ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಧಾಕೃಷ್ಣರ ಪ್ರೇಮ ಮಣ್ಣಿನ ಘಮ

Last Updated 16 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಕೆಂಪು ಮಣ್ಣಿನ ವಿಶಾಲವಾದ ಬಯಲು. ಸುತ್ತಲು ಗದ್ದೆ ತೋಟ. ಬಯಲಿನ ಮಧ್ಯೆ ಸುಮಾರು 50 ವರ್ಷಗಳ ಹಳೆಯ ಪುಟ್ಟ ಮನೆ. ಅದರ ಎದುರು ತೆಂಗಿನ ಮರ, ಮತ್ತೂ ಮುಂದೆ ದನದ ಕೊಟ್ಟಿಗೆ. ಕರ್ಣ ಕಠೋರ ಶಬ್ದ ಮಾಡುತ್ತ ಮುಂಗೈ ಎತ್ತಿ ರುದ್ರತಾಂಡವದಲ್ಲಿ ತೊಡಗಿರುವ ಮೂರು ಜೆಸಿಬಿ ಯಂತ್ರಗಳು– ಮೊದಲು ಕೊಟ್ಟಿಗೆ, ನಂತರ ತೆಂಗಿನ ಮರ... ಹೀಗೆ ಒಂದೊಂದನ್ನೇ ನೆಲಸಮ ಮಾಡುತ್ತ ಬಂದು ಮನೆಯ ಎದುರು ಕೈಯೆತ್ತಿ ನಿಂತಿವೆ.

‘ಮನೆಯನ್ನು ಏನೂ ಮಾಡಬೇಡಿ’ ಎಂದು ಗೋಳಾಡುತ್ತ ಮನೆಯೊಳಗೆ ಓಡುವ ಯುವತಿ. ಆಕೆಯನ್ನು ದರದರನೆ ಹೊರಗೆಳೆದು ತಂದು ಮನೆಯ ನಾಶಕ್ಕೆ ಅನುವು ಮಾಡಿಕೊಡುವ ಪೊಲೀಸರು. ಮಾಧ್ಯಮದವರು ಹಾಗೂ ನೂರಾರು ಜನರ ಕಣ್ಣೆದುರೇ ಈ ಘಟನೆ ನಡೆದುಹೋಯಿತು.

ಆದರೆ, ದುರಂತದ ಘಟನೆಗಳನ್ನು ಕಣ್ತುಂಬಿಕೊಂಡ ಜನರ ಮನದಲ್ಲಿ ಆಘಾತದ ಬದಲಾಗಿ ಸಂತಸ ಮೂಡಿತ್ತು. ಅದು ಮನೆ ಕೆಡವಿದ ಸಂತಸ ಅಲ್ಲ. ಸಿನಿಮಾ ಚಿತ್ರೀಕರಣವನ್ನು ನೋಡಲು ಸಿಕ್ಕ ಅವಕಾಶಕ್ಕಾಗಿ ಆ ಸಂತಸ. ಇಷ್ಟಕ್ಕೂ ಮನೆ ಕೆಡವಿದ್ದು ನಿಜ. ಆದರೆ ಅದು ಕಾರ್ಕಳದ ಬೈಲೂರಿನ ಸಮೀಪ ನಡೆಯುತ್ತಿರುವ ‘ರಿಕ್ಕಿ’ ಚಿತ್ರದ ಚಿತ್ರೀಕರಣ ಎನ್ನುವುದು ವಾಸ್ತವ.

ಮನೆ ಉರುಳಿಸಿದ್ದು ಸಿನಿಮಾಗಾಗಿ ಆದರೂ 2010ರಲ್ಲಿ ಇಂತಹದ್ದೊಂದು ನೈಜ ಘಟನೆ ಈ ಊರಿನ ಮಗ್ಗುಲಲ್ಲಿ ನಡೆದಿದೆ. ಸ್ಟೇ ಆರ್ಡರ್ ಇದ್ದರೂ ‘ಎಸ್‌ಇಜೆಡ್’ ಹೆಸರಿನಲ್ಲಿ ರೈತನೊಬ್ಬನ ಮನೆಯನ್ನು ಸರ್ಕಾರ ಉರುಳಿಸಿತ್ತು. ಆ ಕುಟುಂಬ ಈಗಲೂ ನ್ಯಾಯಕ್ಕಾಗಿ ಹೋರಾಡುತ್ತಿದ್ದು, ಹಳೆಯ ಮನೆ ಇರುವ ಸ್ಥಳದಲ್ಲೇ ಗುಡಿಸಲು ಕಟ್ಟಿಕೊಂಡು ಜೀವನ ಸಾಗಿಸುತ್ತಿದೆ. ನಿರ್ದೇಶಕ ರಿಷಬ್ ಶೆಟ್ಟಿ ‘ರಿಕ್ಕಿ’ ಕಥೆ

ಬರೆಯುವ ಸಂದರ್ಭದಲ್ಲೇ ಈ ಘಟನೆ ನಡೆದಿತ್ತು. ಚಿತ್ರಕ್ಕೆ ಇಂತಹ ಒಂದು ಗಟ್ಟಿ ಸಾಮಾಜಿಕ ಎಳೆಯ ಅವಶ್ಯಕತೆ ಇರುವುದನ್ನು ಮನಗಂಡು ಅದನ್ನು ಚಿತ್ರದಲ್ಲಿ ಅಳವಡಿಸಿಕೊಂಡಿದ್ದಾರೆ.

ಮನೆ ಉರುಳಿಸುವ ದೃಶ್ಯ ಚಿತ್ರದ ಕ್ಲೈಮ್ಯಾಕ್ಸ್. ಅದು ಚಿತ್ರದ ಪ್ರಮುಖ ದೃಶ್ಯಗಳಲ್ಲೊಂದು. ಅದಕ್ಕಾಗಿ ತಂಡ ಸಾಕಷ್ಟು ಸಿದ್ಧತೆ ನಡೆಸಿದೆ. ಸುಮಾರು 7 ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆ ನಿರ್ಮಿಸಲಾಗಿದೆ. ನೂರಾರು ಕಾರ್ಮಿಕರು 45 ದಿನ ದುಡಿದಿದ್ದಾರೆ. ನಿರ್ಮಾಪಕ ಎಸ್.ವಿ. ಬಾಬು ಅವರು ತಂಡಕ್ಕೆ ಬೆಂಬಲವಾಗಿ ನಿಂತು ಪ್ರೋತ್ಸಾಹಿಸಿದ್ದಾರೆ.

‘ರಿಕ್ಕಿ’ಯ ಪ್ರಮುಖ ತಾರಾಗಣದಲ್ಲಿ ರಕ್ಷಿತ್ ಶೆಟ್ಟಿ ಮತ್ತು ಹರಿಪ್ರಿಯಾ ಇದ್ದಾರೆ. ವೀಣಾ ಸುಂದರ್, ದಿನೇಶ್, ಅಚ್ಯುತ್ ರಾವ್, ಮುನಿರಾಜು, ಪ್ರಮೋದ್ ಶೆಟ್ಟಿ, ಮಂಜುನಾಥ ಗೌಡ ಕೂಡ ಪಾತ್ರ ಪೋಷಣೆ ಮಾಡಲಿದ್ದಾರೆ. ‘ರಿಕ್ಕಿ’ಗಾಗಿ ಕಾರ್ಕಳ, ಹೆಬ್ರಿ ಸುತ್ತ ಮುತ್ತಲಿನ ಕಾಡುಗಳಲ್ಲೇ ಚಿತ್ರೀಕರಣ ನಡೆಸಲಾಗುತ್ತಿದೆ. ಅಲ್ಲಿಯೇ ಎರಡು ಹಾಡುಗಳನ್ನೂ ಚಿತ್ರೀಕರಿಸಲಾಗಿದೆ. ಉಳಿದ ಮೂರು ಹಾಡುಗಳನ್ನು ಬೆಂಗಳೂರು, ಮೂಡುಬಿದ್ರೆ ಹೀಗೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಚಿತ್ರೀಕರಿಸಲಾಗುತ್ತದೆ. ಚಿತ್ರೀಕರಣ ಭರದಿಂದ ಸಾಗಿದ್ದು, ಬಿಡುವಿನಲ್ಲಿ ತಂಡದ ಒಬ್ಬೊಬ್ಬೇ ಸದಸ್ಯರು ಮಾಧ್ಯಮದವರ ಎದುರು ಬಂದು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು.

‘ನಾಯಕ ರಾಧಾಕೃಷ್ಣ ಮತ್ತು ನಾಯಕಿ ರಾಧಾ ಬಾಲ್ಯ ಸ್ನೇಹಿತರು. ಬೆಳೆಯುತ್ತ ಅವರ ಮಧ್ಯೆ ಪ್ರೀತಿ ಅಂಕುರವಾಗುತ್ತದೆ. ಆದರೆ ಒಂದು ಹಂತದಲ್ಲಿ ರಾಧೆ ಕಣ್ಮರೆಯಾಗಿಬಿಡುತ್ತಾಳೆ. ಆಗ ಕೃಷ್ಣನ ಹುಡುಕಾಟ, ಅವನ ವರ್ತನೆ ಹೇಗಿರುತ್ತದೆ ಎಂಬುದರ ಜೊತೆಗೆ ನಕ್ಸಲಿಸಂನಂತಹ ಚಿಕ್ಕ ಎಳೆಯನ್ನೂ ಎಳೆದು ತಂದಿದ್ದೇನೆ. ಇದು ಪೌರಾಣಿಕ ರಾಧಾ–ಕೃಷ್ಣರ ಕಥೆಯಿಂದ ಪ್ರೇರಿತವಾದ ಕಥೆ’ ಎಂದರು ರಿಷಬ್. ನಾಯಕ ರಕ್ಷಿತ್ ಶೆಟ್ಟಿಗೆ ಇದು ಪರಮಾನಂದದ ಸಮಯವಂತೆ. ಪೂರ್ವಾರ್ಧದಲ್ಲಿ ನಾಯಕಿಯ ನಲಿದಾಟಕ್ಕೆ ಮರುಳಾಗುವ ನಾಯಕ ದ್ವಿತೀಯಾರ್ಧದಲ್ಲಿ ಆಕೆ ಗೊಂದಲಕ್ಕೆ ಸಿಕ್ಕಾಗ ಆಕೆಯನ್ನು ಅದರಿಂದ ಹೊರತರುವ ಪಾತ್ರ ಅವರದು. ಇನ್ನು, ‘ಬದುಕಿನ ತಿರುವುಗಳಿಗೆ ರಾಧೆ ಹೇಗೆ ಸ್ಪಂದಿಸುತ್ತಾಳೆ, ಹೇಗೆ ಹೋರಾಡುತ್ತಾಳೆ ಎಂಬುದು ನಾಯಕಿಯ ಪಾತ್ರದಲ್ಲಿ ವ್ಯಕ್ತವಾಗಿದೆ. ವೈಯಕ್ತಿಕವಾಗಿ ನನಗೆ ಕನೆಕ್ಟ್ ಆದ ಪಾತ್ರ ಇದು’ ಎಂದರು ಹರಿಪ್ರಿಯಾ.

ಅಜನೀಶ್ ಲೋಕನಾಥ್ ಅವರ ಸಂಗೀತ ಚಿತ್ರಕ್ಕಿದೆ. ಡಿಸೆಂಬರ್ ಅಥವಾ ಮುಂದಿನ ಜನವರಿಯಲ್ಲಿ ಚಿತ್ರವನ್ನು ತೆರೆಯಮೇಲೆ ತರುವ ಯೋಜನೆ ನಿರ್ಮಾಪಕ ಬಾಬು ಅವರದ್ದು. ಆದರೆ ಅದಕ್ಕಿಂತ ಮೊದಲು ಅವರ ನಿರ್ಮಾಣದ ‘ಎಂದೆಂದಿಗೂ’ ಬಿಡುಗಡೆಯಾಗಲಿದೆ.

ಹುಬ್ಬಳ್ಳಿ ಹುಡುಗ ಬಚಾವ್!
ನೆಲಸಮದ ಸಂದರ್ಭದಲ್ಲಿ ಮನೆಯ ಒಳಗಿದ್ದ ಬಸಪ್ಪ ಎಂಬ ಹುಬ್ಬಳ್ಳಿಯ ಹುಡುಗನೊಬ್ಬ ಸ್ವಲ್ಪದರಲ್ಲೇ ಬಚಾವಾದ ಘಟನೆಯೂ ನಡೆಯಿತು. ಜೆಸಿಬಿ ಜತೆ ಕೆಲಸಕ್ಕೆ ಬಂದ ಈತ ಮನೆಯಲ್ಲಿರುವ ಸಾಮಾನುಗಳನ್ನು ಎತ್ತಿ ಹೊರಹಾಕುವಾಗ ಮೊಬೈಲ್ ಬೀಳಿಸಿಕೊಂಡಿದ್ದ. ಅದನ್ನು ತರಲು ಒಳಹೋಗಿದ್ದ ಬಸಪ್ಪನನ್ನು ಮಾನಿಟರ್‌ನಲ್ಲಿ ಕಂಡ ನಿರ್ದೇಶಕರು ‘ಕಟ್’ ಹೇಳಿ ಚಿತ್ರೀಕರಣ ನಿಲ್ಲಿಸಿದರು. ಆತ ಹೊರಬಂದ ನಂತರ ಮತ್ತೆ ‘ಆ್ಯಕ್ಷನ್’ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT