ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂಪಕಗಳ ಚಕ್ರವರ್ತಿ ಕಣ್ಮರೆ

Last Updated 7 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸಿನಿಮಾ ಛಾಯಾ­ಗ್ರಹಣದ ಪಟ್ಟು­ಗಳನ್ನು ಬಲ್ಲವರು ಹೇಳುವಂತೆ ‘ರೂಪಕಗಳ ಚಕ್ರವರ್ತಿ’ (ಮೆಟಫರ್‌ಗಳ ಮಾಸ್ಟರ್) ಆಗಿದ್ದ ವಿ.ಕೆ. ಮೂರ್ತಿ ತೊಂಬತ್ತೊಂದು ವರ್ಷಗಳ ತುಂಬು ಬದುಕಿನ ಪಯಣ ಮುಗಿಸಿ, ಇನ್ನು ನೆನಪಾಗಿದ್ದಾರೆ.

ಮೈಸೂರಿನಲ್ಲಿ 1923ರಲ್ಲಿ ಹುಟ್ಟಿದ ವಿ.ಕೆ.ಮೂರ್ತಿ, 1943ರಲ್ಲಿ ಬೆಂಗಳೂರಿನ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್‌ನಲ್ಲಿ ಸಿನಿಮಾಟೋಗ್ರಫಿ ಡಿಪ್ಲೊಮಾ ಕಲಿಯಲು ದಾಖಲಾದ ಮೊದಲ ಬ್ಯಾಚ್‌ನ ವಿದ್ಯಾರ್ಥಿ. ವಯಲಿನ್‌ ವಾದಕರೂ ಆಗಿದ್ದ ಅವರಿಗೆ ಸಿನಿಮಾ ಛಾಯಾಗ್ರಹಣದಲ್ಲಿ ಚಿಕ್ಕ ವಯಸ್ಸಿನಲ್ಲೇ ಆಸಕ್ತಿ ಮೂಡಿತ್ತು.

ಗುರುದತ್‌ ನಿರ್ದೇಶನದ ‘ಪ್ಯಾಸಾ’, ‘ಕಾಗಜ್‌ ಕೆ ಫೂಲ್‌’, ‘ಸಾಹಿಬ್‌ ಬೀಬಿ ಔರ್‌ ಗುಲಾಮ್‌’, ‘ಆರ್‌–ಪಾರ್‌’ ಚಿತ್ರಗಳು ಮೂರ್ತಿ ಅವರ ಕ್ಯಾಮೆರಾದ ಕ್ಲಾಸಿಕ್‌ ಕಸುಬುದಾರಿಕೆಗೆ ನಿದರ್ಶನ­ಗಳು.

ಮುಂಬೈನ ಫೇಮಸ್‌ ಸ್ಟುಡಿಯೋಸ್‌­ನಲ್ಲಿ ಸಹಾಯಕ ಕ್ಯಾಮೆರಾಮನ್ ಆಗಿ ಕೆಲಸ ನಿರ್ವಹಿಸುತ್ತಿದ್ದಾಗ ಗುರುದತ್‌ ಅವರನ್ನು ಮೊದಲು ಭೇಟಿ ಮಾಡುವ ಅವಕಾಶ ವಿ.ಕೆ. ಮೂರ್ತಿ ಅವರಿಗೆ ದೊರೆಯಿತು. ಕಷ್ಟಕರವಾದ ಒಂದು ಶಾಟ್‌ ಸಂಯೋಜಿಸುವ ಸಲಹೆ­ಯೊಂದನ್ನು ಮೂರ್ತಿ, ಗುರುದತ್‌ ಕಿವಿಗೆ ಹಾಕಿದರು. ಅದು ತಮ್ಮ ಕ್ಯಾಮೆರಾಮನ್‌ಗೆ ಅಸಾಧ್ಯ ಎಂದು ಮುಚ್ಚುಮರೆ ಇಲ್ಲದೆ ಗುರುದತ್‌ ಹೇಳಿದರು. ಆಗ ತಮಗೊಂದು ಅವಕಾಶ ಕೊಡುವಂತೆ ಮೂರ್ತಿ ಕೇಳಿದರು. ಒಂದೇ ಟೇಕ್‌ನಲ್ಲಿ ಆ ಶಾಟ್‌ ಓಕೆ ಆದ ಮೇಲೆ ಗುರುದತ್‌ ಅವರಿಗೆ ಮೂರ್ತಿ ಅವರ ಪ್ರತಿಭೆ ಅರಿವಾಯಿತು. ಆ ಕ್ಷಣವೇ ತಮ್ಮ ಚಿತ್ರದ ಸಿನಿಮಾಟೊಗ್ರಾಫರನ್ನು ಬದಲಾಯಿಸಿ, ಆ ಜಾಗದಲ್ಲಿ ಮೂರ್ತಿ ಅವರನ್ನು ಕೂರಿಸಲು ಗುರುದತ್‌ ಸಿದ್ಧವಿದ್ದರು. ಆದರೆ, ನೈತಿಕವಾಗಿ ಅದು ಸರಿಯಲ್ಲ ಎಂದ ಮೂರ್ತಿ, ಮುಂದಿನ ಚಿತ್ರದಲ್ಲಿ ಅವಕಾಶ ಕೊಡುವಂತೆ ವಿನಂತಿಸಿ­ಕೊಂಡರು.

ಹಾಗೆ ಗುರುದತ್‌ ಮನಗೆದ್ದ ಮೂರ್ತಿ, ಮುಂದೆ ಆ ಕಸುಬುದಾರ ನಿರ್ದೇಶಕ ಬದುಕಿರುವವರೆಗೆ ಅವರ ಸಿನಿಮಾಗಳಲ್ಲಿ ಮಾತ್ರ ಕೆಲಸ ಮಾಡಿದರು. ಸೆಲ್ಯುಲಾಯ್ಡ್‌ ಸಿನಿಮಾ ಇತಿಹಾಸದಲ್ಲೇ ‘ಪ್ಯಾಸಾ’ ಒಂದು ಕ್ಲಾಸಿಕ್‌ ಚಿತ್ರ ಎನಿಸಿಕೊಂಡಿದ್ದರಲ್ಲಿ ಮೂರ್ತಿ ಅವರ ಕ್ಯಾಮೆರಾ ಚಳಕದ ಪಾತ್ರ ದೊಡ್ಡದು. ಮೊಟ್ಟ ಮೊದಲ ಸಿನಿಮಾಸ್ಕೋಪ್ ಚಿತ್ರ ‘ಕಾಗಜ್‌ ಕೆ ಫೂಲ್‌’ನಲ್ಲಿ ಕೆಲಸ ಮಾಡಿದ ಅಗ್ಗಳಿಕೆ ಅವರದ್ದು.

ಪ್ರಮೋದ್‌ ಚಕ್ರವರ್ತಿ, ಶ್ಯಾಮ್‌ ಬೆನಗಲ್‌, ಗೋವಿಂದ ನಿಹಲಾನಿ ಅವರ ಚಿತ್ರಗಳಲ್ಲೂ ಸಿನಿಮಾಟೊಗ್ರಾಫರ್‌ ಆಗಿ ಕಾರ್ಯ ನಿರ್ವಹಿಸಿದ ಮೂರ್ತಿ, ಅನೇಕ ಯುವ ಸಿನಿಮಾ ವಿದ್ಯಾರ್ಥಿಗಳ ಪಾಲಿಗೆ ದ್ರೋಣಾಚಾರ್ಯರಾಗಿದ್ದರು.

ಏಕೈಕ ಸಿನಿಮಾ ತಂತ್ರಜ್ಞ: ಮೂರು ಬಾರಿ ಫಿಲ್ಮ್‌ಫೇರ್‌ ಪ್ರಶಸ್ತಿ, 2008ನೇ ಸಾಲಿನ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಪುರಸ್ಕಾರಕ್ಕೆ ಅವರು ಪಾತ್ರರಾಗಿದ್ದರು. ಚಿತ್ರರಂಗದ ಈ ದೊಡ್ಡ ಗೌರವಕ್ಕೆ ಭಾಜನರಾದ ಏಕೈಕ ಸಿನಿಮಾ ತಂತ್ರಜ್ಞ ಅವರೆಂಬುದು ವಿಶೇಷ.
ನಾಲ್ಕು ದಶಕಗಳ ವೃತ್ತಿಬದುಕಿನ ಬಹುತೇಕ ದಿನಗಳನ್ನು ಮುಂಬೈನಲ್ಲಿ ಕಳೆದ ಅವರು ಕೆಲಸ ಮಾಡಿದ ಒಂದೇ ಒಂದು ಕನ್ನಡ ಚಿತ್ರ ಎಸ್‌.ವಿ. ರಾಜೇಂದ್ರ ಸಿಂಗ್‌ ಬಾಬು ನಿರ್ದೇಶನದ, ತ್ರಿವೇಣಿ ಅವರ ಕಾದಂಬರಿ ಆಧರಿಸಿದ ‘ಹೂವು–ಹಣ್ಣು’. 

ಅವರಿಗೆ ದಾದಾ ಸಾಹೇಬ್‌ ಫಾಲ್ಕೆ  ಪ್ರಶಸ್ತಿ ಪುರಸ್ಕಾರ ಸಂದಾಗ ಕನ್ನಡದ ಪರ್ಯಾಯ ಚಿತ್ರಗಳ ಸಿನಿಮಾ­ಟೊಗ್ರಾಫರ್‌ ಎಸ್‌. ರಾಮಚಂದ್ರ ಐತಾ­ಳರು ಹೀಗೆ ನೆನಪಿಸಿಕೊಂಡಿದ್ದರು. ‘‘ಮೂರ್ತಿ ಸಿನಿಮಾ ಛಾಯಾಗ್ರಹಣ ಬೇಡುವ ಅನೇಕ ಪರಿಕರ­ಗಳು ಇಲ್ಲದ ಕಾಲಘಟ್ಟದಲ್ಲಿ ನೆರಳು–ಬೆಳಕಿನ ಜೊತೆ ಆಟವಾಡುತ್ತಿದ್ದ ರೀತಿ ಬೆರಗು ಹುಟ್ಟಿಸು­ವಂಥದ್ದು. ‘ಕಾಗಜ್ ಕೆ ಫೂಲ್’ ಚಿತ್ರದ ಹಾಡೊಂದ­ರಲ್ಲಿ ಅವರು ನೆಲದಿಂದಲೇ ಲೈಟಿಂಗ್ ಮಾಡಿ­ದ್ದಾರೆ.

ಈಗ ಥರ್ಮೋಕೋಲ್‌­ಗಳನ್ನು ಉಪ­ಯೋಗಿಸಿ ಹಾಗೆ ಮಾಡುವುದು ಸುಲಭ. ಆದರೆ, ಆಗಲೇ ಅವರಿಗೆ ಅಂಥ ಯೋಚನೆ ಹೊಳೆದಿದ್ದು ಹೇಗೋ? ನನಗೆ ಗೊತ್ತಿರುವಂತೆ ಮೂರ್ತಿ ತುಂಬಾ ಸರಳವಾದ ವ್ಯಕ್ತಿತ್ವ ಇದ್ದವರು. ಅವರು ಪ್ರಜ್ಞಾ­ಪೂರ್ವ­ಕವಾಗಿ ಹಾಗೆಲ್ಲಾ ಲೈಟಿಂಗ್ ಮಾಡುತ್ತಿ­ರಲಿಲ್ಲ. ಅದು ಸಹಜವಾಗಿಯೇ ಆಗುತ್ತಿತ್ತು.

ಮೀನಾಕುಮಾರಿ ಆಗಿನ ಕಾಲದ ಸುಂದರ ನಾಯಕಿ. ತನ್ನ ಬದುಕು ಕತ್ತಲಾಯಿತು ಎಂದು ಹೇಳುವ ದೃಶ್ಯದಲ್ಲಿ ಇಡೀ ಕೋಣೆಯನ್ನು ಅವರು ಕತ್ತಲಾವರಿಸುವಂತೆ ಮಾಡಿದ್ದರು. ಅದು ನಿಜಕ್ಕೂ ಸಿನಿಮಾ ಛಾಯಾಗ್ರಾಹಕ ತೆಗೆದುಕೊಳ್ಳುವ ರಿಸ್ಕ್. ಸೂರ್ಯನ ಬೆಳಕಿಗಿಂತ ಇನ್ನೊಂದು ಒಳ್ಳೆಯದ್ದೂ, ಪ್ರಖರವಾದದ್ದೂ ಬೆಳಕಿಲ್ಲ. ಕನ್ನಡಿ ಹಿಡಿದುಕೊಂಡು ಮೇಕಪ್‌ಮನ್ ಅಡ್ಡಾಡು­ವಾಗ ಆ ಯೋಚನೆ ಹೊಳೆದು, ಹಲವಾರು ಕನ್ನಡಿಗಳನ್ನು ತರಿಸಿ ಅವರು ಲೈಟಿಂಗ್ ಮಾಡಿಸಿದ್ದು ಇನ್ನೊಂದು ವಿಶೇಷ. ಅವರು ಮೂಡಿಸಿದ ‘ಬಿಸಿಲು ಕೋಲು' ಒಂದು ಮೆಟಫರ್ ಆಗಿಬಿಟ್ಟಿತು. ಮೂರ್ತಿ ಅಪ್ರಜ್ಞಾ­ಪೂರ್ವಕವಾಗಿ ಸಂಯೋಜಿಸಿದ ಲೈಟಿಂಗ್‌ಗಳು ದೃಶ್ಯಗಳು ತಂತಾವೇ ಹೀಗೆ ಮೆಟಫರಿಕಲ್ ಆಗಲು ಕಾರಣವಾಗಿದ್ದಿರಬೇಕು.

ನಾನು ಅವರ ಶಿಷ್ಯ ಅಲ್ಲ. ಅವರಿಂದ ಗೊತ್ತಿಲ್ಲದೆಯೇ ಸ್ಫೂರ್ತಿ ಪಡೆದಿರಲಿಕ್ಕೆ ಸಾಕು. ಯಾಕೆಂದರೆ, ಅವರ ಕೆಲಸ­ಗಳಿಂದ ಪ್ರಭಾವಿತ­ರಾಗಿದ್ದವರ ಸರಪಳಿ ಬಾಲಿವುಡ್‌ನಿಂದ ಹಾಲಿವುಡ್‌ಗೆ, ಹಾಲಿವುಡ್‌­ನಿಂದ ದಕ್ಷಿಣ ಭಾರತದ ಸಿನಿಮಾಗಳವರೆಗೆ ಬೆಳೆದಿತ್ತು. ಯಾರ­ಯಾರದ್ದೋ ಮೂಲಕ ಅವರ ಕೆಲಸದ ಧಾಟಿಯ ಒಂದು ತುಣುಕು ನನ್ನ ಕೆಲಸದಲ್ಲೂ ಇಣುಕಿದ್ದರೆ ಅದು ಮೂರ್ತಿ ಅವರ ಶಕ್ತಿಗೆ ಸಾಕ್ಷಿಯಷ್ಟೆ’’.

ವಿದ್ಯಾರ್ಥಿಯಾಗಿದ್ದಾಗ ಸ್ವಾತಂತ್ರ್ಯ ಹೋರಾಟ­ದಲ್ಲಿ ಭಾಗವಹಿಸಿ, ಜೈಲುವಾಸ ಅನುಭವಿಸಿದ್ದ ಅವರಿಗೆ ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡುವ ಪಿಂಚಣಿ ಕೂಡ ಸಿಗುತ್ತಿತ್ತು.

‘ಇಂಟರ್‌ನ್ಯಾಷನಲ್‌ ಇಂಡಿಯನ್‌ ಫಿಲ್ಮ್‌ ಅಕಾಡೆಮಿ’ 2005ರಲ್ಲಿ ಜೀವಮಾನ ಶ್ರೇಷ್ಠ ಸಾಧನೆಗೆಂದು ಅವರಿಗೆ ಪ್ರಶಸ್ತಿ ಘೋಷಿಸಿತ್ತು.
ಗೋವಿಂದ ನಿಹಲಾನಿ ತರಹದ ಘಟಾನುಘಟಿ­ಗಳು ಮೂರ್ತಿ ಅವರ ಶಿಷ್ಯವೃಂದರಲ್ಲಿ ಇದ್ದಾರೆ. ಶ್ಯಾಮ್‌ ಬೆನಗಲ್‌ ನಿರ್ದೇಶಿಸಿದ ‘ಭಾರತ್‌ ಏಕ್‌ ಖೋಜ್‌’ ಟಿ.ವಿ. ಧಾರಾವಾಹಿ­ಯಲ್ಲಿಯೂ ಮೂರ್ತಿ ಸಿನಿಮಾಟೊ­ಗ್ರಾಫಿ ಜವಾಬ್ದಾರಿಯ ನೇತೃತ್ವ ವಹಿಸಿದ್ದರು.

ಇಳಿವಯಸ್ಸಿನಲ್ಲೂ ದಣಿವರಿ­ಯದಂತೆ ಕೆಲಸ ಮಾಡುತ್ತಿದ್ದ ಮೂರ್ತಿ ಅಗಲಿ­ದಾಗ, ಶಂಕರಪುರದ ಅವರ ಮನೆಗೆ ಭೇಟಿ ಕೊಟ್ಟವರಲ್ಲಿ ಹಲವು ಸಿನಿಮಾ ಕಸುಬುದಾರ­ರಿದ್ದರು. ಮೂರ್ತಿ ಅವರ ನೆನಪಿನ ‘ಬೆಳಕಿನ ಕೋಲು’, ‘ಚೌದವಿ ಕಾ ಚಾಂದ್‌’ ಹಾಡಿನ ಅನುಭೂತಿ ಎರಡೂ  ಚಿರಸ್ಥಾಯಿಯಾಗಿವೆ.

ವಿ.ಕೆ. ಮೂರ್ತಿ ಕ್ಲೋಸಪ್‌
ನಾನು ಹಿಂದಿಯಲ್ಲಿ ಎಂಟ್ಹತ್ತು ಸಿನಿಮಾಗಳನ್ನು ನಿರ್ದೇಶಿಸಿದೆ. ಆಗ ವಿ.ಕೆ.ಮೂರ್ತಿಯವರ ಪರಿಚಯ­ವಾಗಿತ್ತು. ‘ವಿ.ಕೆ.ಮೂರ್ತಿ ಕ್ಲೋಸಪ್‌’ ಎನ್ನುವ ಪ್ರಕಾರವೇ ಚಾಲ್ತಿಯಲ್ಲಿದೆ. ನನ್ನಂಥ ಅನೇಕರು ಕ್ಲೋಸಪ್‌ ಶಾಟ್‌ಗಳನ್ನು ಇಡುವಾಗ ಮೂರ್ತಿ ಅವರಂತೆ ತೆಗೆದರೆ ಚೆನ್ನ ಎಂದು ಯೋಚಿಸುತ್ತಿರುತ್ತೇವೆ. ತ್ರಿವೇಣಿಯವರ ಕಾದಂಬರಿ ಆಧಾರಿಸಿದ ‘ಹೂವು–ಹಣ್ಣು’ ಚಿತ್ರಕ್ಕೆ ಸಿನಿಮಾಟೊಗ್ರಾಫರ್‌ ಆಗುವಂತೆ ವಿನಂತಿಸಿಕೊಂಡಾಗ ಎರಡನೇ ಮಾತೇ ಇಲ್ಲದೆ ಒಪ್ಪಿಕೊಂಡರು.

ಅವರು ಶಿಸ್ತಿನ ಮನುಷ್ಯ. ಬೆಳಿಗ್ಗೆ ಏಳು ಗಂಟೆಗೆ ಚಿತ್ರೀಕರಣ ಇದ್ದರೆ ಅರ್ಧ ಗಂಟೆ ಮೊದಲೇ ಲೊಕೇಷನ್‌ನಲ್ಲಿ ಇರುತ್ತಿದ್ದರು. ಬಳಸುವ ಲೈಟ್‌ಗಳಲ್ಲಿ ಮಸುಕಾದ ಒಂದೂ ಬಲ್ಬ್‌ ಇರಕೂಡದು ಎಂದು ತಾಕೀತು ಮಾಡು­ತ್ತಿದ್ದರು. ಅಂಥ ಒಂದು ಬಲ್ಬ್‌ ಇದ್ದರೂ ಮರುದಿನ ಸುತ್ತಿಗೆ ತಂದು ಒಡೆದು­ಹಾಕುವುದಾಗಿ ಎಚ್ಚರಿಸು­ತ್ತಿದ್ದರು.

‘ಹೂವು ಹಣ್ಣು’ ಚಿತ್ರದಲ್ಲಿ ರಿಂಗ್‌ ತರಹದ ಶ್ಯಾಡೋಸ್‌ ಇರುವ ಒಂದು ಶಾಟ್‌ ಇತ್ತು. ಅದನ್ನು ಮೂಡಿಸಲು ಅವರು ಬಂಬೂಬಜಾರ್‌ನಿಂದ ಮಂಕರಿಯೊಂದನ್ನು ತರಿಸಿದರು. ಅಲ್ಲಲ್ಲಿ ಒಂದು ಸಾಲಿನ ಬಿದಿರನ್ನು ಕಿತ್ತುಹಾಕಿ, ಅದರಿಂದ ಬೆರಗು ಮೂಡಿಸುವ ಬೆಳಕು ಹೊಮ್ಮುವಂತೆ ಮಾಡಿದರು. ನಾವು ಆ ಚಿತ್ರವನ್ನು ಬ್ಲ್ಯಾಕ್‌ ಅಂಡ್‌ ವೈಟ್‌ನಲ್ಲೂ ಚಿತ್ರೀಕರಿಸಿದ್ದೆವು. ಅದಕ್ಕಾಗಿ ಕೊಡ್ಯಾಕ್‌ ಕಂಪೆನಿಯಿಂದ ವಿಶೇಷವಾಗಿ ಫಿಲ್ಮನ್ನು ಅವರೇ ತರಿಸಿದ್ದರು. ಆ ಚಿತ್ರದಲ್ಲಿ ಮೈಸೂರು ಪೇಟ ಹಾಕಿಸಿ, ಒಂದು ಅಜ್ಜನ ಪಾರ್ಟನ್ನೂ ಅವರಿಂದ ಮಾಡಿಸಿದ್ದೆ. ಆಗ ಎಪ್ಪತ್ತು ದಾಟಿದ್ದ ಅವರ ಉತ್ಸಾಹ ಕಂಡು ನನಗಂತೂ ತುಂಬಾ ಆನಂದವಾಗಿತ್ತು.

ಅಂಥಾ ಸುಂದರಿಯಲ್ಲದ ವಹೀದಾ ರೆಹಮಾನ್‌ ಅವರನ್ನೂ ಚೆಂದಗಾಣಿಸಿದ ಹಿರಿಮೆ, ಲಂಡನ್‌ನಲ್ಲಿ ಇಂಗ್ಲಿಷ್‌ನ ‘ದಿ ಗನ್ಸ್‌ ಆಫ್‌ ನಾವರೋನ್‌’ ಚಿತ್ರೀಕರ­ಣದ ತಂಡವನ್ನು ನೋಡಿ ಮೂರು ತಿಂಗಳು ಹೊಸತುಗಳನ್ನು ಕಲಿತ  ವಿದ್ಯಾರ್ಥಿ ವಿನಯ ಎರಡೂ ಅವರಲ್ಲಿ ಇದ್ದವು. ದುರದೃಷ್ಟವಶಾತ್‌ ಕನ್ನಡದಲ್ಲಿ ಅವರು ನನ್ನದೊಂದೇ ಸಿನಿಮಾದಲ್ಲಿ ಕೆಲಸ ಮಾಡಲು ಸಾಧ್ಯವಾದದ್ದು.
–ಎಸ್.ವಿ. ರಾಜೇಂದ್ರ ಸಿಂಗ್‌ ಬಾಬು, ಚಲನಚಿತ್ರ ನಿರ್ದೇಶಕ

ಮೂರ್ತಿ ಛಾಯಾಗ್ರಹಣದ ಗಮನಾರ್ಹ ಹಿಂದಿ ಚಿತ್ರಗಳು
ಬಾಜಿ (1951), ಜಾಲ್ (1952), ಆರ್–ಪಾರ್ (1954), ಮಿಸ್ಟರ್‌ ಅಂಡ್‌ ಮಿಸಸ್‌ 55 (1955), ಸಿ.ಐ.ಡಿ (1956), ಪ್ಯಾಸಾ (1957), 12 ಓ ಕ್ಲಾಕ್‌ (1958), ಕಾಗಜ್‌ ಕೆ ಫೂಲ್‌ (1959), ಚೌದವೀಂ ಕಾ ಚಾಂದ್ (1960), ಸಾಹಿಬ್ ಬೀಬಿ ಔರ್ ಗುಲಾಮ್ (1962), ಜಿದ್ದಿ (1964), ಲವ್ ಇನ್ ಟೋಕಿಯೊ (1966), ಸೂರಜ್ (1966), ನಯಾ ಜಮಾನಾ  (1971), ಜುಗ್ನು (1973), ನಾಸ್ತಿಕ್‌ (1983), ಕಲಿಯುಗ್‌ ಔರ್‌ ರಾಮಾಯಣ್‌ (1987), ಖುಲೇ ಆಮ್‌ (1992), ದೀದಾರ್ (1992)
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT