ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಒಡೆಯುವವರು ಬುದ್ಧಿಗೇಡಿಗಳು

Last Updated 24 ನವೆಂಬರ್ 2014, 10:09 IST
ಅಕ್ಷರ ಗಾತ್ರ

ತಿಪಟೂರು: ಸಮಗ್ರ ಕರ್ನಾಟಕವನ್ನು ಒಡೆದು ವಿಭಜಿಸುವ ಮಾತೆತ್ತುವವರು ಶತಮೂರ್ಖರು ಮತ್ತು ಬುದ್ಧಿಗೇಡಿ­ಗಳು ಎಂದು ಹಿರಿಯ ಪತ್ರಕರ್ತ, ಡಾ.ಪಾಟೀಲ ಪುಟ್ಟಪ್ಪ ಟೀಕಿಸಿದರು.

ನಗರದಲ್ಲಿ ಭಾನುವಾರ ನಡೆದ ಸಿಡ್ಲೇಹಳ್ಳಿ ಮಹಾಸಂಸ್ಥಾನ ಗುರುಕು­ಲಾನಂದಾಶ್ರಮದ ಹಿರಿಯ ಲಿಂಗೈಕ್ಯ ಸ್ವಾಮೀಜಿ ಸಂಸ್ಮರಣೆ ಮತ್ತು ಇಮ್ಮಡಿ ಕರಿಬಸವ ದೇಶಿಕೇಂದ್ರ ಸ್ವಾಮೀಜಿ 18ನೇ ಪೀಠಾರೋಹಣ ಹಾಗೂ ಶರಣ ಧರ್ಮ ಚಿಂತನಾ ಸಮಾರಂಭದಲ್ಲಿ ಅವರು `ಗುರುಕುಲಶ್ರೀ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಹಲ ಮಹನೀಯರ ಹೋರಾಟದ ಫಲವಾಗಿ ಕರ್ನಾಟಕ ಏಕೀಕರಣ­ಗೊಂಡಿದೆ. ಒಂದು ಮನೆಯಂತೆ ನಾವೆಲ್ಲಾ ನಾಡು ಮುನ್ನಡೆಸಬೇಕಿದೆ. ಅದನ್ನು ಬಿಟ್ಟು ನಾಡು ಒಡೆಯುವ ಮಾತೆತ್ತಿ ರಾಜಕೀಯ ಲಾಭ ಪಡೆ­ಯಲು ಹವಣಿಸುತ್ತಿರುವ ಉಮೇಶ್ ಕತ್ತಿ ಅಂಥವರಿಗೆ ಜನರೇ ಪಾಠ ಕಲಿಸ­ಬೇಕು. ಕತ್ತಿ ಕತ್ತೆಯಂತಹ ಮಾತಾ­ಡುತ್ತಿದ್ದರೂ ಸಹಿಸಿ ಸುಮ್ಮನಿರುವುದು ಸಲ್ಲದು ಎಂದರು.

ಸಂಸದ ಎಸ್.ಪಿ. ಮುದ್ದಹನುಮೇ­ಗೌಡ ಮಾತನಾಡಿ, ವಿಜ್ಞಾನ ತುತ್ತ ತುದಿ ಮುಟ್ಟಿರುವ ಕಾಲದಲ್ಲಿ ಮನುಷ್ಯ ತನಗೆ ಬೇಕಾದ್ದನ್ನು ಪಡೆದರೂ ಶಾಂತಿ, ನೆಮ್ಮದಿ ಇಲ್ಲದೆ ಒದ್ದಾಡುತ್ತಿದ್ದಾನೆ. ಸಂದಿಗ್ಧ, ಕ್ಲಿಷ್ಟ ಪರಿಸ್ಥಿತಿಯಲ್ಲಿ ನೆಮ್ಮದಿ ಹುಡುಕಾಟದಲ್ಲಿದ್ದಾನೆ. ಧಾರ್ಮಿಕ ಚಿಂತನೆಯ ಲೇಪನ ಮಾತ್ರ ಮನುಷ್ಯನ ಬದುಕನ್ನು ಅರ್ಥಪೂರ್ಣ ಮಾಡ­ಬಲ್ಲದು ಎಂದರು.

ಶಾಸಕ ಕೆ.ಷಡಕ್ಷರಿ ಗುರುಕುಲಶ್ರೀ ತ್ರೈಮಾಸಿಕ ಪತ್ರಿಕೆ ಬಿಡುಗಡೆ ಮಾಡಿ, ಶಿಕ್ಷಣ ಕ್ಷೇತ್ರಕ್ಕೆ ಸರ್ಕಾರ ಹೆಚ್ಚು ಹಣ ನೀಡುವ ಸಾಮರ್ಥ್ಯ ಇಲ್ಲದಿದ್ದಾಗ ಮಠ­ಗಳು ಅಂತಹ ಸೇವೆ ಮಾಡಿವೆ ಎಂದರು. ಗುರುಕುಲಾನಂದಾಶ್ರಮದ ಇಮ್ಮಡಿ ಕರಿಬಸವದೇಶಿಕೇಂದ್ರ ಸ್ವಾಮೀಜಿ  ಮಾತನಾಡಿ, ಜಾತಿ, ವರ್ಣ, ವರ್ಗ­ರಹಿತ ಸಮಾಜ ನಿರ್ಮಾಣವು 800 ವರ್ಷ ಕಳೆದರೂ ನನಸಾಗಿಲ್ಲ. ಈ ಬಗ್ಗೆ ಎಲ್ಲರೂ ಆತ್ಮವಿಮರ್ಶೆ ಮಾಡಿ­ಕೊಳ್ಳಬೇಕಿದೆ ಎಂದರು.

ಎಂ.ಟಿ. ವಿಶ್ವನಾಥಯ್ಯ ಅವರ `ಆಷ್ಟ್ರಲೇಷಿಯಾದಲ್ಲಿ ಬಸವ ಜಯಂತಿ’ ಗ್ರಂಥವನ್ನು ಮಾಜಿ ಸಂಸದ ಜಿ.ಎಸ್. ಬಸವರಾಜು ಬಿಡುಗಡೆಗೊಳಿಸಿದರು. ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ.ಹೊ.ಶ್ರೀನಿವಾಸಯ್ಯ ಅವರು ದಿನದರ್ಶಿಕೆ ಬಿಡುಗಡೆಗೊಳಿಸಿದರು.
ಗೋಡೇಕೆರೆ ಮೃತ್ಯುಂಜಯ ದೇಶಿ­ಕೇಂದ್ರ ಸ್ವಾಮೀಜಿ, ಡಾ.ಶಿವಾನಂದ ಶಿವಾ­ಚಾರ್ಯ ಸ್ವಾಮೀಜಿ, ಲೋಹಿ­ಯಾ ಪ್ರಕಾಶನದ ಸಿ.ಚನ್ನಬಸ­ವಣ್ಣ, ಮಾಜಿ ಶಾಸಕ ಬಿ.ಸಿ.ನಾಗೇಶ್, ಪ್ರಾಂಶು­­ಪಾಲ ಡಾ.ಜಯದೇವಪ್ಪ, ವಕೀಲ ಚನ್ನೇಗೌಡ, ವಿದ್ವಾನ್ ಸಿ.ಎಸ್. ಸಿದ್ದಲಿಂಗಶಾಸ್ತ್ರಿ, ಗುರುಕುಲಾ­ನಂದಾ­ಶ್ರಮದ ಸಿಇಒ ಹರಿಪ್ರಸಾದ್ ಮತ್ತಿತರರಿದ್ದರು. ಗುರುಕುಲ ಎಜು­ಕೇಷನ್ ಮತ್ತು ಚಾರಿ­­ಟಬಲ್ ಟ್ರಸ್ಟ್‌ ತೀವ್ರ ನಿಗಾ ಘಟಕದ ಆಂಬುಲೆನ್ಸ್ ಲೋಕಾರ್ಪಣೆ ಮಾಡಲಾಯಿತು.

ಹರಿದ ಕೋಟಿನ ನೆಹರು: ಪಾಪು
ನೆಹರು ಅವರ ಮೇಲೆ ಹಲವಾರು ಟೀಕೆ ವ್ಯಕ್ತವಾಗುತ್ತಿವೆ. ಆದರೆ ಅವರು ಉದಾತ್ತ ಚಿಂತನೆಯುಳ್ಳ ನಾಯಕರಾಗಿದ್ದರು ಎಂಬುದನ್ನು ಕಣ್ಣಾರೆ ಕಂಡಿದ್ದೇನೆ. ನೆಹರು ನಿಧನರಾಗುವ ಒಂದೆರಡು ತಿಂಗಳು ಮೊದಲು ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರ ಜತೆಯಲ್ಲಿ ನೆಹರು ಅವರನ್ನು ಭೇಟಿಯಾಗಿದ್ದೆ. ಅವರು ಹರಿದಿದ್ದ ಕೋಟನ್ನೇ ಹೊಲೆದು ಹಾಕಿಕೊಂಡಿದ್ದರು.

ಆ ಕಡೆ ನನ್ನ ಗಮನ ನೆಟ್ಟಾಗ `ನನ್ನ ಹರಿದ ಕೋಟು ನೋಡುತ್ತಿದ್ದೀರಾ’ ಎಂದು ನೆಹರು ಕೇಳಿದ್ದರು. `ಹೊಸ ಕೋಟು ಕೊಳ್ಳಲು ಕೂಡ ನನ್ನಲ್ಲಿ ಹಣವಿಲ್ಲ’ ಎಂದಿದ್ದರು. ರಾಷ್ಟ್ರದ ಮೊದಲ ಪ್ರಧಾನಿಯಾಗಿದ್ದ ನೆಹರು ನಿಜವಾಗಲೂ ಅಂಥ ಪರಿಸ್ಥಿತಿಯಲ್ಲಿ ಇದ್ದರು. ಮೊರಾರ್ಜಿ ದೇಸಾಯಿ ಕೂಡ ರಾಜಕೀಯ ತಾತ್ವಿಕತೆ ಉಳಿಸಿ­ಕೊಂಡಿ­ದ್ದರು. ದುಡ್ಡು ಮಾಡಲೆಂದೇ ಅಧಿಕಾರಕ್ಕೆ ಹಂಬಲಿಸುವ ಈಗಿನ ರಾಜ­ಕಾರಣಿ­ಗಳನ್ನು ನೋಡಿದರೆ ಅಸಹ್ಯವಾಗುತ್ತದೆ ಎಂದು ಪಾಟೀಲ ಪುಟ್ಟಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT