ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಯಾಜ್‌ ಕುಮ್ಮಕ್ಕಿನಿಂದ ಸಾಕ್ಷ್ಯ ನಾಶ: ಎಸ್‌ಐಟಿ

ಜಾಮೀನು ಅರ್ಜಿ: ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಆಕ್ಷೇಪಣೆ ಸಲ್ಲಿಕೆ
Last Updated 3 ಆಗಸ್ಟ್ 2015, 20:07 IST
ಅಕ್ಷರ ಗಾತ್ರ

ಬೆಂಗಳೂರು: ಲೋಕಾಯುಕ್ತ ಸಂಸ್ಥೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿಸಲಾಗಿರುವ ಅಶೋಕ್‌ ಕುಮಾರ್‌ ಮತ್ತು ಶಂಕರೇಗೌಡ ಅವರು ಲೋಕಾಯುಕ್ತ ಸಂಸ್ಥೆಯ ಜಂಟಿ ಆಯುಕ್ತ (ಸಾರ್ವಜನಿಕ ಸಂಪರ್ಕ) ಸೈಯದ್‌ ರಿಯಾಜ್‌ ಸೂಚನೆ ಆಧರಿಸಿ ಸಾಕ್ಷ್ಯ ನಾಶ ಮಾಡಿದ್ದಾರೆ ಎಂದು ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯಕ್ಕೆ ತಿಳಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ರಿಯಾಜ್‌, ಅಶೋಕ್, ಶ್ರೀನಿವಾಸ ಗೌಡ‌ ಮತ್ತು ಶಂಕರೇಗೌಡ ಸಲ್ಲಿಸಿರುವ ಜಾಮೀನು ಅರ್ಜಿ ಬಗ್ಗೆ ಅದು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಸೋಮವಾರ ಆಕ್ಷೇಪಣೆ ಸಲ್ಲಿಸಿದೆ.

ಕಾರ್ಯನಿರ್ವಾಹಕ ಎಂಜಿನಿಯರ್‌ ಕೃಷ್ಣಮೂರ್ತಿ ಅವರಿಂದ ₹ 1 ಕೋಟಿ ಲಂಚ ಕೇಳಿದ ಮೇ 4ರಂದು ಈ ನಾಲ್ಕೂ  ಆರೋಪಿಗಳು ಪರಸ್ಪರ ಸಂಪರ್ಕದಲ್ಲಿದ್ದರು ಎಂದು ಎಸ್‌ಐಟಿ ಹೇಳಿದೆ.

ಅಶೋಕ್‌ ಕುಮಾರ್‌ ಅವರ ನಿವಾಸದಲ್ಲಿ ನಡೆದ ಶೋಧದ ವೇಳೆ ಐದು ಮೊಬೈಲ್‌ ದೂರವಾಣಿಗಳು ದೊರೆತಿವೆ. ಅಶೋಕ್‌ ಕುಮಾರ್‌ ಮತ್ತು ರಿಯಾಜ್‌ ನಡುವಣ ಕರೆಗಳ ವಿವರ ಇವುಗಳಲ್ಲಿವೆ. ಮೊಬೈಲ್‌ ದೂರವಾಣಿಗಳಿಂದ ಸಂಗ್ರಹಿಸಿದ ಧ್ವನಿ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಆಕ್ಷೇಪಣೆಯಲ್ಲಿ ವಿವರಿಸಲಾಗಿದೆ.

ಶಂಕರೇಗೌಡ ಅವರ ನಿವಾಸದಲ್ಲಿ ಪತ್ತೆಯಾದ ದಿನಚರಿ ಪುಸ್ತಕದಲ್ಲಿ ಲೋಕೋಪಯೋಗಿ ಇಲಾಖೆಯ ಅನೇಕ ಎಂಜಿನಿಯರ್‌ಗಳ ದೂರವಾಣಿ ಸಂಖ್ಯೆಗಳಿವೆ. ಶ್ರೀನಿವಾಸ ಗೌಡ ಅವರ ನಿವಾಸದಲ್ಲಿ ಹಲವು ಆರ್‌ಟಿಐ ಅರ್ಜಿಗಳು ಎಸ್‌ಐಟಿ ಅಧಿಕಾರಿಗಳಿಗೆ ದೊರೆತಿವೆ ಎಂದು ಗೊತ್ತಾಗಿದೆ.

ಅಶೋಕ್‌ ಕುಮಾರ್‌, ಶಂಕರೇಗೌಡ ಮತ್ತು ಶ್ರೀನಿವಾಸ ಗೌಡ ಅವರು ಮೇ 4ರಂದು ಖಾಸಗಿ ಹೋಟೆಲ್‌ ಒಂದರಲ್ಲಿ ಇದ್ದರು ಎಂಬುದು ಇಲ್ಲಿಯವರೆಗಿನ ತನಿಖೆಯಿಂದ ಗೊತ್ತಾಗಿದೆ ಎಂದು ಎಸ್‌ಐಟಿ ಹೇಳಿದೆ. ಲೋಕಾಯುಕ್ತ ಕಚೇರಿಯಲ್ಲಿ ಕೃಷ್ಣಮೂರ್ತಿ ಅವರಿಂದ ಲಂಚ ಕೇಳಿದ ಕೊಠಡಿಯು ರಿಯಾಜ್‌ ಅವರ ಅಧೀನದಲ್ಲಿ ಇತ್ತು. ಈ ಕೊಠಡಿಗೆ ರಿಯಾಜ್‌ ಅವರ ಕೊಠಡಿಯಿಂದಲೂ ಪ್ರವೇಶಿಸಬಹುದು. ಲೋಕಾಯುಕ್ತ ವೈ. ಭಾಸ್ಕರ ರಾವ್ ಮಗ ಅಶ್ವಿನ್ ರಾವ್ ಸಲ್ಲಿಸಿರುವ ಜಾಮೀನು ಅರ್ಜಿಗೂ ಎಸ್‌ಐಟಿ ಆಕ್ಷೇಪಣೆ ಸಲ್ಲಿಸಿದೆ.

ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಕಾರ್ಯನಿರ್ವಾಹಕ ಎಂಜಿನಿಯರ್‌ ಆಗಿರುವ ಚೆನ್ನಬಸಪ್ಪ ಎಂಬುವವರು ಸಲ್ಲಿಸಿರುವ ದೂರು ಆಧರಿಸಿ ಅಶ್ವಿನ್ ಅವರನ್ನು ಎಸ್‌ಐಟಿ ಬಂಧಿಸಿದೆ. ಹೈದರಾಬಾದ್‌ನ ಹವಾನಾ ಹೋಟೆಲ್‌ನಲ್ಲಿ ಅಶ್ವಿನ್‌ ಅವರು ಚೆನ್ನಬಸಪ್ಪ, ವಿ. ಭಾಸ್ಕರ್‌ ಮತ್ತು ಅಶೋಕ್‌ ಕುಮಾರ್‌ ಅವರ ಜೊತೆ ಇದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ ಎಂದು ಎಸ್‌ಐಟಿ ಹೇಳಿದೆ.

ಕಪ್ಪು ಬಣ್ಣದ ಮರ್ಸಿಡೀಸ್‌ ಬೆಂಜ್‌ ಕಾರಿನಲ್ಲಿ ಬಂದಿದ್ದ ಅಶ್ವಿನ್‌ ಅವರು ಚೆನ್ನಬಸಪ್ಪ ಅವರನ್ನು ಭೇಟಿ ಮಾಡಿದ್ದರು. ಅಶ್ವಿನ್‌ ಅವರ ಹೈದರಾಬಾದ್‌ನ ಮನೆಯಿಂದ ಕೆಲವು ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್‌ಐಟಿ ಹೇಳಿದೆ. ಇವುಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ರಿಯಾಜ್‌ ಅವರ ನಿವಾಸದಲ್ಲಿ ಅಶ್ವಿನ್‌ ಅವರಿಗೆ ಸಂಬಂಧಿಸಿದ ಕೆಲವು ವೈದ್ಯಕೀಯ ದಾಖಲೆಗಳು ದೊರೆತಿವೆ. ಭಾಸ್ಕರ್‌ ಅವರಿಗೆ ಸಂಬಂಧಿಸಿದ ಕೆಲವು ಜಮೀನು ದಾಖಲೆಗಳು ರಿಯಾಜ್ ಅವರ ಕೊಠಡಿಯಲ್ಲಿ ಸಿಕ್ಕಿವೆ ಎಂದು ಗೊತ್ತಾಗಿದೆ.

ನ್ಯಾಯಾಂಗ ಬಂಧನಕ್ಕೆ ಅಶೋಕ್‌:  ಕಾರ್ಯನಿರ್ವಾಹಕ ಎಂಜಿನಿಯರ್‌ ಕೃಷ್ಣಮೂರ್ತಿ ಅವರನ್ನು ಲೋಕಾಯುಕ್ತ ಕಚೇರಿಗೆ ಕರೆಸಿ, ಅವರಿಂದ ₹ 1 ಕೋಟಿ ಲಂಚ ಕೇಳಿದ ಪ್ರಕರಣದ ಆರೋಪಿ ಅಶೋಕ್‌ ಕುಮಾರ್ ಅವರನ್ನು  ಲೋಕಾಯುಕ್ತ ವಿಶೇಷ ನ್ಯಾಯಾಲಯ ಸೋಮವಾರ 14 ದಿನ ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ.
*
ಮೊಬೈಲ್‌, ಸಿಮ್‌ ಕಾರ್ಡ್‌ ನಾಶ
‘ಹಣ ಸುಲಿಯುವ ತಂಡದಲ್ಲಿನ ಇತರರು ಮತ್ತು ರಿಯಾಜ್‌ ನಡುವೆ ಸಂಪರ್ಕ ಇತ್ತು ಎಂದು ಹೇಳುವ ಡಿಜಿಟಲ್‌ ಸಾಕ್ಷ್ಯಗಳು ದೊರೆತಿವೆ. ಕೃಷ್ಣಮೂರ್ತಿ ಅವರಿಗೆ ಕರೆ ಮಾಡಲು ಬಳಸಿದ ಸಿಮ್‌ ಕಾರ್ಡ್‌ ಅನ್ನು ಅಶೋಕ್‌ ಕುಮಾರ್‌ ಅವರು ರಿಯಾಜ್‌ ಸೂಚನೆ ಆಧರಿಸಿ ನಾಶ ಮಾಡಿದರು. ಕರೆ ಮಾಡಲು ಬಳಸಿದ ಮೊಬೈಲ್‌ ದೂರವಾಣಿಯನ್ನು ರಿಯಾಜ್‌ ಸೂಚನೆ ಅನ್ವಯ ಶಂಕರೇಗೌಡ ಅವರು ನಾಶ ಮಾಡಿದರು’ ಎಂದು ಎಸ್‌ಐಟಿ ಆರೋಪಿಸಿದೆ.

ಬಂಧನ ವಾರಂಟ್‌:  ಪ್ರಕರಣದ ಪ್ರಮುಖ ಆರೋಪಿ ವಿ. ಭಾಸ್ಕರ್ ಅಲಿಯಾಸ್‌ ‘420 ಭಾಸ್ಕರ್‌’ ಬಂಧನಕ್ಕೆ ನ್ಯಾಯಾಲಯದಿಂದ ಎಸ್‌ಐಟಿ ವಾರಂಟ್‌ ಪಡೆದುಕೊಂಡಿದೆ. ಭಾಸ್ಕರ್‌ ಅವರ ಚಲನವಲ ನಗಳ ಮೇಲೆ ಕಣ್ಣಿಡುವಂತೆ ಬೇರೆ ಬೇರೆ ಭದ್ರತಾ ಸಂಸ್ಥೆಗಳಿಗೆ ಸೂಚನೆ ನೀಡಲು ಬಂಧನ ವಾರೆಂಟ್‌ ಬೇಕಾಗಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಲೋಕಾಯುಕ್ತದಲ್ಲಿ ನಡೆದಿದೆ ಎನ್ನಲಾದ ಲಂಚ ಪ್ರಕರಣದಲ್ಲಿ ಭಾಸ್ಕರ್‌ ಅವರ ಪಾತ್ರವೂ ಇದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT