ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ ಚಳವಳಿಯ ದೂರಗಾಮಿ ಚಿಂತಕ ಶರದ್ ಜೋಶಿ

ವ್ಯಕ್ತಿ/ ಸ್ಮರಣೆ
Last Updated 19 ಡಿಸೆಂಬರ್ 2015, 19:30 IST
ಅಕ್ಷರ ಗಾತ್ರ

ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದ ಆ ವ್ಯಕ್ತಿ, ಮನಸ್ಸು ಮಾಡಿದ್ದರೆ ಅಲ್ಲೇ ಉಳಿದು ಇನ್ನಷ್ಟು ದೊಡ್ಡ ಸ್ಥಾನ ಅಲಂಕರಿಸಬಹುದಾಗಿತ್ತು. ಆದರೆ ರೈತರ ದಯನೀಯ ಸ್ಥಿತಿ ಅವರ ಹೃದಯವನ್ನು ಕಲಕಿತ್ತು. ಏನೆಲ್ಲ ಸೌಲಭ್ಯಗಳನ್ನು ತ್ಯಜಿಸಿ ಕೃಷಿ ಲೋಕಕ್ಕೆ ಮರಳಿದರು. ದಶಕಗಳ ಕಾಲ ಅವರು ರೈತರ ಸ್ಥಿತಿ ಸುಧಾರಿಸಲು ಶ್ರಮಿಸಿದರು. ತಮ್ಮ ನಿಲುವುಗಳಿಂದಾಗಿ ಹಲವು ಬಾರಿ ಟೀಕೆಗೆ ಒಳಗಾಗಿದ್ದರು. ಆದರೆ ಅವರಲ್ಲಿದ್ದ ರೈತಪರ ಕಾಳಜಿಯನ್ನು ಯಾರೂ ಪ್ರಶ್ನಿಸುವಂತಿರಲಿಲ್ಲ ಎಂಬುದು ಶರದ್ ಜೋಶಿ ಅವರ ಹೆಗ್ಗಳಿಕೆ.

ಕೃಷಿ ವಿಷಯಕ್ಕೆ ಬಂದಾಗ ಮಹಾರಾಷ್ಟ್ರ ಮೂಲದ ಹೋರಾಟಗಾರರನ್ನು ಮರೆಯುವಂತೆಯೇ ಇಲ್ಲ. ಅವರ ಪೈಕಿ ಶರದ್ ಅನಂತರಾವ ಜೋಶಿ (1935–2015) ಕೂಡ ಒಬ್ಬರು. ಸತಾರಾ ಮೂಲದ ಜೋಶಿ ಓದಿದ್ದು ಪುಣೆ ಹಾಗೂ ಮುಂಬೈನಲ್ಲಿ. ‘ಆರ್ಥಿಕತೆ’ ಅವರ ಮೆಚ್ಚಿನ ವಿಷಯ. 1958ರಿಂದ ಒಂದು ದಶಕದ ಕಾಲ ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಜೋಶಿ, ಅಂಚೆ ವಿಳಾಸಗಳಲ್ಲಿ ಮಹತ್ವ ಪಡೆದಿರುವ ಪಿನ್‌ ಕೋಡ್ ವ್ಯವಸ್ಥೆಗೆ ಅಡಿಪಾಯ ಹಾಕಿದವರು. ಬಳಿಕ ಸ್ವಿಟ್ಜರ್‌ಲೆಂಡಿನಲ್ಲಿ ಇಂಟರ್‌ನ್ಯಾಷನಲ್ ಬ್ಯೂರೊ ಆಫ್‌ ಯೂನಿವರ್ಸಲ್ ಪೋಸ್ಟಲ್ ಯೂನಿಯನ್‌ನಲ್ಲಿ ಸೇವೆ ಸಲ್ಲಿಸಿದರು. 1977ರಲ್ಲಿ ಭಾರತಕ್ಕೆ ವಾಪಸಾಗಿ, ರೈತ ಚಳವಳಿ ಕಟ್ಟಲು ಆರಂಭಿಸಿದರು.

ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ಕೊಡದೇ ಇರುವುದೇ ರೈತರ ದಯನೀಯ ಸ್ಥಿತಿಗೆ ಮೂಲ ಕಾರಣ ಎಂಬ ಪ್ರತಿಪಾದನೆ ಜೋಶಿ ಅವರದು. ಅದಕ್ಕಾಗಿ ಅವರು ಹೋರಾಟ ಶುರು ಮಾಡಿದರು. ನಾಸಿಕ್‌ ಪ್ರದೇಶದ ರೈತರನ್ನು ಸಂಘಟಿಸಿ, 1979ರಲ್ಲಿ ‘ಶೇತ್ಕರಿ ಸಂಘಟನ್’ ಸ್ಥಾಪಿಸಿದರು. ಈರುಳ್ಳಿ ಬೆಳೆದಿದ್ದ ತಮ್ಮ ಹೊಲದಿಂದಲೇ ಚಳವಳಿ ಆರಂಭಿಸಿದ ಜೋಶಿ ಅವರಿಗೆ ರೈತರ ಬೆಂಬಲ ಸಿಕ್ಕಿತು. ಆ ಸಂದರ್ಭದಲ್ಲಿ ನಡೆದ ಗಲಭೆಯಿಂದಾಗಿ, ಅವರನ್ನು ಬಂಧಿಸಲಾಯಿತು.

ಅದು ಶರದ್ ಜೋಶಿ ಹೋರಾಟ ಪರ್ವದ ಆರಂಭ. ಅದೇ ಸಮಯಕ್ಕೆ ಉತ್ತರ ಭಾರತದಲ್ಲಿ ರೈತ ನಾಯಕ ಮಹೇಂದ್ರ ಸಿಂಗ್ ಟಿಕಾಯತ್ ಇಂಥವೇ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಆಂದೋಲನ ನಡೆಸುತ್ತಿದ್ದರು. ಅವರ ಜತೆ ಕೈಜೋಡಿಸಿದ ಜೋಶಿ, ತಮ್ಮ ಹೋರಾಟದ ವ್ಯಾಪ್ತಿಯನ್ನು ಇತರ ಪ್ರದೇಶಕ್ಕೂ ವಿಸ್ತರಿಸಿದರು. ಈರುಳ್ಳಿಯಿಂದ ಅವರ ಗಮನ ಹತ್ತಿ, ತಂಬಾಕು, ಕಬ್ಬು, ಭತ್ತ, ಹಾಲು... ಹೀಗೆ ಹಲವು ಕೃಷಿ ಬೆಳೆಗಳತ್ತ ವ್ಯಾಪಿಸಿತು.

ಇತರ ರೈತ ಸಂಘಟನೆಗಳ ಜತೆಗೂಡಿ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ರಾಜಸ್ತಾನ, ಗುಜರಾತ್ ಹಾಗೂ ದಕ್ಷಿಣ ರಾಜ್ಯಗಳಲ್ಲೂ ಹೋರಾಟ ನಡೆಸಿದರು. ರೈತ ಕ್ಷೇತ್ರದಲ್ಲಿ ಮಹಿಳೆಯರ ಅಸ್ತಿತ್ವ ಕಡೆಗಣಿಸಲಾಗುತ್ತಿದೆ ಎಂದು ದೂರುತ್ತಿದ್ದ ಜೋಶಿ, 1986ರಲ್ಲಿ ಪಂಜಾಬ್‌ನ ಚಂದ್ವಾಡದಲ್ಲಿ ರೈತ ಮಹಿಳೆಯರ ಬೃಹತ್ ಸಮಾವೇಶ ಹಮ್ಮಿಕೊಂಡಿದ್ದರು. ಸುಮಾರು ಎರಡು ಲಕ್ಷ ರೈತ ಮಹಿಳೆಯರು ಅದರಲ್ಲಿ ಪಾಲ್ಗೊಂಡಿದ್ದು ಅವತ್ತಿನ ಮಟ್ಟಿಗೆ ದೊಡ್ಡ ಸುದ್ದಿಯಾಗಿತ್ತು. 

ರೈತ ಸಂಘಟನೆಗಳ ವಿರೋಧ!
ಜಗತ್ತಿನ ಬಹುತೇಕ ಎಲ್ಲ ದೇಶಗಳ ರೈತರ ಸ್ಥಿತಿಗತಿ ಬಗ್ಗೆ ಶರದ್ ಜೋಶಿ ಅವರಲ್ಲಿ ಅಗಾಧ ಪ್ರಮಾಣದ ಮಾಹಿತಿಯಿತ್ತು. ಅದನ್ನು ಆಧಾರವಾಗಿಟ್ಟುಕೊಂಡು, ಭಾರತದ ರೈತರ ಪ್ರಗತಿ ಹೇಗೆ ಎಂಬುದನ್ನು ವಿವರಿಸುತ್ತಿದ್ದರು. ವಿಪರ್ಯಾಸವೆಂದರೆ, ರೈತರ ಏಳಿಗೆಯನ್ನೇ ಗುರಿಯಾಗಿಟ್ಟುಕೊಂಡು ಹೋರಾಟ ನಡೆಸುತ್ತಿದ್ದ ಇತರ ರೈತ ಸಂಘಟನೆಗಳು ಜೋಶಿ ಅವರ ನಿಲುವುಗಳನ್ನು ಹಲವು ಸಲ ಉಗ್ರವಾಗಿ ವಿರೋಧಿಸುತ್ತಿದ್ದವು! ಇದಕ್ಕೆ ಮುಖ್ಯ ಕಾರಣ, ಜೋಶಿ ಅವರು ಮಾರುಕಟ್ಟೆ ಹಾಗೂ ತಂತ್ರಜ್ಞಾನದ ಕುರಿತು ಪ್ರತಿಪಾದಿಸುತ್ತಿದ್ದ ಅಭಿಪ್ರಾಯಗಳು.

‘ರೈತರಿಗೆ ಮುಕ್ತ ಮಾರುಕಟ್ಟೆಗೆ ಪ್ರವೇಶ ಕಲ್ಪಿಸಬೇಕು. ಅವರಿಗೆ ಅತ್ಯಾಧುನಿಕ ತಂತ್ರಜ್ಞಾನ ಸುಲಭವಾಗಿ ಸಿಗುವಂತಾಗಬೇಕು’ ಎಂದು ಜೋಶಿ ಒತ್ತಾಯಿಸುತ್ತಿದ್ದರು. ವಿಶ್ವ ವಾಣಿಜ್ಯ ಒಪ್ಪಂದವನ್ನು ಸಹ ಅವರು ಬೆಂಬಲಿಸಿದ್ದರು. ‘ಮುಕ್ತ ಮಾರುಕಟ್ಟೆಗೆ ಭಾರತದ ರೈತರನ್ನು ಅಣಿ ಮಾಡಿದರೆ, ಅವರೂ ಸಾಕಷ್ಟು ಲಾಭ ಪಡೆಯಲು ಸಾಧ್ಯವಿದೆ’ ಎಂಬ ಹೇಳಿಕೆಯಿಂದಾಗಿ ರೈತ ಸಂಘಟನೆಗಳಿಂದ ತೀವ್ರ ಪ್ರತಿರೋಧವನ್ನು ಜೋಶಿ ಎದುರಿಸಬೇಕಾಯಿತು. ‘ಭಾರತದ ಗ್ರಾಮಗಳ ಆರ್ಥಿಕ ಸ್ವಾವಲಂಬನೆ ಹಾಗೂ ಸಾಂಪ್ರದಾಯಿಕ ಕೃಷಿ ವಿಧಾನಗಳ ಅರಿವಿಲ್ಲದ ಜೋಶಿ, ರೈತರನ್ನು ಇನ್ನಷ್ಟು ಅಪಾಯಕರ ಸ್ಥಿತಿಗೆ ನೂಕಲು ಹುನ್ನಾರ ನಡೆಸಿದ್ದಾರೆ’ ಎಂದು ರೈತಪರ ಸಂಘಟನೆಗಳ ಮುಖಂಡರು ಟೀಕಿಸಿದ್ದರು.

ಭವಿಷ್ಯದ ದಿನಗಳಲ್ಲಿ ಜಾಗತಿಕ ಮಟ್ಟದ ಪೈಪೋಟಿ ನಡೆಯಲಿದ್ದು, ಭಾರತೀಯ ರೈತರು ಅದಕ್ಕೆ ಸನ್ನದ್ಧರಾಗಲು ಸರ್ಕಾರ ಯಾವುದೇ ದೂರಗಾಮಿ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಜೋಶಿ ಪದೇ ಪದೇ ಟೀಕಿಸುತ್ತಿದ್ದರು. ಮಾರುಕಟ್ಟೆಯನ್ನು ಕೃಷಿಕರಿಗೆ ಮುಕ್ತಗೊಳಿಸುವುದು, ಲೇವಾದೇವಿ ಮೇಲೆ ನಿಷೇಧ ಹೇರದೇ ಅದನ್ನು ನಿಯಂತ್ರಣಕ್ಕೆ ಒಳಪಡಿಸುವುದು, ರೈತರೇ ಪಾಲುದಾರರಾಗುವ ಕಂಪೆನಿ ಸ್ಥಾಪನೆ, ಉತ್ಪನ್ನದಿಂದ ಹಿಡಿದು ಗ್ರಾಹಕರಿಗೆ ಪೂರೈಕೆವರೆಗೆ ಜಾಲವೊಂದನ್ನು ಸ್ಥಾಪಿಸಿ ಅದನ್ನು ರೈತರೇ ನಿರ್ವಹಿಸುವುದು– ಇಂಥ ಹಲವು ಮಾರ್ಗಗಳನ್ನು ಅವರು ಸದಾ ಪ್ರತಿಪಾದಿಸುತ್ತಿದ್ದರು.

ಮೂರು ದಶಕಗಳ ಹಿಂದೆ ಆ ಎಲ್ಲ ದಾರಿಗಳು ಅಪ್ರಸ್ತುತ ಅನಿಸುವಂತಿದ್ದವು ನಿಜ; ಆದರೆ ಈಗ ನೋಡಿದಾಗ ಜೋಶಿ ಅವರಲ್ಲಿ ಎಷ್ಟೊಂದು ದೂರಗಾಮಿ ಚಿಂತನೆಗಳಿದ್ದವು ಎಂಬುದನ್ನು ತಿಳಿದರೆ ಅಚ್ಚರಿಯಾಗುತ್ತದೆ. ಮುಂದಿನ ದಿನಗಳಲ್ಲಿ ರೈತರು ಅನುಭವಿಸಬಹುದಾದ ಸಮಸ್ಯೆಗಳನ್ನು ಅವರು ಅವತ್ತೇ ಅರಿತಿದ್ದರೇನೋ? ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ನೀಡಬೇಕು ಎಂಬ ವಾದವನ್ನು ಪ್ರಾಯಶಃ ಮೊದಲು ಮಂಡಿಸಿದ್ದು ಶರದ್ ಜೋಶಿ. ಸಬ್ಸಿಡಿ ಕುರಿತು ಅವರು ಮಾಡುತ್ತಿದ್ದ ವಾದಗಳು ರೈತರಿಗಿರಲಿ; ರೈತ ಮುಖಂಡರಿಗೂ ಅರ್ಥವಾಗುತ್ತಿರಲಿಲ್ಲ!

ಬಿತ್ತನೆಯಿಂದ ಹಿಡಿದು, ಸಂಸ್ಕರಣೆಯಾಗಿ ಮಾರುಕಟ್ಟೆಗೆ ಬರವವರೆಗೆ ಒಂದು ಬೆಳೆಯ ಆರ್ಥಿಕ ಲೆಕ್ಕಾಚಾರಗಳನ್ನೆಲ್ಲ ಅವರು ವಿವರಿಸಿ ಹೇಳಿದಾಗ ಮಾತ್ರ ಅರ್ಥವಾಗುತ್ತಿತ್ತು. ವಾಸ್ತವವಾಗಿ ಅಭಿವೃದ್ಧಿ ಹೊಂದಿದ ದೇಶಗಳು ತಮ್ಮ ರೈತರಿಗೆ ಸಬ್ಸಿಡಿ ನೀಡುವ ಪ್ರಮಾಣಕ್ಕೆ ಹೋಲಿಸಿದಾಗ, ಭಾರತದಲ್ಲಿ ಕಡಿಮೆ ಸಬ್ಸಿಡಿ ನೀಡಲಾಗುತ್ತದೆ. ಆದರೆ ಕೊನೆಗೆ ನೋಡಿದಾಗ ಭಾರತದ ರೈತರು ಪಡೆಯುವ ಸಬ್ಸಿಡಿ ಋಣಾತ್ಮಕವಾಗಿರುತ್ತದೆ ಎಂಬ ಅಂಶವನ್ನು ಬೆಳಕಿಗೆ ತಂದವರು ಜೋಶಿ. ಕೃಷಿ ಉತ್ಪನ್ನದ ಬೆಲೆ ಹೇಗೆ ವೈಜ್ಞಾನಿಕವಾಗಿ ಇದ್ದರೆ ರೈತರಿಗೆ ಲಾಭ ಎಂಬುದನ್ನು ಸಾವಿರಾರು ಸಭೆಗಳಲ್ಲಿ ವಿವರಿಸಿ ಹೇಳಿದ್ದರು.

ಹೋರಾಟದ ಮೂಲಕ ಅವರು ರಾಜಕೀಯ ಕ್ಷೇತ್ರಕ್ಕೂ ಧುಮುಕಿದರು. 2004ರಿಂದ 2010ರ ಅವಧಿಯಲ್ಲಿ ರಾಜ್ಯಸಭೆ ಸದಸ್ಯರಾಗಿ ಸೇವೆ ಸಲ್ಲಿಸಿದರು. ಮಹಿಳಾ ಮೀಸಲಾತಿ ಮಸೂದೆಯನ್ನು ವಿರೋಧಿಸಿದ ಸದಸ್ಯನೆಂಬ ‘ಕುಖ್ಯಾತಿ’ಗೂ ಅವರು ಪಾತ್ರರಾಗಿದ್ದರು. ಈ ಬಗ್ಗೆ ಅವರು ತಮ್ಮ ಸಮರ್ಥನೆ ನೀಡಿದ್ದು ಹೀಗೆ: ‘ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮೊದಲು ಮಹಿಳೆಯರ ಪ್ರಾತಿನಿಧ್ಯ ಗಟ್ಟಿಯಾಗುವಂತೆ ಮಾಡಬೇಕು. ಅವರು ಸಮರ್ಥವಾಗಿ ಸೇವೆ ಸಲ್ಲಿಸುವ ವಾತಾವರಣ ಸೃಷ್ಟಿಸಬೇಕು. ಆಮೇಲೆ ಬೇಕಿದ್ದರೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಮೀಸಲಾತಿ ಕಲ್ಪಿಸೋಣ.’

ವಿದೇಶಗಳಲ್ಲಿ ಎಷ್ಟೆಲ್ಲ ಅವಕಾಶಗಳಿದ್ದರೂ ಅವನ್ನೆಲ್ಲ ತೊರೆದು, ಸ್ವದೇಶಕ್ಕೆ ವಾಪಸು ಬಂದು ರೈತ ಚಳವಳಿ ಗಟ್ಟಿಗೊಳಿಸಿದವರು ಶರದ್ ಜೋಶಿ. ಕೃಷಿ ಆರ್ಥಿಕ ತಜ್ಞನಾಗಿ ಅವರಿಗೆ ತಮ್ಮದೇ ಆದ ಚಿಂತನೆಗಳಿದ್ದವು. ಅವುಗಳನ್ನೆಲ್ಲ ಅನುಷ್ಠಾನ ಮಾಡಲು ಆಗ ಸಮಯ ಪಕ್ವವಾಗಿರಲಿಲ್ಲವೇನೋ? ಬಿಕ್ಕಟ್ಟಿಗೆ ಸಿಲುಕಿ ಕಂಗಾಲಾಗಿರುವ ರೈತರಿಗೆ ಈಗ ಅವರ ಯೋಚನೆಗಳು ಪರಿಹಾರ ಎಂಬಂತೆ ಭಾಸವಾಗುತ್ತಿವೆ. ಅದು ಜೋಶಿ ಅವರಲ್ಲಿದ್ದ ದೂರದೃಷ್ಟಿಗೆ ಸಂದ ಹೆಗ್ಗಳಿಕೆ ತಾನೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT