ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲು ದುರಂತ: 20 ಜನರ ಸಾವು

Last Updated 26 ಮೇ 2014, 11:11 IST
ಅಕ್ಷರ ಗಾತ್ರ

ಸಂತ ಕಬೀರ್ ನಗರ, ಉತ್ತರಪ್ರದೇಶ (ಪಿಟಿಐ): ನಿಂತಿದ್ದ ಸರಕು ಸಾಗಣೆ ರೈಲಿಗೆ ಗೋರಖ್‌ಧಾಮ್‌ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ ಹೊಡೆದ ಪರಿಣಾಮ 20 ಜನರು ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಸಂತ ಕಬೀರ್ ಜಿಲ್ಲೆಯಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.

ಚುರೆಬ್‌ ರೈಲು ನಿಲ್ದಾಣದ ಸಮೀಪ ಗೂಡ್ಸ್‌ ರೈಲು ನಿಂತಿದ್ದ ಹಳಿಗೇ ಎಕ್ಸ್‌ಪ್ರೆಸ್‌ ರೈಲು ಬಂದಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್‌ ಭರತ್‌ ಲಾಲ್‌ ತಿಳಿಸಿದ್ದಾರೆ.

ಅಲ್ಲದೇ, ದುರ್ಘಟನೆಯಲ್ಲಿ ರೈಲಿನ ಮೊದಲ ಬೋಗಿ ಸಂಪೂರ್ಣ ಹಾನಿಗೀಡಾಗಿದ್ದು, 20 ಜನರು ಸಾವನ್ನಪ್ಪಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.

ಆದರೆ, ರೈಲು ಹಳಿ ತಪ್ಪಿದ ಪರಿಣಾಮ ದುರಂತ ನಡೆದಿದೆ ಎಂದು ಈಶಾನ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅಲೋಕ್‌ ಸಿಂಗ್‌ ತಿಳಿಸಿದ್ದಾರೆ.

ಮೋದಿ ಸಂತಾಪ: ದುರಂತದ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರು, ದುರ್ಘಟನೆಯಲ್ಲಿ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ದೊರೆಯುತ್ತಿದೆಯೇ ಎಂಬುದನ್ನು ಖಚಿತಪಡಿಸಲು ಅವಲೋಕನ ನಡೆಸುವಂತೆ ಸಂಪುಟದ ಕಾರ್ಯದರ್ಶಿಗೆ ಸೂಚಿಸಿದ್ದಾರೆ.

ಪರಿಹಾರ ಘೋಷಣೆ(ನವದೆಹಲಿ ವರದಿ): ಅವಘಡದ ಬಗ್ಗೆ ತನಿಖೆ ಆದೇಶಿಸಿರುವ ರೈಲ್ವೇ ಇಲಾಖೆ, ಮೃತರ ಕುಟುಂಬಗಳಿಗೆ ಪರಿಹಾರ ಘೋಷಿಸಿದೆ.

‘ದುರ್ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಮೃತರ ಕುಟುಂಬದವರಿಗೆ ಒಂದು ಲಕ್ಷ ರೂಪಾಯಿ, ಗಂಭೀರ ಗಾಯಗೊಂಡವರಿಗೆ 50 ಸಾವಿರ ರೂಪಾಯಿ ಹಾಗೂ ಚಿಕ್ಕಪುಟ್ಟ ಗಾಯಗಳಾದ ಪ್ರಯಾಣಿಕರಿಗೆ 10 ಸಾವಿರ ರೂಪಾಯಿ ಪರಿಹಾರ ನೀಡಲಾಗುವುದು’ ಎಂದು ರೈಲು ಮಂಡಳಿಯ ಅಧ್ಯಕ್ಷ ಅರುಣೇಂದ್ರ ಕುಮಾರ್‌ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT