ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ನಿರ್ವಹಣೆ ಕುರಿತ ಅಭಿಪ್ರಾಯಗಳು

Last Updated 25 ಸೆಪ್ಟೆಂಬರ್ 2015, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ– ಧಾರವಾಡ
ನಗರದ ರಸ್ತೆಗಳ ಒಟ್ಟು ಉದ್ದ 2400 ಕಿ.ಮೀ.
​ಪಾಲಿಕೆ ಅಧೀನದ ರಸ್ತೆಗಳು 1400 ಕಿ.ಮೀ.


ರಸ್ತೆಗೂ ವಿಮೆ ಮಾಡಿಸಿ!
ರಸ್ತೆಗಳು ನಗರದ ಕನ್ನಡಿ ಇದ್ದಂತೆ. ರಾಜಕಾರಣಿಗಳ ಬದ್ಧತೆ, ಅಧಿಕಾರಿಗಳ ಕರ್ತವ್ಯನಿಷ್ಠೆ, ಗುತ್ತಿಗೆದಾರರ ಪ್ರಾಮಾಣಿಕತೆ ಮತ್ತು ಜನರ ಧೋರಣೆ ಅದರಲ್ಲಿ ಪ್ರತಿಫಲನಗೊಳ್ಳುತ್ತದೆ. ರಸ್ತೆ ಹಾಳಾಗುವುದರಲ್ಲಿ ನೀರಿಗೆ ಮಹತ್ವದ ಪಾತ್ರ ಇದೆ. ರಸ್ತೆಗೆ ಸಂಬಂಧಿಸಿ ನೀರು ‘ಕ್ಯಾನ್ಸರ್‌’ ಇದ್ದಂತೆ. ಅಧಿಕಾರ ಹೊಂದಿರುವವರು ಮತ್ತು ಆಡಳಿತಗಾರರ ನಿಷ್ಕಾಳಜಿ ಈ ‘ಕ್ಯಾನ್ಸರ್‌’ ನಗರದ ರಸ್ತೆಗಳನ್ನು ನುಂಗುವಂತೆ ಮಾಡುತ್ತದೆ. ಪ್ರತಿ ಬಾರಿ ಡಾಂಬರು ಹಾಕಿದಾಗಲೂ ಮೇಲ್ನೋಟಕ್ಕೆ ಸುಂದರವಾಗಿ ಕಾಣುವ ರಸ್ತೆಗಳು ಒಳಗೆ ಆಡಳಿತಗಾರರು ಮತ್ತು ‘ಬಿಲ್ವಿದ್ಯಾ ಪ್ರವೀಣರ’ ಒಳ ಒಪ್ಪಂದದ ಕರಾಳ ಸತ್ಯವನ್ನು ಹುದುಗಿಟ್ಟುಕೊಂಡಿರುತ್ತವೆ.

ಕಾಳಜಿ ಇದ್ದರೆ ರಸ್ತೆಗಳನ್ನು ಎಷ್ಟು ಚೆನ್ನಾಗಿ ನಿರ್ಮಿಸಬಹುದು ಎಂಬುದಕ್ಕೆ ರಾಷ್ಟ್ರೀಯ ಹೆದ್ದಾರಿಗಳು ಸಾಕ್ಷಿ. ಎಲ್ಲವೂ ಸುಸೂತ್ರವಾಗಿ ನಡೆಯುವುದರಿಂದ ಈ ಹೆದ್ದಾರಿಗಳು ಸದಾ ಚಾಲಕ ಸ್ನೇಹಿಯಾಗಿರುತ್ತವೆ. ಸ್ಥಳೀಯಾಡಳಿತ ಸಂಸ್ಥೆಗಳ ದುರಾಡಳಿತದಿಂದಾಗಿ ಪಟ್ಟಣ, ನಗರಗಳನ್ನು ಪ್ರವೇಶಿಸಿದ ಕೂಡಲೇ ಕೆಟ್ಟ ರಸ್ತೆಗಳಲ್ಲಿ ಓಲಾಡುತ್ತ ವಾಹನ ಓಡಿಸಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ. ನಗರ–ಪಟ್ಟಣಗಳ ಬಹುತೇಕ ರಸ್ತೆಗಳ ಬದಿಯಲ್ಲಿ ಗಟಾರ ಇರುವುದಿಲ್ಲ. ರಸ್ತೆ ನಿರ್ಮಾಣ ಟೆಂಡರ್‌ನಲ್ಲಿ ಗಟಾರದ ಬಗ್ಗೆ ಸ್ಪಷ್ಟ ನಿರ್ದೇಶನವಿದ್ದರೂ ಅದನ್ನು ಯಾರೂ ಪಾಲಿಸುತ್ತಿಲ್ಲ ಎಂಬುದು ಕಣ್ಣಿಗೆ ಕಾಣುವ ಸತ್ಯ.

ವಿಮೆ ಉತ್ತಮ: ಹುಬ್ಬಳ್ಳಿ ವಿದ್ಯಾನಗರದ ತಿಮ್ಮಸಾಗರ ಗುಡಿ ರಸ್ತೆಗೆ (385 ಮೀಟರ್‌ ಉದ್ದ, 9 ಮೀಟರ್‌ ಅಗಲ) ಎಂಟು ವರ್ಷಗಳ ಹಿಂದೆ ವಿಮೆ ಮಾಡಿಸಲಾಗಿದೆ. ಜನರಲ್‌ ಇನ್ಶೂರೆನ್ಸ್‌ನಲ್ಲಿ ಇರುವ ಅವಕಾಶ ಬಳಸಿಕೊಂಡು ಇದನ್ನು ಮಾಡಲಾಗಿದೆ. ಪ್ರಕೃತಿ ವಿಕೋಪ ಸೇರಿದಂತೆ ಯಾವುದೇ ರೀತಿ ರಸ್ತೆ ಹಾಳಾದರೂ ಅದನ್ನು ದುರಸ್ತಿ ಮಾಡುವ ಮೊತ್ತವನ್ನು ವಿಮೆ ಕಂಪೆನಿ ಭರಿಸುತ್ತದೆ. ಇಂಥ ಅವಕಾಶವನ್ನು ಸ್ಥಳೀಯ ಸಂಸ್ಥೆಗಳು ಬಳಸಿಕೊಂಡರೆ ರಸ್ತೆಗಳ ದುರಸ್ತಿಗಾಗಿ ವ್ಯಯ ಮಾಡುವ ಕೋಟ್ಯಂತರ ಹಣವನ್ನು ಉಳಿಸಬಹುದು. ಕಳಪೆ ಕಾಮಗಾರಿ ತಡೆಯುವುದಕ್ಕೂ ಇದು ಪರೋಕ್ಷವಾಗಿ ಸಹಕಾರಿಯಾಗುತ್ತದೆ. ಹೀಗಾಗಿ ಜನರ ತಾಪತ್ರಯ ಪರಿಹಾರಕ್ಕೂ ರಸ್ತೆ ವಿಮೆ ಉತ್ತಮ ‘ಮಾರ್ಗ’ ಆಗಬಲ್ಲದು.  
- ಡಾ. ಮೃತ್ಯುಂಜಯ ಸಿ. ಸಿಂಧೂರ,
ವೈದ್ಯ, ಸಾಮಾಜಿಕ ಕಾರ್ಯಕರ್ತ, ಹುಬ್ಬಳ್ಳಿ

*

ಮಂಗಳೂರು
ನಗರದ ವಿಸ್ತೀರ್ಣ 132.45  ಚದರ ಕಿ.ಮೀ.
ರಸ್ತೆಗಳ ಒಟ್ಟು ಉದ್ದ 1,133 ಕಿ.ಮೀ.

ಕಾಂಕ್ರೀಟ್‌ ಪರಿಹಾರವಲ್ಲ
ಮೇಲಿಂದ ಮೇಲೆ ಕೆಟ್ಟುಹೋಗುವ ರಸ್ತೆಗೆ ಕಾಂಕ್ರೀಟ್‌ ಪರಿಹಾರವೇ ಎಂಬ ಪ್ರಶ್ನೆ ಆಗಾಗ ಕೇಳಿಬರುತ್ತಿದೆ. ಅದು ಅಲ್ಲ ಎಂಬುದು ನನ್ನ ಅಭಿಮತ. ಡಾಂಬರು ರಸ್ತೆಯಲ್ಲಿ ಪ್ರಯಾಣಿಸುವಾಗ ಸಿಗುವ ಸುಖ ಕಾಂಕ್ರೀಟ್‌ ರಸ್ತೆಯಲ್ಲಿ ಪ್ರಯಾಣಿಸಿದಾಗ ಸಿಗಲು ಸಾಧ್ಯವೇ ಇಲ್ಲ. ಕಾಂಕ್ರೀಟ್‌ ಎಂದರೆ ಅದು ಬಂಡೆಗಲ್ಲಿನಂತೆ ಕಠಿಣ. ಅದರ ಮೇಲೆ ವಾಹನದಲ್ಲಿ ಸವಾರಿ ಮಾಡುವಾಗ ಕಠಿಣ ಸವಾರಿಯ ಅನುಭವ ಆಗುತ್ತದೆ. ಡಾಂಬರು ರಸ್ತೆ ವಾಹನಗಳಿಗೆ ಮೆತ್ತನೆಯ ಹಾಸಿಗೆಯಂತೆ ಪರಿಣಮಿಸುತ್ತದೆ.

ಅಮೆರಿಕ, ಕೆನಡಾ, ಜಪಾನ್‌ಗಳಂತಹ ದೇಶಗಳನ್ನು ನಾನು ಸಂದರ್ಶಿಸಿದ್ದೇನೆ. ಅಲ್ಲೆಲ್ಲ ಇರುವುದು ಡಾಂಬರು ರಸ್ತೆಗಳೇ ಹೊರತು ಕಾಂಕ್ರೀಟ್ ರಸ್ತೆಗಳಲ್ಲ. ಭಾರಿ ಮಳೆ ಸುರಿದಾಗ, ಇತರ ಎಲ್ಲ ಕಾರಣಗಳಿಂದ ಅಲ್ಲೂ ರಸ್ತೆಗಳಲ್ಲಿ ಗುಂಡಿಗಳು ಬೀಳುತ್ತವೆ. ಆದರೆ ತಕ್ಷಣ ಅವುಗಳನ್ನು ಮುಚ್ಚುವ ವ್ಯವಸ್ಥೆ ಅಲ್ಲಿದೆ. ನಮ್ಮಲ್ಲಿ ಅಂತಹ ವ್ಯವಸ್ಥೆ ಇಲ್ಲ. ಹೆದ್ದಾರಿಗಳಲ್ಲಿ ಹೊಂಡ ಬಿದ್ದರೆ ಅದನ್ನು ತ್ವರಿತವಾಗಿ ದುರಸ್ತಿಗೊಳಿಸುವ ವ್ಯವಸ್ಥೆ ಇರುವ ಕಾರಣಕ್ಕೇ ನಮ್ಮ ಹೆದ್ದಾರಿಗಳು ಬಹುತೇಕ ಹೊಂಡಮುಕ್ತವಾಗಿವೆ. ಆದರೆ ಭಾರಿ ತೂಕದ ವಾಹನಗಳು ಸಂಚರಿಸುವ ಹೆದ್ದಾರಿಗಳಲ್ಲಿ ಈ ಮಾತಿಗೆ ಅಪವಾದ ಇದೆ.

ರಸ್ತೆ ನಿರ್ಮಿಸುವಾಗ ಸ್ಥಳೀಯಾಡಳಿತ ಸಂಸ್ಥೆಗಳು ಪರಿಣತರ ಸಲಹೆ ಕೇಳುತ್ತವೆ ನಿಜ. ಆದರೆ ಅಂತಹ ಸಲಹೆಗಳನ್ನು ಹೇಗೆ ಜಾರಿಗೆ ತರಲಾಗಿದೆ ಎಂಬುದು ಗೊತ್ತಾಗುವುದೇ ಇಲ್ಲ. ರಸ್ತೆ ನಿರ್ಮಾಣದಲ್ಲಿ ಕೆಡುಕುಂಟಾದರೆ ಮಾತ್ರ ಅವರು ಮತ್ತೆ ಅದೇ ಪರಿಣತರನ್ನು ಸಂಪರ್ಕಿಸುತ್ತಾರೆ. ರಸ್ತೆಯ ವಿನ್ಯಾಸ, ಗುಣಮಟ್ಟ ಕಾಯ್ದುಕೊಳ್ಳುವಿಕೆ ಸಹಿತ ಪ್ರತಿ ಹಂತದಲ್ಲಿ ಪರಿಣತರ ಸೂಚನೆ ಪಾಲಿಸುತ್ತ ಇದ್ದರೆ ಸಮಸ್ಯೆಗಳ ಪ್ರಮಾಣ ಕಡಿಮೆಯಾದೀತು.
- ಡಾ. ಎ.ಯು.ರವಿಶಂಕರ್‌,
ಪ್ರಾಧ್ಯಾಪಕ, ಎನ್‌ಐಟಿಕೆ, ಸುರತ್ಕಲ್‌
*


ಕಲಬುರ್ಗಿ
ನಗರದ ವಿಸ್ತೀರ್ಣ 64 ಚದರ ಕಿ.ಮೀ.
ರಸ್ತೆಗಳ ಒಟ್ಟು ಉದ್ದ 986 ಕಿ.ಮೀ.

ಅಧಿಕಾರಿಗಳೇ ಹೊಣೆ
ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ಪಾರದರ್ಶಕ ಆಡಳಿತದ ಕೊರತೆ ತುಂಬಾ ಇದೆ. ಯಾವುದೇ ಯೋಜನೆ ಅನುಷ್ಠಾನಗೊಳಿಸುವ ಪೂರ್ವದಲ್ಲಿ ಅಧಿಕಾರಿಗಳು ಸಾರ್ವಜನಿಕರ ಎದುರು ಸಮಗ್ರ ಮಾಹಿತಿ ತೆರೆದಿಡಬೇಕು. ಹೀಗಾಗದಿರುವುದೇ ಗುಣಮಟ್ಟದ ರಸ್ತೆ, ಚರಂಡಿ, ಒಳಚರಂಡಿ ಕಾಮಗಾರಿ ನಡೆಯದಿರುವುದಕ್ಕೆ ಮುಖ್ಯ ಕಾರಣ.

ಕಾಮಗಾರಿ ಗುತ್ತಿಗೆ ವಹಿಸಿದ ನಂತರ ಅಧಿಕಾರಿಗಳು ಗುಣಮಟ್ಟ ಕಾಯ್ದುಕೊಳ್ಳುವ ಬಗ್ಗೆ ಪರಿಶೀಲನೆ ನಡೆಸುವುದೇ ಇಲ್ಲ. ಅಧಿಕಾರಿಗಳು ಕಠಿಣವಾಗಿದ್ದರೆ, ಅದಕ್ಕೆ ತಕ್ಕಂತೆ ಜನಪ್ರತಿನಿಧಿಗಳು ನಡೆದುಕೊಳ್ಳುತ್ತಾರೆ. ಅಧಿಕಾರಿಗಳು ಕಾಮಗಾರಿ ಅನುಷ್ಠಾನದಲ್ಲಿ ಸಡಿಲವಾಗಿದ್ದರೆ, ಅಂತಹ ಕಡೆಗಳಲ್ಲಿ ಗುಣಮಟ್ಟದ ಕಾಮಗಾರಿ ನಡೆಸುವುದಕ್ಕಿಂತಲೂ ಅನುದಾನ ಹಂಚಿಕೊಳ್ಳುವುದರಲ್ಲೆ ಹೆಚ್ಚು ಸಕ್ರಿಯತೆ ಕಾಣಿಸುತ್ತದೆ.

ರಸ್ತೆ ಕಾಮಗಾರಿಗೆ ಸಂಬಂಧಿಸಿದ ಸಮಗ್ರ ಮಾಹಿತಿಯನ್ನು ಸ್ಥಳದಲ್ಲಿನ ಫಲಕದಲ್ಲಿ ಅಳವಡಿಸಬೇಕು. ಇದರಿಂದ ಜನ, ಸಂಘ–ಸಂಸ್ಥೆಗಳಾದರೂ ನಿಗಾ ವಹಿಸುವುದಕ್ಕೆ ಸಾಧ್ಯವಾಗುತ್ತದೆ. ರಸ್ತೆಗೆ ಅನುದಾನ ಬಂದಿರುವುದೇ ಗೊತ್ತಾಗುವುದಿಲ್ಲ. ರಸ್ತೆಯಿಂದ ಸಮಸ್ಯೆ ನಿರ್ಮಾಣವಾದಾಗ ಎಲ್ಲವೂ ಜನರ ಅನುಭವಕ್ಕೆ ಬರತೊಡಗುತ್ತದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ರಸ್ತೆ ಇಷ್ಟು ಬೇಗ ಏಕೆ ಹಾಳಾಯಿತು ಎಂಬುದರ ಮಾಹಿತಿ ಆನಂತರ ಹೊರಬರುತ್ತದೆ. ಯಾರಿಗೂ ಶಿಕ್ಷೆಯಾಗುವುದಿಲ್ಲ. ದೂರುಗಳು ನನೆಗುದಿಗೆ ಬೀಳುತ್ತವೆ. ರಸ್ತೆಯ ತಗ್ಗು–ಗುಂಡಿಗಳು ಕಾಣಿಸಿಕೊಳ್ಳುವುದಕ್ಕೆ ನೇರವಾಗಿ ಸ್ಥಳೀಯ ಆಡಳಿತ ಸಂಸ್ಥೆಗಳ ಎಂಜಿನಿಯರುಗಳನ್ನೇ ಹೊಣೆ ಮಾಡಬೇಕಿದೆ. ಅಧಿಕಾರಿಗಳು ಲಕ್ಷ್ಯ ವಹಿಸಿ ಕೆಲಸ ಮಾಡಿಸದ ಹೊರತು ಗುಣಮಟ್ಟದ ರಸ್ತೆ ನಿರ್ಮಾಣ ಗಗನಕುಸುಮ.
- ದೀಪಕ್‌ ಗಾಲಾ,
ಪರಿಸರವಾದಿ, ಕಲಬುರ್ಗಿ

*

ಮೈಸೂರು
ನಗರದ ರಸ್ತೆಗಳ ಒಟ್ಟು ಉದ್ದ ಸುಮಾರು 1773 ಕಿ.ಮೀ.
ಪಾಲಿಕೆ ವ್ಯಾಪ್ತಿಯ ರಸ್ತೆಗಳು 1,093 ಕಿ.ಮೀ.

ಹಣ ಗಳಿಸುವ ದಂಧೆ
ರಸ್ತೆಗಳ ಸ್ಥಿತಿಗೆ ಸಂಬಂಧಿಸಿದಂತೆ ರಾಜ್ಯದ ಬೇರೆ ನಗರಗಳಿಗೆ ಹೋಲಿಸಿದರೆ ಮೈಸೂರಿನಲ್ಲಿ ಅಷ್ಟೇನೂ ಎದೆತಟ್ಟಿಕೊಂಡು ಹೇಳಿಕೊಳ್ಳಬಲ್ಲ ಗುಣಮಟ್ಟದ ರಸ್ತೆಗಳು ಇಲ್ಲ. ಜನಪ್ರಿಯ ಪ್ರವಾಸಿ ತಾಣವಾದ ಮೈಸೂರಿಗೆ ಇತರ ನಗರಗಳಿಗೆ ಸಿಗದ ಅನೇಕ ಸವಲತ್ತುಗಳು ದಕ್ಕಿವೆ. ಮುಖ್ಯವಾಗಿ, ಕೆಲ ವರ್ಷಗಳ ಹಿಂದೆ ಜೆ– ನರ್ಮ್ ಯೋಜನೆಗೆ ನಗರ ಆಯ್ಕೆಯಾಯಿತು. ಕೋಟ್ಯಂತರ ರೂಪಾಯಿ ಇದರಡಿ ಬಿಡುಗಡೆಯಾಯಿತು. ಇದರಲ್ಲಿ ಕೆಲವು ಕೋಟಿ ರೂಪಾಯಿಗಳನ್ನು ರಸ್ತೆ ಅಭಿವೃದ್ಧಿಗೂ ವ್ಯಯಿಸಲಾಗಿದೆ.

ಇದರ ಜತೆಗೆ, ಇಲ್ಲಿ ನಡೆಯುವ ನಾಡಹಬ್ಬ ದಸರಾ ಮಹೋತ್ಸವಕ್ಕೆಂದು ಸರ್ಕಾರ ಪ್ರತಿ ವರ್ಷ ಕೋಟ್ಯಂತರ ರೂಪಾಯಿ ನೀಡುತ್ತಿದೆ. ಮೈಸೂರು ಮಹಾನಗರ ಪಾಲಿಕೆಗೆಂದೇ ವರ್ಷಂಪ್ರತಿ ವಿಶೇಷ ಅನುದಾನ ನೀಡುವ ಸರ್ಕಾರ, ಕಳೆದ ವರ್ಷದಲ್ಲೇ ₹200 ಕೋಟಿ ನೀಡಿದೆ. ಆದಾಗ್ಯೂ, ನಗರದಲ್ಲೊಂದು ಬಾರಿ ಸುತ್ತಾಡಿ ಬಂದರೆ, ರಸ್ತೆ ಗುಣಮಟ್ಟದಲ್ಲಿ ಬೇರೆ ನಗರಗಳಿಗೂ, ಮೈಸೂರಿಗೂ ಅಗಾಧ ವ್ಯತ್ಯಾಸವೇನೂ ಕಂಡುಬರುವುದಿಲ್ಲ. ಈ ಎಲ್ಲ ಹಣ ಎಲ್ಲಿ ಹೋಗುತ್ತಿದೆ ಎಂಬುದು ಮಾತ್ರ ಗೊತ್ತಾಗುವುದೇ ಇಲ್ಲ. ದಸರಾ ಸಮಯದಲ್ಲಿ ಕೇವಲ ದಸರಾ ಮೆರವಣಿಗೆ ಸಾಗುವ ಮಾರ್ಗಗಳಿಗಷ್ಟೇ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ. ಆದರೆ, ಮೈಸೂರು ಎಂದರೆ ದಸರಾ ಸಾಗುವ ಮಾರ್ಗವಷ್ಟೇ ಅಲ್ಲ. ಅದರಾಚೆಗೂ ಪ್ರಮುಖ ರಸ್ತೆಗಳಿವೆ, ಪ್ರಮುಖ ಬೀದಿಗಳಿವೆ. ಇದಕ್ಕೆಲ್ಲ ಅತಿಯಾದ ಭ್ರಷ್ಟಾಚಾರವೇ ಕಾರಣ. ರಸ್ತೆ ಕಾಮಗಾರಿ ಬಹುದೊಡ್ಡ ಮಾಫಿಯಾವೇ ಎಂಬ ಅನುಮಾನ ಬಾರದಿರದು.

ರಾಷ್ಟ್ರಪತಿ ಪ್ರಣವ್ ಮುಖರ್ಜಿ ಈಚೆಗೆ ಮೈಸೂರು ವಿ.ವಿ. ಶತಮಾನೋತ್ಸವ ಸಮಾರಂಭಕ್ಕೆ ಬರುವುದಕ್ಕೆ ಮುಂಚಿತವಾಗಿ ನಾಲ್ಕೈದು ದಿನಗಳಲ್ಲಿ ತರಾತುರಿಯಲ್ಲಿ ರಸ್ತೆಗಳನ್ನು ದುರಸ್ತಿಪಡಿಸಲಾಯಿತು. ಅದೂ ಅವರು ಸಾಗುವ ರಸ್ತೆಗಳನ್ನು ಮಾತ್ರ! ಭ್ರಷ್ಟಾಚಾರದ ಮೂಲೋತ್ಪಾಟನೆಯೇ ಇದೆಲ್ಲಕ್ಕೂ  ಯೋಗ್ಯವಾದ ಮದ್ದು. ಎಲ್ಲಿಯವರೆಗೆ ಗುತ್ತಿಗೆದಾರರಿಂದ ಅಧಿಕಾರಿಗಳು, ಎಂಜಿನಿಯರ್‌ಗಳು, ಜನಪ್ರತಿನಿಧಿಗಳು ‘ಕಮಿಷನ್’ ಕಬಳಿಸುವುದನ್ನು ಬಿಡುವುದಿಲ್ಲವೋ ಅಲ್ಲಿಯವರೆಗೂ ನಗರದ ಒಳಗೆ ಸುತ್ತಾಡುವುದು ಮನೋಲ್ಲಾಸಕ್ಕಿಂತ ಆಯಾಸದ ಕೆಲಸವೇ ಆಗಿರುತ್ತದೆ.
- ಆರ್.ಚಂದ್ರಪ್ರಕಾಶ್,
ಅಧ್ಯಕ್ಷ, ಮೈಸೂರು ಗ್ರಾಹಕ ಪರಿಷತ್‌
*


ಅಭಿಪ್ರಾಯ ಸಂಗ್ರಹ: ವಿಕ್ರಂ ಕಾಂತಿಕೆರೆ, ಎಂ.ಜಿ.ಬಾಲಕೃಷ್ಣ, ನಾಗರಾಜ ಚಿನಗುಂಡಿ, ಕೆ.ಎಸ್.ಗಿರೀಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT