಾತಿ, ಪ್ರದೇಶ, ರಾಜಕೀಯ ಅಥವಾ ಅಸಹಿಷ್ಣುತೆಯ ದೃಷ್ಟಿಕೋನವನ್ನು ಇಟ್ಟುಕೊಳ್ಳದೆ ಇತಿಹಾಸದ ಸ್ಫೂರ್ತಿಯನ್ನಷ್ಟೆ ಉಳಿಸಿಕೊಂಡರು. ಇವತ್ತಿಗೂ ದೆಹಲಿಯ ಇಂಡಿಯಾಗೇಟ್‌ ವರ್ತುಲದ ಸುತ್ತ ಪೃಥ್ವಿರಾಜ್‌ ಚೌಹಾಣ್‌, ಅಶೋಕ, ಔರಂಗಜೇಬ್‌, ಷಹಜಹಾನ್‌, ಶೇರ್‌ಶಹಾ ಮುಂತಾದವರ ಹೆಸರುಳ್ಳ ರಸ್ತೆಗಳನ್ನು ಗಮನಿಸಿದಾಗ, ದೆಹಲಿಯ ಇತಿಹಾಸ ಕಣ್ಣಿಗೆ ಕಟ್ಟುತ್ತದೆ. ಇತಿಹಾಸವನ್ನು ನಿರ್ಮೋಹದಿಂದ ನೋಡುವುದು ಮುತ್ಸದ್ದಿಗಳ ಲಕ್ಷಣವೂ ಹೌದು. ಅದು ಬಿಟ್ಟು ಔರಂಗಜೇಬ್‌ ರಸ್ತೆಯ ಹೆಸರನ್ನು ಬದಲಿಸುವುದು, ತಾಜ್‌ಮಹಲನ್ನು ತೇಜೋಮಹಾಲಯ ಎಂದು ಕರೆಯುವುದು- ಇವೆಲ್ಲವೂ  ಸಂಕುಚಿತ ಮನಸ್ಸಿನ ಕ್ಷುಲ್ಲಕ ಕೃತ್ಯಗಳಷ್ಟೇ. ಈಗ, ಮಹಾರಾಷ್ಟ್ರದಲ್ಲಿ ಔರಂಗಾಬಾದ್‌ ನಗರದ ಹೆಸರನ್ನು ಸಂಭಾಜಿ ನಗರ ಎಂದು ಬದಲಾಯಿಸಬೇಕೆಂಬ ಒತ್ತಾಯವನ್ನು ಶಿವಸೇನೆ ಮಾಡುತ್ತಿದೆ.  ಈ ಪ್ರವೃತ್ತಿ ಹೀಗೇ ಮುಂದುವರಿಯುವುದು ಸರಿಯಲ್ಲ. ಇತಿಹಾಸವನ್ನು ಮರೆಯುವುದು ಎಂದಿಗೂ ಸಲ್ಲದು. ಇನ್ನು ಇತಿಹಾಸವನ್ನು ಬದಲಾಯಿಸುತ್ತೇವೆಂಬುದಂತೂ ಅವಾಸ್ತವಿಕ. ಸದ್ಯದ ವಾಸ್ತವ ಹಳೆಯದನ್ನು ಬದಲಿಸಲು ಸಾಧ್ಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT