ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲಿಗೆ ಅಪ್ಪಳಿಸಿದ ಟ್ರಕ್‌: ಕಾಂಗ್ರೆಸ್‌ ಶಾಸಕ ವೆಂಕಟೇಶ ನಾಯಕ್‌ ನಿಧನ

ಅನಂತಪುರದಲ್ಲಿ ಬೆಂಗಳೂರು–ನಾಂದೇಡ್‌ ಎಕ್ಸ್‌ಪ್ರಸ್‌ ಅಪಘಾತ
Last Updated 24 ಆಗಸ್ಟ್ 2015, 6:47 IST
ಅಕ್ಷರ ಗಾತ್ರ

ಅನಂತಪುರ (ಪಿಟಿಐ): ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಸೋಮವಾರ ಬೆಳಗಿನ ಜಾವ ರೈಲು ಮತ್ತು ಟ್ರಕ್‌ ನಡುವೆ ಸಂಭವಿಸಿದ  ಭೀಕರ ಅಪಘಾತದಲ್ಲಿ ರಾಯಚೂರಿನ ದೇವದುರ್ಗ ಕ್ಷೇತ್ರದ ಕಾಂಗ್ರೆಸ್‌ ಶಾಸಕ ವೆಂಕಟೇಶ್‌ ನಾಯಕ್‌ (79) ಸೇರಿ 6 ಮಂದಿ ಮೃತಪಟ್ಟಿದ್ದಾರೆ. 

ವೆಂಕಟೇಶ ನಾಯಕ್‌ ಅವರು ಬೆಂಗಳೂರು–ನಾಂದೇಡ್‌ ಎಕ್ಸ್‌ಪ್ರಸ್‌ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಸೋಮವಾರ ಬೆಳಗಿನ ಜಾವ 2:30ರ ಸುಮಾರಿಗೆ ಈ ರೈಲು ಅನಂತಪುರ ಜಿಲ್ಲೆಯ ಪೆನುಕೊಂಡ ಸಮೀಪದ ಮಡಕಶಿರ ಎಂಬಲ್ಲಿ ಲೆವಲ್‌ ಕ್ರಾಸಿಂಗ್ ದಾಟುತ್ತಿತ್ತು. ಈ ಸಂದರ್ಭದಲ್ಲಿ ಗ್ರಾನೈಟ್‌ ಹೇರಿಕೊಂಡು ಬಂದ ಭಾರಿ ಟ್ರಕ್‌  ಚಾಲಕನ ನಿಯಂತ್ರಣ ಕಳೆದುಕೊಂಡು, ಮುಚ್ಚಿದ್ದ ರೈಲ್ವೆ ಗೇಟ್‌ ಮುರಿದುಕೊಂಡು ನೇರವಾಗಿ ರೈಲಿಗೆ ಬಂದು ಅಪ್ಪಳಿಸಿತು.

ಟ್ರಕ್‌ ಅಪ್ಪಳಿಸಿದ್ದು  ಎಚ್‌–1 ಕೋಚ್‌ಗೆ. ಈ ಕೋಚ್‌ನಲ್ಲಿ ವೆಂಕಟೇಶ್‌ ನಾಯಕ್‌ ಮತ್ತು ನಾಲ್ವರು ಪ್ರಯಾಣಿಸುತ್ತಿದ್ದರು. ಅವರೆಲ್ಲರೂ ಸ್ಥಳದಲ್ಲೇ ಮೃತಪಟ್ಟರು. ಟ್ರಕ್‌ ಚಾಲಕ ಕೂಡ ಘಟನೆಯಲ್ಲಿ ಮೃತಪಟ್ಟ. ರೈಲಿನ ಎಸ್‌–1, ಎಸ್‌–2, ಬಿ–1 ಸೇರಿದಂತೆ ನಾಲ್ಕು ಬೋಗಿಗಳು ಹಳಿ ತಪ್ಪಿದವು. 20ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡರು ಎಂದು ಅನಂತಪುರ ಜಿಲ್ಲೆಯ ಡಿಐಜಿ ಕೆ. ಸತ್ಯನಾರಾಯಣ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಲೆವಲ್‌ ಕ್ರಾಸಿಂಗ್‌ನಲ್ಲಿ ಗೇಟ್ ಹಾಕಿದ್ದರೂ, ಅದರತ್ತ ಗಮನ ಹರಿಸದ ಟ್ರಕ್‌ ಚಾಲಕ, ಒಮ್ಮಲೆ ವಾಹನ ನುಗ್ಗಿಸಿದ್ದೇ ಈ ಅಪಘಾತಕ್ಕೆ ಕಾರಣ ಎಂದು ಅವರು ಹೇಳಿದ್ದಾರೆ.

ವೆಂಕಟೇಶ ನಾಯಕ್‌ ಅವರು ನಾಲ್ಕು ಬಾರಿ ಸಂಸದರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT