ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂಪಾಣಿ ‘ಗುಜರಾತ್ ಮಾದರಿ’ಗೆ ಹೊಳಪು ಕೊಡುವರೇ?

ವ್ಯಕ್ತಿ
Last Updated 6 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ವಿಜಯ್‌ ರೂಪಾಣಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದನ್ನು ಅಚ್ಚರಿದಾಯಕ ನಾಟಕೀಯ ಬೆಳವಣಿಗೆ ಎಂದು ಮಾಧ್ಯಮಗಳು ಬಣ್ಣಿಸಿವೆ. ಈ ವಿದ್ಯಮಾನವನ್ನು ಅಚ್ಚರಿ ಮತ್ತು ನಾಟಕೀಯ ಎಂದು ಬಣ್ಣಿಸಲು ಹಲವು ಕಾರಣಗಳಿವೆ.

ಶುಕ್ರವಾರ ರೂಪಾಣಿ ಅವರ ಹೆಸರನ್ನು ಘೋಷಿಸುವವರೆಗೆ ಹಿಂದಿನ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಅವರ ಸಂಪುಟದಲ್ಲಿ ಎರಡನೆಯವರಾಗಿದ್ದ ನಿತಿನ್ ಪಟೇಲ್ ಅವರೇ ಮುಂದಿನ ಮುಖ್ಯಮಂತ್ರಿ ಎಂದು ಎಲ್ಲರೂ ಭಾವಿಸಿದ್ದರು.

ಆನಂದಿಬೆನ್ ಆಗಸ್ಟ್ ಒಂದರಂದು ರಾಜೀನಾಮೆ ನೀಡಿದ ನಂತರ ಮುಖ್ಯಮಂತ್ರಿ ಹುದ್ದೆಯ ಸ್ಪರ್ಧೆಯಲ್ಲಿ ನಿತಿನ್ ಪಟೇಲ್ ಜತೆಗೆ ರೂಪಾಣಿ ಅವರೂ ಇದ್ದರು. ಆದರೆ ತಮ್ಮ ಹೆಸರು ಘೋಷಣೆಯಾಗುವ ಎರಡು ದಿನಗಳ ಹಿಂದೆ, ತಾವು ಹೊಂದಿರುವ ಗುಜರಾತ್ ಬಿಜೆಪಿ ಅಧ್ಯಕ್ಷ ಹುದ್ದೆಯೇ ಸಾಕು ಮುಖ್ಯಮಂತ್ರಿ ಹುದ್ದೆಯ ಸ್ಪರ್ಧೆಯಲ್ಲಿ ಇಲ್ಲ ಎಂದು ರೂಪಾಣಿ ಅವರೇ ಹೇಳಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರು ಸದಾ ಹೆಮ್ಮೆಯಿಂದ ಹೇಳಿಕೊಳ್ಳುವ ‘ಗುಜರಾತ್ ಮಾದರಿ’ಯ ಗುಜರಾತ್‌ನಲ್ಲಿ ಬಿಜೆಪಿ ರಾಜಕೀಯವಾಗಿ ಹಿಂದೆಂದೂ ಇಷ್ಟೊಂದು ತಳಮಳ ಎದುರಿಸಿರ­ಲಿಲ್ಲ.

ಹಿಂದಿನಿಂದಲೂ ಬಿಜೆಪಿಯ ಬೆನ್ನಿಗೆ ನಿಂತಿರುವ ಪಟೇಲ್ ಸಮುದಾಯ ಮೀಸಲಾತಿಗಾಗಿ ಒತ್ತಾಯಿಸಿ, ಚಳವಳಿ ನಡೆಸಿ ಅಲ್ಲಿನ ಸರ್ಕಾರ ಮತ್ತು ಬಿಜೆಪಿ ಎರಡರೊಂದಿಗೂ ಮುನಿಸಿಕೊಂಡಿದೆ. ಸತ್ತ ಕೋಣದ ಚರ್ಮ ಸುಲಿದ ಕಾರಣಕ್ಕೆ ಗೋರಕ್ಷಕರಿಂದ ಬೆನ್ನಿನ ಚರ್ಮ ಸುಲಿಸಿಕೊಂಡ ಊನಾದ ದಲಿತರು ರಾಜ್ಯದಾದ್ಯಂತ ಚಳವಳಿ ನಡೆಸುತ್ತಿದ್ದಾರೆ. ‘ಗುಜರಾತ್ ಮಾದರಿ’ ಗುಜರಾತ್‌ನಲ್ಲಿಯೇ ಹೊಳಪು ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.

ಇಂತಹ ಸಂದರ್ಭದಲ್ಲಿ ಪಟೇಲ್ ಸಮುದಾಯವನ್ನು ಒಲಿಸಿಕೊಳ್ಳಲು ಆ ಸಮುದಾಯಕ್ಕೆ ಸೇರಿದ ನಿತಿನ್ ಪಟೇಲ್ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಬಹುದು ಎಂದು ಎಲ್ಲರೂ ಅಂದುಕೊಂಡಿದ್ದರು. ನಿರ್ಗಮಿತ ಮುಖ್ಯಮಂತ್ರಿ ಆನಂದಿಬೆನ್ ಮತ್ತು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ನಿತಿನ್ ಪಟೇಲ್ ಅವರೂ ಹಾಗೆಯೇ ಅಂದುಕೊಂಡಿದ್ದರು.

ಶುಕ್ರವಾರ ಬೆಳಗ್ಗಿನಿಂದ ಸಿಹಿ ಹಂಚುವ, ಮಾಧ್ಯಮಗಳಿಗೆ ಸಂದರ್ಶನ ನೀಡುವ ಮತ್ತು ಹಿತೈಷಿಗಳ ಅಭಿನಂದನೆ ಸ್ವೀಕರಿಸುವ ಕೆಲಸವನ್ನೂ ನಿತಿನ್ ಆರಂಭಿಸಿದ್ದರು. ಆದರೆ ಶುಕ್ರವಾರ ಸಂಜೆಯ ಹೊತ್ತಿಗೆ ಎಲ್ಲವೂ ಬದಲಾಯಿತು. ತಮ್ಮದೇ ಜೈನ ಸಮುದಾಯಕ್ಕೆ ಸೇರಿದ 61 ವರ್ಷ ವಯಸ್ಸಿನ ವಿಜಯ್‌ ರೂಪಾಣಿ ಅವರನ್ನು ಮುಂದಿನ ಮುಖ್ಯಮಂತ್ರಿಯಾಗಿ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಆಯ್ಕೆ ಮಾಡಿದರು.

ಬರ್ಮಾದ ರಂಗೂನ್‌ನಲ್ಲಿ (ಈಗಿನ ಮ್ಯಾನ್ಮಾರ್‌ನ ಯಾಂಗೂನ್) ಜನಿಸಿದ ರೂಪಾಣಿ ಬೆಳೆದದ್ದು ರಾಜ್‌ಕೋಟ್‌ನಲ್ಲಿ. ವಿದ್ಯಾರ್ಥಿ ದೆಸೆಯಿಂದಲೇ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ನಲ್ಲಿ (ಎಬಿವಿಪಿ) ಸಕ್ರಿಯವಾಗಿದ್ದ ಅವರು ನಂತರ ಆರ್‌ಎಸ್‌ಎಸ್ ಸೇರಿದರು, ಜನಸಂಘದಲ್ಲಿಯೂ ಇದ್ದರು. ಬಿಜೆಪಿ ಸ್ಥಾಪನೆಯಾದಾಗಿನಿಂದ ಆ ಪಕ್ಷದಲ್ಲಿ ಇದ್ದಾರೆ.

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಒಂದು ವರ್ಷ ಜೈಲು ವಾಸವನ್ನೂ ಅವರು ಅನುಭವಿಸಿದ್ದಾರೆ. ರಾಜ್‌ಕೋಟ್ ನಗರಪಾಲಿಕೆಯಲ್ಲಿ ದೀರ್ಘ ಕಾಲ ಸಕ್ರಿಯರಾಗಿದ್ದರು, ಅಲ್ಲಿನ ಮೇಯರ್ ಆಗಿದ್ದರು.

ಒಂದು ಅವಧಿಗೆ ರಾಜ್ಯಸಭೆ ಸದಸ್ಯರಾಗಿದ್ದರು. ವಜುಭಾಯಿ ವಾಲಾ ಅವರು ಕರ್ನಾಟಕದ ರಾಜ್ಯಪಾಲರಾಗಿ ನೇಮಕವಾದಾಗ ಅವರು ಪ್ರತಿನಿಧಿಸಿದ್ದ ರಾಜ್‌ಕೋಟ್ ಪಶ್ಚಿಮ ಕ್ಷೇತ್ರ ತೆರವಾಯಿತು. ಈ ಕ್ಷೇತ್ರಕ್ಕೆ 2014ರಲ್ಲಿ ಉಪಚುನಾವಣೆ ನಡೆದಾಗ ಅಲ್ಲಿ ಸ್ಪರ್ಧಿಸಿ 24 ಸಾವಿರ ಮತಗಳ ಅಂತರದಿಂದ ಗೆದ್ದರು. ಆನಂದಿಬೆನ್ ಸಂಪುಟದಲ್ಲಿ ಸಚಿವರಾದರು. ಈ ವರ್ಷ ಫೆಬ್ರುವರಿಯಲ್ಲಿ ಗುಜರಾತ್ ಬಿಜೆಪಿ ಅಧ್ಯಕ್ಷರಾಗಿ ನೇಮಕಗೊಂಡರು.

ರಾಜ್ಯ ಘಟಕದ ಅಧ್ಯಕ್ಷರಾದ ನಂತರವೂ ಸಚಿವ ಸ್ಥಾನವನ್ನು ಉಳಿಸಿಕೊಂಡರು (ಬಿಜೆಪಿಯಲ್ಲಿ ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ ಎಂಬ ಅಲಿಖಿತ ನಿಯಮವೊಂದು ಇದೆ). ಪಟೇಲ್ ಸಮುದಾಯ ಪ್ರಬಲವಾಗಿರುವ ಗುಜರಾತ್‌ನ ಸೌರಾಷ್ಟ್ರ ಪ್ರದೇಶ ಅವರ ಕಾರ್ಯಕ್ಷೇತ್ರ.

ಬಾಲ್ಯದಿಂದಲೇ ಆರ್‌ಎಸ್‌ಎಸ್ ಗರಡಿಯಲ್ಲಿ ಬೆಳೆದಿರುವ ಅವರಿಗೆ ಆರ್‌ಎಸ್‌ಎಸ್‌ನ ಗಟ್ಟಿ ಬೆಂಬಲ ಇದೆ. ಸದಾ ಹಸನ್ಮುಖಿ, ಮಾತು ಸ್ನೇಹಪರ; ಸಂಧಾನದ ಮೂಲಕವೇ ಎಲ್ಲ ವಿವಾದಗಳನ್ನು ಬಗೆಹರಿಸಬೇಕು ಎಂಬ ಮನಸ್ಥಿತಿಯ ರೂಪಾಣಿ ಅವರ ವಿರುದ್ಧ ಯಾವುದೇ ಆರೋಪಗಳಿಲ್ಲ. ಆದರೆ ಆಡಳಿತ ಪಕ್ಷದ ಅಧ್ಯಕ್ಷರಾಗಿರುವ ಅವರು ದಲಿತರ ಮೇಲೆ ದೌರ್ಜನ್ಯ ನಡೆದ ಸೌರಾಷ್ಟ್ರದ ಊನಾಕ್ಕೆ ಒಮ್ಮೆಯೂ ಭೇಟಿ ಕೊಟ್ಟಿಲ್ಲ. ಅದೊಂದು ಕಾನೂನು ಸುವ್ಯವಸ್ಥೆ ಸಮಸ್ಯೆ, ಗುಜರಾತ್‌ನಲ್ಲಿ ಜಾತಿ ಸಮಸ್ಯೆ ಎಂಬುದು ಇಲ್ಲವೇ ಇಲ್ಲ ಎಂಬುದು ಅವರ ನಿಲುವು.

ರಾಜ್ಯವೊಂದರ ಚುಕ್ಕಾಣಿ ಹಿಡಿಯಲು ಈ ಅರ್ಹತೆ ಮತ್ತು ಅನುಭವ ಕಡಿಮೆ ಏನಲ್ಲ. ಆದರೆ ಇವೆಲ್ಲವನ್ನೂ ಮೀರಿ ರೂಪಾಣಿ ಅವರ ಅತಿ ದೊಡ್ಡ ಅರ್ಹತೆ ಅವರು ಷಾ ನಿಷ್ಠಾವಂತ ಎಂಬುದು. ಇಡೀ ವಿದ್ಯಮಾನವನ್ನು ಅಚ್ಚರಿ ಮತ್ತು ನಾಟಕೀಯ ಬೆಳವಣಿಗೆ ಎಂಬ ಪದಗಳ ಮೂಲಕ ಮಾಧ್ಯಮಗಳು ಬಣ್ಣಿಸಿರುವುದು ಅದನ್ನು ಸ್ಪಷ್ಟಪಡಿಸುತ್ತದೆ.

ಆದರೆ, ಇದನ್ನು ಅಲ್ಲಗಳೆಯುವಂತೆ, ತಟಸ್ಥ ಸಮುದಾಯವೊಂದರ ಮುಖಂಡನನ್ನು ಮುಂದಿಟ್ಟುಕೊಂಡು ಪಟೇಲ್ ಮತ್ತು ದಲಿತ ಸಮುದಾಯಗಳನ್ನು ಮತ್ತೆ ಬಿಜೆಪಿ ತೆಕ್ಕೆಗೆ ತರುವುದು ಅಮಿತ್ ಷಾ ಅವರ ಕಾರ್ಯತಂತ್ರ ಎಂದು ಹೇಳಲಾಗುತ್ತಿದೆ.

ಇದು ಸಂಪೂರ್ಣ ನಿಜ ಎಂದು ನಂಬುವುದು ಕಷ್ಟ. ಯಾಕೆಂದರೆ, ಮೋದಿ ಅವರು ದೆಹಲಿಗೆ ಹೊರಟಾಗಲೇ ಗುಜರಾತ್ ಮುಖ್ಯಮಂತ್ರಿಯಾಗಬೇಕು ಎಂಬುದು ಅಮಿತ್ ಷಾ ಕನಸಾಗಿತ್ತು. ಆಗ ಅಲ್ಲಿ ಅಡ್ಡ ಬಂದವರು ಆನಂದಿಬೆನ್. ಕಳೆದ ಒಂದು ವರ್ಷದಲ್ಲಿ ತಮ್ಮೆಲ್ಲ ಕಷ್ಟಗಳ ಹಿಂದೆ ಇದ್ದವರು ಷಾ ಬಂಟ ರೂಪಾಣಿ ಎಂದು ತಮ್ಮ ಆಪ್ತರಲ್ಲಿ ಆನಂದಿಬೆನ್ ಹೇಳಿಕೊಂಡಿದ್ದಾರೆ.

ಉತ್ತರ ಪ್ರದೇಶ ಚುನಾವಣೆ ಮುಗಿದ ನಂತರ, 75 ವರ್ಷ ದಾಟಿ ಬಂದಿರುವ ಆನಂದಿಬೆನ್ ಅವರನ್ನು ಕೆಳಗಿಳಿಸಿ ಮುಖ್ಯಮಂತ್ರಿಯಾಗುವುದು ಷಾ ಯೋಜನೆಯಾಗಿತ್ತು. ಆದರೆ ಅದಕ್ಕೆ ಸಾಕಷ್ಟು ಮೊದಲು ಬಹಿರಂಗವಾಗಿಯೇ ರಾಜೀನಾಮೆ ಪ್ರಕಟಿಸಿ ಷಾ ಅವರಿಗೆ ಆನಂದಿಬೆನ್ ಸರಿಯಾದ ಏಟು ಕೊಟ್ಟಿದ್ದಾರೆ ಎಂಬ ಚರ್ಚೆ ಬಿಜೆಪಿಯ ಆಂತರಿಕ ವಲಯದಲ್ಲಿ ನಡೆಯುತ್ತಿದೆ.

ನಿತಿನ್ ಪಟೇಲ್ ಅವರಿಗೆ ಆ ಸ್ಥಾನ ತಪ್ಪಿಸುವ ಮೂಲಕ ಷಾ ಅವರೂ ತಿರುಗೇಟು ನೀಡಿದ್ದಾರೆ. ಆದರೆ ನಿತಿನ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನವೂ ಸಿಗದಂತೆ ನೋಡಿಕೊಳ್ಳಲು ಷಾ ಅವರಿಗೆ ಸಾಧ್ಯವಾಗಿಲ್ಲ. ಆ ಮಟ್ಟಿಗೆ ಅದು ಅವರಿಗೆ ಹಿನ್ನಡೆಯೇ. ಇಂತಹ ಒಳಜಗಳ ಗುಜರಾತ್ ಬಿಜೆಪಿಯ ಬಿಂಬವನ್ನು ಮಸುಕಾಗಿಸಿದೆ.

ರಾಜ್ಯ ವಿಧಾನಸಭಾ ಚುನಾವಣೆಗೆ ಇರುವುದು ಇನ್ನೊಂದೇ ವರ್ಷ. ಬಿಜೆಪಿ ಜನಪ್ರಿಯತೆ ಮುಕ್ಕಾದಂತೆಯೂ, ಕಾಂಗ್ರೆಸ್ ಸ್ವಲ್ಪ ಚಿಗುರಿಕೊಂಡಿರುವಂತೆಯೂ ಕಾಣುತ್ತಿರುವ ಈ ಸಂದರ್ಭದಲ್ಲಿ ರೂಪಾಣಿ ಮುಖ್ಯಮಂತ್ರಿ ಹುದ್ದೆಗೇರಿದ್ದಾರೆ.


ಗುಜರಾತ್‌ನಲ್ಲಿ ಯಾರೇ ಮುಖ್ಯಮಂತ್ರಿಯಾಗಿರಲಿ, ಅಧಿಕಾರ ಚಲಾಯಿಸುವವರು, ಕಾರ್ಯತಂತ್ರ  ರೂಪಿಸುವವರು ಮೋದಿ ಮತ್ತು ಷಾ ಎಂಬುದು ಗುಟ್ಟೇನಲ್ಲ. ಯಾಕೆಂದರೆ ಇಲ್ಲಿ ಬಿಜೆಪಿ ಸೋತರೆ ಅದು ಮೋದಿ ಅವರ ಸೋಲು ಎಂದೇ ಎಲ್ಲರೂ ಪರಿಗಣಿಸುತ್ತಾರೆ.

ಪ್ರಧಾನಿಯಾಗಿರುವ ಮೋದಿ ಅವರಿಗೆ ತಳಮಟ್ಟದ ರಾಜಕೀಯದಲ್ಲಿ ಮೂಗು ತೂರಿಸಲು ಸಾಧ್ಯವಿಲ್ಲ. ಆ ಕೆಲಸವನ್ನು ಷಾ ಮಾಡುತ್ತಾರೆ. ಹಾಗಾಗಿ ನಿಷ್ಠಾವಂತ ರೂಪಾಣಿಯನ್ನು ಮುಂದಿರಿಸಿ ಷಾ ಅವರೇ ಹಿಂದಿನಿಂದ ಸರ್ಕಾರ ನಡೆಸಲಿದ್ದಾರೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ. ಆ ಕಾರಣದಿಂದಲೇ ಮುಂದಿನ ಚುನಾವಣೆಯಲ್ಲಿ ಫಲಿತಾಂಶ ಏನೇ ಬಂದರೂ ಅದಕ್ಕೆ ಮೋದಿ ಮತ್ತು ಷಾ ಅವರೇ ಹೊಣೆಗಾರರು. ರೂಪಾಣಿ ಕೈಗೊಂಬೆ ಮಾತ್ರ ಎಂಬಂತೆ ಈಗ ಕಾಣಿಸುತ್ತಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT