ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂ. 55 ಉಳಿಸಲು ಹೋಗಿ ಪ್ರಾಣ ಬಿಟ್ಟರು!

Last Updated 16 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ದಾವಣಗೆರೆ: ಪ್ರಯಾಣ ದರದಲ್ಲಿ ರೂ. 55 ಉಳಿ­ಸಲು ಹೋಗಿ ಪ್ರಾಣವನ್ನೇ ಕಳೆದು­­ಕೊಂಡಿದ್ದಾರೆ ಮಂಗಳವಾರ ರಾತ್ರಿ ಎಸ್‌ಪಿಆರ್ ಟ್ರಾವೆಲ್ಸ್ ಹೆಸರಿನ   ಸ್ಲೀಪರ್‌ ಬಸ್‌ನಲ್ಲಿ ಬೆಂಗಳೂರಿಗೆ ಹೊರ­ಟಿದ್ದ ಆರು ಮಂದಿ ನತದೃಷ್ಟ ಪ್ರಯಾಣಿಕರು.

ನಿತ್ಯವೂ ಇಲ್ಲಿಂದ ಬೆಂಗಳೂರಿಗೆ ತೆರಳುವ ಪ್ರಯಾಣಿಕರು ಪ್ರಯಾಣ­ಕ್ಕಾಗಿ ಮೊದಲ ಆದ್ಯತೆ ನೀಡುವುದು ಖಾಸಗಿ ಟ್ರಾವೆಲ್ಸ್‌ಗಳಿಗೆ. ಕಾರಣ ಈ ಖಾಸಗಿ ಟ್ರಾವೆಲ್ಸ್‌ಗಳು ಕೆಎಸ್‌­ಆರ್‌­ಟಿಸಿ ಕೆಂಪು ಬಸ್‌ಗಳಿಗಿಂತಲೂ ಕಡಿಮೆ ದರಕ್ಕೆ ರಾಜಧಾನಿ ತಲುಪಿಸುವ ಕಾರಣಕ್ಕೆ.

ಕೆಂಪುಬಸ್‌ಗಳಲ್ಲಿ ಒಬ್ಬರಿಗೆ ಟಿಕೆಟ್‌ ದರ 
ರೂ. 255, ರಾಜಹಂಸ ರೂ. 367 ಹಾಗೂ ಐರಾವತ ರೂ. 443. ಅದೇ ಖಾಸಗಿ ಟ್ರಾವೆಲ್ಸ್‌ಗಳಲ್ಲಿ ರೂ. 250­ರಿಂದ 280 ಮಾತ್ರ. ಈ ದರ ಮೊದಲೇ ಕಾಯ್ದಿ­ರಿಸಿದ ಪ್ರಯಾಣಿಕ­ರಿಗೆ. ಕಾಯ್ದಿ­ರಿ­ಸದೇ ನಿಮ್ಮ ಸಮಯಕ್ಕೆ ಬರುವ ಖಾಲಿ ಬಸ್‌ಗಳಲ್ಲಾದರೆ ಬರೀ ರೂ. 200 ಮಾತ್ರ!

ಕೆಎಸ್‌ಆರ್‌ಟಿಸಿ ಪ್ರಯಾಣಿಕರೇ ಗ್ರಾಹ­ಕರು: ದಾವಣಗೆರೆಯಿಂದ ನಿತ್ಯವೂ ರಾತ್ರಿ ಬೆಂಗಳೂರಿಗೆ 15ರಿಂದ 20 ಖಾಸಗಿ ಬಸ್‌ಗಳು ಸಂಚರಿಸು­ತ್ತವೆ. ಅವು­­ಗಳಲ್ಲಿ ಕೆಲವು ಬಸ್ ಮೊದಲೇ ಮುಂಗಡ ಕಾಯ್ದಿರಿಸಿ­ದರೆ, ಇನ್ನೂ ಕೆಲವು ಬಸ್‌ಗಳಿಗೆ ಕೆಎಸ್‌ಆರ್‌ಟಿಸಿ ನಿಲ್ದಾ­­ಣಕ್ಕೆ ಬರುವ ಪ್ರಯಾಣಿಕರೇ ಗ್ರಾಹಕರು.

ಕೆಎಸ್‌ಆರ್‌ಟಿಸಿ ನಿಲ್ದಾಣದ ಹೊರಗೆ ನಿಲ್ಲುವ ಇಂತಹ ಬಸ್‌ಗಳು ಅಲ್ಲಿಗೆ ಬರುವ ಪ್ರಯಾಣಿಕರಿಗೆ ಆಮಿಷ­­ವೊಡ್ಡುತ್ತವೆ. ಕೇವಲ ಇನ್ನೂರು ರೂಪಾಯಿ, ಇನ್ನೂರು ರೂಪಾಯಿ ಎಂದು ಕೂಗುವ ಮಧ್ಯವರ್ತಿಗಳ ಆಮಿ­ಷಕ್ಕೆ ಕರಗಿ ರೂ. 55 ಉಳಿಸಲು ಸಾಮಾನ್ಯ ಕೆಎಸ್‌ಆರ್‌ಟಿಸಿ ಬಸ್‌­ಗ­ಳಲ್ಲಿ ಪ್ರಯಾ­ಣಿ­­ಸ­­ಬೇಕಿದ್ದ ಇಂಥವರು ಖಾಸಗಿ ಬಸ್‌ಗಳನ್ನು ಏರುತ್ತಾರೆ.

ಎಸ್‌ಪಿಆರ್‌ ಟ್ರಾವೆಲ್ಸ್‌ ಏರಿದ­ವರೂ ಅಂತಹ ಪ್ರಯಾಣಿಕರೇ: ನಗರದಿಂದ ಮಂಗಳವಾರ ಮಧ್ಯ­ರಾತ್ರಿ ಎಸ್‌­ಪಿಆರ್‌ ಟ್ರಾವೆಲ್ಸ್‌ ಏರಿದವರೂ ಇಂತಹ ಪ್ರಯಾಣಿಕರೇ. ರಾತ್ರಿ 11 ಗಂಟೆಗೆ ಹರಿಹರದಿಂದ ಹೊರಟ ಈ ಬಸ್‌ಗೆ  ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾ­ಣದ ಬಳಿಯೇ ಹೆಚ್ಚಿನ ಮಂದಿ ಹತ್ತಿ­ದ್ದಾರೆ. ಅವರಲ್ಲಿ ಬಹುತೇಕರು ಸಾಮಾನ್ಯ ವರ್ಗದ ಜನರಾಗಿದ್ದು, ಕನಿಷ್ಠ ಹಣ ಉಳಿಸಲು ಹೋಗಿ ಜೀವ ತೆತ್ತಿದ್ದಾರೆ. ಇಂತಹ ಪ್ರಯಾಣಿಕರು ಮೊದಲೇ ಮುಂಗಡ ಕಾಯ್ದಿರಿಸದ ಕಾರಣ, ಅಪಘಾತಗಳಾದಾಗ ಅವರ ಗುರುತು ಪತ್ತೆ ಹಚ್ಚುವುದು ಕಷ್ಟದ ಕೆಲಸ.

ಇಲ್ಲಿ ಬರೀ ಗೋಲ್‌ಮಾಲ್‌: ನಗರ­ದಿಂದ ಬೆಂಗಳೂರಿಗೆ ಪ್ರಯಾ­ಣಿಸುವ ಹಲವು ಬಸ್‌ಗಳಿಗೆ ನಿತ್ಯವೂ ಇಂತಹ ಕೆಲ­ಸವೇ. ಅನೇಕ
ಬಸ್‌ಗಳಿಗೆ ಪರ್ಮಿಟ್‌ ಇರುವುದಿಲ್ಲ. ಕೆಲ ಬಸ್‌­ಗಳು ನಿಯ­ಮದ ಪ್ರಕಾರ ನವೀಕರಣ­ಗೊಂಡಿ­ರು­ವು­ದಿಲ್ಲ. ಒಂದು ಬಸ್‌ಗೆ ಪರ್ಮಿಟ್ ಪಡೆದು, ಎರಡು–ಮೂರು ಬಸ್‌­ಗಳು ಸಂಚ­ರಿ­ಸುವುದು. ಪರ್ಮಿಟ್ ಮುಗಿ­ದರೂ, ನವೀಕರಣ ಮಾಡದೇ ವಂಚಿ­ಸು­ವುದು. ವಿಮೆ ಇಲ್ಲದೇ ಮಾರ್ಗದಲ್ಲಿ ಬಸ್‌ ಇಳಿಸು­ವುದು ಇಲ್ಲಿ ಮಾ­ಮೂಲು.ಕೆಲ ಬಾರಿ ಇಂತಹ ಬಸ್‌ಗಳ ವಿರುದ್ಧ ಕ್ರಮ ಕೈಗೊ­ಳ್ಳುವ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿ­ಗಳು ಲಂಚ ಪಡೆದು ಸುಮ್ಮನಾಗುತ್ತಾರೆ ಎನ್ನುವ ಆರೋಪಗಳು ಹೊಸದೇನಲ್ಲ.

ಕ್ರಮ ಕೈಗೊಂಡಿಲ್ಲ
ಕೆಎಸ್‌ಆರ್‌ಟಿಸಿ ನಿಲ್ದಾಣದ ಮುಂದೆ ನಿಂತು ಪ್ರಯಾಣಿಕರನ್ನು ಸೆಳೆಯುವ ಖಾಸಗಿ ಟ್ರಾವೆಲ್ಸ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಲವು ಬಾರಿ ಆರ್‌ಟಿಒ ಹಾಗೂ ಪೊಲೀಸರಿಗೆ ಮನವಿ ಮಾಡಿ­ದರೂ, ಯಾವುದೇ ಕ್ರಮ ಕೈಗೊಂ­ಡಿಲ್ಲ.  ಇಂತಹ ಪ್ರವೃತ್ತಿ­ಯಿಂದಾಗಿ ನಮ್ಮ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕುತ್ತಾರೆ. ಇನ್ನಾದರೂ ಸಂಬಂಧಿಸಿ­ದವರು ಕಾನೂನು ಕ್ರಮ ಜರುಗಿಸಲಿ.
–ನಿರಂಜನ್,ಕೆಎಸ್‌ಆರ್‌ಟಿಸಿ ಕಾರ್ಮಿಕ ಕಲ್ಯಾಣಾಧಿಕಾರಿ

ಆರು ತಿಂಗಳಲ್ಲಿ 4ನೇ ಪ್ರಮುಖ ಬಸ್‌ ಅಪಘಾತ

*ಚಿತ್ರದುರ್ಗದಲ್ಲಿ ಬುಧವಾರ ಬೆಳಗಿನ ಜಾವ ಸಂಭವಿಸಿದ ಬಸ್‌ ಅಪಘಾತ ಕಳೆದ ಆರು ತಿಂಗಳ ಅವಧಿಯಲ್ಲಿ ನಾಲ್ಕನೇ ದೊಡ್ಡ ಅಪಘಾತ ಎನಿಸಿತು. ನಾಲ್ಕೂ ಅಪಘಾತ ಸಂಭವಿಸಿದ್ದು ಬೆಳಗಿನ ಜಾವ 2.30 ರಿಂದ 6 ಗಂಟೆ ಅವಧಿಯೊಳಗೆ.

ಅಕ್ಟೋಬರ್‌ 30, 2013:
*ಬೆಂಗಳೂರಿನಿಂದ ಹೈದರಾಬಾದಿಗೆ ಹೊರಟಿದ್ದ ಖಾಸಗಿ ವೋಲ್ವೊ ಬಸ್‌, ಹೈದರಾಬಾದ್‌ ಸಮೀಪದ ಮೆಹಬೂಬ್‌ ನಗರ ಬಳಿ ಬೆಂಕಿಗೆ ಆಹುತಿಯಾಗಿ 45 ಮಂದಿ ಮೃತಪಟ್ಟಿದ್ದರು.

ನವೆಂಬರ್‌ 14, 2013:
*ಬೆಂಗಳೂರಿನಿಂದ ಮುಂಬೈಗೆ ಹೊರಟಿದ್ದ ಖಾಸಗಿ ಮಲ್ಟಿ ಆಕ್ಸೆಲ್‌ ವೋಲ್ವೊ ಬಸ್‌ ಹಾವೇರಿ ಜಿಲ್ಲೆಯ ಬಂಕಾಪುರ ಕ್ರಾಸ್‌ ಬಳಿ ಬೆಂಕಿಗೆ ಆಹುತಿಯಾಗಿ ಏಳು ಮಂದಿ ಮೃತಪಟ್ಟಿದ್ದರು.

ಜನವರಿ 20, 2014:
*ತಮಿಳುನಾಡಿನ ನೆಲ್ಲೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ವೋಲ್ವೊ ಬಸ್‌ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಬಳಿ ಉರುಳಿ ಐವರು ಸಾವಿಗೀಡಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT