ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಬಿನ್‌ ವಿಲಿಯಮ್ಸ್‌ ಎನ್ನುವ ನಂಜುಂಡ

Last Updated 23 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಎದೆಯೊಳಗೆ ಅಗ್ನಿಪರ್ವತ; ತೆರೆಯ ಮೇಲೆ ನಗೆಯ ಹಬ್ಬ. ಇದು ಹಾಲಿವುಡ್‌ನ ಜನಪ್ರಿಯ ಚಿತ್ರನಟ ರಾಬಿನ್‌ ವಿಲಿಯಮ್ಸ್‌ ಅವರ ವ್ಯಕ್ತಿತ್ವದ ಎರಡು ಮುಖಗಳು. ಅವರ ದುರಂತ ಅಂತ್ಯದಲ್ಲಿ ಯುವ ತಲೆಮಾರಿಗೊಂದು ಪಾಠವಿದೆ.

ಇತ್ತೀಚಿನ ದಶಕಗಳಲ್ಲಿ ಇಂಗ್ಲಿಷ್ ಚಲನಚಿತ್ರ ಮತ್ತು ಟೀವಿ ವಾಹಿನಿಗಳ ಕಾರ್ಯಕ್ರಮಗಳಲ್ಲಿ ಹಾಸ್ಯದ ಅಲೆಗಳನ್ನು ಹೊಮ್ಮಿಸುತ್ತಿದ್ದ ಜನಪ್ರಿಯ ನಟ ರಾಬಿನ್ ವಿಲಿಯಮ್ಸ್ ಕಳೆದ ವಾರ ಆತ್ಮಹತ್ಯೆಗೆ ಶರಣಾಗಿದ್ದು ದಿಗ್ಭ್ರಮೆಯ ಸುದ್ದಿ. ಇಂಗ್ಲಿಷ್‌ ಚಲನಚಿತ್ರಗಳನ್ನು ನೋಡದವರಿಗೂ ರಾಬಿನ್‌ ಅವರ ಅಭಿನಯದ ಪರಿಚಯವಿರಬಲ್ಲದು. ಕಮಲಹಾಸನ್ ಅವರ ತಮಿಳಿನ ‘ಅವೈ ಷಣ್ಮುಗಿ’ (1996) ಮತ್ತು ಹಿಂದಿಯ ‘ಚಾಚಿ 420’ (2007) ಸಿನಿಮಾಗಳನ್ನು ನೋಡಿರುವವರೆಲ್ಲರಿಗೂ ಮಹಿಳೆ ಪಾತ್ರಧಾರಿಯ ಪುರುಷನ ಸಂಕಷ್ಟಗಳು ತಿಳಿದಿರುವಂತಹ ಸಂಗತಿ. ಮುನ್ನಾಭಾಯಿ ಚಿತ್ರಕ್ಕೂ ರಾಬಿನ್ ವಿಲಿಯಮ್ಸ್‌ ಅವರೇ ಸ್ಫೂರ್ತಿ.

ಸುಮಾರು ನಾಲ್ಕು ದಶಕಗಳಷ್ಟು ದೀರ್ಘ ಕಾಲ ಮದ್ಯ, ಮಾದಕ ವಸ್ತುಗಳ ಅವಲಂಬನೆಗೆ ರಾಬಿನ್‌ ವಿಲಿಯಮ್ಸ್‌ ಒಳಗಾಗಿದ್ದರು. ಆದರೆ, ಕುಟುಂಬ, ವೃತ್ತಿ ಯಶಸ್ಸು, ನಿತ್ಯದ ಬದುಕಿಗೆ ಅಗತ್ಯವಿರುವ ಹಿತ ಮತ್ತು ಸಂಯಮಗಳನ್ನು ಪಡೆದುಕೊಳ್ಳುವ ಮರುಚೇತನದ ಪ್ರಯತ್ನಗಳಿಂದ ಅವರು ಹಿಂದೆ ಸರಿದಿರಲಿಲ್ಲ. ರಾಬಿನ್ ತಮ್ಮ ಮದ್ಯ ವ್ಯಸನದ ಸ್ಥಿತಿಯನ್ನು ‘ಇಥನಾಲ್ ಚ್ಯಾಲೆಂಜಡ್’ ಎಂದು ವರ್ಣಿಸುತ್ತಿದ್ದರು.

ಇದರ ಬಿಗಿಹಿಡಿತಕ್ಕೆ ಸಿಕ್ಕಿಕೊಂಡಿರುವುದರ ಬಗ್ಗೆ ಯಾವ ಭ್ರಮೆ, ಭೀತಿಗಳಿಗೂ ಒಳಗಾಗದೇ ಅದರ ವಿರುದ್ಧ ಸತತ ಹೋರಾಟ ನಡೆಸಿದ ಪ್ರಬುದ್ಧ ಕಲಾವಿದ ಅವರು. ವ್ಯಸನದೊಂದಿಗೆ ನಿರಂತರವಾಗಿ ಕಾದಾಡುತ್ತಲೇ ತನ್ನಲ್ಲಿದ್ದ ಸಾಮರ್ಥ್ಯ ಹದಗೆಡದಂತಹ ಕ್ರಮಗಳನ್ನು ಬಹಳ ನಿಷ್ಠೆಯಿಂದಲೇ ಪಾಲಿಸುತ್ತಿದ್ದರು. ಆದರೆ, ಅವರ ಹೋರಾಡುವ ಶಕ್ತಿಯನ್ನು ಕಸಿದುಕೊಳ್ಳುವಂತಹ ‘ಪಾರಕಿನ್ಸನ್ ವ್ಯಾಧಿ’ಯ ಮುನ್ಸೂಚನೆಗಳು ತಿಳಿದುದು ರಾಬಿನ್‌ರ ಅಸಹನೀಯ ಖಿನ್ನತೆಗೆ ಕಾರಣವಾಯಿತು.

ಅಂದಹಾಗೆ, ಖಿನ್ನತೆಗೆ ಕಾರಣಗಳು ಏನೇ ಆಗಿದ್ದರೂ ಅದು ವ್ಯಕ್ತಿಯ ದೌರ್ಬಲ್ಯವಂತೂ ಅಲ್ಲವೇ ಅಲ್ಲ. ಹಣ, ಅಂತಸ್ತು, ಜನಪ್ರಿಯತೆ– ಯಾವುದೂ ಖಿನ್ನತೆಯ ದಾಳಿಯನ್ನು ಎದುರಿಸಲಾರದು.  ರೋಗದ ನೆಲೆಗೆ ಜೈವಿಕ, ಅನುವಂಶಿಕ ಮತ್ತು ಪರಿಸರದ ಪ್ರಭಾವಗಳು ಇದ್ದೇ ಇರುವುದು ಎಂದುಕೊಳ್ಳಬೇಕಷ್ಟೇ. ಇದಿನ್ನೂ ವೈದ್ಯ ಜಗತ್ತಿಗೂ ಸ್ಪಷ್ಟವಾಗಿ ಅರ್ಥವಾಗದಿರುವಂತಹ ಮನೋವ್ಯಾಧಿಯ ಸ್ಥಿತಿ. ಖಿನ್ನತೆ ಆವರಿಸಿದ ಪ್ರತಿಯೊಂದು ಸಂದರ್ಭದಲ್ಲೂ ರೋಗಿಯ ಭಾವಗಳು ನಿಷ್ಕ್ರಿಯಗೊಳ್ಳುವುದರೊಂದಿಗೆ ಮನಸ್ಸಿನ ತುಂಬ ದುಃಖವನ್ನು ತುಂಬಿಸುತ್ತದೆ. ಆತಂಕ, ಭಯ, ನಿದ್ರಾಹೀನತೆ, ದುರಾಲೋಚನೆ ಮತ್ತು ನಿಷ್ಪ್ರಯೋಜಕತೆ ಭಾವನೆಗಳು ತಲೆಯ ತುಂಬ ತೇಲಾಡುತ್ತಿರುತ್ತವೆ. ಈ ಸ್ಥಿತಿಯಿಂದ ತಕ್ಷಣದಲ್ಲಿ ತಪ್ಪಿಸಿಕೊಳ್ಳುವ ಪ್ರಯತ್ನವೂ ಕೆಲವರಲ್ಲಿ ನಡೆಯುತ್ತದೆ; ಆದರದು ಮದ್ಯ ಅಥವಾ ಮಾದಕ ವಸ್ತುವಿಗೆ ಮತ್ತೆ ಮತ್ತೆ ಶರಣಾಗುವುದೇ ಆಗಿರುತ್ತದೆ.

ರಾಬಿನ್ ವಿಲಿಯಮ್ಸ್ ಅವರ ನಿಧನ ವಾರ್ತೆ ಹೊರಬಿದ್ದ ಕ್ಷಣದಿಂದ ಅಂತರ್ಜಾಲದ ವೇದಿಕೆಗಳಲ್ಲಿ ಆತನ ಸಜ್ಜನಿಕೆ, ಇತರರಿಗೆ ನೆರವು ಸಹಾಯ ನೀಡುವ ಸ್ವಭಾವ ಮತ್ತು ಹಾಸ್ಯ ಮನೋಭಾವದ ಬಗ್ಗೆ ಗುಣಗಾನ ನಡೆದಿದೆ. ಇದರ ಜೊತೆಜೊತೆಗೇ ಮಾದಕ ವಸ್ತುಗಳಿಗೆ ದಾಸನಾಗಿದ್ದರ ಬಗ್ಗೆ ಸಂತಾಪದ ಭಾವನೆಗಳೂ ವ್ಯಕ್ತವಾಗಿವೆ. ಇಲ್ಲೊಂದು ಸಂಗತಿಯನ್ನು ಗಮನಿಸಬೇಕು: ರಾಬಿನ್‌ ಅವರಿಗೆ ಎರಡು ಮುಖಗಳಿದ್ದವು. ಒಂದು ಸಾರ್ವಜನಿಕರಿಗಾಗಿಯೇ ಇದ್ದ ಮುಖವಾಡ, ಅದು ಹಾಸ್ಯದ ಮೂಲಕ ಅಭಿವ್ಯಕ್ತಗೊಳ್ಳುತ್ತಿತ್ತು. ಮತ್ತೊಂದು, ತನ್ನ ನೋವು/ಖಿನ್ನತೆಗಳನ್ನು ಮುಚ್ಚಿಡುವುದಕ್ಕಾಗಿ ಒಳಗೊಂದು ಮುಖವಾಡ.

ಹಾಸ್ಯವನ್ನು ಮನೋತಂತ್ರವಾಗಿ ಬಳಸಿಕೊಳ್ಳುವುದರಲ್ಲಿ ಅವರು ಯಶಸ್ವಿಯಾಗಿದ್ದರು. ಅದು ಒಳನೋವಿಗೊಂದು ಹೊದಿಕೆಯಾಗಿ, ಹೊರಗಿನ ಜಗತ್ತಿಗೆ ಹಿತಕೊಡುವ ಹಾವಭಾವವಾಗಿತ್ತು. ಹೀಗಾಗಿ ನೋವು ಸಹಿಸಲಾರದಷ್ಟು ಇದ್ದರೂ ಹೊರಜಗತ್ತು ನಕ್ಕು ನಲಿದಾಡುವಂತಹ ವರ್ತನೆಗಳನ್ನು ತಮ್ಮ ಅಭಿನಯದ ಮೂಲಕ ಸರಾಗವಾಗಿ ಹೊರಹೊಮ್ಮಿಸುವ  ಮಾರ್ಗಗಳನ್ನು ಅವರು ಕಂಡುಕೊಂಡಿದ್ದರೇನೋ? ಹೊರಗೆ ಹಾಸ್ಯದ ಚಟಾಕಿಯಾದರೆ ಅವರ ಒಳಗದು ಆತ್ಮ ಸ್ಫೋಟಕ. ಆತನ ಒಳಬೇಗುದಿಗೂ ಹೊರಗಿನ ಬದುಕಿಗೂ ಸಂಬಂಧವೇ ಇರಲಿಲ್ಲವೆನ್ನುವುಂತಹ ದ್ವಂದ್ವ ರೂಪ.

ಬಹಿರ್ಮುಖಿ ಎನ್ನುವಂತಹ ಸಾಮಾಜಿಕ ವರ್ತನೆಗೂ ರಾಬಿನ್ ಹೆಸರುವಾಸಿ. ಪಾನಕೂಟಗಳಲ್ಲಿ ಅವಕಾಶವಿರಲಿ ಬಿಡಲಿ, ರಾಬಿನ್‌ರಿಂದ ಹಾಸ್ಯ ಪರಿಹಾಸ್ಯಗಳಿಗೆ ಕೊರತೆ ಇರಲಿಲ್ಲ ಎನ್ನುವುದು ಅವರ ನಿಕಟವರ್ತಿಗಳ ಅನುಭವ. ಕಪಟವನ್ನರಿಯದ ಮನಸ್ಸು, ಸಂಕಟದಲ್ಲಿರುವವರಿಗೆ ಸಹಾಯ ನೀಡುವ ರಾಬಿನ್‌ರ ಪರೋಪಕಾರಿ ಗುಣವನ್ನೂ ಅವರ ಹತ್ತಿರದವರು ಸ್ಮರಿಸಿಕೊಳ್ಳುತ್ತಾರೆ. ಸಂಕಟದ ಸ್ಥಿತಿಗಳಲ್ಲೂ ಹಾಸ್ಯದ ಪ್ರಜ್ಞೆ ಅವರಿಂದ ಮರೆಯಾಗುತ್ತಿರಲಿಲ್ಲ.

ಅವರ ಕಾಲೇಜು ಸಹಪಾಠಿ ‘ಸೂಪರ್ ಮ್ಯಾನ್’ ಖ್ಯಾತಿಯ ಕ್ರಿಸ್ಟೋಫರ್ ರೀವ್ಸ್ (1952-2004) ಅಪಘಾತದಿಂದ ಹಾಸಿಗೆ ಹಿಡಿದಿದ್ದ ಸಮಯದಲ್ಲಿ, ಅವನಿದ್ದ ಆಸ್ಪತ್ರೆಗೆ ನುಗ್ಗಿದ್ದ ರಾಬಿನ್‌ ಮತಿಗೆಟ್ಟ ವೈದ್ಯನಂತೆ ಅಭಿನಯಿಸಿದ್ದರಂತೆ. ಇದರ ಪರಿಣಾಮದಿಂದಾಗಿ ರೀವ್ಸ್ ಬಹಳ ಬೇಗ ಚೇತರಿಸಿಕೊಂಡದ್ದಾಗಿ ಹೇಳಿಕೊಂಡಿದ್ದಾರೆ. ಇಂಥ ರಾಬಿನ್ ಸೀದಾಸಾದಾ ವ್ಯಕ್ತಿಯಂತೆ ವರ್ತಿಸುತ್ತಿದ್ದರೂ, ಅವರ ಒಳಮನಸ್ಸಿನಲ್ಲಿ ಹಿತವಿರಲಿಲ್ಲವೆನ್ನುವುದು ನಿಜ. ಮದ್ದು, ಮಾದಕ ವಸ್ತುಗಳ ಮೂಲಕ ಒಳಮನಸ್ಸಿನ ಅಟ್ಟಹಾಸವನ್ನು ತಡೆಯುವ ಪ್ರಯತ್ನವಂತೂ ಇತ್ತು.

ಬಾಲ್ಯದಲ್ಲಿ ಬಾಧಿಸುವಂತಿದ್ದ ಏಕಾಂಗಿತನವನ್ನು ಕಣ್ಣಿಗೆ ಕಟ್ಟುವಂತಹ ಕಲ್ಪನೆಗಳ ಮೂಲಕ ಎದುರಿಸುವುದನ್ನು ರಾಬಿನ್ ಕಲಿತಿದ್ದರು. ಯಾರ ತಂಟೆಗೂ ಹೋಗದ, ದಾಕ್ಷಿಣ್ಯ ಸ್ವಭಾವ ಇದರಿಂದಾಗಿಯೇ ಅವರಲ್ಲಿ ಬಲವಾಗಿದ್ದಿರಬಹುದು. ಅವರ ಮೂರು ದಶಕಗಳ ವೈವಾಹಿಕ ಬದುಕು– ಮೂರು ಮದುವೆ, ಎರಡು ವಿಚ್ಛೇದನ ಮತ್ತು ಎರಡು ಮದುವೆಯಿಂದಾದ ಮೂರು ಮಕ್ಕಳು. ಅವರಿಗೆ ಬೇಕಿದ್ದ ಮಮತೆ, ಸಾಮೀಪ್ಯ ಮತ್ತು ವಿಶೇಷವಾದ ಪ್ರೇರಣೆಯನ್ನು ಈ ಸಂಬಂಧಗಳು ಒದಗಿಸಿದ್ದವು. ಹೀಗಿದ್ದರೂ ಒಳಮನಸ್ಸಿನಲ್ಲಿ ಕಾಡುತ್ತಿದ್ದ ನಿರಾಶಾಭಾವ ಮತ್ತು ಅದರಿಂದ ತಪ್ಪಿಸಿಕೊಳ್ಳುವುದಕ್ಕೆ ಹಾಸ್ಯದ ಅಭಿನಯವೇ ಅವರ ನೆರವಿಗೆ ಬರುತ್ತಿದ್ದದ್ದು.

ಅವರು ಬಹಳವಾಗಿ ಹಚ್ಚಿಕೊಂಡಿದ್ದ ಮಾದಕವಸ್ತುಗಳು ಕೊನೆಗೆ ಸೃಷ್ಟಿಸಿದ್ದು ವಿನಾಶವನ್ನೇ. ನಿರಾಶಾಭಾವ ಎನ್ನುವಂತಹ ಮಾನಸಿಕ ಸ್ಥಿತಿಯನ್ನು ಪ್ರತಿಯೊಬ್ಬರೂ ಒಂದಲ್ಲಾ ಒಂದು ಪರಿಸ್ಥಿತಿಯಲ್ಲಿ ಅನುಭವಿಸಿರುತ್ತಾರೆ. ಕೆಲವರಲ್ಲಿದು ಆಗೊಮ್ಮೆ ಈಗೊಮ್ಮೆ ಬಂದು ಹೋಗುವಂತಹದ್ದಾಗಿದ್ದರೆ ಮತ್ತೆ ಕೆಲವರಲ್ಲಿದು ಒಮ್ಮೆ ಕಾಣಿಸಿಕೊಂಡ ನಂತರವೂ ಹಿಂದಿರುಗಿ ಬರುತ್ತಲೇ ಇರುತ್ತದೆ. ಆದರದರ ರೂಪರೇಷೆಗಳು ಮಾತ್ರ ಬದಲಾಗುತ್ತಾ ಸಾಗುವುದೇ ಹೊರತು ನಿರಾಶಾಭಾವ ತಾತ್ಕಾಲಿಕವಾಗಿ ಇದ್ದು ಹೋಗುವುದಿಲ್ಲ.

ಅನುಭವಿಸುವವರಿಗೂ ಅರ್ಥವಾಗದ ಮಾನಸಿಕ ಸ್ಥಿತಿ ಇದು. ಬದುಕಿನ ಯಾವ ಚಟುವಟಿಕೆಯಲ್ಲೂ ವಿಶ್ವಾಸ ಹುಟ್ಟಿಸದಂತೆ ಮಾಡುವ ಅಜ್ಞಾತ ಶಕ್ತಿ. ಇಂತಹದೊಂದರ ಹಿಡಿತಕ್ಕೆ ಸಿಕ್ಕ ಮನಸ್ಸು ದೇಹದ ಚಲನವಲನಗಳ ಮೇಲೂ ಹತೋಟಿಯನ್ನು ಸಾಧಿಸಿಬಿಡುವುದುಂಟು. ಇದರಿಂದಾಗುವ ಚಟ ಮತ್ತು ಖಿನ್ನತೆ ಒಟ್ಟಾಗಿ ಬಿಟ್ಟರಂತೂ ನಿರ್ವಹಣೆಯ ಸಮಸ್ಯೆ ಮತ್ತಷ್ಟು ಗಂಭಿರವಾಗಿಬಿಡುತ್ತದೆ. ಅವುಗಳು ಉಂಟುಮಾಡುವ ನಕಾರಾತ್ಮಕ ಭಾವ, ವಿಶ್ವಾಸ ಮತ್ತು ಆತ್ಮಪ್ರತಿಷ್ಠೆಯನ್ನು ಇಂಗಿಸಿಬಿಡುವ ರೀತಿಯನ್ನು ಗ್ರಹಿಸುವುದೂ ಕಷ್ಟವೇ. ಕೆಲವರಲ್ಲಂತೂ ಸಲಹೆ, ಸಾಂತ್ವನ, ಔಷಧಿಗಳೂ ಸಹ ಪ್ರತಿಬಲವನ್ನು  ಒದಗಿಸದು.

ಬಹಳ ಮುಖ್ಯವಾಗಿ ಗಮನಿಸಬೇಕಾದ ವಿಷಯವೆಂದರೆ ಮಾದಕ ವಸ್ತುಗಳ ಸೇವನೆ ಚಟವಾಗಿ ನಿಂತಾಗ ವ್ಯಕ್ತಿಯ ಮಾನಸಿಕ ಶಕ್ತಿಗಳನ್ನು ಬಲಪಡಿಸುವ ಕಾರ್ಯ ಅಷ್ಟೇನೂ ಸುಲಭದ್ದಲ್ಲ. ವ್ಯಕ್ತಿಯ ವ್ಯಸನದ ಸ್ಥಿತಿಯನ್ನು ಅಂದಾಜಿಸುವುದೂ ಸಹ ಕಷ್ಟಕರವೇ. ಅವರ ಒಳ ಮನಸ್ಸಿನಲ್ಲಾಗುವ ತಳಮಳಗಳು ಉನ್ಮಾದ-ಖಿನ್ನತೆಯ ಜೋಲಾಟವಾಗಿ ಬಿಡುತ್ತದೆ. ಚಿಕಿತ್ಸೆಯ ಮೂಲಕವೇ ವ್ಯಸನದ ನಿರ್ವಹಣೆಯಾಗಬೇಕು. ಕೆಲ ಪ್ರಕರಣಗಳಲ್ಲಿ ಚಿಕಿತ್ಸೆ ಫಲಪ್ರದವಾಗಿ ವ್ಯಕ್ತಿಯ ಮರು ಹೊಂದಾಣಿಕೆ ಮತ್ತು ಉತ್ತಮ ಬದುಕು ಸಾಧ್ಯವಾಗಿದೆ.

ದಶಕಗಳ ಕಾಲ ಮಾದಕ ವಸ್ತು ಮತ್ತು ಮದ್ಯ ಸೇವನೆಯನ್ನು ಹಿತಮಿತದಲ್ಲಿ ರಾಬಿನ್ ವಿಲಿಯಮ್ಸ್ ಇರಿಸಿಕೊಂಡಿದ್ದರು ಎನ್ನುವುದಕ್ಕೆ ಅವರ ನಟನೆಯ ಸಾರ್ಮಥ್ಯವೇ ಸಾಕ್ಷಿ. ಆದರೆ ಈ ಸ್ಥಿತಿ ಹಾಗೆಯೇ ಮುಂದುವರೆಯದಿರುವುದು ದುರದೃಷ್ಟದ ಸಂಗತಿ. ಪ್ರತಿಭೆ, ಜಾಣತನ, ಜನಮನ್ನಣೆ, ಪ್ರೀತಿ, ಆದರಗಳೆಲ್ಲವನ್ನೂ ಸಹ ಈ ಮಾದಕ ವಸ್ತು ಮತ್ತು ಮದ್ಯ ವ್ಯಸನದ ಸ್ಥಿತಿಗಳು ಬದಿಗಿರಿಸಿಬಿಡುತ್ತದೆ. ಸರಳ, ಸಹಜ ಬದುಕನ್ನು ಸಂಕಟ, ವಿಪತ್ತಿನ ಬದುಕನ್ನಾಗಿಸಿ ಬಿಡುವ ಘೋರ ಶಕ್ತಿ ಈ ಚಟದಲ್ಲಿದೆ. ನಗಿಸುವ ಮುಖಕ್ಕೂ ನಗುವ ಮುಖಕ್ಕೂ ಮಹಾ ದೊಡ್ಡ ಅಂತರವಿದೆ ಎನ್ನುವುದನ್ನು ರಾಬಿನ್ ವಿಲಿಯಮ್ಸ್ ಸಾವು ಎತ್ತಿ ತೋರಿಸುತ್ತದೆ.

ಸಾವಿಗೀಡಾಗುವ ಮುಂಚಿನ ದಿನಗಳಲ್ಲಿ ಕಾಡಿಸುತ್ತಿದ್ದ ತೀವ್ರ ಖಿನ್ನತೆಯಿಂದ ಪಾರಾಗಲು ಔಷಧೋಪಚಾರಗಳಿಗೆ ಒಳಗಾಗಿದ್ದರೂ ಅವರು ಬದುಕುವ ಹಂಬಲ ಹೆಚ್ಚಿಸಿಕೊಳ್ಳಲಾಗಲಿಲ್ಲ. ಪ್ರಖ್ಯಾತರು, ಪ್ರತಿಭಾವಂತರು, ಸಾಮಾನ್ಯರು ಎನ್ನುವ ಭೇದ ಈ ಮಾನಸಿಕ ಸ್ಥಿತಿಯನ್ನು ನಿಯಂತ್ರಿಸಲಾರದು. ಇದರ ಹಿಡಿತಕ್ಕೆ ಸಿಕ್ಕಿಕೊಂಡಾಗ ಮಾನಸಿಕ ಸ್ಥೈರ್ಯ ಕುಸಿದುಬೀಳುವುದು ಅಪರೂಪವಲ್ಲ. ಖಿನ್ನತೆ ಮತ್ತು ಮಾದಕ/ಮದ್ಯ ವ್ಯಸನಕ್ಕೆ ಒಳಗಾದವರು ರೋಗದ ಮೂಲವನ್ನು ಗ್ರಹಿಸುವುದು ಎಷ್ಟು ಕಷ್ಟವೋ ಚಿಕಿತ್ಸಕನಿಗೂ ಅಷ್ಟೇ ಕಷ್ಟವಾಗಿರುತ್ತದೆ.

ಆದರೆ ಈ ಸಮಸ್ಯೆಯ ಆರಂಭದಲ್ಲಿಯೇ ಎಚ್ಚರ ವಹಿಸಿದರೆ ನಿರ್ವಹಣೆಯ ಕ್ರಮಗಳು ಉತ್ತಮ ಪರಿಣಾಮ ಬೀರಬಲ್ಲದು ಎನ್ನುವ ಅನುಭವ ಚಿಕಿತ್ಸಕರಲ್ಲಿ ಮಾತ್ರವಲ್ಲ ರೋಗಿಗಳಿಗೂ ಆಗಿರುತ್ತದೆ. ಹೀಗಿದ್ದರೂ ವ್ಯಸನಿಗಳೆಲ್ಲರ ಬದುಕು ಹೀಗೆಯೇ ಕೊನೆಗೊಳ್ಳದಂತಹ ದಾರಿಯನ್ನು ಕಂಡುಕೊಳ್ಳುವ ಅಗತ್ಯವಿದೆ.

ಹದಿಹರೆಯ ಮುಗಿಯುವುದಕ್ಕೆ ಮುಂಚಿತವಾಗಿ ಮದ್ಯ, ಮಾದಕ ವಸ್ತುಗಳ ಹಿಡಿತಕ್ಕೆ ಸಿಕ್ಕಿ ನರಳುತ್ತಿರುವ ಮಕ್ಕಳು ಮತ್ತು ಈ ಮಕ್ಕಳ ಸಮಸ್ಯೆಯನ್ನು ಬಗೆಹರಿಸುವ ಮಾರ್ಗ ತಿಳಿಯದ ಪೋಷಕರು, ಪಾಲಕರ ಸಂಖ್ಯೆ ನಗರಗಳಲ್ಲಿ ಹೆಚ್ಚಾಗುತ್ತಿದೆ. ಗೆಳೆತನ, ಪ್ರೀತಿ, ಸಾಧನೆಯ ಒತ್ತಡ ಮತ್ತು ಕುಟುಂಬಗಳಲ್ಲಿ ಇರಬೇಕಾದ ಸಣ್ಣ-ಪುಟ್ಟ ಪ್ರಮಾಣದ ಸಂಯಮ ಮತ್ತು ಸಹಜೀವನದ ಬಯಕೆ ಕುಸಿಯುತ್ತಿರುವುದರ ಪರಿಣಾಮವೂ ಇಂತಹ ಸಮಸ್ಯೆಗಳನ್ನು ಉಲ್ಬಣಗೊಳಿಸಬಲ್ಲದು. ಇಂದು ಮಕ್ಕಳ ಮನಸ್ಸು ಮಾದಕ ವಸ್ತುಗಳತ್ತ ಹೋಗುವಂತೆ ಮಾಡುವ ಕವಲು ದಾರಿಗಳೂ ವಿಸ್ತಾರಗೊಳ್ಳುತ್ತಿವೆ.

ಶಾಲೆ, ಕಾಲೇಜುಗಳ ಆಸುಪಾಸಿನಲ್ಲಿ, ಉಪಹಾರ, ಚಲನಚಿತ್ರ ಮಂದಿರಗಳ ಸುತ್ತಮುತ್ತ ಇದರ ವಿತರಣಾಕಾರರು ಯಾರ ಭಯವೂ ಇಲ್ಲವೆನ್ನುವಂತೆ ಅಡ್ಡಾಡುತ್ತಾರೆ.  ನಮ್ಮ ಯುವಜನತೆ ಇಂತಹದೊಂದು ದುಸ್ಥಿತಿಗೆ ಹೋಗದಂತಹ ವಾತಾವರಣ ಸೃಷ್ಟಿಸುವ ಹೊಣೆಗಾರಿಕೆ ನಮ್ಮೆಲ್ಲರದ್ದೇ ಆಗಿರುತ್ತದೆ. ರಾಬಿನ್ ವಿಲಿಯಮ್ಸ್ ಅಂತ್ಯ ಮದ್ಯ, ಮಾದಕ ವಸ್ತುಗಳ ಅವಲಂಬನೆ ಎಷ್ಟೊಂದು ವಿನಾಶಕಾರಿ ಎನ್ನುವುದರ ಸ್ಪಷ್ಟ ಸಂಕೇತ. ಸೃಜನ ಶಕ್ತಿಯುಳ್ಳ ಮಕ್ಕಳು, ಯುವಕರ ಹತಾಶೆಗಳು ಅವರ ಮನದಾಳಕ್ಕೆ ಹೋಗದಂತೆ ತಡೆಯುವುದರತ್ತ ಇಡೀ ಸಮಾಜವೇ ವಿಚಾರಮಾಡಬೇಕಾದ ಸಮಯ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT