ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂ 35 ಲಕ್ಷ ಮೌಲ್ಯದ ಆಭರಣ ದೋಚಿದ್ದವರ ಬಂಧನ

ಚಿನ್ನಾಭರಣ ವ್ಯಾಪಾರಿಯ ಮನೆಯಲ್ಲಿ ಕಳವು ಮಾಡಿದ್ದ ಆರೋಪಿಗಳು
Last Updated 24 ಏಪ್ರಿಲ್ 2014, 20:28 IST
ಅಕ್ಷರ ಗಾತ್ರ

ಬೆಂಗಳೂರು: ಚಿನ್ನಾಭರಣ ವ್ಯಾಪಾರಿಯ ಮನೆಯಲ್ಲಿ ₨ 35 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಹನುಮಂತನಗರ ಪೊಲೀಸರು ಬಂಧಿಸಿದ್ದಾರೆ.

ಶ್ರೀನಗರದ ಕಾಳಿದಾಸ ಲೇಔಟ್‌ನ ಸುರೇಶ ಅಲಿಯಾಸ್‌  ಗೊಟ್ರ (24) ಹಾಗೂ ಸಿದ್ದರಾಜು (23) ಬಂಧಿತರು. ಆರೋಪಿಗಳು ಹನುಮಂತನಗರ 14ನೇ ಮುಖ್ಯರಸ್ತೆಯಲ್ಲಿರುವ ರತನ್‌ ಎಂಬುವರ ಮನೆಯಲ್ಲಿ ಕಳವು ಮಾಡಿದ್ದರು.

ಮೂಲತಃ ರಾಜಸ್ತಾನದ ರತನ್‌, ಒಂದೂವರೆ ವರ್ಷದಿಂದ ಹನುಮಂತ­ನಗರದಲ್ಲಿ ಒಬ್ಬರೇ ವಾಸವಾಗಿದ್ದರು. ಇತ್ತೀಚೆಗೆ ಅವರಿಗೆ ಆರೋಪಿಗಳ ಪರಿಚಯವಾಗಿತ್ತು. ಪ್ರತಿದಿನ ಅವರ ಮನೆಯಲ್ಲೇ ಮೋಜಿನ ಕೂಟ ನಡೆಸುತ್ತಿದ್ದ ಆರೋಪಿಗಳು, ಮಾ.23­ರಂದು ಕ್ರಿಕೆಟ್ ಪಂದ್ಯ ವೀಕ್ಷಿಸುವ ನೆಪದಲ್ಲಿ ಅವರ ಮನೆಗೆ ಹೋಗಿದ್ದರು. ಆಗ ರತನ್‌ಗೆ ತಿಳಿಯದಂತೆ ಮನೆ ಕೀ ಕಳವು ಮಾಡಿ, ಮಾಗಡಿ ರಸ್ತೆಯ ಸಹನಾ ಮೇಕರ್ಸ್‌ ಎಂಬ ಅಂಗಡಿಯಲ್ಲಿ ನಕಲಿ ಮಾಡಿಸಿಟ್ಟುಕೊಂಡಿದ್ದರು.

ಮಾ.29ರಂದು ರತನ್‌ ಅವರು ಕೆಲಸದ ನಿಮಿತ್ತ ಹೊರಗೆ ಹೋದಾಗ  ಇದೇ ಸಮಯಕ್ಕಾಗಿ ಕಾಯುತ್ತಿದ್ದ ಆರೋಪಿಗಳು, ನಕಲಿ ಕೀ ಬಳಸಿ  ಮನೆಯಲ್ಲಿ ಕಳವು ಮಾಡಿದ್ದರು. ನಂತರ ಏನೂ ತಿಳಿಯದವರಂತೆ ರತನ್‌ ಜತೆ ತಾವೂ ಠಾಣೆಗೆ ತೆರಳಿ ದೂರು ಕೊಟ್ಟಿದ್ದರು.

ತನಿಖೆ ಆರಂಭಿಸಿದ ಹನುಮಂತನಗರ ಪೊಲೀಸರು, ತಮ್ಮ ವ್ಯಾಪ್ತಿಯಲ್ಲಿರುವ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳು ಹಾಗೂ ರತನ್‌ ಅವರ ಮನೆಗೆ ಬಂದು ಹೋಗುತ್ತಿದ್ದವರ ವಿಚಾರಣೆ ನಡೆಸಿದ್ದರು. ಆಗಲೂ ಆರೋಪಿಗಳ ಸುಳಿವು ಸಿಕ್ಕಿರಲಿಲ್ಲ. ಆದರೆ, ಪೊಲೀಸರು ಸ್ಥಳೀಯರ ಬೆರಳಚ್ಚು ಸಂಗ್ರಹಿಸಲು ಮುಂದಾದಾಗ ಆರೋಪಿ ಸುರೇಶ, ಸ್ಥಳದಿಂದ ಪರಾರಿಯಾಗಿದ್ದ. ಇದರಿಂದ ಅನುಮಾನಗೊಂಡ ಪೊಲೀಸರು ಆತನ ಪತ್ತೆಗೆ ಬಲೆ ಬೀಸಿದ್ದರು.

‘ಸುರೇಶ ಕೂಡ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಯಾಗಿದ್ದು, ಆತನ ವಿರುದ್ಧ 23 ಪ್ರಕರಣಗಳು ದಾಖಲಾಗಿದ್ದವು. ಮೂರು ತಿಂಗಳ ಹಿಂದೆ ಜೈಲಿಗೆ ಹೋಗಿದ್ದ ಆತ, ಇತ್ತೀಚೆಗೆ ಜಾಮೀನಿನ ಮೇಲೆ ಹೊರಬಂದಿದ್ದ. ಬೆರಳಚ್ಚು ಸಂಗ್ರಹ ವೇಳೆ ಪರಾರಿಯಾದ ಆತ, ನಿರೀಕ್ಷಣಾ ಜಾಮೀನು ಪಡೆಯಲು ಎಸಿಎಂಎಂ ನ್ಯಾಯಾಲಯಕ್ಕೆ ಬರಬಹುದು ಎಂದು ಊಹಿಸಲಾಯಿತು.

ಅದರಂತೆ ಸಿಬ್ಬಂದಿಯನ್ನು ನ್ಯಾಯಾಲಯದ ಬಳಿ ಕಳುಹಿಸಿದಾಗ ಊಹೆ ನಿಜವಾಯಿತು. ಅಲ್ಲಿಗೆ ಬಂದ ಸುರೇಶನನ್ನು ಬಂಧಿಸಿದ ಪೊಲೀಸರು, ಆತ ನೀಡಿದ ಮಾಹಿತಿಯಿಂದ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಯಿತು ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಕಳವು ಮಾಡಿದ್ದ ಆಭರಣಗಳನ್ನು ಹಚ್ಚಿಕೊಂಡಿದ್ದ ಆರೋಪಿಗಳು, ಸ್ವಲ್ಪ ಭಾಗವನ್ನು ಮುನೇಶ್ವರನಗರದ ಮಹಾವೀರ್‌ ಜ್ಯುವೆಲರ್ಸ್‌ನಲ್ಲಿ ಅಡವಿಟ್ಟಿದ್ದರು. ಉಳಿದ ಆಭರಣವನ್ನು ವೀರಭದ್ರನಗರ ವರ್ತುಲ ರಸ್ತೆಯ ಗುಜರಿ ಅಂಗಡಿಯಲ್ಲಿ ಬಚ್ಚಿಟ್ಟಿದ್ದರು. ಅವುಗಳನ್ನು ಜಪ್ತಿ ಮಾಡಿ ಮಾಲೀಕರ ವಶಕ್ಕೆ ಸುಪರ್ದಿಗೆ ನೀಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT