ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಲ್‌ಬಾಗ್‌ನ ಬಂಧ ಬಸವನಗುಡಿಯ ಗಂಧ

ನಾ ಕಂಡ ಬೆಂಗಳೂರು
Last Updated 4 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಸಾವು ಎಂದರೆ ಶಾಶ್ವತವಾಗಿ ಕಳೆದುಕೊಳ್ಳುವುದು. ಆದರೆ ಪ್ರೀತಿಪಾತ್ರರೊಂದಿಗೆ ಕಳೆದ ಜಾಗ, ಆ ನೆನಪುಗಳು ಅವರೊಂದಿಗೆ ಇದ್ದಷ್ಟೇ ಖುಷಿ ಕೊಡುತ್ತವೆ. ನೆನಪುಗಳ ಬುತ್ತಿಯನ್ನು ಬಿಚ್ಚಿಡುವ ಲಾಲ್‌ಬಾಗ್‌ ಇದೇ ಕಾರಣಕ್ಕೆ ನನಗೆ ಹೆಚ್ಚು ಆಪ್ತವಾಗುತ್ತದೆ.

ಮಾಧ್ಯಮಿಕ ತರಗತಿಯಲ್ಲಿದ್ದಾಗ ಬೆಂಗಳೂರು ತೋರಿಸುತೀನಿ ಅಂತ ತಾತ ಕರ್ಕೊಂಡು ಬಂದಿದ್ರು. ಆಗಿನ್ನೂ ವಿಧಾನ ಸೌಧವನ್ನು ಕಟ್ಟುತ್ತಿದ್ದರು. ಲಾಲ್‌ಬಾಗ್‌ ನೋಡುವುದು ಎಂದರೆ ದೊಡ್ಡ ಖುಷಿ. ಗಾಜಿನ ಮನೆ, ಅದರ ಪಕ್ಕದಲ್ಲೇ ಎರಡು ಸೈಪ್ರಸ್‌ ಮರಗಳಿದ್ದವು. ಒಂದು ನೇರವಾದ ಮರ. ಇನ್ನೊಂದು ಬಾಗಿದ ಮರ. ಈಗ ಅದು ಇದೆಯೋ ಇಲ್ಲವೋ ಗೊತ್ತಿಲ್ಲ.  ಆ ನೆನಪು ಚಿರಸ್ಥಾಯಿಯಾದ ಛಾಯಾಚಿತ್ರದ ತರಹ ಮನಸ್ಸಲ್ಲಿ ಉಳಿದುಕೊಂಡು ಬಿಟ್ಟಿದೆ.

ಒಂದೇ ಸ್ಥಳಕ್ಕೆ ಹಲವಾರು ಬಾರಿ ಭೇಟಿ ನೀಡುವುದು ಎಂದರೆ ಅಲ್ಲಿ ಹೊಸದೇನೋ ಸಿಗುತ್ತದೆ ಎಂದಲ್ಲ. ಬದಲಾಗಿ ನಮ್ಮ ಅನುಭವದ ಜೊತೆಗಿದ್ದ ಅದೆಷ್ಟೋ ಸನ್ನಿವೇಶಗಳು ನೆನಪಾಗಿ ಹಿಂದಕ್ಕೆ ಜಾರುತ್ತೇವೆ ಎನ್ನುವ ಕಾರಣಕ್ಕಾಗಿ.

ಮದುವೆಯಾದ ಹೊಸತರಲ್ಲಿ ನನ್ನ ಶ್ರೀಮತಿಯವರ ಜೊತೆ ಹನಿಮೂನ್‌ಗೆಂದು ಬೆಂಗಳೂರಿಗೆ ಬಂದಿದ್ದೆ. ಅಗೆಲ್ಲಾ ಹನಿಮೂನ್‌ ಎನ್ನುವ ಪರಿಕಲ್ಪನೆಯೇ ಇರಲಿಲ್ಲ, ಬಿಡಿ. ಹೊಸದಾಗಿ ಮದುವೆ ಆದವರು, ಹೊಸ ಜಾಗಗಳಿಗೆ ಹೋಗಿ ಬರಲಿ ಎಂದು ಕಳುಹಿಸಿಕೊಟ್ಟಿದ್ದರು. ಬೆಂಗಳೂರಿನಲ್ಲಿ ನೆಂಟರೆಲ್ಲಾ ಇದ್ರು. ಜಯನಗರದ ಅತ್ತೆಯ ಮನೆಯಲ್ಲಿ ನಮ್ಮದು ಬಿಡಾರ. ಇಬ್ಬರೂ ಹಳ್ಳಿಯಿಂದ ಬಂದವರು. ಬೆಂಗಳೂರು ಎಂದರೆ ಏನೋ ಅದ್ಭುತ. ಇಲ್ಲಿಯ ನಾಗರಿಕತೆ, ಜನ, ಮಾತುಕತೆ ಎಲ್ಲ ಹೊಸದಾಗಿ ಕಾಣುತ್ತಿತ್ತು.

ಅನೇಕ ಬಾರಿ ನಾವು ಲಾಲ್‌ಬಾಗ್‌ಗೆ ಬರುತ್ತಿದ್ದೆವು. ಅಲ್ಲಿ ಎಲ್ಲೆಲ್ಲಿ ಕುಳಿತ್ವಿ, ಏನು ಮಾತಾಡಿದ್ವಿ ಅದೆಲ್ಲ ಜಾಗಗಳು ನನಗೆ ಇವತ್ತಿಗೂ ಪ್ರಿಯ. ಈಗ ಆಕೆ ನನ್ನ ಜೊತೆ ಇಲ್ಲ. ಏಳೆಂಟು ವರ್ಷ ಆಗ್ಹೋಯ್ತು ಅವಳು ಹೋಗಿ. ಆದರೆ ಅಲ್ಲಿ ಹೋದಾಗಲೆಲ್ಲಾ ಮೊದಲಿನ ದಿನಗಳು ನೆನಪಾಗುತ್ತವೆ. ನಾವು ಹೋಗಿ ಕುಳಿತಲ್ಲೆಲ್ಲಾ ಮತ್ತೆ ಮತ್ತೆ ಹೋಗಿ ಕುಳಿತುಕೊಳ್ಳುತ್ತೇನೆ. ಸಿಗುವುದಿಲ್ಲ ಎಂದು ಗೊತ್ತಿರುತ್ತದೆ. ಆದರೂ ಕಳೆದುಹೋದ ವಸ್ತು ಮತ್ತೆ ಸಿಗಬಹುದೇನೋ ಎನ್ನುವ ಒಂದು ಭ್ರಮೆ ಮನಸ್ಸಿಗೆ ಇರುತ್ತದೆ, ನೋಡಿ.

ಸಾವು ಎನ್ನುವುದು ಶಾಶ್ವತವಾಗಿ ಕಳೆದುಕೊಳ್ಳುವ ಪ್ರಕ್ರಿಯೆಯೇ. ಆದರೂ ಇದ್ದಕ್ಕಿದ್ದ ಹಾಗೆ ಸಿಕ್ಕಬಿಟ್ಟರೆ, ಅಕಸ್ಮಾತ್‌ ನಾನಲ್ಲಿ ಹೋದಾಗ ಕಂಡುಬಿಟ್ಟರೆ? ಇಂಥ ಅನೇಕ ವಿಚಿತ್ರ ಕಲ್ಪನೆಗಳು ಕಾಡುತ್ತವೆ. ಹೃದಯ ಭಾರವಾಗುತ್ತೆ. ಸ್ವಲ್ಪ ಹೊತ್ತಿನ ನಂತರ ಸಮಾಧಾನನೂ ಆಗುತ್ತೆ. ನಾವಿಬ್ಬರೂ ಇದ್ದ ಜಾಗ ಎಂದು ಖುಷಿ ಪಡುತ್ತೇನೆ.

ಕಾರಣವೇ ಇಲ್ಲದೆ ನಾವೆಲ್ಲಾ ಅನೇಕ ಸಾರಿ ಲಾಲ್‌ಬಾಗ್‌ಗೆ ಹೋಗಿದ್ದಿದೆ. ಬೆಳಿಗ್ಗೆಯಿಂದ ಸಂಜೆ ತನಕ ಮಕ್ಕಳನ್ನು  ಆಡಿಸಿಕೊಂಡು ಅಲ್ಲೇ ಕುಳಿತುಕೊಳ್ಳುತ್ತಿದ್ದೆವು. ಊಟವೂ ಅಲ್ಲೆ. ಅನೇಕ ಸಾರಿ ಹಿರಿಯ ಸಾಹಿತಿ ಮಿತ್ರರುಗಳಾದ ವ್ಯಾಸರಾಯ ಬಲ್ಲಾಳ, ನಿಸಾರ್‌ ಅಹಮದ್‌, ಜೀವಿ, ಹಾಡುಗಾರ ಅಶ್ವತ್ಥ ಅವರುಗಳ ಜೊತೆ ಹೋಗುತ್ತಿದ್ದೆ. ಅವರ ಜೊತೆ ಎಷ್ಟೋ ಸಮಯ ಕಳೆಯುತ್ತಿದ್ದೆ.

ಹೀಗೆ ಆ ಸ್ಥಳ ಎಷ್ಟು ಜನರ, ಎಷ್ಟು ನೆನಪುಗಳನ್ನು ಹೊತ್ತುಕೊಂಡಿದೆಯೋ. ಒಂದೇ ಮರ ಇರುತ್ತೆ. ಇಬ್ಬರು ಹೋದಾಗ ಅಲ್ಲಿ ಮರ ಎರಡಾಗುತ್ತದೆ. ಅವರವರ ಕಲ್ಪನೆಗೆ ತಕ್ಕಂತೆ ತೆರೆದುಕೊಳ್ಳುತ್ತದೆ. ಮನಸ್ಸಿನಲ್ಲಿ ಬೆಳೆಯುತ್ತಾ ಹೋಗುತ್ತದೆ. ಪ್ರಪಂಚ ವೃದ್ಧಿಯಾಗುವುದು ಹೀಗೇ ಅಲ್ಲವೇ?

ಲಾಲ್‌ಬಾಗ್‌ನಂತೆಯೇ ನನಗೆ ಹೆಚ್ಚು ಪ್ರಿಯವಾಗುವ ಇನ್ನೊಂದು ಸ್ಥಳ ಎಂದರೆ ದೊಡ್ಡ ಬಸವನ ಗುಡಿ. ನನಗಾಗ ಸುಮಾರು ಆರೇಳು ವರ್ಷವಿರಬಹುದು. ತುಂಬಾ ಹುಷಾರಿರ್ತಿರ್ಲಿಲ್ವಂತೆ. ಅದೇ ಸಂದರ್ಭದಲ್ಲಿ ಅಮ್ಮ ಬೆಂಗಳೂರಿಗೆ ಕರ್ಕೊಂಡು ಬಂದ್ರು. ದೊಡ್ಡ ಬಸವನಗುಡಿ ಹತ್ತಿರದಲ್ಲೇ ನಮ್ಮ ನೆಂಟರ ಮನೆ ಇದ್ದಿದ್ದು. ಸಾಯಂಕಾಲದ ಹೊತ್ತಿಗೆ ನಾನು ತುಂಬಾ ಗಲಾಟೆ ಮಾಡಿದರೆ ಅಮ್ಮ ದೊಡ್ಡ ಬಸವನ ಗುಡಿಗೆ ನನ್ನನ್ನು ಕರೆದುಕೊಂಡು ಬರೋರಂತೆ.

ಅಲ್ಲಿ ನಮಸ್ಕಾರ ಮಾಡಿಸೋದು, ಪ್ರದಕ್ಷಿಣೆ ಹಾಕಿಸೋದು ಎಲ್ಲಾ ಮಾಡಿಸೋರಂತೆ.  ಅಲ್ಲೊಂದು ದೊಡ್ಡ ವಿಗ್ರಹ. ಇನ್ನೇನು ಆಕಾಶ ಮುಟ್ಟಿಬಿಡುತ್ತದೇನೋ ಅನಿಸುತ್ತಿತ್ತು. ಈಗ ನನಗೆ 72 ವರ್ಷ. ಆ ನೆನಪಿನ್ನೂ ಮಸುಕು ಮಸುಕಾಗಿ ನನ್ನ ಸ್ಮೃತಿಯಲ್ಲಿದೆ. ಮತ್ತೆ ಮತ್ತೆ ಬಸವನ ವಿಗ್ರಹದ ಮುಂದೆ ನಿಲ್ಲಬೇಕು, ಅದನ್ನು ನೋಡಬೇಕು ಎನಿಸುತ್ತಲೇ ಇರುತ್ತದೆ. ಯಾವಾಗ ಸಮಯ ಸಿಕ್ಕರೂ ಅಲ್ಲಿಗೆ ಹೋಗಬೇಕೆನಿಸುತ್ತದೆ.

ಆ ಕಾಲದಲ್ಲಿ ವಾಕಿಂಗ್‌ ಪರಿಕಲ್ಪನೆಯೇ ಇರಲಿಲ್ಲ. ನಡೆಯುವುದು ಜೀವನದ ಒಂದು ಭಾಗವಾಗಿತ್ತು. ಇತ್ತೀಚಿನಂತೆ ನಡೆಯುವುದು ಎಂದರೆ ವ್ಯಾಯಾಮವಾಗಿರಲಿಲ್ಲ. ಹೀಗಾಗಿ ನಡೆದು ನಡೆದು ಬಸವನಗುಡಿಯ ಅನೇಕ ಪ್ರದೇಶಗಳು ಆಪ್ತವಾಗಿಬಿಟ್ಟವು. ಅಲ್ಲಿಯ ಇನ್ನೊಂದು ಆಕರ್ಷಣೆ ಎಂದರೆ ಬಸವನಗುಡಿ ಸುತ್ತಲೂ ಆಗುವ ಕಡಲೆಕಾಯಿ ಪರಿಷೆ. ಒಂದು ವರ್ಷವೂ ಪರಿಷೆ ತಪ್ಪಿಸಿಲ್ಲ. ಗ್ರಾಮೀಣ ವಾಸ್ತವ್ಯ ಹಾಗೂ ನಮ್ಮಲ್ಲಿಯ ಹಳ್ಳಿತನವನ್ನು ಜಾಗೃತಗೊಳಿಸುವ ಸ್ಥಳ ಅದು ಎಂಬ ಕಾರಣಕ್ಕೆ ನನಗೆ ತುಂಬ ಇಷ್ಟ. ಮಕ್ಕಳು ಹಾಗೆನೇ. ಚಿಕ್ಕಂದಿನಿಂದ ಕಡಲೆಕಾಯಿ ಪರಿಷೆ ಅಂದರೆ ತುಂಬ ಇಷ್ಟಪಡುತ್ತಾರೆ.

ಆಮೇಲೆ ಸಾಹಿತ್ಯದ ಕಡೆಗೆ ಮನಸು ಅರಳಿದ ಮೇಲೆ ಹಾಗೂ ಮೇಸ್ಟ್ರಾಗಿ ಬೆಂಗಳೂರಿಗೆ ಬಂದಮೇಲೆ ಬಸವನಗುಡಿಗೆ ಬೇರೆಯದೇ ಅರ್ಥ ಬಂತು. ಡಿವಿಜಿ ಅವರಿಗೆ ತುಂಬ ಪ್ರಿಯವಾದ ಜಾಗ ಅದು. ಆಗಿನ್ನೂ ಪಾರ್ಕ್‌ ಆಗಿರಲಿಲ್ಲ. ಮರಗಳು ಅಡ್ಡಾದಿಡ್ಡಿಯಾಗಿ ಬೆಳೆದುಕೊಂಡಿದ್ದವು. ಸಣ್ಣ ಕಾಡಿನ ತರಹ ಇತ್ತು. ಗುಂಡಪ್ಪನವರು ಸಾಯಂಕಾಲದ ಹೊತ್ತು ಅಲ್ಲಿ ಕುಳಿತುಕೊಂಡು ಬೋಂಡಾ, ಕಡ್ಲೆಕಾಯಿ, ಕುರುಕಲು ತಿಂಡಿ ತಿನ್ನುತ್ತಿದ್ದರಂತೆ. ಅಧ್ಯಾತ್ಮ, ರಾಜಕೀಯ, ಸಂಗೀತ ಸೇರಿದಂತೆ ಪಕ್ಕದ ಬೀದಿಯಲ್ಲಿನ ಎಲ್ಲಾ ವಿಷಯಗಳೂ ಅಲ್ಲಿ ಚರ್ಚೆಗೆ ಬರುತ್ತಿದ್ದವಂತೆ. ಹೀಗಾಗಿ ಸಾಹಿತ್ಯದ ಪ್ರೀತಿ ಇರೋರಿಗೆಲ್ಲಾ ಆ ಸ್ಥಳದ ಬಗ್ಗೆ ಮೋಹ. ನಂತರದ ದಿನಗಳಲ್ಲಿ ಅಲ್ಲಿ ಸಂಗೀತ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಶುರುಮಾಡಿದರು.

ಅಲ್ಲದೆ ನಾವು ಕೆಲ ಸ್ನೇಹಿತರು ಬರೆಯುತ್ತಿದ್ದೆವಲ್ಲ. ಅದನ್ನು ಓದಲು ನಮಗೆ ಜಾಗ ಬೇಕಿತ್ತು. ಎಲ್ಲರೂ ಬಸವನಗುಡಿಯ ಸುತ್ತಮುತ್ತಲಲ್ಲೇ ಇದ್ದಿದ್ದರಿಂದ ನಮ್ಮ ಕಥೆ ಕವನಗಳನ್ನು ಓದಲು ದೊಡ್ಡ ಬಸವನ ಗುಡಿ ಪ್ರಿಯ ಸ್ಥಳವಾಯಿತು. ಹೀಗಾಗಿ ಆ ಸ್ಥಳದ ಬಗ್ಗೆ ಅದೇನೋ ಆಕರ್ಷಣೆ ಬೆಳೆದುಬಿಟ್ಟಿದೆ.
*
ಖುಷಿಯೊಂದಿಗೆ ಭಯದ ನೆನಪು
ಬಸವನಗುಡಿಗೆ ಸ್ನೇಹಿತರು ಹಾಗೂ ಕುಟುಂಬದವರೆಲ್ಲಾ ಸೇರಿ ಊಟ ಮಾಡಲು ತೆರಳುವುದು ಮಾಮೂಲಾಗಿತ್ತು. ಹೀಗೇ ಒಂದು ದಿನ ಬೆಳದಿಂಗಳ ಊಟಕ್ಕೆ ಸೇರಿದ್ವಿ. ರಾತ್ರಿ 9.30 ಆಗಿ ಹೋಯ್ತು. ಮಳೆ ತುಂಬಾ ಜೋರಾಗಿ ಸುರಿಯಿತು. ಅದೇ ನೆಪವಾಗಿ ನನ್ನ ಮಗನಿಗೆ ಜ್ವರ, ಕಾಯಿಲೆ ಪ್ರಾರಂಭವಾಯಿತು. ಸುಮಾರು ಆರು ತಿಂಗಳು ಆಸ್ಪತ್ರೆಗೆ ಅಲೆದಾಡಿದ್ದೇವೆ.

ಈಗ ಮಗನಿಗೆ 30 ವರ್ಷ. ಆದರೂ ಆ ಸ್ಥಳಕ್ಕೆ ತೆರಳಿದಾಗಲೆಲ್ಲಾ ಮನಸ್ಸಿಗೆ ಏನೋ ಕಸಿವಿಸಿ. ಅದರಲ್ಲೂ ಸಾಯಂಕಾಲವಾದರೆ ಸಣ್ಣಗೆ ಭಯ ಹುಟ್ಟುತ್ತದೆ. ಖುಷಿಯ ನೆನಪಿನೊಂದಿಗೆ ಇಂಥ ಸಣ್ಣಪುಟ್ಟ ಆತಂಕದ ಸನ್ನಿವೇಶಗಳು ಮನಸ್ಸಿನ ಭಿತ್ತಿಯಲ್ಲಿ ಥಳುಕು ಹಾಕಿಕೊಂಡು ಕಾಡುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT