ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜೀವ್‌ ಆರೋಗ್ಯ ಭಾಗ್ಯ ಶೀಘ್ರ ಜಾರಿ

‘ವಾಜಪೇಯಿ ಆರೋಗ್ಯಶ್ರೀ’ ಮಾದರಿ ಎಪಿಎಲ್‌ ಕಾರ್ಡ್‌ದಾರರಿಗೆ ಯೋಜನೆ
Last Updated 8 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ರಾಜ್ಯದ ಕಡು ಬಡವ­ರಿಗಾಗಿ ಜಾರಿಗೊಳಿಸಿರುವ ‘ವಾಜಪೇಯಿ ಆರೋಗ್ಯಶ್ರೀ ಯೋಜನೆ’ (ವಿಎಎಸ್‌) ಮಾದರಿ­ಯಲ್ಲೇ ಬಡತನ ರೇಖೆಗಿಂತ ಮೇಲಿ­ರುವ (ಎಪಿಎಲ್‌) ಕಾರ್ಡು­ದಾರ­ರಿಗೆ ‘ರಾಜೀವ್‌ ಆರೋಗ್ಯ ಭಾಗ್ಯ’ ಮತ್ತು ಸರ್ಕಾರಿ ನೌಕರರಿಗಾಗಿ ‘ಜ್ಯೋತಿ ಸಂಜೀವಿನಿ’ ಯೋಜನೆ ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್‌ ತಿಳಿಸಿದರು.

ಜ್ಯೋತಿ ಸಂಜೀವಿನಿ ಯೋಜನೆಗೆ ಸಚಿವ ಸಂಪುಟದ ಒಪ್ಪಿಗೆ ದೊರೆತಿದೆ. ರಾಜೀವ್‌ ಆರೋಗ್ಯ ಭಾಗ್ಯ ಪರಿಷ್ಕೃತ ಯೋಜನೆ ಸಂಪುಟದ ಅನುಮತಿಗಾಗಿ ಕಾದಿದೆ. ಇದರಡಿ ಕ್ಯಾನ್ಸರ್‌, ಹೃದಯ ಸಂಬಂಧಿತ ಕಾಯಿಲೆಗಳ ಚಿಕಿತ್ಸೆಗೆ ತಗ­ಲುವ ವೆಚ್ಚದಲ್ಲಿ ಶೇ 30ರಷ್ಟನ್ನು ಎಪಿಎಲ್‌ ಫಲಾನುಭವಿಗಳು ಪಾವತಿಸ­ಬೇಕು. ಮಿಕ್ಕ ಹಣವನ್ನು ಆರೋಗ್ಯ ವಿಮಾ ಯೋಜನೆಯಿಂದ ಬಿಡುಗಡೆ ಮಾಡ­­­ಲಾಗುವುದು ಎಂದು ಖಾದರ್‌  ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಅಪಘಾತಗಳಲ್ಲಿ ಗಂಭೀರವಾಗಿ ಗಾಯಗೊಳ್ಳುವವರ ಚಿಕಿತ್ಸೆಗೆ ₨ 25 ಸಾವಿರದವರೆಗೆ ನೆರವು ನೀಡುವ ‘ಮುಖ್ಯ­ಮಂತ್ರಿ ಸಾಂತ್ವನ ಯೋಜನೆ’ ಕಾರ್ಯ­ಗತ­ವಾಗಲಿದೆ. ಈ ಯೋಜನೆ ಹೊರಗಿ­ನಿಂದ ಬಂದು ರಾಜ್ಯದಲ್ಲಿ ಅಪ­ಘಾತ­ಕ್ಕೀಡಾ­ದವರಿಗೂ  ಅನ್ವಯ­ವಾಗ­ಲಿದೆ. ಹಣ­ವಿಲ್ಲದ ಕಾರಣಕ್ಕೆ ಸಕಾಲಿಕ ಚಿಕಿತ್ಸೆಯಿಂದ ಯಾರೂ ವಂಚಿತ­ರಾಗಬಾರದು ಎನ್ನು­ವುದು ಸರ್ಕಾರದ ಉದ್ದೇಶ ಎಂದರು.

ವಾಜಪೇಯಿ ಆರೋಗ್ಯಶ್ರೀ, ರಾಜೀವ್‌ ಆರೋಗ್ಯ ಭಾಗ್ಯ, ಜ್ಯೋತಿ ಸಂಜೀವಿನಿ ಮತ್ತು ಮುಖ್ಯಮಂತ್ರಿ ಸಾಂತ್ವನ ಯೋಜನೆಗಳಿಂದ ಸರ್ಕಾರಕ್ಕೆ ವರ್ಷಕ್ಕೆ ಸುಮಾರು ₨ 400 ಕೋಟಿ ಖರ್ಚಾಗಲಿದೆ. ಈ ವರ್ಷದ ಅಂತ್ಯದೊಳಗೆ ಮೂರೂ ಯೋಜನೆಗಳು ಅನುಷ್ಠಾನವಾಗಲಿದ್ದು, 4.25 ಕೋಟಿ ಜನರಿಗೆ ಪ್ರಯೋಜನ ದೊರೆಯಲಿದೆ ಎಂದು ಖಾದರ್‌ ವಿವರಿಸಿದರು.

ರಾಜ್ಯ ಸರ್ಕಾರ ಜನರ ಆರೋಗ್ಯ ರಕ್ಷಣೆಗೆ ಮಹತ್ವ ನೀಡುತ್ತಿದೆ. ನಮ್ಮ ಆರೋಗ್ಯ ಮಾದರಿಗಳನ್ನು ಗುಜರಾತ್‌ ಅಳವಡಿಸಿಕೊಂಡಿದೆ. ಇನ್ನೂ ಅನೇಕ ರಾಜ್ಯಗಳು ವಿಮಾ ಯೋಜನೆ ಕುರಿತು ಮಾಹಿತಿ ಪಡೆಯುತ್ತಿವೆ. ಯೋಜನೆ ದುರುಪಯೋಗ ಆಗುವುದನ್ನು ತಪ್ಪಿ­ಸಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳ­ಲಾ­ಗಿದೆ. ಯೋಜನೆಯ ಉಸ್ತು­ವಾರಿ ‘ಸ್ವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌’ ನೋಡಿಕೊಳ್ಳುತ್ತಿದೆ ಎಂದು ಟ್ರಸ್ಟ್‌ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಪಿ. ಬೋರೇಗೌಡ ನುಡಿದರು.

ರಾಜೀವ್‌ ಆರೋಗ್ಯ ಭಾಗ್ಯ ಯೋಜನೆ ಕಳೆದ ವರ್ಷ ಜಾರಿಗೆ ಬಂದಿತ್ತು. ಮೊದಲಿಗೆ ಫಲಾನುಭವಿಗಳು ಶೇ 10ರಷ್ಟು ಹಣ ಪಾವತಿಸಿದರೆ ಸಾಕಿತ್ತು. ಉಳಿದ ಶೇ 90 ರಷ್ಟು ಹಣ­ವನ್ನು ಯೋಜನೆಯಿಂದ ಪಾವತಿಸ­ಲಾಗು­ತ್ತಿತ್ತು. ಆದರೆ, ಖಾಸಗಿ ಆಸ್ಪತ್ರೆ­ಗಳು ಬೇಡಿ­ಕೆಗೆ ಅನುಗುಣವಾಗಿ ಶೇ 30:70 ಅನು­ಪಾತಕ್ಕೆ ಪರಿಷ್ಕರಿಸ­ಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವಿಮಾ ಯೋಜನೆಗೆ ಹೊಂದಿರುವ ರೋಗಿಗಳ ಚಿಕಿತ್ಸೆಗೆ 150 ಆಸ್ಪತ್ರೆಗಳನ್ನು ಗುರುತಿಸಲಾಗಿದೆ. ಹೈದರಾಬಾದ್‌– ಕರ್ನಾಟಕ ಮತ್ತು ಮುಂಬೈ– ಕರ್ನಾಟಕ  ಭಾಗದ ರೋಗಿಗಳ ಹಿತದೃಷ್ಟಿಯಿಂದ ಆಂಧ್ರ ಮತ್ತು ಮಹಾರಾಷ್ಟ್ರದ ಕೆಲವು ಆಸ್ಪತ್ರೆಗಳನ್ನು ಪಟ್ಟಿ ಮಾಡಲಾಗಿದೆ.

ಶಸ್ತ್ರ ಚಿಕಿತ್ಸೆಗೆ ಒಳಗಾಗುವ ರೋಗಿಗಳ ಆರೋಗ್ಯದ ಮೇಲೆ ನಿರಂತರವಾಗಿ ನಿಗಾ ಇಡಲಾಗಿದೆ. ಮೂರು ತಿಂಗಳಿಗೊಮ್ಮೆ ಉಚಿತ ಔಷಧ ಕೊಡಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶಿವಶೈಲಂ ತಿಳಿಸಿದರು.

ಶಸ್ತ್ರಚಿಕಿತ್ಸೆ ಅಗತ್ಯವಿರುವ ಪ್ರಕರಣ­ಗಳಿಗೆ ಒಂದು ದಿನದೊಳಗೆ ಟ್ರಸ್ಟ್ ಒಪ್ಪಿಗೆ ನೀಡಲಿದೆ. ಶಸ್ತ್ರಚಿಕಿತ್ಸೆ ಮುಗಿದ ಏಳು ದಿನದೊಳಗಾಗಿ ಆಸ್ಪತ್ರೆ ಖಾತೆಗೆ ಹಣ ಜಮಾ ಆಗಲಿದೆ ಎಂದರು.

ವಾಜಪೇಯಿ ಆರೋಗ್ಯಶ್ರೀ ಯೋಜನೆ 2010ರಲ್ಲಿ ಜಾರಿಗೆ ಬಂದಿದೆ. ಇದು ವಿಶ್ವಬ್ಯಾಂಕ್‌ ನೆರವಿನ ಯೋಜನೆ ಆಗಿದ್ದು ಐದು ವರ್ಷಗಳ ಅವಧಿಗೆ 27ಸಾವಿರ ದಶಲಕ್ಷ ಡಾಲರ್‌ ನೆರವು ನೀಡಲಾಗಿದೆ ಎಂದು ವಿಶ್ವಬ್ಯಾಂಕಿನ ಸೋಮಿಲ್‌ ನಾಗಪಾಲ್‌ ತಿಳಿಸಿದರು.

ಆರೋಗ್ಯ ವಿಮೆ ಯೋಜನೆಯಿಂದಾಗಿ  ಅಕಾಲಿಕವಾಗಿ ಸಾಯುವವರ ಸಂಖ್ಯೆ ಶೇ 64ರಷ್ಟು ಕಡಿಮೆ ಆಗಿದೆ. ಬಿಡಿಗಾಸು ಖರ್ಚಿಲ್ಲದೆ ಶೇ 60ರಷ್ಟು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ವಿಶ್ವಬ್ಯಾಂಕ್‌ ಸಂಶೋ­ಧನಾ ತಂಡದ ನೀರಜ್‌ ಸೂದ್‌ ಸ್ಪಷ್ಟಪಡಿಸಿದರು. ವಿಶ್ವಬ್ಯಾಂಕ್‌ ಸಂಶೋ­ಧನಾ ತಂಡ ರಾಜ್ಯದ 600 ಗ್ರಾಮಗಳ 80ಸಾವಿರ ಕುಟುಂಬಗಳನ್ನು ಅಧ್ಯಯನ ಮಾಡಿದೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT