ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್‌-ಶ್ರೇಯಸ್‌ ಅಪೂರ್ವ ಜೊತೆಯಾಟ

ರಣಜಿ: ಕರ್ನಾಟಕ ಮೊದಲ ದಿನ 326ಕ್ಕೆ4, ಪ್ರವೀಣ್‌ಗೆ ಮೂರು ವಿಕೆಟ್‌
Last Updated 29 ಜನವರಿ 2015, 19:56 IST
ಅಕ್ಷರ ಗಾತ್ರ

ಬೆಂಗಳೂರು: ಆರಂಭಿಕ ಸಂಕಷ್ಟದಿಂದ ಅಮೋಘ ವಾಗಿ ಚೇತರಿಸಿಕೊಂಡ ಕರ್ನಾಟಕ ತಂಡ ಕೆ.ಎಲ್‌. ರಾಹುಲ್‌ ಮತ್ತು ಶ್ರೇಯಸ್‌ ಗೋಪಾಲ್‌ ಅವರ ಅಪೂರ್ವ ಜೊತೆಯಾಟದ ಬಲದಿಂದ ಮೊದಲ ದಿನ ಮೆರೆದಾಡಿತು.

ಇದರಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭವಾದ ‘ಎ’ ಗುಂಪಿನ ರಣಜಿ ಪಂದ್ಯದಲ್ಲಿ ಕರ್ನಾಟಕ ಮೊದಲ ದಿನದ ಗೌರವ ತನ್ನದಾಗಿಸಿಕೊಂಡಿತು.

ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ಉತ್ತರ ಪ್ರದೇಶ ಟಾಸ್‌ ಗೆದ್ದು ಫೀಲ್ಡಿಂಗ್‌ ಮಾಡಲು ಮುಂದಾಯಿತು. ತವರಿನ ಅಂಗಳದ ಪಿಚ್‌ ಮರ್ಮ ಚೆನ್ನಾಗಿ ಅರಿತಿದ್ದ ಕರ್ನಾಟಕ ಆರಂಭದಲ್ಲಿ ಪರದಾಡಿತಾದರೂ, ನಂತರ ಬೌಲರ್‌ಗಳ ಬೆವರಿಳಿಸಿತು. ಈ ತಂಡ ಮೊದಲ ದಿನದಾಟದ ಅಂತ್ಯಕ್ಕೆ 90 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ನಷ್ಟಕ್ಕೆ 326 ರನ್‌ ಕಲೆ ಹಾಕಿದೆ.

ಮತ್ತದೇ ವೈಫಲ್ಯ: ಈ ಸಲದ ರಣಜಿಯ ಮೊದಲ ಐದೂ ಪಂದ್ಯಗಳಲ್ಲಿ ಕರ್ನಾಟಕ ಆರಂಭದಲ್ಲಿಯೇ ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಉತ್ತರ ಪ್ರದೇಶ ಎದುರಿನ ಪಂದ್ಯದಲ್ಲೂ ಆ ತಪ್ಪು ಮರುಕಳಿಸಿತು.

ರಾಹುಲ್‌ ಜೊತೆ ಇನಿಂಗ್ಸ್‌ ಅರಂಭಿಸಿದ ಆರ್‌. ಸಮರ್ಥ್‌ (18) ವೇಗಿ ಪ್ರವೀಣ್‌ ಕುಮಾರ್ ಎಸೆತದಲ್ಲಿ ವಿಕೆಟ್‌ ಒಪ್ಪಿಸಿದರು.

ಅದೃಷ್ಟ ತಂದ ಜೀವದಾನ
ಉತ್ತರ ಪ್ರದೇಶದ ಆಟಗಾರರು ಕ್ಯಾಚ್‌ ಕೈಚೆಲ್ಲಿದ್ದರಿಂದ ಕರ್ನಾಟಕಕ್ಕೆ ಲಾಭವಾಯಿತು. ಶ್ರೇಯಸ್‌ 18 ರನ್‌ ಗಳಿಸಿದ್ದ ವೇಳೆ ಸ್ಲಿಪ್‌ನಲ್ಲಿದ್ದ ಉಮಾಂಗ್‌ ಶರ್ಮ ಕ್ಯಾಚ್‌ ಬಿಟ್ಟರು.

ಇನ್ನೊಂದು ಜೀವದಾನ ಲಭಿಸಿದ್ದು ರಾಹುಲ್ ಅವರಿಗೆ. 79.2ನೇ ಎಸೆತದಲ್ಲಿ ಲಾಂಗ್‌ ಆನ್ ಬಳಿ ಬಾರಿಸಿದ ಚೆಂಡನ್ನು ಅಲಿ ಮುರ್ತಜಾ ಕೈಚೆಲ್ಲಿದರು. ಆಗ ರಾಹುಲ್‌ 121 ರನ್‌ ಗಳಿಸಿದ್ದರು. ಕ್ಯಾಚ್‌ ಬಿಟ್ಟ ಕಾರಣ ಎದುರಾಳಿ ಆಟಗಾರರು ತಾವೇ ಮಾಡಿದ ತಪ್ಪಿಗೆ ಪರಿತಪಿಸುವಂತಾಯಿತು. ಪಂದ್ಯದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಉತ್ತರ ಪ್ರದೇಶ ತಂಡದ ನಾಯಕ ಪ್ರವೀಣ್‌ ಕುಮಾರ್‌ ತಮ್ಮ ತಂಡದ ತಪ್ಪಿನ ಬಗ್ಗೆ ಬೇಸರ ವ್ಯಕ್ತಪಡಿಸಿದರು.

‘ಮೊದಲ ಅವಧಿಯಲ್ಲಿ ಉತ್ತಮ ಆರಂಭ ಲಭಿಸಿತ್ತು. ಆದರೆ, ಅನಗತ್ಯ ರನ್‌ಗಳನ್ನು ಬಿಟ್ಟುಕೊಟ್ಟಿದ್ದು ಮತ್ತು ಕ್ಯಾಚ್‌ಗಳನ್ನು ಕೈಚೆಲ್ಲಿದ್ದರಿಂದ ದಿನದ ಕೊನೆಯಲ್ಲಿ ನಿರಾಸೆಗೆ ಒಳಗಾಗಬೇಕಾಯಿತು’ ಎಂದು ಪ್ರವೀಣ್‌ ನುಡಿದರು.

ಆಸ್ಟ್ರೇಲಿಯಾ ಎದುರಿನ ಟೆಸ್ಟ್‌ ಸರಣಿಯಲ್ಲಿ ಆಡಿ ಬಂದಿರುವ ರಾಹುಲ್‌ಗೆ ಜೊತೆಯಾದ ರಾಬಿನ್‌ ಉತ್ತಪ್ಪ ವೇಗವಾಗಿ ರನ್‌ ಕಲೆ ಹಾಕಿದರು. 52 ಎಸೆತಗಳಲ್ಲಿ ಏಳು ಬೌಂಡರಿ ಸೇರಿದಂತೆ 41 ರನ್‌ ಬಾರಿಸಿ ಪೆವಿಲಿಯನ್ ಸೇರಿದರು. ಆಗ ಕರ್ನಾಟಕದ ಮೊತ್ತ 31.2 ಓವರ್‌ಗಳಲ್ಲಿ 109ಕ್ಕೆ2. ನಂತರ  ಮನೀಷ್‌ ಪಾಂಡೆ (20) ಮತ್ತು ಕರುಣ್‌ ನಾಯರ್‌ (0) ಬಂದಷ್ಟೇ ವೇಗವಾಗಿ ಔಟಾದರು.

ತಂಡ ಒಟ್ಟು 148 ರನ್‌ ಗಳಿಸುವಷ್ಟರಲ್ಲಿ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆಗ ರಾಹುಲ್ ಮತ್ತು ಶ್ರೇಯಸ್‌ ಸ್ಮರಣೀಯ ಇನಿಂಗ್ಸ್‌ ಕಟ್ಟಿದರು. ಈ ಜೋಡಿ ಐದನೇ ವಿಕೆಟ್‌ಗೆ 178 ರನ್‌ಗಳನ್ನು ಕಲೆ ಹಾಕಿತು.

ಔಟಾದಾಗ ಚಪ್ಪಾಳೆ!: ಬಲಗೈ ವೇಗಿ ಪ್ರವೀಣ್‌ ಆಫ್‌ಸ್ಟಂಪ್‌ ಎಗರಿಸಿ ಕರುಣ್‌ ನಾಯರ್‌ ಅವರನ್ನು ಬೌಲ್ಡ್‌ ಮಾಡುತ್ತಿದ್ದಂತೆ ಕ್ರೀಡಾಂಗಣ ದಲ್ಲಿದ್ದ ಕೆಲ ಕ್ರಿಕೆಟ್‌ ಪ್ರೇಮಿಗಳು ಎದ್ದು ನಿಂತು ಚಪ್ಪಾಳೆ ತಟ್ಟಿದ್ದರು!

ಅಭಿಮಾನಿಗಳು ಚಪ್ಪಾಳೆ ತಟ್ಟಿದ್ದು ಕರುಣ್‌ ಔಟಾಗಿದ್ದಕ್ಕೆ ಅಲ್ಲ. ಬದಲಾಗಿ ಕ್ರೀಸ್‌ಗೆ ಬಂದ ಭರವಸೆಯ ಆಟಗಾರ ಶ್ರೇಯಸ್‌ ಗೋಪಾಲ್ ಅವರನ್ನು ಸ್ವಾಗತಿಸಲು! ಈ ಸಲದ ರಣಜಿಯಲ್ಲಿ ಎರಡು ಶತಕ ಬಾರಿಸಿರುವ 21 ವರ್ಷದ ಶ್ರೇಯಸ್‌ ಅವರು ರಾಹುಲ್‌ ಜೊತೆ ಸೇರಿ ಉತ್ತಮ ಇನಿಂಗ್ಸ್‌ ಕಟ್ಟಿದರು.

ಸೊಗಸಾದ ಆಟ: ಈ ಋತುವಿನಲ್ಲಿ ಎರಡನೇ ಪಂದ್ಯ ಆಡುತ್ತಿರುವ ಬಲಗೈ ಬ್ಯಾಟ್ಸ್‌ಮನ್‌ ರಾಹುಲ್‌ ತಾಳ್ಮೆಯ ಆಟವಾಡಿದರು. ದಿನದಾಟದ ಮೊದಲ ಅವಧಿಯಲ್ಲಿ ಪಿಚ್‌ ಬೌಲರ್‌ಗಳಿಗೆ ನೆರವಾಗುತ್ತಿದ್ದ ಕಾರಣ ಅವರು ರಕ್ಷಣಾತ್ಮಕ ಆಟದ ಮೊರೆ ಹೋದರು.

ಒಂದೆಡೆ ವಿಕೆಟ್ ಉರುಳಿಸುತ್ತಿದ್ದ ಪ್ರವೀಣ್‌ ಕುಮಾರ್ ಎಸೆತಗಳನ್ನು ರಾಹುಲ್‌ ಎಚ್ಚರಿಕೆ ಯಿಂದ ಆಡಿ  98 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಕ್ರೀಸ್‌ಗೆ ಹೊಂದಿಕೊಂಡ ಬಳಿಕ ಅವರು ಸ್ಪಿನ್ನರ್‌ಗಳಾದ ಕುಲದೀಪ್‌ ಯಾದವ್‌ ಮತ್ತು ಅಲಿ ಮುರ್ತಜಾ ಎಸೆತಗಳಲ್ಲಿ ಹೆಚ್ಚು ರನ್‌ ಬಾರಿಸಿದರು. ರಾಹುಲ್‌ ಬೌಂಡರಿ (22) ಮೂಲಕವೇ 88 ರನ್ ಕಲೆ ಹಾಕಿದರು.

ರಾಹುಲ್‌ ಮೂರಂಕಿಯ ಗಡಿ ದಾಟಲು 181 ಎಸೆತಗಳನ್ನು ತೆಗೆದುಕೊಂಡರು. ಅವರು 98 ರನ್‌ ಗಳಿಸಿದ್ದ ವೇಳೆ ಕವರ್‌ ಬಳಿ ಬೌಂಡರಿ ಬಾರಿಸಿ ರಣಜಿಯಲ್ಲಿ ಐದನೇ ಶತಕ ದಾಖಲಿಸಿದರು.

ಬರೋಡ ಎದುರಿನ ಪಂದ್ಯದಲ್ಲಿ 89 ರನ್‌ ಗಳಿಸಿ ಶತಕದ ಹೊಸ್ತಿಲಲ್ಲಿ ಎಡವಿದ್ದರು. ಇಲ್ಲಿ, ಆ ನಿರಾಸೆ ಮರೆತು ಹೋಗುವಂತೆ ಆಡಿದರು. ಪಾಯಿಂಟ್‌, ಕವರ್‌, ರಿವರ್ಸ್‌ ಸ್ಲಿಪ್‌ಗಳಲ್ಲಿ ಬಾರಿಸಿದ ಬೌಂಡರಿಗಳಂತೂ ಸದಾ ನೆನಪಿನಲ್ಲಿ ಉಳಿಯುವಂಥದ್ದು. ದಿನಪೂರ್ತಿ ಕ್ರೀಸ್‌ನಲ್ಲಿದ್ದ ವಲ್ಚರ್ಸ್‌ ಕ್ರಿಕೆಟ್‌ ಕ್ಲಬ್‌ನ ಆಟಗಾರ ಒಟ್ಟು 259 ಎಸೆತಗಳಲ್ಲಿ 150 ರನ್‌ ಗಳಿಸಿದ್ದಾರೆ. ಒಂದು ಸಿಕ್ಸರ್‌ ಕೂಡಾ ಸಿಡಿಸಿದ್ದಾರೆ.

ಮಿಂಚಿದ ಶ್ರೇಯಸ್‌: ಭಾರತ ತಂಡದ ಮಾಜಿ ನಾಯಕ ರಾಹುಲ್‌ ದ್ರಾವಿಡ್‌ ಆಟವನ್ನು ನೆನಪಿಸುವಂತೆ ರಾಹುಲ್‌ ಬ್ಯಾಟ್‌ ಬೀಸುತ್ತಿದ್ದರೆ, ಇನ್ನೊಂದೆಡೆ ಶ್ರೇಯಸ್‌ ವೇಗವಾಗಿ ರನ್ ಗಳಿಸುವತ್ತ ಗಮನ ಹರಿಸಿದರು.

ಮೂರು ಗಂಟೆ ಕ್ರೀಸ್‌ನಲ್ಲಿದ್ದ ಶ್ರೇಯಸ್‌ 133 ಎಸೆತಗಳಲ್ಲಿ 88 ರನ್‌ ಗಳಿಸಿದ್ದಾರೆ. ಗಲ್ಲಿ ಮತ್ತು ಥರ್ಡ್‌ ಮ್ಯಾನ್‌ ಬಳಿ ಹೆಚ್ಚು ಗಮನ ಹರಿಸಿ ಆಡಿ  15 ಬೌಂಡರಿಗಳನ್ನು ಬಾರಿಸಿದ್ದಾರೆ.

ಸ್ಕೋರ್ ವಿವರ
ಕರ್ನಾಟಕ ಮೊದಲ ಇನಿಂಗ್ಸ್‌ 90 ಓವರ್‌ಗಳಲ್ಲಿ 326ಕ್ಕೆ4

ಆರ್‌. ಸಮರ್ಥ್‌ ಬಿ. ಪ್ರವೀಣ್‌ ಕುಮಾರ್‌  18
ಕೆ.ಎಲ್‌. ರಾಹುಲ್‌ ಬ್ಯಾಟಿಂಗ್‌  150
ರಾಬಿನ್‌ ಉತ್ತಪ್ಪ  ಸಿ. ಪರ್ವಿಂದರ್‌ ಸಿಂಗ್‌ ಬಿ. ಅಲಿ ಮುರ್ತಜಾ  41
ಮನೀಷ್‌ ಪಾಂಡೆ ಸಿ. ತನ್ಮಯ್‌ ಶ್ರೀವಾತ್ಸವ್‌ ಬಿ. ಪ್ರವೀಣ್‌ ಕುಮಾರ್‌  20
ಕರುಣ್‌ ನಾಯರ್ ಬಿ. ಪ್ರವೀಣ್‌ ಕುಮಾರ್‌  00
ಶ್ರೇಯಸ್‌ ಗೋಪಾಲ್‌ ಬ್ಯಾಟಿಂಗ್‌  88
ಇತರೆ: (ಬೈ-–4, ಲೆಗ್‌ ಬೈ-–2, ವೈಡ್‌–-3)  09
ವಿಕೆಟ್‌ ಪತನ: 1–-29 (ಸಮರ್ಥ್‌; 14.5), 2-–109 (ರಾಬಿನ್‌್; 31.2), 3-–148 (ಪಾಂಡೆ; 46.2), 4-–148 (ಕರುಣ್‌; 46.5).
ಬೌಲಿಂಗ್‌: ಪ್ರವೀಣ್‌ ಕುಮಾರ್‌ 22–-9-–3–4-3, ಅಮಿತ್‌ ಮಿಶ್ರಾ 18–-1-–71–-0, ಇಮ್ತಿಯಾಜ್‌ ಅಹ್ಮದ್‌ 15-–2–-65-–1, ಕುಲದೀಪ್‌ ಯಾದವ್‌ 15-–0-–79-–0, ಅಲಿ ಮುರ್ತಜಾ 20–-3-–71-–1.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT