ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜನ್‌ ಮೇಲೆ ತೂಗುಗತ್ತಿ?

ವ್ಯಕ್ತಿ
Last Updated 28 ಮೇ 2016, 19:30 IST
ಅಕ್ಷರ ಗಾತ್ರ

ಈ ವರ್ಷದ ಸೆಪ್ಟೆಂಬರ್‌ನಲ್ಲಿ ತಮ್ಮ ಅಧಿಕಾರಾವಧಿಯ ಮೂರು ವರ್ಷ ಪೂರ್ಣಗೊಳಿಸಲಿರುವ ಭಾರತೀಯ ರಿಸರ್ವ್‌ ಬ್ಯಾಂಕ್‌ ಗವರ್ನರ್‌ ರಘುರಾಂ ರಾಜನ್‌ (53) ಈಗ ಚರ್ಚೆಯ ಕೇಂದ್ರ ಬಿಂದುವಾಗಿದ್ದಾರೆ.

ಅವರನ್ನು ಎರಡನೆ ಅವಧಿಗೆ ಮುಂದುವರೆಸಬಾರದು ಎನ್ನುವ ಕಾರಣಕ್ಕೆ ಕೇಂದ್ರದ ಆಡಳಿತಾರೂಢ ಎನ್‌ಡಿಎ ಸರ್ಕಾರದ ಕೆಲ ಪ್ರಭೃತಿಗಳೇ, ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ರಾಜನ್‌ ವಿರುದ್ಧ ಮುಗಿಬಿದ್ದು ತಮ್ಮ ಬತ್ತಳಿಕೆಯಲ್ಲಿನ ಒಂದೊಂದೇ ವಾಗ್ಬಾಣ ಪ್ರಯೋಗಿಸುತ್ತಿದ್ದಾರೆ.

ರಾಜನ್‌ ಎರಡನೆ ಅವಧಿಗೆ ಮುಂದುವರೆಯದಂತೆ ನೋಡಿಕೊಳ್ಳಲು, ಅವರನ್ನು ಷಿಕಾಗೊಗೆ ಮರಳಿ ಕಳಿಸಲು ಹಟ ತೊಟ್ಟವರಂತೆ ತೊಡೆ ತಟ್ಟಿ ನಿಂತಿದ್ದಾರೆ.

ಆರ್‌ಬಿಐ ಮುನ್ನಡೆಸಲು ರಾಜನ್‌ ಸೂಕ್ತ ವ್ಯಕ್ತಿಯೇ ಅಲ್ಲ ಎಂದು ಬಿಜೆಪಿಯ ಅನೇಕ ಸಚಿವರೂ ಖಾಸಗಿಯಾಗಿ ಬಡಬಡಿಸುತ್ತಿದ್ದಾರೆ. ಬಿಜೆಪಿ ಸಂಸದ ಸುಬ್ರಮಣಿಯನ್‌ ಸ್ವಾಮಿ ಇವರಿಗೆಲ್ಲ ದನಿಯಾಗಿದ್ದಾರೆ. ಕೆಲವರು ನೇಪಥ್ಯದಲ್ಲಿದ್ದುಕೊಂಡು ಹಲ್ಲು ಮಸೆಯುತ್ತಿದ್ದರೆ,

ಸುಬ್ರಹ್ಮಣಿಯನ್‌ ಸ್ವಾಮಿ ಅವರಂತೂ ಬಹಿರಂಗವಾಗಿಯೇ ಆರೋಪಗಳ ಕತ್ತಿ ಝಳಪಿಸುತ್ತ ಅವರ ತಲೆದಂಡಕ್ಕೆ ಪಟ್ಟು ಹಿಡಿದಿದ್ದಾರೆ. ಈ ಹಿಂದಿನ ‘ಯುಪಿಎ–2’  ಸರ್ಕಾರ ನೇಮಿಸಿದ ರಾಜನ್‌ ಅವರನ್ನು ಯಾವುದೇ ಕಾರಣಕ್ಕೂ ಎರಡನೆ ಅವಧಿಗೆ ಮುಂದುವರೆಸಬಾರದು ಎಂಬುದು ಅವರ ಆಗ್ರಹ.

‘ರಾಜನ್‌ ದೇಶದ ಅರ್ಥ ವ್ಯವಸ್ಥೆಯನ್ನು ಹಾಳು ಮಾಡಲು ದೃಢನಿಶ್ಚಯ ಮಾಡಿದ್ದು, ಅವರನ್ನು ಯಾವುದೇ ಕಾರಣಕ್ಕೂ ಎರಡನೆ ಅವಧಿಗೆ ಮುಂದುವರೆಸಲೇಬಾರದು’ ಎಂದು ಸ್ವಾಮಿ ದೊಡ್ಡ ದನಿಯಲ್ಲಿ ಚೀರುತ್ತಿದ್ದಾರೆ.

‘ಮಾನಸಿಕವಾಗಿ ಪೂರ್ಣ ಭಾರತೀಯರಲ್ಲದ ರಾಜನ್‌, ಗ್ರೀನ್‌ ಕಾರ್ಡ್‌ ಹೊಂದುವ ಮೂಲಕ ಅಮೆರಿಕದ ಪ್ರಜೆಯೂ ಆಗಿರುವುದರಿಂದ ಕೇಂದ್ರೀಯ ಬ್ಯಾಂಕ್‌ನ ಗವರ್ನರ್‌ ಹುದ್ದೆಯಲ್ಲಿ ಮುಂದುವರೆಯಲು ಅನರ್ಹ ವ್ಯಕ್ತಿಯಾಗಿದ್ದಾರೆ’ ಎಂದು ಕಟಕಿಯಾಡಿದ್ದಾರೆ.

ತಮ್ಮ ಲಾಭ ಹೆಚ್ಚಿಸಿಕೊಳ್ಳಲು ಬ್ಯಾಂಕ್‌ ಬಡ್ಡಿ ದರ ಕಡಿತಗೊಳಿಸಬೇಕು ಎಂದು ಬಡಬಡಿಸುತ್ತಿದ್ದ ಕಾರ್ಪೊರೇಟ್‌ ಸಂಸ್ಥೆಗಳ ಒತ್ತಡಕ್ಕೆ ಮಣಿಯದ ರಾಜನ್‌, ಹಂತ ಹಂತವಾಗಿ ಬಡ್ಡಿ ದರ ಇಳಿಸುವ ಮೂಲಕ ಉದ್ಯಮಿಗಳ ಕೆಂಗಣ್ಣಿಗೂ ಗುರಿಯಾಗಿದ್ದಾರೆ.

ಸೇವಾವಧಿ ಪೂರ್ಣಗೊಳಿಸುವ ಮುನ್ನವೇ ಅವರನ್ನು ಪದಚ್ಯುತಿಗೊಳಿಸುವ ಬಗ್ಗೆ ಗಂಟಲು ಹರಿದುಕೊಳ್ಳುತ್ತಿರುವ ರಾಜಕಾರಣಿಗಳ ನಡೆಯಲ್ಲಿ ರಾಜನ್‌ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಸಂಚಿನ ವಾಸನೆಯೂ ಕಂಡು ಬರುತ್ತಿದೆ. ತಮ್ಮ ಇದುವರೆಗಿನ ಸೇವಾವಧಿಯಲ್ಲಿ ಕಪ್ಪು ಚುಕ್ಕೆ ಅಂಟಿಸಿಕೊಳ್ಳದ ರಾಜನ್‌, ರಾಜಕಾರಣಿಗಳ ಟೀಕೆಗಳ ಅಬ್ಬರದ ಬಗ್ಗೆ ಕೊಂಚವೂ ತಲೆಕೆಡಿಸಿಕೊಂಡಿಲ್ಲ.

ದೇಶಿ ಅರ್ಥ ವ್ಯವಸ್ಥೆ ಸರಿದಾರಿಗೆ ತರಲು ದಿಟ್ಟ ನಿರ್ಧಾರ ಕೈಗೊಳ್ಳುತ್ತಿರುವ ರಾಜನ್‌ ಅವರನ್ನು ಆರ್‌ಬಿಐ ಗವರ್ನರ್‌ ಹುದ್ದೆಯಲ್ಲಿ ಸರ್ಕಾರ ಮುಂದುವರೆಸದಿದ್ದರೆ ಅವರೇನೂ ಕಳೆದುಕೊಳ್ಳುವುದಿಲ್ಲ. ದೇಶಿ ಅರ್ಥ ವ್ಯವಸ್ಥೆ ಮಾತ್ರ ಸಮರ್ಥ ಆರ್ಥಿಕ ತಜ್ಞನ ಮಾರ್ಗದರ್ಶನಕ್ಕೆ ಎರವಾಗಲಿದೆ. ಇದರಿಂದ ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಕೆಟ್ಟ ಹೆಸರು ಬರಲಿದೆಯಷ್ಟೆ.

ಬ್ಯಾಂಕ್‌ ಬಡ್ಡಿ ದರಗಳ ತೀವ್ರ ಸ್ವರೂಪದ ಕಡಿತದಿಂದ ಬ್ಯಾಂಕ್‌ ಠೇವಣಿ ಬಡ್ಡಿ ದರಗಳೂ ಕಡಿಮೆಯಾಗಿ ಸ್ಥಿರ ಠೇವಣಿದಾರರ, ಸಣ್ಣ ಉಳಿತಾಯಗಾರರ ಆದಾಯಕ್ಕೆ ಖೋತಾ ಬೀಳುವ ಅಪಾಯವನ್ನು ರಾಜನ್‌ ತಪ್ಪಿಸಿದ್ದರು.

ಇದೇ ಕಾರಣಕ್ಕೆ ಹಂತ ಹಂತವಾಗಿ ಬಡ್ಡಿ ದರ ಇಳಿಸಿ (ಶೇ 1.50) ಜಾಣ್ಮೆ ಮೆರೆದಿದ್ದರು. ಹಣದುಬ್ಬರಕ್ಕೆ ಕಡಿವಾಣ ಹಾಕಿ, ಭಾರತದ ಅರ್ಥ ವ್ಯವಸ್ಥೆ ಬಗ್ಗೆ ವಿದೇಶಿ ಬಂಡವಾಳ ಹೂಡಿಕೆದಾರರಲ್ಲಿ ಆತ್ಮವಿಶ್ವಾಸ ಮೂಡಿಸುವಲ್ಲಿ ಸಫಲರಾಗಿದ್ದಾರೆ. ಹೊಸ ಬ್ಯಾಂಕ್‌ಗಳ ಸ್ಥಾಪನೆಗೆ ಉದಾರವಾಗಿ ಲೈಸೆನ್ಸ್‌ ನೀಡಿ ಜಾಣ್ಮೆ ಮೆರೆದಿದ್ದಾರೆ.

ರಾಜನ್‌ ಕೈಗೊಂಡ ಕ್ರಮಗಳಿಗೆ ಜಾಗತಿಕ ಹೂಡಿಕೆದಾರರು ಮತ್ತು ಆರ್ಥಿಕ ತಜ್ಞರು ಶಹಬ್ಬಾಸ್‌ಗಿರಿಯನ್ನೂ ನೀಡಿದ್ದಾರೆ. ದೇಶಿ ಆರ್ಥಿಕತೆಯು ಕುಂಟುತ್ತ ಸಾಗಲು ರಾಜನ್‌ ಅವರ ಹಣಕಾಸು ನೀತಿಯೇ ಕಾರಣ ಎನ್ನುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲದಿರುವುದೂ ಸಾಬೀತಾಗಿದೆ.

ಅನಿಶ್ಚಿತ ಜಾಗತಿಕ ಆರ್ಥಿಕತೆಯ ಕಾರಣಕ್ಕೆ, ದೇಶಿ ಅರ್ಥ ವ್ಯವಸ್ಥೆ ರಕ್ಷಿಸಿಕೊಳ್ಳಲು ಕಠಿಣ ಸ್ವರೂಪದ ವಿತ್ತೀಯ ನೀತಿ ಅನುಸರಿಸುವಂತೆ ಅವರು ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ಇದರಿಂದಾಗಿ ಸರ್ಕಾರಿ ವೆಚ್ಚ ಹೆಚ್ಚಿಸಿ ತಮ್ಮ ಕಿಸೆ ಭರ್ತಿ ಮಾಡಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದ ಕೆಲವರಿಗೆ ರಾಜನ್‌ ನೀತಿ ಪಥ್ಯವಾಗಿರಲಿಲ್ಲ.

ವಿತ್ತೀಯ ಮತ್ತು ಹಣಕಾಸು ನೀತಿ ವಿಷಯದಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರೂ ರಾಜನ್‌ ಪರ ನಿಲುವು ತಳೆದಿರುವುದು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಸ್ಪಷ್ಟವಾಗುತ್ತಿದ್ದಂತೆ ರಾಜನ್‌ ಅವರನ್ನು ಗವರ್ನರ್‌ ಹುದ್ದೆಯಿಂದ ತೆರವುಗೊಳಿಸುವ ಪ್ರಯತ್ನಗಳಿಗೆ ಹೆಚ್ಚಿನ ವೇಗ ದೊರೆತಿದೆ.

ಜಾಗತಿಕ ಅರ್ಥ ವ್ಯವಸ್ಥೆ ಬಗ್ಗೆ ವಿಶಿಷ್ಟ ಒಳನೋಟ ಹೊಂದಿರುವ ರಾಜನ್‌ ಅವರ ವಿಚಾರಗಳಿಗೆ ವಿಶ್ವದಾದ್ಯಂತ ಅರ್ಥಶಾಸ್ತ್ರಜ್ಞರಲ್ಲಿ ಅಪಾರ ಮನ್ನಣೆ ಇದೆ. ಜಾಗತಿಕ ಹಣಕಾಸು ಬಿಕ್ಕಟ್ಟಿನ ಬಗ್ಗೆ ರಾಜನ್‌ ನುಡಿದ ಭವಿಷ್ಯ 2008ರಲ್ಲಿ ನಿಜವಾಗಿತ್ತು. ಜಾಗತಿಕ ಮಟ್ಟದಲ್ಲಿ, ಕೇಂದ್ರೀಯ ಬ್ಯಾಂಕ್‌ಗಳ ಅತ್ಯುತ್ತಮ ಗವರ್ನರ್‌ ಎನ್ನುವ ಅಭಿವಾದನಕ್ಕೂ ಇವರು ಪಾತ್ರರಾಗಿದ್ದಾರೆ.

ಭೋಪಾಲ್‌ನಲ್ಲಿ ತಮಿಳು ಬ್ರಾಹ್ಮಣ ಕುಟುಂಬದಲ್ಲಿ 1963ರಲ್ಲಿ ಜನಿಸಿದ ರಾಜನ್‌, ದೆಹಲಿ ‘ಐಐಟಿ’ಯ  ಬಿ.ಟೆಕ್‌,  ‘ಐಐಐಂ–ಎ’ದ ಎಂಬಿಎ ಮತ್ತು ಷಿಕಾಗೊ ವಿಶ್ವವಿದ್ಯಾಲಯದಿಂದ ಪಿಎಚ್‌.ಡಿ ಪಡೆದಿದ್ದಾರೆ. 

ಅರ್ಥ ವ್ಯವಸ್ಥೆಯಲ್ಲಿ ಹಣಕಾಸು ಮಾರುಕಟ್ಟೆಯು ಪ್ರಮುಖ ಪಾತ್ರ ವಹಿಸುವುದನ್ನು ಇವರು ಬಲವಾಗಿ ಪ್ರತಿಪಾದಿಸುತ್ತಾರೆ. ಹಣಕಾಸು ಮಾರುಕಟ್ಟೆಯನ್ನು ನಿಯಂತ್ರಣ ಮುಕ್ತಗೊಳಿಸುವುದರಿಂದ ಸಂಪತ್ತು ಸೃಷ್ಟಿಯಾಗಿ ಆರ್ಥಿಕ ಅವಕಾಶಗಳು ಹೆಚ್ಚಲಿವೆ ಎನ್ನುವುದು ಅವರ ಆರ್ಥಿಕ ನಿಲುವಾಗಿದೆ.
2012ರಲ್ಲಿ ರಾಜನ್‌, ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿ ನೇಮಕಗೊಂಡಿದ್ದರು.

2013ರ ಆಗಸ್ಟ್‌ನಲ್ಲಿ ಆರ್‌ಬಿಐ ಗವರ್ನರ್‌ ಆಗಿ ನೇಮಕಗೊಂಡಿದ್ದಾರೆ. ಆರ್‌ಬಿಐನ 23ನೇ ಗವರ್ನರ್‌ ಹುದ್ದೆ ನಿಭಾಯಿಸುತ್ತಿರುವ ರಾಜನ್‌, 2003ರಿಂದ 2007ರವರೆಗೆ ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್‌) ಮುಖ್ಯ ಆರ್ಥಿಕತಜ್ಞರಾಗಿದ್ದರು. ಈ ಹುದ್ದೆಗೆ ಏರಿದ ಅತ್ಯಂತ ಕಿರಿಯ ವ್ಯಕ್ತಿ ಇವರಾಗಿದ್ದಾರೆ ಎನ್ನುವುದು ಇವರ ಪ್ರಖರ ವಿದ್ವತ್ತಿಗೆ, ವಿಶಿಷ್ಟ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿಯುತ್ತದೆ.

ಬ್ಯಾಂಕಿಂಗ್‌ ಸುಧಾರಣಾ ಕ್ರಮಗಳು, ಹಣದುಬ್ಬರ ನಿಯಂತ್ರಣ, ಉಳಿತಾಯ ಹೆಚ್ಚಳ, ಮುಕ್ತ ಮಾರುಕಟ್ಟೆ ವ್ಯವಸ್ಥೆ  ಜಾರಿಗೆ ತರುವುದು ಅವರ ಮೊದಲ ಆದ್ಯತೆಗಳಾಗಿವೆ.

ವಸೂಲಾಗದ ಸಾಲದ ಸುಳಿಯಲ್ಲಿ ಸಿಲುಕಿರುವ ಬ್ಯಾಂಕಿಂಗ್‌ ಕ್ಷೇತ್ರಕ್ಕೆ ಶಸ್ತ್ರಚಿಕಿತ್ಸೆ ನಡೆಸಲು ಮುಂದಾಗಿರುವ ರಾಜನ್‌, ಬ್ಯಾಂಕ್‌ಗಳು ತಮ್ಮ ಹಣಕಾಸು ಪರಿಸ್ಥಿತಿ  ಸುಧಾರಿಸಲು 2017ರ ಮಾರ್ಚ್‌ಗೆ ಗಡುವು ನಿಗದಿಪಡಿಸಿದ್ದಾರೆ.

‘ಉದ್ದೇಶಪೂರ್ವಕ ಸುಸ್ತಿದಾರರ’ ಹೆಸರುಗಳನ್ನು ಬಹಿರಂಗಪಡಿಸಲೂ ಮುಂದಾಗಿದ್ದಾರೆ. ಸುಸ್ತಿದಾರರು ಮತ್ತು ಅವರ ಬೆಂಬಲಕ್ಕೆ ನಿಂತಿರುವ ರಾಜಕಾರಣಿಗಳಿಗೆ ರಾಜನ್‌ ಅವರ ನಡೆ ನಡುಕ ಉಂಟು ಮಾಡಿರುವುದು ಸುಳ್ಳಲ್ಲ.

‘ದೇಶದಲ್ಲಿ ಅಸಹಿಷ್ಣುತೆಯ ವಾತಾವರಣ ಸೃಷ್ಟಿಯಾಗಿರುವ’ ಬಗ್ಗೆ ಮತ್ತು ದೇಶದ ಅರ್ಥ ವ್ಯವಸ್ಥೆಯನ್ನು ‘ಕುರುಡರ ನಾಡಿನಲ್ಲಿನ ಒಕ್ಕಣ್ಣಿನ ದೊರೆ’ಗೆ ಹೋಲಿಸಿದ್ದು  ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು.

ಈ ಹಿಂದೆ ಗವರ್ನರ್‌ ಹುದ್ದೆ ನಿಭಾಯಿಸಿದ್ದ ನಾಲ್ವರು ಐದು ವರ್ಷ (3+2) ಪೂರ್ಣಗೊಳಿಸಿರುವುದರಿಂದ ರಾಜನ್‌ ಅವರ ಸೇವಾವಧಿಯೂ ವಿಸ್ತರಣೆಗೊಳ್ಳಲಿದೆ ಎಂದೇ ಬಹುವಾಗಿ ನಿರೀಕ್ಷಿಸಲಾಗಿದೆ.

ಪ್ರವರ್ಧಮಾನಕ್ಕೆ ಬರುತ್ತಿರುವ ಆರ್ಥಿಕತೆಗಳಲ್ಲಿ ರಾಜನ್‌ ಅವರು ಅತ್ಯುತ್ತಮ ಕೇಂದ್ರೀಯ ಬ್ಯಾಂಕ್‌ ಗವರ್ನರ್ ಎನ್ನುವ ಮನ್ನಣೆಗೆ ಪಾತ್ರವಾಗಿರುವುದು ಅವರ ಸೇವಾವಧಿ ವಿಸ್ತರಣೆಗೆ ಒತ್ತಾಸೆಯಾಗಿ ನಿಲ್ಲಲಿದೆ.

​ರಹಸ್ಯ ಕಾರ್ಯಸೂಚಿಯ ರಾಜಕೀಯ ಉದ್ದೇಶ ಸಾಧನೆಗೆ ​ರಾಜನ್‌ ಅವರನ್ನು ಬಲಿಪಶು ಮಾಡುವ ಹುನ್ನಾರ ನಡೆಯುತ್ತಿರುವುದು ಸುಳ್ಳಲ್ಲ. ತಮ್ಮ ಉದ್ದೇಶ ಸಾಧನೆಯಲ್ಲಿ ರಾಜಕಾರಣಿಗಳು ಸಫಲರಾದರೆ ಅದರಿಂದ ಇಡೀ ವಿಶ್ವಕ್ಕೆ ತಪ್ಪು ಸಂದೇಶ ನೀಡಿದಂತಾಗುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT