ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಧಾನಿಯಲ್ಲಿ ರಾತ್ರಿ ಖಾಸಗಿ ಕ್ಯಾಬ್‌ಗಳೇ ಗತಿ

Last Updated 6 ಅಕ್ಟೋಬರ್ 2015, 20:03 IST
ಅಕ್ಷರ ಗಾತ್ರ

ಬೆಂಗಳೂರು: ಜನರನ್ನು ಬೆಚ್ಚಿಬೀಳಿಸಿರುವ ಬಿಪಿಒ ಉದ್ಯೋಗಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣವು, ರಾತ್ರಿ ಹೊತ್ತು ರಾಜಧಾನಿಯಲ್ಲಿ ಸಾರ್ವಜನಿಕ ಸಾರಿಗೆಯ ಅಭಾವಕ್ಕೆ ಕನ್ನಡಿ ಹಿಡಿದಿದೆ.

ನಗರದಲ್ಲಿ ಸಂಚರಿಸುವ ಬೆಂಗಳೂರು ಮಹಾನಗರ ಸಾರಿಗೆ (ಬಿಎಂಟಿಸಿ) ಬಸ್‌ಗಳು ರಾತ್ರಿ 9.30ರ ನಂತರ ಸಾಮಾನ್ಯವಾಗಿ ಓಡಾಟ ನಿಲ್ಲಿಸುತ್ತವೆ. ಅದರಲ್ಲೂ ಹೊರವರ್ತುಲ ರಸ್ತೆಗಳು ಸೇರಿದಂತೆ, ಹೊರವಲಯದ ಪ್ರದೇಶಗಳಿಗೆ ಬಸ್‌ಗಳೇ ಇರುವುದಿಲ್ಲ.

ಹಾಗಾಗಿ, ಐಟಿ– ಬಿಟಿ ಕಂಪೆನಿಗಳು ಮತ್ತು ಇತರ ಕಾರ್ಖಾನೆಗಳಲ್ಲಿ ರಾತ್ರಿ ಕೆಲಸ ಮಾಡುವ ಉದ್ಯೋಗಿಗಳು, 9.30ರ ನಂತರ ತಮ್ಮ ಮನೆಗೆ ತಲುಪಲು ನಿಯಮಬಾಹಿರವಾಗಿ ಸಂಚರಿಸುವ ಖಾಸಗಿ ಕ್ಯಾಬ್‌ಗಳನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ಇದೆ.

ರಾಜಧಾನಿಯಲ್ಲಿ ಮಾಹಿತಿ ತಂತ್ರಜ್ಞಾನದ ಶಕೆ ಆರಂಭವಾದಾಗಿನಿಂದ ಕಂಪೆನಿಗಳಿಗೆ ಉದ್ಯೋಗಿಗಳನ್ನು ಕರೆದೊಯ್ಯುವ ಒಪ್ಪಂದದ ವಾಹನಗಳು ಮತ್ತು ಮ್ಯಾಕ್ಸಿಕ್ಯಾಬ್‌ಗಳು ಹಗಲು– ರಾತ್ರಿ ಸಂಚರಿಸುತ್ತಿವೆ. ಈ ವಾಹನಗಳು ತಮ್ಮ ಪರವಾನಗಿ ನಿಯಮವನ್ನು ಉಲ್ಲಂಘಿಸಿ ಕಾರ್ಯಾಚರಣೆ ನಡೆಸುತ್ತಿರುವ ವಿಷಯ ಸಾರಿಗೆ ಇಲಾಖೆಗೆ ಗೊತ್ತಿದ್ದರೂ, ಇದಕ್ಕೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ.

6,229 ಬಸ್‌ಗಳನ್ನು ಕಾರ್ಯಾಚರಣೆ ನಡೆಸುವ ಬಿಎಂಟಿಸಿ ನಿತ್ಯ 76,039 ಟ್ರಿಪ್ ಹೊಡೆಯುತ್ತದಲ್ಲದೆ, ರಾತ್ರಿ 9.30ರ ನಂತರ ಕಾರ್ಯಾಚರಣೆ ನಿಲ್ಲಿಸುತ್ತವೆ. ಆದರೆ, ಬಹುತೇಕ ಐಟಿ– ಬಿಟಿ ಕಂಪೆನಿಗಳು ಹೊರವರ್ತುಲ ರಸ್ತೆಗಳಲ್ಲೇ ನೆಲೆಸಿವೆ. ಇಲ್ಲಿನ ನೂರಾರು ಉದ್ಯೋಗಿಗಳು ರಾತ್ರಿ ಹೊತ್ತು ಮನೆಗೆ ಹೋಗಲು   ಕಂಪೆನಿ ನೀಡಿರುವ ಕ್ಯಾಬ್‌ಗಳನ್ನು ಅವಲಂಬಿಸಿದ್ದಾರೆ. ಅದೂ ಇಲ್ಲದಿದ್ದರೆ, ಬೇರೆ ಕಂಪೆನಿಗಳಿಗೆ ಟ್ರಿಪ್ ಹೊಡೆಯುವ ಖಾಸಗಿ ಕ್ಯಾಬ್‌ಗಳೇ ಇವರಿಗೆ ಗತಿ.

ಅಲ್ಲದೆ, ರಾತ್ರಿ ನಿಲ್ದಾಣಗಳಲ್ಲಿ ಬಸ್‌ಗಾಗಿ ಕಾಯುವ ಜನರು, ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣ ದರ ಹೆಚ್ಚು ಎಂದು ರಾತ್ರಿ ಇಂತಹ ಕ್ಯಾಬ್‌ಗಳಲ್ಲಿ ಓಡಾಡುವುದು ಕೂಡ ಸಾಮಾನ್ಯವಾಗಿದೆ.

ಹಣಕ್ಕಾಗಿ ಓಡಾಟ: ‘ನಗರದಲ್ಲಿರುವ ಬಹುತೇಕ ಕಂಪೆನಿಗಳು ತಮ್ಮ ಉದ್ಯೋಗಿಗಳನ್ನು ಕರೆತರಲು ಮತ್ತು ಕಳುಹಿಸಲು ಹೊರಗುತ್ತಿಗೆ ಮೂಲಕ ಖಾಸಗಿ ವಾಹನಗಳು ಮತ್ತು ಕ್ಯಾಬ್‌ಗಳನ್ನು ನಿಯೋಜಿಸಿಕೊಂಡಿವೆ. ಈ ವಾಹನಗಳಿಗೆ ಕೇವಲ ಉದ್ಯೋಗಿಗಳನ್ನು ಬಿಡುವುದಕ್ಕೆ ಮಾತ್ರ ಅನುಮತಿ ನೀಡಲಾಗಿರುತ್ತದೆ’ ಎಂದು ಸಾರಿಗೆ ಇಲಾಖೆ ಅಧಿಕಾರಿಯೊಬ್ಬರು ಹೇಳಿದರು.

‘ಉದ್ಯೋಗಿಗಳನ್ನು ಕಂಪೆನಿಗಳಿಗೆ ಬಿಟ್ಟ ನಂತರ, ಹಣಕ್ಕಾಗಿ ಹೊರವರ್ತುಲ ರಸ್ತೆಗಳಲ್ಲಿ ಸಂಚರಿಸಿ ಜನರನ್ನು ಕರೆದೊಯ್ಯುತ್ತಾರೆ. ಇದು ವಾಹನದ ಪರವಾನಗಿಯ ಸ್ಪಷ್ಟ ಉಲ್ಲಂಘನೆಯಾಗಿದೆ’ ಎಂದರು.

ರಾತ್ರಿ ಸಂಚಾರಕ್ಕೆ ಬೇಡಿಕೆ ಇದೆ: ‘ರಾತ್ರಿ ಹೊತ್ತು ಬಿಎಂಟಿಸಿ ಬಸ್‌ಗಳ ಸಂಚಾರಕ್ಕೆ ನಗರದಲ್ಲಿ ಬೇಡಿಕೆ ಇದೆ. ರಾತ್ರಿ 10ರ ನಂತರ 100 ಬಸ್‌ಗಳು ಓಡಾಡುತ್ತವೆ. ಕೆಲವೇ ಮಾರ್ಗಗಳಲ್ಲಿ ಮಾತ್ರ ಸಂಚರಿಸುವ ಈ ಬಸ್‌ಗಳು, ರಾತ್ರಿ ಹೊತ್ತು ಕೆಲಸ ಮುಗಿಸಿ ಮನೆಗೆ ಹೋಗುವವರ ಸಮಯಕ್ಕೆ ಸಿಗುವುದಿಲ್ಲ. ಅದಕ್ಕಾಗಿಯೇ ಬಹುತೇಕ ಮಂದಿ ಖಾಸಗಿ ಕ್ಯಾಬ್‌ಗಳನ್ನು ಹತ್ತಿಕೊಂಡು ಹೋಗುತ್ತಾರೆ’ ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು ಹೇಳಿದರು.

ನಿತ್ಯ ಕಾರ್ಯಾಚರಣೆ: ರಾಮೇಗೌಡ
‘ನಿಯಮ ಮತ್ತು ಪರವಾನಗಿ ಉಲ್ಲಂಘಿಸಿ ಸಂಚರಿಸುವ ವಾಹನಗಳ ವಿರುದ್ಧ ಸಾರಿಗೆ ಇಲಾಖೆ ನಿತ್ಯ ಕಾರ್ಯಾಚರಣೆ ನಡೆಸುತ್ತಿದೆ. ಮಂಗಳವಾರ ಕೂಡ ನಗರದ ವಿವಿಧ ಭಾಗಗಳಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಈ ವೇಳೆ 2866 ವಾಹನಗಳನ್ನು ತಪಾಸಣೆ ನಡೆಸಲಾಗಿದ್ದು ಓಲಾ, ಮೇರು, ಉಬರ್ ಸೇರಿದಂತೆ ಸುಮಾರು 205 ಖಾಸಗಿ ವಾಹನಗಳ  ವಿರುದ್ಧ ಪ್ರಕರಣ ದಾಖಲಿಸಿ ಜಪ್ತಿ ಮಾಡಲಾಗಿದೆ’ ಎಂದು ಸಾರಿಗೆ ಇಲಾಖೆಯ ಆಯುಕ್ತ ಡಾ.ಆರ್‌. ರಾಮೇಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT