ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಮಾಂಚನ ಮೂಡಿಸಿದ ಸಾಹಸ ಪ್ರದರ್ಶನ

ಜಾನಪದ ಸಾಹಸಿಗರ ಜಾತ್ರೆಯಲ್ಲಿ ಮೈ ಜುಂ ಎನ್ನುವ ದೃಶ್ಯಗಳು: ಮೂಕ ಪ್ರೇಕ್ಷಕರಾದ ವಿದ್ಯಾರ್ಥಿಗಳು, ನಾಗರಿಕರು
Last Updated 27 ನವೆಂಬರ್ 2015, 11:22 IST
ಅಕ್ಷರ ಗಾತ್ರ

ರಾಮನಗರ : ವ್ಯಕ್ತಿಯೊಬ್ಬ ತನ್ನ ಬಾಯಿ, ಕೈ, ಕಾಲು ಹಾಗೂ ಹೊಟ್ಟೆಯ ಮೇಲೆ ಇಟ್ಟುಕೊಂಡಿದ್ದ ಮೂಲಂಗಿಯನ್ನು, ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿದ್ದ ಬಾಲಕಿಯೊಬ್ಬಳು ಹರಿತವಾದ ಕತ್ತಿಯನ್ನು ಝಳಪಿಸುತ್ತ ಕತ್ತಿಯಿಂದಲೇ ಒಂದೊಂದಾಗಿಯೇ ತುಂಡಿರಿಸಿದಳು....!

ಒಂದೊಂದು ಮೂಲಂಗಿಯನ್ನು ತುಂಡು ಮಾಡುವ ದೃಶ್ಯವನ್ನು ಆಶ್ಚರ್ಯ ಮತ್ತು ಕುತೂಹಲದಿಂದ ವೀಕ್ಷಿಸುತ್ತಿದ್ದ ವಿದ್ಯಾರ್ಥಿಗಳು ಎರಡೂ ಕೈಗಳಿಂದ ತಮ್ಮ ಕೆನ್ನೆಯನ್ನು ಗಟ್ಟಿಯಾಗಿ ಒತ್ತಿ ನಿಟ್ಟುಸಿರು ಬಿಟ್ಟ ದೃಶ್ಯಗಳು ಕಂಡು ಬಂದವು.

ಇಂತಹ ಹಲವು ಮೈ ಜುಂ ಎನ್ನುವ ದೃಶ್ಯಗಳನ್ನು ಕಂಡ ವಿದ್ಯಾರ್ಥಿಗಳು ಮೂಕ ಪ್ರೇಕ್ಷಕರಾಗಿದ್ದೂ ಉಂಟು. ಕತ್ತಿಯ ಹೊಡೆತದಿಂದ ಕೂದಲಂಚಿನಲ್ಲಿ ಪಾರಾದ ವ್ಯಕ್ತಿಗೆ ಏನೂ ಆಗಿಲ್ಲ ಎಂಬುದು ಖಚಿತವಾದಾಗ ಚಪ್ಪಾಳೆ, ಶಿಳ್ಳೆ ಮೂಲಕ ವಿದ್ಯಾರ್ಥಿಗಳು ಪ್ರೋತ್ಸಾಹಿಸಿದ್ದೂ ಉಂಟು.

– ಹೌದು ಅದು ಸಾಹಸ ಕಲೆ. ನಗರದ ಶಾಂತಿನಿಕೇತನ ಸಮೂಹ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಸಾಹಸ ಕಲಾ ಶಿಕ್ಷಣ ಕೇಂದ್ರವು ಗುರುವಾರ ಹಮ್ಮಿಕೊಂಡಿದ್ದ ಜಾನಪದ ಪ್ರದರ್ಶನ ಕಲೆಗಳ ಕಾರ್ಯಾಗಾರ ಮತ್ತು ಅಂತರರಾಜ್ಯ ಜನಪದ ಸಾಹಸಿಗರ ಜಾತ್ರೆಯಲ್ಲಿ ಈ ದೃಶ್ಯಗಳು ಕಂಡು ಬಂದವು.

ಧಾರವಾಡದ ಬಾಲಕರು ಪ್ರದರ್ಶಿಸಿದ ಮಲ್ಲಕಂಬ, ಮೈಸೂರಿನವರ ದೊಣ್ಣೆವರಸೆಯು ನೋಡುಗರ ಮೈ ರೋಮಾಂಚನಗೊಳಿಸಿತು. ಬಾಲಕ, ಬಾಲಕಿಯರು ಕೈ ಹಾಗೂ ಕಾಲುಗಳಲ್ಲಿನ ಕೆಲ ಬೆರಳುಗಳ ಹಿಡಿತದಲ್ಲಿ ಕಂಬದೊಂದಿಗೆ ಸಾಹಸ ಪ್ರದರ್ಶಿಸುತ್ತಿದ್ದುದನ್ನು ನೋಡಿದ ವಿದ್ಯಾರ್ಥಿಗಳು ಹೌಹಾರಿದರು. ಸಾಹಸ ಮಯ ದೊಣ್ಣೆವರೆಸೆ ವೀಕ್ಷಿಸಿದ ಮಕ್ಕಳು ಚಪ್ಪಾಳೆ ತಟ್ಟಿ ಬೆಂಬಲಿಸಿದರು.

ಅಲ್ಲದೆ ಬಳ್ಳಾರಿಯ ಅಲೆಮಾರಿ ಕಲಾವಿದರು ನಡೆಸಿಕೊಟ್ಟ ಸಾಹಸ ಕಲಾ ಪ್ರದರ್ಶನ ಹಾಗೂ ಹೆಣ್ಣು ಮಕ್ಕಳ ಹಗ್ಗದ ವರಸೆಯು ಗಮನ ಸೆಳೆಯಿತು.

ಬಳ್ಳಾರಿಯ ಪೈಲ್ವಾನ್‌ ಮಿರ್ಜಾ ಅವರು, 200 ಕೆ.ಜಿ ತೂಕದ ಮರದ ದಿಮ್ಮಿಯನ್ನು ಕೇವಲ ಹಲ್ಲಿನಿಂದಲೇ ಎತ್ತಿ ಹಿಂದಕ್ಕೆ ಎಸೆದರು. ಅಲ್ಲದೆ ಅವರು ತನ್ನ ಎದೆಯ ಮೇಲೆ ಸೈಜು ಕಲ್ಲು ಇಟ್ಟುಕೊಂಡು ಹಾರೆಯಿಂದ ಪುಡಿ ಮಾಡಿಸಿಕೊಂಡು ತನ್ನ ಸಾಮರ್ಥ್ಯ ಪ್ರದರ್ಶಿಸಿದರು. ಇವುಗಳ ಜತೆಗೆ ಅವರು ಚಪ್ಪಡಿ ಕಲ್ಲುಗಳನ್ನು ತನ್ನ ಬಲಗೈನಿಂದ ಪುಡಿ ಮಾಡುವ ಮೂಲಕ ತನ್ನ ತೋಳ್ಬಲ ಎಷ್ಟಿದೆ ಎಂಬುದನ್ನು ತೋರಿಸಿದರು. ತಮಿಳುನಾಡಿನ ಕಲಾವಿದರು ಸಿಲಂಬಾಟಂ ಸಾಹಸ ಕಲೆಯನ್ನು ಪ್ರದರ್ಶಿಸಿದರು.

ಸಾಹಸಿಗರ ಜಾತ್ರೆಯನ್ನು ಉದ್ಘಾಟಿಸಿದ ಶಾಂತಿನಿಕೇತನ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಎಸ್‌. ಕುಮಾರಸ್ವಾಮಿ ಅವರು, ‘ಸಾಹಸ ಕಲೆಯನ್ನು ಪ್ರೋತ್ಸಾಹಿಸಬೇಕಾದದ್ದು ನಮ್ಮ ಕರ್ತವ್ಯ. ಇದನ್ನು ವೀಕ್ಷಿಸುವ ಮಕ್ಕಳು ಸಾಹಸ ಕಲೆ ಕಲಿತು ಅದನ್ನು ಉಳಿಸಿ ಬೆಳೆಸಲು ಮುಂದಾಗಬೇಕು’ ಎಂದು ಕರೆ ನೀಡಿದರು.

ಪ್ರತಿ ವಿದ್ಯಾರ್ಥಿಯಲ್ಲೂ ಒಂದಲ್ಲ ಒಂದು ರೀತಿಯ ಕಲೆ ಇರುತ್ತದೆ. ಈ ಕಲೆಗೆ ಸೂಕ್ತ ಪ್ರೋತ್ಸಾಹ ದೊರೆಯಬೇಕು. ಸಾಹಸ ಕಲೆಯಿಂದ ದೈಹಿಕ, ಮಾನಸಿಕ ಆರೋಗ್ಯ ಚೆನ್ನಾಗಿ ಇರುತ್ತದೆ ಎಂದರು.

ಸಾಹಸ ಕಲಾ ಶಿಕ್ಷಣ ಕೇಂದ್ರದ ಪ್ರಧಾನ ಶಿಕ್ಷಕ ಹಾಸನ ರಘು ಅವರು ಮಾತನಾಡಿ, ಸಾಹಸ ಕಲಾ ಶಿಕ್ಷಣಕ್ಕೆ ನೆರೆಯ ತಮಿಳುನಾಡಿನಲ್ಲಿ ಉತ್ತಮ ಪ್ರೋತ್ಸಾಹ ದೊರೆಯುತ್ತಿದೆ. ಅಲ್ಲಿ ಶಾಲಾ ಹಂತದಲ್ಲಿ ದೊಣ್ಣೆವರಸೆ ಮತ್ತು ಕತ್ತಿವರಸೆ ಕಲಿಕೆಯನ್ನು ಸರ್ಕಾರವೇ ಕಡ್ಡಾಯ ಮಾಡಿದೆ. ಇದರಿಂದ ಜನಪದ ಸಂಸ್ಕೃತಿಯ ಜತೆಗೆ ಸಾಹಸ ಕಲೆಯೂ ಉಳಿಯುತ್ತದೆ. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವೂ ಚಿಂತಿಸಬೇಕು’ ಎಂದು ಮನವಿ ಮಾಡಿದರು.

ವಿದ್ಯಾರ್ಥಿಗಳಿಗೆ ಸಾಹಸ ಕಲೆ
ನಗರದ ಶಾಂತಿನಿಕೇತನ ಸಮೂಹ ಶಿಕ್ಷಣ ಸಂಸ್ಥೆಯು ತನ್ನ ವಿದ್ಯಾರ್ಥಿಗಳಿಗೆ ಕೆಲ ಸಾಹಸ ಕಲೆಗಳನ್ನು ಹೇಳಿಕೊಡಲು ನಿರ್ಧರಿಸಿದೆ. ಶಾಲೆಯ ಐದರಿಂದ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಈ ವರ್ಷದಿಂದಲೇ ದೊಣ್ಣೆವರಸೆ, ಹಗ್ಗದ ವರಸೆ, ಪೂಜಾ ಕುಣಿತ, ದೊಣ್ಣೆ ವರಸೆ, ಕಂಸಾಳೆ, ಮಲ್ಲಕಂಬದ ಕಲೆಗಳನ್ನು ಹೇಳಿಕೊಡಲು ಮುಂದಾಗಿದೆ.

ಶಾಲೆಯ 5ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿನಿಯರಿಗೆ ದೊಣ್ಣೆವರಸೆಯನ್ನು ಕಡ್ಡಾಯ ಮಾಡಲಾಗುವುದು. ಉಳಿದ ಸಾಹಸ ಕಲೆಗಳನ್ನು ವಿದ್ಯಾರ್ಥಿಗಳ ಆಯ್ಕೆಗೆ ಬಿಡಲಾಗುತ್ತದೆ. ದೊಣ್ಣೆವರಸೆ, ಹಗ್ಗದ ವರಸೆ ಮತ್ತು ಮಲ್ಲಕಂಬ ಕಲಿಕೆಗೆ ಶಾಲಾ ಅವಧಿಯಲ್ಲಿ ಒಂದು ತರಗತಿಯನ್ನು ಮೀಸಲಿಡಲು ಚಿಂತಿಸಲಾಗಿದೆ. ಉಳಿದ ಸಾಹಸ ಕಲೆಗಳನ್ನು ಶಾಲಾ ಅವಧಿ ಮುಗಿದ ಬಳಿಕ ಸಂಜೆ 4.30ರಿಂದ 5.30 ಗಂಟೆಯವರೆಗೆ ನಡೆಸಲು ಯೋಚಿಸಲಾಗಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ನಗರದ ಸಾಹಸ ಕಲಾ ಶಿಕ್ಷಣ ಕೇಂದ್ರದ ಸಂಪನ್ಮೂಲ ವ್ಯಕ್ತಿಗಳಿಂದ ವಿದ್ಯಾರ್ಥಿಗಳಿಗೆ ಸಾಹಸ ಕಲೆಯ ತರಗತಿಗಳನ್ನು ಆಯೋಜಿಸಲಾಗುವುದು ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT