ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಪಟ ವಾಂಛೆ ಬಿಡುವುದೇ ಪರಿಹಾರ!

ಅಕ್ರಮ ಲಾಟರಿ ದಂಧೆ
Last Updated 29 ಮೇ 2015, 19:30 IST
ಅಕ್ಷರ ಗಾತ್ರ

ಒಂದಂಕಿ ಲಾಟರಿ ನಿಷೇಧ, ಗುಟ್ಕಾ ನಿಷೇಧ, ಬೆಟ್ಟಿಂಗ್‌ ನಿಷೇಧ... ಹೀಗೆ ಒಂದಲ್ಲಾ ಒಂದು ನಿಷೇಧವನ್ನು ಕಾಣುತ್ತಲೇ ಇರುತ್ತೇವೆ.

ಆದರೆ, ಈ ರೀತಿಯ ನಿಷೇಧ ಮಾತ್ರದಿಂದಲೇ ಸ್ವಸ್ಥ ಸಮಾಜವೊಂದನ್ನು ರೂಪಿಸುವುದು ಸಾಧ್ಯವಿಲ್ಲ.

ಸರ್ಕಾರಗಳೇ ಇಂದು ಗೊಂದಲದಲ್ಲಿವೆ; ಜನರನ್ನೂ ಗೊಂದಲಕ್ಕೆ ದೂಡುತ್ತಿವೆ. ಲಾಟರಿಯನ್ನು ಪರಿಚಯಿಸುವುದೂ ಸರ್ಕಾರಗಳೇ, ಅದನ್ನು ನಿಷೇಧಿಸುವುದೂ ಸರ್ಕಾರಗಳೇ. ಇದು ಬಹುತೇಕ ಎಲ್ಲ ರಾಜ್ಯಗಳಿಗೂ ಅನ್ವಯಿಸುತ್ತದೆ. ಇದನ್ನು ಲಾಟರಿಯೊಂದಕ್ಕೇ ಹೋಲಿಸುವ ಬದಲು, ಬಹುತೇಕ ಇಂದಿನ ಅನೇಕ ಹಣ ಗಳಿಸುವ ಅಡ್ಡಮಾರ್ಗಗಳ ವಿಚಾರದಲ್ಲಿ ಹೇಳಬಹುದು. ಸರ್ಕಾರಕ್ಕೇ ಗೊಂದಲವಿದ್ದ ಮೇಲೆ ಜನಸಾಮಾನ್ಯರಿಗೆ ಗೊಂದಲ ಇರುವುದರಲ್ಲಿ ಅಚ್ಚರಿಯೇನಿಲ್ಲ. ಮದ್ಯ ನಿಷೇಧ, ಬೆಟ್ಟಿಂಗ್‌ ನಿಷೇಧ, ವೇಶ್ಯಾವಾಟಿಕೆ, ಜೂಜು, ಸಟ್ಟಾ ಬಾಜಿ– ಇವೆಲ್ಲಕ್ಕೂ ಇದು ಅನ್ವಯಿಸುತ್ತದೆ.

ಈ ಸಮಸ್ಯೆಗೆ ಮುಖ್ಯ ಕಾರಣ, ನಮ್ಮೆಲ್ಲರ ಮನಸ್ಸಿನಲ್ಲಿ ಇರುವ ಹಣ ಮಾಡುವ ಆಸೆ. ಇದು ಲಂಪಟ ವಾಂಛೆ. ಕ್ಷಿಪ್ರ ಮಾರ್ಗದಲ್ಲಿ ಹಣ ಮಾಡಬಹುದು ಎಂಬ ಆಸೆಗೆ ಲಾಟರಿ ಉತ್ತೇಜನ ಕೊಡುತ್ತದೆ. ಆಗ ಲಾಟರಿಯನ್ನು ಕೊಂಡುಕೊಳ್ಳುತ್ತೇವೆ. ಭ್ರಷ್ಟಾಚಾರವೂ ಲಾಟರಿ ಇದ್ದಂತೆಯೇ. ಸರ್ಕಾರಿ ಅಧಿಕಾರಿಯೊಬ್ಬ ತನ್ನ ವೇತನದಿಂದ ಐಷಾರಾಮಿ ಕಾರನ್ನು ಕೊಳ್ಳಲು ಸಾಧ್ಯವಿಲ್ಲ ಎನ್ನುವುದು ಅವನ ಸಹೋದ್ಯೋಗಿಗೂ ತಿಳಿದೇ ಇರುತ್ತದೆ. ಹಾಗೆಂದು, ಅವನಿಗೆ ಕಾರು ಕೊಳ್ಳುವ ಆಸೆ ಇರುವುದಿಲ್ಲವೇ? ಅವನೂ ಭ್ರಷ್ಟಾಚಾರದ ಮೂಲಕ ಕಾರು ಕೊಳ್ಳುತ್ತಾನೆ. ಹೀಗೆ, ಸಾಂಕ್ರಾಮಿಕ ಕಾಯಿಲೆಯಂತೆ ಭ್ರಷ್ಟಾಚಾರ ಬೆಳೆಯುತ್ತದೆ.

ಬೆಟ್ಟಿಂಗ್‌, ಲಾಟರಿ ಇತ್ಯಾದಿ ಸಮಾಜ ಕಂಟಕ ಪದ್ಧತಿಗಳನ್ನು ನಿಷೇಧಿಸಿ ಅದರ ಮೇಲೆ ನಿಗಾ ಇಡಲು ಜಾಗೃತ ದಳವೊಂದನ್ನು ರಚಿಸುತ್ತಾರೆ. ಈ ದಳಗಳ ಮೇಲೆ ನಿಗಾ ಇಡಲು ಮತ್ತೊಂದು ದಳ ರಚಿಸುತ್ತಾರೆ... ಹೀಗೆ ಈ ವಿಷವರ್ತುಲ ಮುಂದುವರಿಯುತ್ತಲೇ ಹೋಗುತ್ತದೆ. ಆದರೆ, ಇದಾವುದೂ ಸ್ವಸ್ಥ ಸಮಾಜ ನಿರ್ಮಿಸುವ ಪರಿಹಾರ ಮಾರ್ಗಗಳಲ್ಲ ಎನ್ನುವುದು ನಮ್ಮ ಸರ್ಕಾರಗಳಿಗೆ ತಿಳಿಯುವುದೇ ಇಲ್ಲ.

ಈ ಸಮಸ್ಯೆಗೆ ಪರಿಹಾರ ನಮ್ಮೆಲ್ಲರ ಮನಸ್ಸಿನಲ್ಲಿ ಮೌಲ್ಯಗಳು, ಆದರ್ಶಗಳು ಮನೆ ಮಾಡುವುದೊಂದೇ ಆಗಿದೆ. ನಮ್ಮ ರಾಜ್ಯ, ನಮ್ಮ ದೇಶ ಎಂಬ ಹೆಮ್ಮೆ ಮನಸ್ಸಿನಲ್ಲಿ ಬರಬೇಕು. ಐಷಾರಾಮಿ ಜೀವನದ ಆಸೆ, ಶೋಕಿಯ ಬದುಕು, ಹಣ ಮಾಡಬೇಕು, ಮಕ್ಕಳು– ಮೊಮ್ಮಕ್ಕಳಿಗೆ ಸೈಟು ಕೊಳ್ಳಬೇಕು ಎಂಬ ಕೊನೆಯೇ ಇಲ್ಲದ ಆಸೆಗಳ ಕಂತೆ ನಾಶವಾಗಬೇಕು. ಆದರೆ, ಇದು ಸುಲಭವಲ್ಲ. ಒಂದರ್ಥದಲ್ಲಿ ಅಸಾಧ್ಯವೇನೋ ಎಂದೂ ಅನ್ನಿಸಿಬಿಡುತ್ತದೆ.

ಕೊಳ್ಳುಬಾಕ, ತಿನ್ನುಬಾಕ ಸಂಸ್ಕೃತಿ ನಮ್ಮಲ್ಲಿ ಸದಾಕಾಲ ಇದ್ದೇ ಇರುತ್ತದೆ. ಹಣ ಗಳಿಸುವುದೇ ತಿನ್ನುವುದಕ್ಕಾಗಿ ಎಂಬ ಸಮರ್ಥನೆಯೂ

ನಮ್ಮಲ್ಲಿ ಅನೇಕರಿಗಿದೆ. ಕಳವು ಪ್ರಕರಣವೊಂದರಲ್ಲಿ ಸಿಕ್ಕಿಬೀಳುವ ಪುಡಿಗಳ್ಳ, ‘ಕುಡಿಯುವುದಕ್ಕಾಗಿಯೇ ಕದ್ದೆ’ ಎಂದು ಹೇಳುತ್ತಾನೆ. ಆತ ಸಣ್ಣಪುಟ್ಟ ಬಾರ್‌ಗಳಲ್ಲಿ ಕುಡಿಯಬಹುದು, ಅಂತರ ರಾಷ್ಟ್ರೀಯ ಮಟ್ಟದ ಕಳ್ಳ ಪಂಚತಾರಾ ಹೋಟೆಲ್‌ಗಳಲ್ಲಿ ಕುಡಿಯಬಹುದು. ಆದರೆ, ಇಬ್ಬರಲ್ಲೂ ಈ ಆಸೆಬುರುಕತನ ಸಾಮಾನ್ಯವಾಗಿ ಇರುತ್ತದೆ ಎಂಬುದನ್ನು ತಳ್ಳಿಹಾಕಲಾದೀತೆ?

ಲಾಟರಿ ನಿಷೇಧಿಸಲು ಎಚ್‌.ಡಿ.ಕುಮಾರಸ್ವಾಮಿ ಹೋರಾಟ ಮಾಡಿದರು, ಮುಖ್ಯಮಂತ್ರಿ ಸಿದ್ದರಾಮಯ್ಯ ನಿಗಾ ಇಡದೇ ಬೆಂಬಲಿಸಿದರು ಎಂದೆಲ್ಲಾ ಯಾರತ್ತಲೂ ಬೆರಳು ತೋರಿಸುವ ಅಗತ್ಯವೇ ಇಲ್ಲ. ಯಾವ ರಾಜಕಾರಣಿಯಿಂದಲೂ ಇಂಥ ವ್ಯವಸ್ಥೆಯನ್ನು ಸರಿಪಡಿಸಲು ಸಾಧ್ಯವಿಲ್ಲ. ನಮ್ಮ ಹೃದಯದಲ್ಲೇ ಒಳ್ಳೆತನ ಬಾರದ ಹೊರತು, ಇದಕ್ಕೆ ಪರಿಹಾರವಿಲ್ಲ. ಕಾಲಾಂತರದಲ್ಲಿ ನಮ್ಮ ಸಮಾಜಕ್ಕೆ ಒಳ್ಳೆಯ ಶಿಕ್ಷಣ ನೀಡಿ, ಮನಃಪರಿವರ್ತನೆ  ಮಾಡಿದರೆ ಬದಲಾವಣೆ ಆಗಬಹುದೇನೋ. ಸಮಾಜದ ಸಾಕ್ಷಿಪ್ರಜ್ಞೆಯನ್ನು ತಿದ್ದುವ ಕೆಲಸವನ್ನು ಮಾಡಿದರೆ, ಸ್ವಸ್ಥ ಸಮಾಜ ನಿರ್ಮಾಣವಾಗಬಹುದು.

(ಲೇಖಕ ಸಮಾಜವಾದಿ ಚಿಂತಕ)
ನಿರೂಪಣೆ: ನೇಸರ ಕಾಡನಕುಪ್ಪೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT