ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆಗೆ ಸೇರಿದ 45 ಟನ್‌ ಕಬ್ಬಿಣ ಕಳವು

Last Updated 19 ನವೆಂಬರ್ 2015, 5:29 IST
ಅಕ್ಷರ ಗಾತ್ರ

ತುಮಕೂರು: ಗುಬ್ಬಿ ರೈಲು ನಿಲ್ದಾಣದಲ್ಲಿ ರೈಲ್ವೆಗೆ ಸೇರಿದ ಭಾರಿ ಪ್ರಮಾಣದ ಕಬ್ಬಿಣದ ಸಾಮಗ್ರಿಗಳನ್ನು ಕಳವು ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ರೈಲ್ವೆ ಇಲಾಖೆಯಲ್ಲಿ ನಡೆದ ಅತಿ ದೊಡ್ಡ ಪ್ರಮಾಣದ ಕಳವು ಪ್ರಕರಣ ಇದಾಗಿದೆ ಎನ್ನಲಾಗಿದೆ. ರೈಲ್ವೆ ಪೊಲೀಸರು(ಆರ್‌ಪಿಎಫ್‌) ಸದ್ದಿಲ್ಲದೇ ಕಳ್ಳರ ಬೇಟೆಗಾಗಿ ವ್ಯಾಪಕ ಕಾರ್ಯಾಚರಣೆ ನಡೆಸಿದ್ದಾರೆ. ಹಾಸನ ಜಿಲ್ಲೆಯ ಅರಸೀಕೆರೆ ಹಾಗೂ ತುಮಕೂರಿನಲ್ಲಿ ರೈಲ್ವೆ ಪೊಲೀಸ್‌ ತಂಡಗಳು ಮೊಕ್ಕಾಂ ಹೂಡಿದ್ದು, ಆರೋಪಿಗಳ ಪತ್ತೆ ಕಾರ್ಯದಲ್ಲಿ ನಿರತವಾಗಿವೆ. ಹೊರ ರಾಜ್ಯಗಳಲ್ಲೂ ಖದೀಮರ ಬೇಟೆಗೆ ರೈಲ್ವೆ ಪೊಲೀಸ್‌ ಪಡೆ ಇಳಿದಿದೆ. 45 ಟನ್‌ ಕಬ್ಬಿಣದ ಸಾಮಗ್ರಿ ಕಳುವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತುಮಕೂರು ನಗರ ಹಾಗೂ ಹೊರವಲಯದಲ್ಲಿ ಸಂಚರಿಸುವ ಬೃಹತ್‌ ವಾಹನಗಳನ್ನು ತೀವ್ರ ತಪಾಸಣೆ ನಡೆಸಲಾಗುತ್ತಿದೆ. ಅಲ್ಲದೇ ನೂರಕ್ಕೂ ಹೆಚ್ಚು ಶಂಕಿತರನ್ನು ವಿಚಾರಣೆಗೆ ಗುರಿಪಡಿಸಲಾಗಿದೆ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.

15–20 ದಿನಗಳ ಹಿಂದೆ ಗುಬ್ಬಿ ರೈಲು ನಿಲ್ದಾಣದಲ್ಲಿ ಘಟನೆ ನಡೆದರೂ ಈವರೆಗೂ ಬೆಳಕಿಗೆ ಬಂದಿರಲಿಲ್ಲ. ರೈಲ್ವೆ ಪೊಲೀಸರು ಪ್ರಕರಣ ದಾಖಲಿಸದೆ ಆರೋಪಿಗಳ ಪತ್ತೆಗೆ ಮುಂದಾಗಿರುವುದು ಅನುಮಾನಕ್ಕೆ ಕಾರಣವಾಗಿದೆ.

ಗುಬ್ಬಿ ರೈಲು ನಿಲ್ದಾಣದ ಬಳಿ ರೈಲ್ವೆ ಅಂಡರ್‌ಪಾಸ್‌ ನಿರ್ಮಾಣ ಮಾಡಲಾಗಿದೆ. ಜತೆಗೆ ಸರಕು ಸಾಗಣೆ ಬೋಗಿಗಳನ್ನು ನಿಲ್ಲಿಸಲು ಎರಡು ಹೆಚ್ಚುವರಿ ಹಳಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಲಾಖೆಗೆ ಸೇರಿದ ಜಾಗದಲ್ಲಿ ಕಬ್ಬಿಣದ ಹಳಿಗಳು, ಲಾಕರ್‌ಗಳು ಹಾಗೂ ಇನ್ನಿತರ ಸಾಮಗ್ರಿಗಳನ್ನು ದಾಸ್ತಾನು ಮಾಡಲಾಗಿತ್ತು.

ಪ್ರಮಾಣದಲ್ಲೇ ಗೊಂದಲ: ಗುಬ್ಬಿ ರೈಲು ನಿಲ್ದಾಣದಲ್ಲಿ ದಾಸ್ತಾನು ಮಾಡಿದ್ದ ಕಬ್ಬಿಣ, ಈವರೆಗೆ ಬಳಕೆಯಾಗಿರುವ ಕಬ್ಬಿಣದ ನಿಖರ ಪ್ರಮಾಣದ ಬಗ್ಗೆ ಯಾರಿಗೂ ತಿಳಿದಿಲ್ಲ. ಎಷ್ಟು ಪ್ರಮಾಣದಲ್ಲಿ ಕಬ್ಬಿಣ ಕಳುವಾಗಿದೆ ಎಂಬುದರಲ್ಲೇ ಗೊಂದಲವಿದೆ. ಈ ಬಗ್ಗೆ ದೂರು ಸಹ ದಾಖಲಾಗಿಲ್ಲ ಎಂದು ರೈಲ್ವೆ ಪೊಲೀಸ್‌ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಲಾರಿ ಚಾಲಕರ ಕೈವಾಡ ಶಂಕೆ: ರೈಲ್ವೆ ಇಲಾಖೆಯ ಕಬ್ಬಿಣದ ಕಳವು ಪ್ರಕರಣದ ಹಿಂದೆ ಲಾರಿ ಚಾಲಕರ ಕೈವಾಡವಿರುವ ಮಾತುಗಳು ಕೇಳಿಬರುತ್ತಿವೆ.
ಕಳೆದ ಹಲವು ತಿಂಗಳಿಂದ ಗುಬ್ಬಿಯ ರಾಷ್ಟ್ರೀಯ ಹೆದ್ದಾರಿ ಉದ್ದಕ್ಕೂ ನೆಟ್ಟಿದ್ದ ಸೂಚನಾ ಫಲಕಗಳು, ತಡೆಗೋಡೆ ಕಬ್ಬಿಣವನ್ನು ಲಾರಿ ಚಾಲಕರೇ ಕಳವು ಮಾಡಿರುವುದು ಕಂಡುಬಂದಿದೆ. ಕಬ್ಬಿಣವನ್ನು ಕಳವು ಮಾಡುವ ಚಾಲಕರು ದೂರದ ಊರುಗಳಲ್ಲಿ ಗುಜರಿ ಅಂಗಡಿಗಳಿಗೆ ಮಾರಾಟ ಮಾಡಿರುವ ಸಾಧ್ಯತೆಗಳಿವೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT