ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಚ: ಪ್ರೊ.ಗಣಿಹಾರ ಅಮಾನತು

ಕರ್ನಾಟಕ ವಿಶ್ವವಿದ್ಯಾಲಯ ಸಿಂಡಿಕೇಟ್‌ ಸಭೆಯಲ್ಲಿ ತೀರ್ಮಾನ
Last Updated 3 ಜೂನ್ 2015, 19:30 IST
ಅಕ್ಷರ ಗಾತ್ರ

ಧಾರವಾಡ: ಪಿಎಚ್‌.ಡಿ ಪೂರ್ಣಗೊಳಿಸಿಕೊಡಲು ಲಂಚ ಕೇಳಿದ ಆರೋಪ ಎದುರಿಸುತ್ತಿರುವ ಕರ್ನಾಟಕ ವಿಶ್ವವಿದ್ಯಾಲಯದ ಶಿಕ್ಷಣ ವಿಭಾಗದ ಪ್ರಾಧ್ಯಾಪಕಿ ಪ್ರೊ. ನೂರ್‌ಜಹಾನ್‌ ಗಣಿಹಾರ ಅವರನ್ನು ಬುಧವಾರ ಅಮಾನತು ಮಾಡಲಾಗಿದೆ.

‘ಬುಧವಾರ ಸಿಂಡಿಕೇಟ್‌ ಸಭಾಭವನದಲ್ಲಿ ನಡೆದ ತುರ್ತು ಸಿಂಡಿಕೇಟ್ ಸಭೆಯಲ್ಲಿ ಈ ನಿರ್ಣಯಕ್ಕೆ ಬರಲಾಗಿದ್ದು, ತಕ್ಷಣದಿಂದ ಅಮಾನತು ಆದೇಶ ಜಾರಿಗೊಳಿಸಲಾಗಿದೆ. ಅಮಾನತುಗೊಳಿಸುವ ನಿರ್ಣಯಕ್ಕೆ ಸಿಂಡಿಕೇಟ್‌ ಸದಸ್ಯರಿಂದ ಒಮ್ಮತದ ಅಭಿಪ್ರಾಯ ವ್ಯಕ್ತವಾಯಿತು’ ಎಂದು ಕ.ವಿ.ವಿ ಪ್ರಭಾರ ಕುಲಪತಿ ಪ್ರೊ.ಎಸ್‌.ಎಸ್‌.ಹೂಗಾರ ತಿಳಿಸಿದರು.

‘ಹಿರಿಯ ಪ್ರಾಧ್ಯಾಪಕಿ ಪ್ರೊ. ಗಣಿಹಾರ ಅವರ  ವಿರುದ್ಧ ಕ.ವಿ.ವಿ ಕಾಯ್ದೆಯಡಿ ಆಂತರಿಕ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದು.  ತನಿಖಾ ಸಮಿತಿಗೆ ನಿವೃತ್ತ ಹೈಕೋರ್ಟ್ ಅಥವಾ ಜಿಲ್ಲಾ ನ್ಯಾಯಾಧೀಶರೊಬ್ಬರನ್ನು ನೇಮಕ ಮಾಡುವುದು. ಅವರ ಸಹಾಯಕ್ಕಾಗಿ ಕಾನೂನು ಕೋಶದಿಂದ ವಕೀಲರೊಬ್ಬರನ್ನು ನೇಮಿಸುವುದರ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಹೀಗಾಗಿ ಈ ಏಕವ್ಯಕ್ತಿ ತನಿಖಾ ಸಮಿತಿಗೆ ಆಯ್ಕೆಯ ಜವಾಬ್ದಾರಿಯನ್ನು ನನಗೇ ವಹಿಸಲಾಗಿದೆ’ ಎಂದು ಪ್ರೊ. ಹೂಗಾರ ತಿಳಿಸಿದರು.

ಪ್ರೊ. ಗಣಿಹಾರ ಉತ್ತಮ ಪ್ರಾಧ್ಯಾಪಕಿಯಾಗಿದ್ದು, ಈ ರೀತಿಯ ತಪ್ಪು ಮಾಡಲು ಸಾಧ್ಯವಿಲ್ಲ ಎಂದು ಕೆಲ ವಿದ್ಯಾರ್ಥಿಗಳು ಕುಲಪತಿಗಳಿಗೆ ಲಿಖಿತವಾಗಿ ತಿಳಿಸಿದ್ದಾರೆ. ಇನ್ನೂ ಕೆಲವರು ಈ ಘಟನೆಯಿಂದಾಗಿ ವಿಶ್ವವಿದ್ಯಾಲಯದ ಘನತೆಗೆ ಕುಂದುಂಟಾಗಿದ್ದು, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ವಿದ್ಯಾರ್ಥಿ ಸಂಘಟನೆಗಳ ಮೂಲಕ ಮನವಿ ಮಾಡಿದ್ದನ್ನು ಸಭೆಯಲ್ಲಿ ಚರ್ಚಿಸಲಾಯಿತು ಎಂದು ಮೂಲಗಳು ಹೇಳಿವೆ.

‘ಜತೆಗೆ ಮುಂದಿನ ದಿನಗಳಲ್ಲಿ ಸಂಶೋಧನಾ ಮಾರ್ಗದರ್ಶಕರು ಮತ್ತು ವಿದ್ಯಾರ್ಥಿಗಳ ಮಧ್ಯೆ ಭಿನ್ನಾಭಿಪ್ರಾಯ ಬಂದರೆ ಕೂಡಲೇ ಸೂಕ್ತ ಸಾಕ್ಷ್ಯಾಧಾರಗಳ ಮೂಲಕ ಕುಲಸಚಿವರಿಗೆ ಲಿಖಿತ ದೂರು ಸಲ್ಲಿಸುವುದರ ಕುರಿತಂತೆ ಕೂಡ ಸಭೆಯಲ್ಲಿ ಚರ್ಚೆ ನಡಯಿತು’ ಎಂದು ತಿಳಿದು ಬಂದಿದೆ.

ತನಿಖೆಗೆ ಹಾಜರಾಗಲು ಸೂಚನೆ
ಲಂಚ ಬೇಡಿಕೆ ಕುರಿತು ಲೋಕಾಯುಕ್ತರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದು, ಈಗಾಗಲೇ ಕುಲಸಚಿವರು ಪ್ರೊ.ಗಣಿಹಾರ್‌ ಅವರ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಿದ್ದಾರೆ. ಆದ್ದರಿಂದ ಇದೇ 5 ರಂದು ಲೋಕಾಯುಕ್ತ ಕಚೇರಿಗೆ ವಿಚಾರಣೆಗೆ ಆಗಮಿಸಬೇಕು ಎಂದು ಲೋಕಾಯುಕ್ತ ಪೊಲೀಸರು ನೋಟಿಸ್‌ ಜಾರಿಗೊಳಿಸಿದ್ದಾರೆ.  ನೋಟಿಸ್‌ ಪಡೆಯಲು ಪ್ರೊ. ಗಣಿಹಾರ್‌ ಲಭ್ಯರಾಗದ ಕಾರಣ ವಿಚಾರಣೆಗೆ ಹಾಜರಾಗು ವಂತೆ ವಿ.ವಿ ಕುಲಸಚಿವರ ಮೂಲಕ ನೋಟಿಸ್ ಜಾರಿ ಮಾಡಲಾಗಿದೆ.
****
ಪ್ರೊ.ಗಣಿಹಾರ ಅವರನ್ನು ಅಮಾನತು ಮಾಡಬೇಕೆಂಬುದು ಎಲ್ಲ ಸದಸ್ಯರ ನಿರ್ಣಯವಾಗಿತ್ತು. ಲೋಕಾಯುಕ್ತ ಹಾಗೂ ವಿ.ವಿ.ಯ ತನಿಖಾ ಸಮಿತಿಯಿಂದ ತನಿಖೆ ನಡೆಯಲಿದೆ.
-ಪ್ರೊ. ಎಸ್‌.ಎಸ್.ಹೂಗಾರ, ಪ್ರಭಾರ ಕುಲಪತಿ, ಕರ್ನಾಟಕ ವಿವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT