ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್ ಹೊಸ ಹೆಜ್ಜೆ

Last Updated 23 ಜೂನ್ 2016, 19:30 IST
ಅಕ್ಷರ ಗಾತ್ರ

‘ಜಿಗರ್‌ಥಂಡ’ ಇಂದು (ಜೂನ್ 24) ತೆರೆ ಕಾಣುತ್ತಿರುವ ಚಿತ್ರ. ತಮ್ಮ ಚಿತ್ರಬದುಕಿನ ಅಜ್ಞಾತವಾಸಕ್ಕೆ ಈ ಚಿತ್ರ ಇತಿಶ್ರೀ ಹಾಡುತ್ತದೆ ಎನ್ನುವ ಖಚಿತ ಭರವಸೆ ನಾಯಕನಟ ರಾಹುಲ್‌ ಅವರದು.

ನಿಮ್ಮ ಈ ಹಿಂದಿನ ಸಿನಿಮಾಗಳು ಯಶಸ್ಸು ತಂದುಕೊಡಲಿಲ್ಲ. ಈ ಸಿನಿಮಾ? ಈ ಪ್ರಶ್ನೆಗೆ ನಟ ರಾಹುಲ್ ಥಟ್‌ ಎಂದು ನೀಡುವ ಉತ್ತರ: ‘ಹಿಂದೆ ನಾನು ಸಿನಿಮಾವನ್ನೇ ಮಾಡಿಲ್ಲ. ಇದೇ ನನ್ನ ಮೊದಲನೇ ಸಿನಿಮಾ’. ಹೌದು, ‘ಹೃದಯದಲ್ಲಿ ಇದೇನಿದು’, ‘ಅಭಿಮಾನಿ’ ಸೇರಿದಂತೆ ಬೆರಳೆಣಿಕೆಯ ಸಿನಿಮಾಗಳು ರಾಹುಲ್‌ ಸಿನಿಮಾಗ್ರಫಿಯಲ್ಲಿವೆ. ಆದರೆ ಅದೃಷ್ಟ ಮಾತ್ರ ಕೈಗೂಡಲಿಲ್ಲ. ‘ಮಾಣಿಕ್ಯ’ ಚಿತ್ರದ ಸಣ್ಣ ಪಾತ್ರವೇ ಅವರಿಗೆ ಒಂದು ಹಂತಕ್ಕೆ ಅದೃಷ್ಟದ ಮಗ್ಗುಲು ಬದಲಿಸುವಂತೆ ಮಾಡಿದ್ದು. ಆದರೆ ಇಂದು (ಜೂನ್ 24) ತೆರೆ ಕಾಣುತ್ತಿರುವ ‘ಜಿಗರ್‌ಥಂಡ’ ತಮ್ಮ ಸಿನಿಮಾದ ಹಾದಿಯನ್ನು ಬೆಳಗಿಸುತ್ತದೆ ಎನ್ನುವ ಅಚಲ ವಿಶ್ವಾಸ ಅವರಿಗಿದೆ.

2014ರಲ್ಲಿ ತೆರೆ ಕಂಡ ತಮಿಳಿನ ‘ಜಿಗರ್‌ಥಂಡ’ ರೂಪಾಂತರ ಕನ್ನಡದ ಈ ‘ಜಿಗರ್‌ಥಂಡ’. ಶೀರ್ಷಿಕೆ ಸಹ ಹಾಗೆಯೇ ಉಳಿಸಿಕೊಳ್ಳಲಾಗಿದೆ. 120 ಕಾಲೇಜು ತಂಡಗಳನ್ನು ಆಹ್ವಾನಿಸಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸುವ ಮೂಲಕ ಭಿನ್ನ ಪ್ರಚಾರತಂತ್ರವವನ್ನೂ ಚಿತ್ರತಂಡ ನಡೆಸಿದೆ. ‘ಈ ಹಿಂದೆ ನನಗೆ ಸಿನಿಮಾಗಳ ಮೌಲ್ಯ–ಸಿದ್ಧತೆ ಗೊತ್ತಿರಲಿಲ್ಲ. ಅವಕಾಶಗಳು ಸಿಕ್ಕುತ್ತಿದ್ದವು, ನಟಿಸುತ್ತಿದ್ದೆ. ಈ ಎಂಟು ವರುಷಗಳಲ್ಲಿ ಸಿನಿಮಾ ಮೌಲ್ಯಗಳ ಅರಿವಾಗಿದೆ. ಆ ಅರಿವಿನ ಮೊದಲ ಹೆಜ್ಜೆ ‘ಜಿಗರ್‌ಥಂಡ’ ಎಂದು ರಾಹುಲ್‌ ಹೇಳುತ್ತಾರೆ.

ಕಾಲೇಜು ದಿನಗಳಲ್ಲಿ ಉದಯ ವಾಹಿನಿಯಲ್ಲಿ ನಿರೂಪಕರಾಗಿದ್ದ ರಾಹುಲ್, ಅಚಾನಕ್ಕಾಗಿ ತೆರೆಯಲ್ಲಿ ಕಾಣಿಸಿಕೊಂಡವರು. ಕ್ರಿಕೆಟ್ ಅವರಿಗೆ ಅಚ್ಚುಮೆಚ್ಚು. ‘ನನ್ನ ಸ್ನೇಹಿತನ ಸ್ನೇಹಿತರೊಬ್ಬರು ನಟರಾಗಿದ್ದರು. ಅವರನ್ನು ನೋಡಿ, ಅಯ್ಯೋ ಇವರು ನಟರಾಗಿದ್ದಾರೆ ಅಂದ ಮೇಲೆ ನಾವೂ ಪ್ರಯತ್ನಿಸಬಹುದು ಎನಿಸಿತು. ‘ಹೃದಯಲ್ಲಿ ಇದೇನಿದೋ’ ಸಿನಿಮಾ ವಿಮರ್ಶಕರಿಂದ ಹೊಗಳಿಸಿಕೊಂಡಿತು. ಆದರೆ ನನ್ನ ಗ್ರಾಫ್ ಏರಲಿಲ್ಲ. ಪ್ರಸಿದ್ಧನಾದರೆ ದೊಡ್ಡದಾಗಿ ಆಗಬೇಕು. ಇಲ್ಲದಿದ್ದರೆ ಸುಮ್ಮನೆ ಇರಬೇಕು. ನಡುವಿನದ್ದು ತ್ರಿಶಂಕು ಸ್ಥಿತಿ. ಹೊರಗಡೆ ಸಿಕ್ಕುವ ಕೆಲವರು ನಿಮ್ಮನ್ನು ಎಲ್ಲೋ ನೋಡಿದ್ದೇನೆ ಎಂದಾಗ ತುಂಬ ಹಿಂಸೆ ಎನಿಸುತ್ತದೆ’ ಎನ್ನುತ್ತಾರೆ.

‘ಜಿಗರ್‌ಥಂಡ’ ಕನ್ನಡಕ್ಕೆ ಬರಲು ಕಾರಣ ಮತ್ತು ತಮಗೆ ಆ ಪಾತ್ರ ಸಿಕ್ಕಲು ಕಾರಣ ಪ್ರಿಯಾಮಣಿ, ಸುದೀಪ್ ಮತ್ತು ನಿರ್ಮಾಪಕ ರಘುನಾಥ್’ ಎನ್ನುತ್ತಾರೆ ರಾಹುಲ್. ಸುದೀಪ್ ಮಾಣಿಕ್ಯ ಚಿತ್ರದಲ್ಲಿ ಕರೆದು ಅವಕಾಶಕೊಟ್ಟರು. ರಘುನಾಥ್ ಹೆಬ್ಬುಲಿ ಸಿನಿಮಾ ನಿರ್ಮಾಣದ ಆಲೋಚನೆಯಲ್ಲಿ ಇದ್ದರು. ಒಮ್ಮೆ ರಘುನಾಥ್, ರಾಹುಲ್ ನೀವು ಏಕೆ ಸಿನಿಮಾ ಮಾಡಬಾರದು ಎಂದರು. ಪಕ್ಕದಲ್ಲಿದ್ದ ಪ್ರಿಯಾಮಣಿ ‘ನೀವೇ ಸಿನಿಮಾ ಮಾಡಿ’ ಎಂದರು. ‘ಅಲ್ಲಿಂದ ಈ ಚಿತ್ರದ ರೂಪುರೇಷೆಗಳು ಸಿದ್ಧವಾದವು’ ಎಂದು ‘ಜಿಗರ್‌ಥಂಡ’ಕ್ಕೆ ಜಿಗಿದದ್ದನ್ನು ರಾಹುಲ್ ನೆನಪಿಸಿಕೊಳ್ಳುತ್ತಾರೆ.

ಬದಲಾವಣೆಯ ಪರ್ವ
ಕನ್ನಡದ ‘ಜಿಗರ್‌ಥಂಡ’ ಮೂಲ ಚಿತ್ರಕ್ಕಿಂತ ಭಿನ್ನವಾಗಿದೆಯಂತೆ. ಹಲವು ಶೀರ್ಷಿಕೆಗಳು ಚರ್ಚೆಗೆ ಬಂದರೂ ಅಂತಿಮವಾಗಿ ಉಳಿದಿದ್ದು ಮೂಲ ಚಿತ್ರದ ಶೀರ್ಷಿಕೆಯೇ. ‘ಹೃದಯಲ್ಲಿ ಇದೇನಿದು’ ಸಿನಿಮಾ ನಿರ್ದೇಶಿಸಿದ್ದ ತಮಿಳಿನ ಶಿವಗಣೇಶ್‌ ಅವರೇ ‘ಜಿಗರ್‌ಥಂಡ’ ಚಿತ್ರ ನಿರ್ದೇಶಿಸಿದ್ದಾರೆ. ಜಿಗರ್ ಎಂದರೆ ಹಾಟ್, ಥಂಡಾ ಎಂದರೆ ಕೂಲ್! ಅದರಂತೆಯೇ ಇಲ್ಲಿ ರವಿಶಂಕರ್ ಬಂದಾಗ ಕಥೆ ಕಾವೇರುತ್ತದೆ. ಅವರ ಮುಂದೆ ಉಳಿದವರು ಥಂಡಾ ಥಂಡಾ. ಮೂಲಚಿತ್ರದಲ್ಲಿ ಹೊಸಬರು ಸಾಕಷ್ಟಿದ್ದರು. ಆದರೆ ಇಲ್ಲಿ ರವಿಶಂಕರ್, ಚಿಕ್ಕಣ್ಣ, ಸಾಧುಕೋಕಿಲಾ ಎಲ್ಲರೂ ಪ್ರಸಿದ್ಧ ನಟರೇ. ನಿರ್ಮಾಪಕ ಕೆ. ಮಂಜು ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. 


ನಿರ್ಮಾಪಕನ ಸ್ಥಾನದಲ್ಲಿರುವ ಸುದೀಪ್ ಕೂಡ ಅವರು ಜಿಗರ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಅವರ ಪಾತ್ರ ಯಾವ ಬಗೆಯದು ಎನ್ನುವ ಕುತೂಹಲವನ್ನು ರಾಹುಲ್ ಬಿಟ್ಟುಕೊಡುವುದಿಲ್ಲ. ‘ಈ ಮುಂಚೆ ನಾನು ಮಾಲ್‌ಗಳು, ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವಾಗ ಯಾರೋ ಒಬ್ಬರು ಗುರುತು ಹಿಡಿಯುತ್ತಿದ್ದರು. ಆದರೆ ನನ್ನನ್ನು ಗುರುತು ಹಿಡಿಯುವವರ ಸಂಖ್ಯೆ ಹೆಚ್ಚಾಗಿದೆ. ಇದಕ್ಕೆ ಕಾರಣ ‘ಜಿಗರ್ಥಂಡ’. ಉದಯ ವಾಹಿನಿಯಲ್ಲಿ ನಿರೂಪಕನಾಗಿದ್ದಾಗ ಜನರು ಗುರುತು ಹಿಡಿಯುತ್ತಿದ್ದ ‘ಆ ದಿನಗಳು’ ಒಂಬತ್ತು ವರುಷಗಳ ನಂತರ ಮರಳಿವೆ ಎನ್ನುವ ಖುಷಿ ರಾಹುಲ್ ಅವರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT