ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತಮಿತ್ರ `ಇ-ಸ್ಯಾಪ್'

Last Updated 9 ಜನವರಿ 2013, 20:25 IST
ಅಕ್ಷರ ಗಾತ್ರ

ಕೀಟ ಹಾಗೂ ರೋಗಗಳ ಹಾವಳಿಗಳಿಂದ ಬೆಳೆಗಳನ್ನು ರಕ್ಷಿಸುವುದು ರೈತರಿಗೆ ಯಾವಾಗಲೂ ಸವಾಲಿನ ಕೆಲಸವೇ ಸರಿ. ಕೀಟಗಳ ಬಾಧೆ ಸ್ವಲ್ಪ ಕೈ ಮೀರಿದರೂ ರೈತರದು `ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ' ಎನ್ನುವಂತಹ ಸ್ಥಿತಿ. ಇದಕ್ಕೆ ಪರಿಹಾರವೆಂದರೆ ಸಕಾಲದಲ್ಲಿ ಸೂಕ್ತ ರೀತಿಯಲ್ಲಿ ಬೆಳೆಗಳನ್ನು ಕೀಟಗಳಿಂದ ರಕ್ಷಿಸುವುದೇ ಆಗಿದೆ. ಆದರೆ ಬಹುತೇಕ ರೈತರಿಗೆ ಕೀಟಗಳ ಕುರಿತ ತಿಳಿವಳಿಕೆ ಅಷ್ಟಾಗಿ ಇರದ ಕಾರಣ ವಿವಿಧ ಉಪಚಾರಗಳಿಗೆ ಮೊರೆ ಹೋಗಿ ಅನಗತ್ಯ ಖರ್ಚಿನ ಜತೆಗೆ ಇಳುವರಿಯನ್ನು ಕೂಡ ಕಳೆದುಕೊಳ್ಳುತ್ತಾರೆ.

ರೈತರ ಈ ಸಮಸ್ಯೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ರಾಯಚೂರಿನ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು `ಇ-ಸ್ಯಾಪ್'(ಇ-ಸಲ್ಯೂಷನ್ಸ್ ಫಾರ್ ಅಗ್ರಿಕಲ್ಚರ್ ಪೆಸ್ಟ್) ಎಂಬ ವಿನೂತನ ಬೆಳೆ ಸಂರಕ್ಷಣೆ ತಂತ್ರಜ್ಞಾನವನ್ನು `ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ' ಅನುದಾನದಲ್ಲಿ ಅಭಿವೃದ್ದಿಪಡಿಸಿದ್ದಾರೆ. ಇದರಿಂದ ಕೀಟ ಹಾಗೂ ರೋಗಗಳ ಕುರಿತ ಮಾಹಿತಿಯನ್ನು ರೈತರು, ಕೃಷಿ ತಜ್ಞರಿಗೆ ರವಾನಿಸಿ ಅವರಿಂದ ಪರಿಹಾರಗಳನ್ನು ತ್ವರಿತಗತಿಯಲ್ಲಿ ಪಡೆಯಬಹುದಾಗಿದೆ.

ಏನಿದು ಇ-ಸ್ಯಾಪ್ ?
`ಈ ಸಾಧನ ಜಿಪಿಆರ್‌ಎಸ್ /ತ್ರೀಜಿ/ವೈಫೈ/ಜಿಪಿಎಸ್ ಸೌಲಭ್ಯಗಳ ಜತೆಗೆ ಕ್ಯಾಮೆರಾವನ್ನೂ ಹೊಂದಿರುವಂತಹ, ನೋಡಲು ಟ್ಯಾಬ್ಲೆಟ್ ಅನ್ನೇ ಹೋಲುವ ಪುಟ್ಟ ವಿದ್ಯುನ್ಮಾನ ಸಾಧನವಾಗಿದೆ. ಇದರಲ್ಲಿರುವ `ಇ-ಸ್ಯಾಪ್' ಅಪ್ಲಿಕೇಷನ್ ರೈತರ ಹಾಗೂ ಕೃಷಿ ತಜ್ಞರ ಮಧ್ಯದ ಸಂಪರ್ಕ ಕೊಂಡಿಯಾಗಿ ಕೆಲಸ ಮಾಡುತ್ತದೆ. ಸಕಾಲದಲ್ಲಿ ಪಾಲಿಸಬೇಕಾದ ನಿರ್ವಹಣಾ ಕ್ರಮ ಹಾಗೂ ಹೊಸ ಕೀಟಗಳು-ರೋಗಗಳಿಗೆ ತಜ್ಞರಿಂದ ರೈತರು ಸಲಹೆ ಪಡೆಯಲು ಬಳಸುವ ಉತ್ತಮ ಸಂಪರ್ಕ ಮಾಧ್ಯಮವಾಗಿದೆ' ಎನ್ನುತ್ತಾರೆ ಈ ತಂತ್ರಜ್ಞಾನ ಅಭಿವೃದ್ಧಿಯ ಪ್ರಧಾನ ಸಂಶೋಧಕ ಹಾಗೂ ಕೃಷಿ ವಿಶ್ವವಿದ್ಯಾಲಯದ ಕೀಟಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ. ಎ.ಪ್ರಭುರಾಜ್.

ಬೆಳೆಗಳಿಗೆ ಬರುವ ಕೀಟ ಹಾಗೂ ರೋಗಗಳ ಸಂಪೂರ್ಣ ಮಾಹಿತಿಯುಳ್ಳ ಇ-ಸ್ಯಾಪ್ ಸಾಧನದಿಂದ ರೈತರ ಹೊಲದಲ್ಲಿ ಕಾಣಿಸಿಕೊಳ್ಳುವ ಕೀಟ ಹಾಗೂ ರೋಗಗಳನ್ನು ಪತ್ತೆ ಹಚ್ಚುವ ಜತೆಗೆ ಅವುಗಳ ನಿರ್ವಹಣಾ ಕ್ರಮಗಳನ್ನು ತಿಳಿದುಕೊಳ್ಳಬಹುದಾಗಿದೆ. ಒಂದು ವೇಳೆ ಕೀಟ ಅಥವಾ ರೋಗವು ಇ-ಸ್ಯಾಪ್‌ನಲ್ಲಿರುವ ಮಾಹಿತಿಗಿಂತ ಭಿನ್ನವಾಗಿದ್ದರೆ ಈ ಸಾಧನದಿಂದ ಕೀಟ ಹಾಗೂ ರೋಗ ತಗುಲಿರುವ ಬೆಳೆಯ ಚಿತ್ರಗಳನ್ನು ಚಿತ್ರೀಕರಿಸಿ ಜಿಪಿಎಸ್ ಆಧಾರಿತ ಚಿತ್ರಗಳ ಮೂಲಕ ಕೃಷಿ ತಜ್ಞರಿಗೆ ಕಳುಹಿಸುವ ವ್ಯವಸ್ಥೆಯಿದೆ.

ಈ ಸಾಧನದಲ್ಲಿ ರೈತರ ಭಾವಚಿತ್ರದ ಜತೆಗೆ ಅವರ ಸಂಪೂರ್ಣ ಮಾಹಿತಿಯನ್ನು ದಾಖಲಿಸಬಹುದಾಗಿದೆ. ಅಲ್ಲದೇ ರೈತರ ಹೊಲದಲ್ಲಿ ಅಪರೂಪದ ಕೀಟ/ರೋಗ ಕಾಣಿಸಿಕೊಂಡಾಗ ಅವುಗಳ ಚಿತ್ರ ಹಾಗೂ ಅವು ಹೊರಡಿಸುವ ಧ್ವನಿ ದಾಖಲಿಸಿಕೊಂಡು ತಜ್ಞರಿಗೆ ರವಾನಿಸಬಹುದು. ಆ ಮೂಲಕ ಕೀಟ/ರೋಗ ನಿವಾರಣೆಗೆ ಸೂಕ್ತ ಸಲಹೆಯನ್ನೂ ಶೀಘ್ರವಾಗಿ ಪಡೆಯಬಹುದಾಗಿದೆ. ಜತೆಗೆ ತಮ್ಮ ಸುತ್ತಲಿನ ರೈತರ ಹೊಲಗಳಲ್ಲಿಯೂ ಕಾಣಿಸಿಕೊಂಡಿರುವ ಕೀಟ/ರೋಗಗಳ ಸಮೀಕ್ಷೆಗಳ ಕ್ರೂಢೀಕೃತ ವರದಿಯನ್ನು ಚಿತ್ರಗಳ ಸಮೇತ ನೋಡಬಹುದಾಗಿದೆ.

ವಿಸ್ತರಣಾ ಅಧಿಕಾರಿಗಳ ಕೈಬಲಪಡಿಸಿ, ಅವರ ಕಾರ್ಯದಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಪಡಿಸಲಾಗಿರುವ ಈ ಸಾಧನದಿಂದ ತೊಂದರೆಗೆ ಒಳಗಾದ ರೈತರ ಸಹಾಯಕ್ಕೆ ಧಾವಿಸುವ ಕೃಷಿ ವಿಸ್ತರಣಾ ಅಧಿಕಾರಿಯು ಯಾವ ಕೀಟ/ರೋಗ ತಜ್ಞರ ಸಹಾಯವೂ ಇಲ್ಲದೇ ಬೆಳೆಗಳಿಗೆ ಬರುವ ಸಮಸ್ಯೆಗಳನ್ನು ಈ ಸಾಧನದಿಂದ ಸುಲಭವಾಗಿ ಗುರುತಿಸಬಹುದಾಗಿದೆ. ಜತೆಗೆ ಕ್ಲಿಷ್ಟ ಸಮಸ್ಯೆಗಳಿಗೆ ಕೃಷಿ ತಜ್ಞರಿಂದ ಶೀಘ್ರದಲ್ಲಿ ಸೂಕ್ತ ಸಲಹೆ ಹಾಗೂ ಸಹಕಾರವನ್ನು ಸಕಾಲದಲ್ಲಿ ರೈತರಿಗೆ ಒದಗಿಸುವುದರ ಜತೆಗೇ, ಅಪರೂಪದ ಕೀಟ ಹಾಗೂ ರೋಗಗಳನ್ನು ದಾಖಲಿಸುವ ಕಾರ್ಯ ಕೂಡ ಮಾಡಬಹುದಾಗಿದೆ.

ಪತ್ರಿಕೆ, ರೇಡಿಯೊ, ಟಿ.ವಿ, ಅಂತರ್ಜಾಲ ಮಾಧ್ಯಮಗಳು ರೈತರ ಸಮಸ್ಯೆಗಳನ್ನು ಪ್ರಚುರಪಡಿಸುತ್ತವೆಯೇ ಹೊರತು, ಸಕಾಲದಲ್ಲಿ ಅವುಗಳಿಗೆ ಅಗತ್ಯವಾದ ಪರಿಹಾರಗಳನ್ನು ಒದಗಿಸುವುದಿಲ್ಲ. ಆ ನಿಟ್ಟಿನಲ್ಲಿ ರೈತರ ಹಾಗೂ ಕೃಷಿ ತಜ್ಞರ ಮಧ್ಯೆ ಸಂಪರ್ಕ ಸೇತುವೆಯಾಗಿ ಶೀಘ್ರವಾಗಿ ಕಾರ್ಯನಿರ್ವಹಿಸಬಲ್ಲ ಮಾಧ್ಯಮವೊಂದರ ಹುಡುಕಾಟದಲ್ಲಿದ್ದಾಗ ಸೃಷ್ಟಿಯಾದದ್ದೇ `ಇ-ಸ್ಯಾಪ್' ಎನ್ನುತ್ತಾರೆ  ಪ್ರಭುರಾಜ್.ಅಂತರ್ಜಾಲ ಆಧಾರಿತವಾದ ಈ ಸೇವೆಯಲ್ಲಿ ಸಾವಿರಾರು ರೈತರ ಮಾಹಿತಿಗಳನ್ನು ಕ್ರೂಢೀಕರಿಸುವ ಮತ್ತು ವಿನಿಮಯ ಮಾಡುವ ವ್ಯವಸ್ಥೆ ಇದೆ. ಹಾಗಾಗಿ ಇದು, ಕೃಷಿ ತಜ್ಞರು ಹಾಗೂ ವಿಜ್ಞಾನಿಗಳು ನೂತನ ಸಂಶೋಧನೆ ಹಾಗೂ ವಿಸ್ತರಣಾ ಕಾರ್ಯಗಳನ್ನು ಕೈಗೊಳ್ಳುವಾಗ ಪೂರಕ ಮಾಹಿತಿ ಹಾಗೂ ದಾಖಲೆಗಳನ್ನು ಒದಗಿಸುವ ಮಾಹಿತಿಯ ಕಣಜವೇ ಆಗಿದೆ ಎನ್ನುತ್ತಾರೆ ಅವರು.

ಸ್ಥಳೀಯ ಭಾಷೆಯಲ್ಲಿ ಕೂಡ ಲಭ್ಯವಾಗುವ ಈ ತಂತ್ರಜ್ಞಾನದ ಮೂಲಕ ರೈತರಿಗೆ ಸಕಾಲದಲ್ಲಿ ಬೆಳೆ ಸಂರಕ್ಷಣಾ ಮಾಹಿತಿ ಲಭ್ಯವಾಗುವುದರಿಂದ ಬೆಳೆಯ ಉತ್ಪಾದಕತೆ ಹೆಚ್ಚಿಸಬಹುದಾಗಿದೆ. ಕೃಷಿ ವಿವಿ ಅಭಿವೃದ್ಧಿಪಡಿಸುವ ಹೂಸ ಹೂಸ ಬೆಳೆ ಸಂರಕ್ಷಣೆಯ ತಂತ್ರಜ್ಞಾನಗಳನ್ನು ಶರವೇಗದಲ್ಲಿ ರೈತರು ತಿಳಿಯಬಹುದಾಗಿದೆ. ಜತೆಗೆ ಕೃಷಿ ತಜ್ಞರೊಂದಿಗೆ ರೈತರ ಸಂಪರ್ಕ ಹೆಚ್ಚುತ್ತದೆ. ಸದ್ಯ ವಿಸ್ತರಣಾಧಿಕಾರಿಗಳಿಗಾಗಿ ಅಭಿವೃದ್ಧಿಪಡಿಸಿರುವ ಈ ಉಪಕರಣವನ್ನು ಮುಂಬರುವ ದಿನಗಳಲ್ಲಿ ಇನ್ನಷ್ಟು ಪರಿಷ್ಕರಿಸಿ ರೈತರಿಗೆ ಕೈಗೆಟುಕುವ ದರದಲ್ಲಿ ದೊರೆಯುವಂತೆ ಮಾಡಲಾಗುವುದು ಎನ್ನುತ್ತಾರೆ ಪ್ರಭುರಾಜ್. (ಇ-ಸ್ಯಾಪ್ ಕುರಿತ ಹೆಚ್ಚಿನ ಮಾಹಿತಿಗೆ ಮೊ: 94803 96607)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT