ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ ಕುಟುಂಬಗಳಿಗೆ ಸಾಂತ್ವನ

ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗಳಿಗೆ ನಿರ್ಮಲಾನಂದನಾಥಶ್ರೀ ಭೇಟಿ
Last Updated 1 ಆಗಸ್ಟ್ 2015, 9:38 IST
ಅಕ್ಷರ ಗಾತ್ರ

ಚನ್ನರಾಯಪಟ್ಟಣ: ತಾಲ್ಲೂಕಿನಲ್ಲಿ ಸಾಲಭಾದೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠಾಧೀಶ ನಿರ್ಮಲಾನಂದನಾಥ ಸ್ವಾಮೀಜಿ ಸಾಂತ್ವನ ಹೇಳಿದರು.

ತಾಲ್ಲೂಕಿನ ಗಡಿ ಭಾಗದಲ್ಲಿ ಅರುವನಹಳ್ಳಿ ಸಮೀಪ ವಾಸವಿರುವ ಪುಟ್ಟಸ್ವಾಮಿ, ದೊಡ್ಡೇರಿಯ ಶಿವನೇಗೌಡ, ಕಗ್ಗೆರೆಯ ಸಹದೇವ್‌, ದಿಂಡಗೂರು ಗ್ರಾಮದ ಮರಗೇಗೌಡ, ಕುರುವಂಕದ ತಿಮ್ಮೇಗೌಡ ಹಾಗೂ ಅಡಗೂರು ಗ್ರಾಮದ ಕೃಷ್ಣಪ್ಪ ಆತ್ಮಹತ್ಯೆ ಮಾಡಿಕೊಂಡ ರೈತರು.

ಇವರ ಕುಟುಂಬ ವರ್ಗದವರಿಗೆ ಸ್ವಾಮೀಜಿ ಗುರುವಾರ ಧೈರ್ಯ ತುಂಬಿ ದರು. ಇದೇ ಸಂದರ್ಭದಲ್ಲಿ ಮಾತ ನಾಡಿದ ಸ್ವಾಮೀಜಿ, ದೇಶ 2020ಕ್ಕೆ ಸಶಕ್ತ ರಾಷ್ಟ್ರವಾಗಿ ಹೊರಹೊಮ್ಮಲು ಧಾಪು ಗಾಲು ಹಾಕುತ್ತಿದೆ. ಆದರೆ, ಅನ್ನದಾತರು ಸಂಕಷ್ಟಕ್ಕೆ ಸಿಲುಕಿ ಜೀವ ಕಳೆದುಕೊಳ್ಳು ತ್ತಿದ್ದಾರೆ. ಎಷ್ಟೇ ಸಾಂತ್ವನ ಹೇಳಿದರೂ ಆತ್ಮಹತ್ಯೆ ಮುಂದುವರಿಯುತ್ತಿದೆ. ಎಂಥ ಸಂದರ್ಭ ಎದುರಾದರೂ ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ಮನವಿ ಮಾಡಿದರು.

ಸಮಸ್ಯೆ ಎದುರಾದಾಗ ಚಿಂತೆ ಮಾಡುವುದು ಬೇಡ. ಮಾನಸಿಕ ದೌರ್ಬಲ್ಯಕ್ಕೆ ಒಳಗಾಗಿ ನಿಮ್ಮನ್ನು  ನಂಬಿ ರುವರನ್ನು ಕಷ್ಟಕ್ಕೆ ದೂಡುವುದು ಸರಿಯಲ್ಲ. ನಿಮ್ಮ ಕಷ್ಟಕ್ಕೆ ಆದಿಚುಂಚನಗಿರಿ ಮಠ ಸ್ಪಂದಿಸುತ್ತದೆ. ಸಮಸ್ಯೆ ಇರುವರು ಆದಿಚುಂಚನಗಿರಿ ಮಠಕ್ಕೆ ಬನ್ನಿ ಅಥವಾ ಆಯಾ ಜಿಲ್ಲೆಯ ಶಾಖಾ ಮಠಕ್ಕೆ ತೆರಳಿ ಸಮಸ್ಯೆ ನಿವೇದಿಸಿ ಕೊಳ್ಳಬಹುದು ಎಂದು ಹೇಳಿದರು. ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳಿಗೆ ಮಠದ ಶಿಕ್ಷಣ ಸಂಸ್ಥೆಯಲ್ಲಿ ಉಚಿತ ಶಿಕ್ಷಣ ನೀಡಲಾಗುವುದು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವತ್ತ ಗಮನಹರಿಸಬೇಕು ಎಂದರು.

ಮದುವೆ, ಹಬ್ಬ, ಹರಿದಿನಕ್ಕೆ ದುಂದುವೆಚ್ಚ ಮಾಡಬಾರದು. ಅಧಿಕ ಬಡ್ಡಿ ವಸೂಲಿ ಮಾಡುವ ವ್ಯಕ್ತಿಗಳ ಬಗ್ಗೆ ತಹಶೀಲ್ದಾರ್‌ ಅಥವಾ ಪೊಲೀಸರ ಗಮನಕ್ಕೆ ತರಬೇಕು. ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು. ಕೃಷಿ ವಿಜ್ಞಾನಿಗಳಿಂದ ಮಾಹಿತಿ ಪಡೆದು ಬೆಳೆ ಬೆಳೆಯಬೇಕು ಎಂದು ಕಿವಿಮಾತು ಹೇಳಿದರು.

ಬೆಳೆ ಸಂರಕ್ಷಣೆ ನೀತಿ ಜಾರಿಗೆ ತರಬೇಕು. ವೈಜ್ಞಾನಿಕವಾಗಿ ಬೆಳೆವಿಮೆ ನೀತಿ ಅನುಷ್ಠಾನಕ್ಕೆ ತರಬೇಕು ಎಂದು ಆಗ್ರಹಿಸಿದರು. ರೈತ ಸಂಘದ ಮುಖಂಡ ಶ್ರೀಕಂಠು ಮಾತನಾಡಿ, ದೊಡ್ಡೇರಿ ಸೇರಿ 37 ಹಳ್ಳಿಗಳಿಗೆ ನೀರಾವರಿ ಸವಲತ್ತು ಒದಗಿಸಲು ಸರ್ವೆ ಕಾರ್ಯ ನಡೆದಿದೆ. ಯೋಜನೆ ಜಾರಿಗೆ ತರುವ ನಿಟ್ಟಿನಲ್ಲಿ ಸ್ವಾಮೀಜಿ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಮನವಿ ಮಾಡಿದರು.

ಕನಕಪೀಠದ ಶಿವಾನಂದಪುರಿ ಸ್ವಾಮೀಜಿ ಮಾತನಾಡಿದರು. ಆದಿ ಚುಂಚನಗಿರಿ ಶಾಖಾ ಮಠಾಧೀಶ ಶಂಭುನಾಥ ಸ್ವಾಮೀಜಿ, ಆನಂದ ಚೈತನ್ಯ ನಾಥಸ್ವಾಮೀಜಿ, ಶಿವಾನಂದನಾಥ ಸ್ವಾಮೀಜಿ, ಅನ್ನದಾನೇಶ್ವರನಾಥ ಸ್ವಾಮೀಜಿ, ತಹಶೀಲ್ದಾರ್‌ ಕೆ. ಕೃಷ್ಣ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಆರ್. ಮಲ್ಲೇಶಗೌಡ,  ಪರಿಸರವಾದಿ ಸಿ.ಎನ್‌. ಅಶೋಕ್‌, ರಾಜಕೀಯ ಮುಖಂಡರಾದ ಎಚ್‌.ಎಸ್‌.ವಿಜಯಕುಮಾರ್‌, ಕಬ್ಬಳಿ ರಂಗೇಗೌಡ, ಎಂ.ಎ. ಗೋಪಾಲಸ್ವಾಮಿ, ಎಂ.ಎ. ರಂಗಸ್ವಾಮಿ, ಎ.ಬಿ. ನಂಜುಂಡೇ ಗೌಡ, ಪಟೇಲ್‌ ಮಂಜುನಾಥ್‌, ಎ.ಆರ್‌. ಶಿವರಾಜು, ಎಚ್‌.ಜಿ. ರಾಮಕೃಷ್ಣ, ಪರಮದೇವರಾಜೇಗೌಡ, ಕೆಂಪ ನಂಜೇಗೌಡ, ಜಯರಾಂ, ಎಸ್‌.ಕೆ. ರಾಘವೇಂದ್ರ, ಎಂ. ಶಂಕರ್‌, ಚಂದ್ರಪ್ಪ, ರಕ್ಷಣಾ ವೇದಿಕೆಯ ನಾಗೇಂದ್ರಬಾಬು ಸೇರಿದಂತೆ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT