ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಬಾಣಿಲಿಪಿ ಸಂಶೋಧನೆ ಕೇಂದ್ರ ಸ್ಥಾಪನೆ

Last Updated 30 ಜುಲೈ 2015, 9:38 IST
ಅಕ್ಷರ ಗಾತ್ರ

ರಾಯಚೂರು: ವಿದ್ಯೆ ಬಹಳ ಸೌಂದರ್ಯಯುತವಾದುದು, ವಿದ್ಯಾರ್ಥಿಗಳಿಗೆ ಆಡಂಬರದ ಅಗತ್ಯವಿಲ್ಲ. ಆದ್ದರಿಂದ ಯುವ ಸಮುದಾಯದವರು ಶ್ರೀಮಂತಿಕೆಯ ಹಿಂದೆ ಬೀಳಬಾರದು ಪರಿಶ್ರಮದಿಂದ ವಿದ್ಯಾರ್ಜನೆ ಮಾಡಬೇಕು ಎಂದು  ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಲಜಾ ನಾಯಕ ಹೇಳಿದರು.

ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ, ಕೃಷಿ ವಿ.ವಿ. ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ವತಿಯಿಂದ ತಾಂಡಾ ಸಮಾಜದ ನಿರುದ್ಯೋಗ ಯುವಕ/ಯುವತಿಯರಿಗೆ ಆಯೋಜಿಸಿರುವ ಕೌಶಲ್ಯ ಅಭಿವೃದ್ಧಿ 10 ತಿಂಗಳ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಕನಸುಗಳನ್ನು ಸಾಕಾರಗೊಳಿಸಿಕೊಳ್ಳುವಂತಹ ಕಾಲಘಟ್ಟದಲ್ಲಿರುವ ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗಬಾರದು ಎಂದು ಕಿವಿಮಾತು ಹೇಳಿದರು.

10 ತಿಂಗಳ ಈ ತರಬೇತಿ ಬದುಕಿಗೆ ಮಾರ್ಗದರ್ಶನ ನೀಡುತ್ತದೆಯೇ ಹೊರತು ಈ ತರಬೇತಿಯೇ ಬದುಕಲ್ಲ. ತಂದೆ– ತಾಯಿಗಳ ಆಶಯವನ್ನು ಮಕ್ಕಳು ಈಡೇರಿಸಿದಾಗ ಬದುಕು ಸಾರ್ಥಕವಾಗುತ್ತದೆ ಎಂದರು. ಕಾಡು– ಮೇಡುಗಳಲ್ಲಿ ವಾಸಿಸುವ ತಾಂಡಾದವರು ದೇಶಕ್ಕಾಗಿ ಬದುಕಿದವರು. ಈ ಆಶಯದಂತೆ ಎಲ್ಲರಲಿ ಒಂದಾಗಿ ಬದುಕುವುದನ್ನು ಕಲಿಯಬೇಕು ಎಂದ ಅವರು, ಉತ್ತರ ಕರ್ನಾಟಕದ 13 ಜಿಲ್ಲೆಗಳ ಹವಾಮಾನಕ್ಕೆ ಒಗ್ಗುವಂತಹ ಕೃಷಿ ಬೆಳೆ ಬೇಸಾಯ ಕ್ರಮದ ಮಾಹಿತಿಯ ಕೈಪಿಡಿಯನ್ನು ವಿದ್ಯಾರ್ಥಿಗಳಿಗೆ ವಿತರಿಸಿದರು.
ಕೃಷಿ ವಿ.ವಿ ವಿಸ್ತರಣಾ ನಿರ್ದೇಶಕ ಕೆ.ಪಿ.ವಿಶ್ವನಾಥ್‌ ಮಾತನಾಡಿ, ತರಬೇತಿ ಅವಧಿಯಲ್ಲಿ ವಿದ್ಯಾರ್ಥಿಗಳು ಸಮಯವನ್ನು ವ್ಯರ್ಥ ಮಾಡಬಾರದು. ವಿ.ವಿಯಲ್ಲಿನ ವಿವಿಧ ವಿಭಾಗಳಿಗೆ ಭೇಟಿ ನೀಡಿ ಹೆಚ್ಚಿನ ಜ್ಞಾನ ಪಡೆದುಕೊಳ್ಳಬೇಕು ಎಂದರು.

ತರಬೇತಿ ನಂತರ ಉದ್ಯೋಗ ಪಡೆಯುವುದೇ ಗುರಿಯಾಗಬಾರದು ಸ್ವಾವಲಂಬಿಗಳಾಗಿ ಇತರರಿಗೆ ಉದ್ಯೋಗದಾತರಾಗಬೇಕು. ಕಡೆಗಣನೆಗೆ ಒಳಗಾಗುತ್ತಿರುವ ಕೃಷಿ ಕ್ಷೇತ್ರವನ್ನು ಲಾಭದಾಯಕ ಕ್ಷೇತ್ರವನ್ನಾಗಿ ಮಾಡಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.
ಎರಡು ದಿನಗಳ ಹಿಂದೆ ನಿಧನರಾದ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್‌ ಕಲಾಂ ಅವರು ಇದೇ ಸಭಾಂಗಣದಲ್ಲಿ ಎರಡು ವರ್ಷಗಳ ಹಿಂದೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದರು. ಕಲಾಂ ಅವರು ವೈಯಕ್ತಿ ಸುಖ, ಆಶೆಯನ್ನು ಬದಿಗಿಟ್ಟು ದೇಶಕ್ಕಾಗಿ ಬದುಕಿದ ದೊಡ್ಡ ಚೇತನ. ಅವರ ಆದರ್ಶಗಳನ್ನು ಮೈಗೊಡಿಸಿಕೊಳ್ಳಬೇಕು ಎಂದರು.

ಕಲಾಂ ನಿಧನಕ್ಕೆ ಸಂತಾಪ ಸೂಚಿಸಿ ಎರಡು ನಿಮಿಷ ಮೌನಾಚರಣೆಯನ್ನು ಮಾಡಲಾಯಿತು. ಕಾರ್ಯಕ್ರಮದಲ್ಲಿ ತಾಂಡಾ ಅಭಿವೃದ್ಧಿ ನಿಗಮದ ರಾಯಚೂರು ಜಿಲ್ಲೆಯ ಅಧಿಕಾರಿ ಮಹೇಶ್‌ ಉನ್ನಿ, ಈ ತರಬೇತಿ ಕಾರ್ಯಕ್ರಮದ ಸಂಯೋಜಕ ಚಂದ್ರನಾಯಕ್‌ ಇದ್ದರು.

ತಾಂಡಾಗಳ ಜನರನ್ನು ದುಶ್ಚಟಗಳಿಂದ ದೂರು ಮಾಡಲು ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿ ಐದು ಸಿ.ಡಿಗಳ ಮೂಲಕ ಪ್ರಚಾರ ಕಾರ್ಯ ನಡೆಸಲಾಗುತ್ತಿದೆ.  -ಜಲಜಾ ನಾಯಕ, ತಾಂಡಾ ಅಭಿವೃದ್ಧಿ ನಿಮಗದ ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT