ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಪತಿ ಹುದ್ದೆ ತ್ಯಜಿಸಲು ನಿರ್ಧರಿಸಿದ್ದ ಕಲಾಂ

ಅಂದಿನ ಮಾಧ್ಯಮ ಕಾರ್ಯದರ್ಶಿ ಎಸ್.ಎಂ.ಖಾನ್‌ರಿಂದ ಬಹಿರಂಗ
Last Updated 29 ನವೆಂಬರ್ 2015, 19:47 IST
ಅಕ್ಷರ ಗಾತ್ರ

ಭುವನೇಶ್ವರ (ಪಿಟಿಐ): ಬಿಹಾರ ವಿಧಾನಸಭೆ ವಿಸರ್ಜನೆ ‘ಅಸಾಂವಿಧಾನಿಕ ಹಾಗೂ ಕಾನೂನುಬಾಹಿರ’ ಎಂದು ಸುಪ್ರೀಂಕೋರ್ಟ್‌ ತೀರ್ಪು ನೀಡಿದ್ದ ಸಂದರ್ಭದಲ್ಲಿ  ಎಪಿಜೆ ಅಬ್ದುಲ್‌ ಕಲಾಂ ಅವರು ರಾಷ್ಟ್ರಪತಿ ಹುದ್ದೆ ತ್ಯಜಿಸಲು ಬಯಸಿದ್ದರಂತೆ.

2005ರಲ್ಲಿ ಕಲಾಂ ರಾಷ್ಟ್ರಪತಿಯಾಗಿದ್ದ ಸಂದರ್ಭದಲ್ಲಿ ಅವರ ಮಾಧ್ಯಮ ಕಾರ್ಯದರ್ಶಿಯಾಗಿದ್ದ ಎಸ್‌.ಎಂ. ಖಾನ್‌ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ‘ವಿಧಾನಸಭೆ ವಿಸರ್ಜಿಸುವಂತೆ ಕೋರಿ ಯುಪಿಎ ಸರ್ಕಾರ ಕಳುಹಿಸಿದ್ದ ಶಿಫಾರಸು ಪತ್ರಕ್ಕೆ ಕಲಾಂ ಒಲ್ಲದ ಮನಸ್ಸಿನಿಂದ ಸಹಿ ಹಾಕಿದ್ದರು. ಅವರು ಅದನ್ನು ತಿರಸ್ಕರಿಸುವ ಸಾಧ್ಯತೆಯಿತ್ತು. ಆದರೆ ಬೇರೆ ಆಯ್ಕೆಯಿಲ್ಲದೆ ಸಹಿ ಹಾಕಿದ್ದರು’ ಎಂದು ಶನಿವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಖಾನ್‌ ಹೇಳಿದ್ದಾರೆ.

‘ಸಚಿವ ಸಂಪುಟದ ನಿರ್ಧಾರವನ್ನು  ತಿರಸ್ಕರಿಸಬೇಕಿತ್ತು ಎಂದು ಸುಪ್ರೀಂಕೋರ್ಟ್‌ ತೀರ್ಪು ಬಂದ ಬಳಿಕ ಅವರು ಪಶ್ಚಾತ್ತಾಪ ಪಟ್ಟಿದ್ದರು. ರಾಷ್ಟ್ರಪತಿ ಹುದ್ದೆ ತ್ಯಜಿಸಲು ಬಯಸಿದ್ದರು. ಮಾತ್ರವಲ್ಲ,  ರಾಮೇಶ್ವರಂನಲ್ಲಿದ್ದ ಹಿರಿಯ ಸಹೋದರನ ಜತೆ ಈ ಬಗ್ಗೆ ಸಮಾಲೋಚನೆ
ಯನ್ನೂ ಮಾಡಿದ್ದರು’ ಎಂದಿದ್ದಾರೆ.

‘ಆದರೆ ರಾಜೀನಾಮೆ ನೀಡಿದರೆ ಸಾಂವಿಧಾನಿಕ ಸಮಸ್ಯೆಗಳು ಉಂಟಾಗಬಹುದು ಎಂಬ ಕಾರಣ ಕಲಾಂ ತಮ್ಮ ನಿರ್ಧಾರವನ್ನು ಬದಲಿಸಿದರು’ ಎಂದು ಪ್ರಸಕ್ತ ಆರ್‌ಎನ್‌ಐನ ನಿರ್ದೇಶಕರಾಗಿರುವ ಖಾನ್‌ ತಿಳಿಸಿದ್ದಾರೆ.

2005 ರಲ್ಲಿ ಬಿಹಾರ ರಾಜ್ಯಪಾಲರಾಗಿದ್ದ ಬೂಟಾ ಸಿಂಗ್‌ ಅವರು ಬಿಹಾರ ವಿಧಾನಸಭೆಯನ್ನು ವಿಸರ್ಜಿಸಲು ಶಿಫಾರಸು ಮಾಡಿದ್ದರು. ಪ್ರಧಾನಿ ಮನಮೋಹನ್‌ ಸಿಂಗ್‌ ನೇತೃತ್ವದ ಕೇಂದ್ರ ಸಚಿವ ಸಂಪುಟ ಈ ಶಿಫಾರಸಿಗೆ ಒಪ್ಪಿಗೆ ಸೂಚಿಸಿತ್ತಲ್ಲದೆ, ಪತ್ರವನ್ನು ರಾಷ್ಟ್ರಪತಿ ಕಲಾಂ ಅವರಿಗೆ ಕಳುಹಿಸಿತ್ತು. ಆ ಸಂದರ್ಭದಲ್ಲಿ ಮಾಸ್ಕೊ ಪ್ರವಾಸದಲ್ಲಿದ್ದ ಕಲಾಂ, ಶಿಫಾರಸು ಪತ್ರಕ್ಕೆ ಸಹಿ ಹಾಕಿದ್ದರು. ಆದರೆ 2005ರ ಅಕ್ಟೋಬರ್‌ 7 ರಂದು ಸುಪ್ರೀಂಕೋರ್ಟ್‌ ತನ್ನ ತೀರ್ಪಿನಲ್ಲಿ ‘ಈ ನಿರ್ಧಾರ ಅಸಾಂವಿಧಾನಿಕ’ ಎಂದಿತ್ತು.

ಭೌತಿಕ ಸುಖದಿಂದ ದೂರವಿದ್ದರು: ‘ಕಲಾಂ ಭೌತಿಕ ಸುಖದಿಂದ ದೂರವಿದ್ದರು. ಅವರು ತಮ್ಮ ಹೆಸರಿನಲ್ಲಿ ಏನನ್ನೂ ಹೊಂದಿರಲಿಲ್ಲ. ಮನೆ, ಕಾರು, ಟಿ.ವಿ. ಅಥವಾ ರೆಫ್ರಿಜರೇಟರ್‌ ಅವರಲ್ಲಿ ಇರಲಿಲ್ಲ’ ಎಂದು ಖಾನ್‌ ನುಡಿದಿದ್ದಾರೆ.‘ಶಿಕ್ಷಕ ಮತ್ತು ವಿಜ್ಞಾನಿಯಾಗಿದ್ದುಕೊಂಡು ಅವರು ಜೀವನದ ಹೆಚ್ಚಿನ ಅವಧಿಯನ್ನು ಹಾಸ್ಟೆಲ್‌ ಹಾಗೂ ಅತಿಥಿಗೃಹಗಳಲ್ಲಿ ಕಳೆದಿದ್ದಾರೆ.

ಸ್ವಂತದ್ದಾಗಿ ಅವರಲ್ಲಿದ್ದ ವಸ್ತುಗಳೆಂದರೆ ಪುಸ್ತಕ ಮಾತ್ರ. ಅವರು ಪುಸ್ತಕವನ್ನು ಹಣ ಕೊಟ್ಟು ಖರೀದಿಸುತ್ತಿದ್ದರು. ಉಡುಗೊರೆಯಾಗಿ ದೊರೆತ ಯಾವುದೇ ಪುಸ್ತಕವನ್ನು ಸ್ವೀಕರಿಸುತ್ತಿರಲಿಲ್ಲ. ಉಡುಗೊರೆಯಾಗಿ ದೊರೆತರೆ ಅದನ್ನು ಓದದೇ ಬಿಡುವ ಅವಕಾಶ ಇರುತ್ತಿತ್ತು ಎಂದು ಅವರು ಹೇಳುತ್ತಿದ್ದರು’ ಎಂಬುದಾಗಿ ಖಾನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT