ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೂಲು ಟ್ರಾವೆಲ್ಸ್

Last Updated 25 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಕಾರ್ಕಳದಿಂದ ಸುಲ್ಕೇರಿಯ ಪೋಸ್ಟಾಫೀಸಿನವರೆಗೂ ಹಬ್ಬಿರುವ ಕಾಡುಗಳು ಈಚೆಗೆ ಇನ್ನೂ ಗಡದ್ದಾಗಿ ಬೆಳೆದು ಡಾಂಬರು ರಸ್ತೆ ಪೂರ್ತಿ ಕಡ್ಡಿ ಪೈಲ್ವಾನನಂತೆ ಕಾಣುತ್ತದೆ. ರೋಡಿನ ಎರಡೂ ಬದಿಗೂ ಎದೆಸೆಟೆದು ನಿಂತಿರುವ ಮರಗಳು, ಬಿದಿರು ಕದಿರಿನ ಕುಟುಂಬಗಳು ತಮ್ಮ ಸಂತಾನ ವೃದ್ಧಿಸಿಕೊಳ್ಳುತ್ತಾ ದಾರಿಗೆ ಚೂರೂ ಬೆಳಕ ಬಿಟ್ಟುಕೊಡದೇ ಮೊದಲೇ ಕಪ್ಪಗಾಗಿದ್ದ ಈ ಟಾರು ರಸ್ತೆ ಮತ್ತೂ ಕಪ್ಪುಸುಂದರನಾಗಿ ಲಕಲಕಿಸಿ ವಿಚಲಿತಗೊಳ್ಳದೇ ಬೆಳೆಯುತ್ತಿದೆ.

ಇವತ್ತು ಹಾಗೇ ನೆಲ್ಲಿಕಾರಿನ ಹರಿಹರಪ್ಪನ ಕೆರೆಯ ತಿರುವಿನಲ್ಲಿ, ಕೊರಳಗಂಟೆ ಅಲ್ಲಾಡಿಸಿಕೊಂಡು ಸುಖಾಸುಮ್ಮನೆ ಬರುತ್ತಿದ್ದ ಕಪ್ಪು ದನ ಮತ್ತಷ್ಟು ಕರ್ರಗಾಗಿ ಕಾಣಲು ಕಾರಣ ಬೇರೇನೂ ಅಲ್ಲ. ಮೇಲೆ ಮೋಡ ಗಾಢ ಮುಸುಕೆಳೆದು ಮಲಗಿದ್ದರಿಂದ ಡಾಂಬರು ರಸ್ತೆ ಮತ್ತಷ್ಟು ಕರ್ರಗಿನ ತಾಳಮೇಳದಲ್ಲಿ ಹೊಳೆಯುತ್ತಿತ್ತು ಅಷ್ಟೆ. ಪಶ್ವಿಮ ಫಟ್ಟದ ತಪ್ಪಲಿನಲ್ಲಿದ್ದ ಪುಟ್ಟಪುಟ್ಟ ಮಣ್ಣಿನ ಮನೆಗಳು, ಶ್ರೀಕಾಂತ ಭಟ್ಟನ ರಬ್ಬರ್ ತೋಟ, ಕುರುಚಲು ಕಾಡುಗಳ ಎದೆಯಂಚಿನ ಇಷ್ಟೇ ಜಾಗದಲ್ಲಿ, ಶೀನುತ್ತಾ ಬಲು ನಾಚಿಕೆಯಿಂದ ಬರುತ್ತಿದ್ದ ಪುಟ್ಟಣ್ಣನ ‘ಎಂ80’ ಇವೆಲ್ಲಾ ಇವತ್ತು ಪಶ್ಚಿಮದ ಗಿರಿಶಿಖರಗಳ ಹಿನ್ನೆಲೆಯಲ್ಲಿ, ಭಯಾನಕವಾಗಿಯೂ ರಮಣೀಯವಾಗಿಯೂ ಕಾಣುತ್ತಿದ್ದವು.

ನಲ್ಲಿಕಾರು, ನಲ್ಲೂರು, ಸುಲ್ಕೇರಿ ಇವೆಲ್ಲ ಆಗಾಗ ತಮ್ಮೊಳಗೆ ತಾವು ಬದಲಾಗುತ್ತಾ, ಕ್ಷಣಕ್ಷಣವೂ ಮಸಲತ್ತು ನಡೆಸುತ್ತಾ, ವಿಕಟ ಅಟ್ಟಹಾಸದಿಂದ ಕೊನರುತ್ತಾ, ಮೊನ್ನೆ ಬಂದ ದಾರಿ ಇದೇನಾ? ಅನ್ನಿಸುವಷ್ಟು ಬದಲಾಗಿ ಶಂಕಾಸ್ಪದವಾಗಿ ಕಂಡರೆ ಸಾಕು ಒಂದು ಕ್ಷಣ ಮೈಗೆ ಜೋಮು ಹಿಡಿಯುತ್ತದೆ. ಹರಿಹರಪ್ಪನ ಕೆರೆಯ ಆಚೀಚೆ ಇರುವ 25 ಎಕರೆ ರಬ್ಬರ್ ಮರಗಳು ತೋಟದ ಮಾಲಿಕನ ವಸ್ತ್ರಸಂಹಿತೆಗೆ ಮರುಳಾಗಿ ಕಂಕುಳಲ್ಲಿ ಏಕಪ್ರಕಾರದ ಪ್ಲಾಸ್ಟಿಕ್ ಬರ್ಮುಡಾ ಸುತ್ತಿಕೊಂಡಂತೆ ಕಂಡು ಸಾಕಷ್ಟು ಮಜವಾಗಿ ತೋರುತ್ತದೆ.

ಈಗ ಮಳೆ ಒಂದೇ ಸಮನೆ ವಿಸಲ್ ಹೊಡೆಯಲು ಶುರು ಮಾಡಿದ್ದರಿಂದ ಇಡೀ ನಲ್ಲೂರು ಬೇರೇನೂ ವಿಧಿಯಿಲ್ಲದೇ, ಬರುವ ಮಳೆರಾಯನನ್ನು ಖುಷಿಯಿಂದ ಆಹ್ವಾನಿಸುತ್ತಿತ್ತು. ಪೋಸ್ಟಾಫೀಸಿನ ಮೆಟ್ಟಿಲಲ್ಲಿ ಹರೆಯದ ಹುಡುಗಿ ಶಾಂತ ಒಮ್ಮೆ ವಾಚು ನೋಡುತ್ತಾ, ಬೆದರಿಸಿ ಬರುವ ಮೋಡದ ಎಡೆಯಲ್ಲಿ ಮಳೆಯ ಹನಿಯೊಂದು ಉದುರಿಬಿದ್ದ ಸೂಚನೆ ಸಿಕ್ಕಂತಾಗಿ ಆಕಾಶ ನೋಡುತ್ತಾ, ತನ್ನ ಚೂಡಿದಾರದ ಶಾಲನ್ನು ತಲೆ ಮೇಲೆ ನೀರು ಜಿನುಗದಂತೆ ಆನಿಸಿ ತಕ್ಷಣಕ್ಕೆ ನಿರ್ಲಿಪ್ತಲಾದಳು. ಪೋಸ್ಟ್‌ಮ್ಯಾನ್ ಭಾಸ್ಕರ ಪೋಸ್ಟ್ ಡಬ್ಬಿಯ ಬೀಗ ತೆಗೆದುದಾಗಲೀ, ಆಚೀಚಿನ ಪೇರಳೆ ಮರವೊಂದರಲ್ಲಿ ಕೂತು ಪಿಕಳಾರ ಹಕ್ಕಿಗಳು ಟುಯ್ಯೋ..ಕುಯ್ಯೋ.. ಪೀಮ್ ಪೀಮ್ ಅಂತ ಆರ್ಕೆಷ್ಟ್ರಾ ಶುರು ಮಾಡಿದುದಾಗಲಿ ಈ ಮೊದ್ದು ಹುಡುಗಿಯ ಪ್ರಜ್ಞೆಯೊಳಗೆ ಚೂರೂ ಗುಸುಗುಸು ಮಾಡಲಿಲ್ಲ.

ಅವಳು ಕಾಣದ ಶೂನ್ಯಗಳ ಕಡೆ ಜಾರಿದ್ದಳು. ಕಾಣದ ಅಲೆಗಳು ಗೋಜಲಾಗಿ ಬಂದು ಕಂಡು ಕಾಣದ ಮತ್ತೊಂದು ದಡಕ್ಕೆ ರಾಚಿ ಮತ್ತೆಲಿಗೋ ಎತ್ತಿ ಬಿಸಾಡಿಬಿಡುತ್ತಿತ್ತು. ಆದರೂ ಅವಳು ಆ ಬೆಳಗ್ಗೆ ಪುಷ್ಕಳ ತಲೆಸ್ನಾನ ಮಾಡಿದುದರಿಂದಲೋ ಏನೋ ಆ ಇಳಿಬಿಟ್ಟ ದಟ್ಟ ಕಾನನದಂತಿದ್ದ ಅವಳ ಕೂದಲಿಗೆ ಒಂದು ಬಗೆಯ ಮಾದಕತೆ ಒಲಿದಿತ್ತು. ಆ ಕೂದಲ ಕಾವಿನಲ್ಲೇ ಅದುವರೆಗೆ ಕೂತು ಸುಖಿಸುತ್ತಿದ್ದ ನೀರ ಬೊಟ್ಟೊಂದು ಅವಳ ಚೂಡಿದಾರದ ಬೆನ್ನಿಗೆ ಹತ್ತುವುದೋ ಬೇಡವೋ ಅಂತ ಯೋಚಿಸಿ ಕೊನೆಗೆ ಆದದ್ದಾಗಲಿ ಎಂದುಕೊಳ್ಳುತ್ತಾ ಚೂಡಿದಾರದ ಬೆನ್ನಲ್ಲಿ ಚಾರಣ ಹೊರಟಿತು.

ಯೋಚನಾ ಸರಣಿಯಲ್ಲಿ ಅಂತರ್ಗತಳಾಗಿದ್ದ ಅವಳಿಗೆ ಇವ್ಯಾವುದೂ ಅರಿವಿಗೆ ಬರಲಿಲ್ಲ. ಅವಳು ಮತ್ತೆ ಮತ್ತೆ ಸುಲ್ಕೇರಿಯ ಕ್ರಾಸನ್ನು ನಿಟ್ಟಿಸುತ್ತಿದ್ದಳು– ಲೂಲು ಟ್ರಾವೆಲ್ಸು ಬರುತ್ತದಾ ಅಂತ. ದೂರದಿಂದ ಎರಡು ದನಗಳು ಬರುತ್ತಿದ್ದುದು ಬಿಟ್ಟರೆ ದಾರಿ ಇನ್ನೂ ಯಾವುದೇ ವಾಹನದ ಪೆಟ್ರೊಲು ವಾಸನೆಯನ್ನು ತಿನ್ನಲು ತಯಾರಾಗಿರಲಿಲ್ಲ. ಶಾಂತ ನಿಜಕ್ಕೂ ನಿರಾಶಳಾದಳು. ಶಾಂತ ಸುಲ್ಕೇರಿ ಕ್ರಾಸಿನಲ್ಲಿ ನಿಂತಿದ್ದು ಪೇಟೆಗೆ ಹೋಗುವುದಕ್ಕಾದರೂ, ಅವಳು ಲೂಲು ಟ್ರಾವೆಲ್ಸಿಗಾಗಿ ಕಾಯುವ ಉದ್ದೇಶ ಅಷ್ಟೇ ಆಗಿರಲಿಲ್ಲ.

ಲೂಲು ಟ್ರಾವೆಲ್ಸಿನ ಡ್ರೈವರ್ ಸುರೇಶನನ್ನು ಕಂಡು ಒಂದಿನಿತಾದರೂ ಮಾತಾಡಬೇಕೆಂಬ ಹವಣಿಕೆಯಿಂದಷ್ಟೇ ಅವಳು ಸುಲ್ಕೇರಿಯ ಕ್ರಾಸಿನಾಚೆ ನೋಡುತ್ತಿದ್ದಳು. ಡ್ರೈವರ್ ಸುರೇಶನ ಜೊತೆ ಹೇಗ್ಯಾಗೋ ಬೆಸೆದ, ಕಂಡು ಕಾಣದ ಏನೋ ಒಂದು ವಿಧದ ಅವ್ಯಕ್ತ ಬಾಂಧವ್ಯ, ಆಹ್ಲಾದಕರ ಭಾವ, ಉದ್ಗಾರಗಳು, ಅವಳನ್ನು ಸ್ವಪ್ನಸಾಮ್ರಾಜ್ಯಕ್ಕೆ ತಲುಪಿಸಿತ್ತು. ಆದರೂ ಈ ವಿಚಿತ್ರ ಬಾಂಧವ್ಯಕ್ಕೆ ತಕ್ಕುದಾದ ವ್ಯಾಖ್ಯಾನ ಕೊಡಲು ಅವಳ ಮನಸ್ಸು ನಿರಾಕರಿಸುತ್ತದೆ.

‘ಇದೇ ಪ್ರೇಮ ಮಾರಾಯ್ತಿ ನಿಂಗೆ ಅವನ ಮೇಲೆ ಲವ್ವು ನೋಡು’ ಅಂತ ಆಂತರ್ಯದಲ್ಲಿ ಅಶರೀರವಾಣಿ ಇವಳ ಹೃದಯವನ್ನು ನಿಲ್ಲಿಸಿ ಹೇಳುವಾಗಲೆಲ್ಲಾ ನಿರ್ಲಿಪ್ತಳಾಗುತ್ತಾಳೆ. ಯಾವುದೋ ಶೂನ್ಯದಲ್ಲೋ ಸಂಭ್ರಮದಲ್ಲೋ ಕನಸುಗಳ ಸಂತೆಯಲ್ಲೋ ಕಾಣುವ ಅನಂತದಲ್ಲೋ ಶಾಂತ ಕಳೆದೇಹೋಗುತ್ತಾಳೆ. ಸುರೇಶನನ್ನು ನೋಡದೇ ಹೋದರೆ, ಚೂರೂ ಮಾತಾಡದೇ ಹೋದರೆ ಅವಳನ್ನು ಗುಡ್ಡ, ಪಾತಾಳ, ಸಿಡಿಲು, ಕಾಡು ಎಲ್ಲವೂ ಚೂರಿ ಹಾಕಿ ಇರಿದ ಹಾಗೆ, ಎಲ್ಲವೂ ತನ್ನನ್ನು ಮಾನಸಿಕ ಅತ್ಯಾಚಾರ ಮಾಡಿದ ಹಾಗನ್ನಿಸಿ ಅಪ್ರತಿಭಳಾಗಿ ಹೋಗುತ್ತಾಳೆ.

ಹೊರಗೆ  ಬೇರೆ ಮಳೆ ಸುಯ್ಯಲು ಮೋಡಗಳು ತಯಾರಾಗಿ ನಿಂತಿದ್ದವು. ಸುಲ್ಕೇರಿಯ ಈ ರೋಗಿಷ್ಟ ರಸ್ತೆಯಲ್ಲಿ ಕೆಸರು ಮಣ್ಣು, ಜಲ್ಲಿಕಲ್ಲುಗಳು, ದನಗಳ ಸೆಗಣಿ, ಅರ್ಧಮೂತಿ ವಾಮನನಂತೆ ಕಾಣುತ್ತಿದ್ದ ಡಾಂಬರಿನ ಗೆಡ್ಡೆ, ಯಾವುದೋ ಖಂಡದಿಂದ ಬಂದಂತಿರುವ ಪಾಪ್ಯುಲರ್ ಬ್ರೆಡ್ಡಿನ ರ್ಯಾಪರ್‌ಗಳು, ಇವೆಲ್ಲಾ ಒಟ್ಟಾಗಿ ಸಂಫಟನೆ ಹೂಡಿ ಅಘೋಷಿತವಾಗಿ ಕೂಗುತ್ತಿದ್ದ ಹಾಗೆ, ಮೋಡಗಳು ಇನ್ನೂ ಕರ್ರಗಾಗಿ ಕ್ಷುದ್ರ ಜೀವಿಯಂತೆ ತೋರುತ್ತಿದ್ದ ಹಾಗೆ, ಯಾವುದೋ ಗರ್ಭದಿಂದ ಕೊಸರಿ ಬರತೊಡಗಿದ್ದ ಗುಡುಗಿನ ನಿರ್ಭಾವುಕ ಕಿರುಚಾಟ, ಇವೆಲ್ಲವುಗಳ ಮಧ್ಯೆ ತನ್ನದೂ ಒಂದು ಪಾಲಿರಲಿ ಅಂತ  ಸಮಾವೇಶಕ್ಕೋ ಸಮ್ಮೇಳನಕ್ಕೋ ಬಿಟ್ಟಿಯಾಗಿ ಹಂಚುತ್ತಿದ್ದ ಚಿತ್ರಾನ್ನ–ಪಾನಕದ ಹಾಗೆ ಕಾಣುತ್ತಿತ್ತು. ಅಪರಿಮಿತವಾಗಿ ಗಾಳಿ ಹೂಕಂರಿಸುತ್ತಲೇ ಇತ್ತು.

ಇವೆಲ್ಲಾ ಸನ್ನಿವೇಶಗಳು ಸುಲ್ಕೇರಿಯ ರಸ್ತೆಗೆ ರುದ್ರ ಭಯಾನಕ ಸ್ಥಿತಿಯನ್ನು ಒದಗಿಸಿದ್ದವು. ಇಡೀ ರಸ್ತೆಯಲ್ಲಿ ಒಬ್ಬಳೇ ಇದ್ದ ಶಾಂತಳಿಗೆ ಗಂಟಲು ಒಣಗಿತು, ಕಾಲ ಶಕ್ತಿ ಉಡುಗಿತು. ಬೆವರೆಲ್ಲಾ ಹರಿದು ಅವಳ ಚೂಡಿದಾರಕ್ಕೆ ಹೊಸ ರೂಪುರೇಖೆಯನ್ನು ಒದಗಿಸಿದ್ದವು. ಸುಲ್ಕೇರಿಯ ಪೋಸ್ಟಾಫೀಸು ರಸ್ತೆಯಿಂದ ಇವತ್ತು ಪೇಟೆ ಕಡೆ ಹೋಗುವವರು ಮತ್ಯಾರೂ ಇರಲಿಲ್ಲ. ಯಾವಾಗಲೂ ಅವೇಳೆಯಲ್ಲೇ ಬರುತ್ತಿದ್ದ ಲೂಲು ಟ್ರಾವೆಲ್ಸಿಗೆ ಇತ್ತೀಚೆಗೆ ಗಂಟೆ ನೋಡುವ ಪರಿಪಾಠವೇ ಮರೆತು ಹೋಗಿತ್ತು.

ಸುಮಾರು ಹತ್ತು ವರ್ಷಗಳಿಂದ ಕಾರ್ಕಳ-ಸುಲ್ಕೇರಿ ಈ ಎರಡೂರಿನ ಆತ್ಮಗಳನ್ನೂ ಬೆಳಗುತ್ತಿರುವ ಲೂಲು ಟ್ರಾವೆಲ್ಸಿನಲ್ಲಿ, ಎರಡೂರಿನ ಕಳ್ಳರೂ ಠಕ್ಕರೂ ಸುಮ್ಮನೆ ಬೇಳೆ ಬೇಯಿಸುವವರು, ಆಚೀಚೆ ಕಾಲೇಜಿನ ಸ್ಟುಡೆಂಟುಗಳೂ, ಇಲ್ಲಿದ್ದುಕೊಂಡು ಇಲ್ಲಿರಲಾಗದೇ ಮತ್ತೆಲ್ಲಿಗೋ ಹೋಗಿಬಿಡುವ ವರ್ಗದವರು, ಯಾರ್ಯಾರದ್ದೋ ತಲೆ ಹೊಡೆಯಲು ಹೋಗುವ ಪಾತಕಿಗಳು, ಸುಲ್ಕೇರಿ ಕಾಡಿನ ಅಮೂಲ್ಯ ಸಂಪತ್ತನ್ನು ತಮ್ಮ ಅಪ್ಪನ ಆಸ್ತಿಯಂತೆ ಲಪಟಾಯಿಸಿ ಕೊಂಡು ಹೋಗಿಬಿಡುವ ದುರುಳರು, ಪೇಪರ್ರುಗಳಲ್ಲಿ ‘ಯುವತಿ ನಾಪತ್ತೆ-ಪ್ರೇಮಪ್ರಕರಣ ಶಂಕೆ’ ಅಂತ ಸುದ್ದಿ ಉಲ್ಬಣಿಸುವ ಹಾಗೆ ಮಾಡುತ್ತಿದ್ದ ಅಪ್ರಾಪ್ತ ಜೋಡಿಗಳು, ಎಲ್ಲರೂ ಬಸ್ಸೊಳಗೆ ಮುಖವಾಡ ಧರಿಸುತ್ತಾ, ಎಲ್ಲಾ ಪ್ರಯಾಣಿಕರಂತಾಗಿ ಹೋಗಿ ಬಸ್ಸು ಇಳಿದ ನಂತರ ತಮ್ಮದೆನ್ನಿಸುವ  ಅಮಾನುಷ ಲೋಕದಲ್ಲಿಗೋ ತಮ್ಮದೆನ್ನಿಸದ ಅನಪೇಕ್ಷಿತ ಪ್ರಪಂಚಕ್ಕೋ ಪ್ರಸನ್ನರಾಗಿಯೋ ಅಪ್ರಸನ್ನರಾಗಿಯೋ ಹೋಗಿಬಿಡುತ್ತಿದ್ದರು. ಇವರನ್ನೆಲ್ಲಾ ಪೊರೆಯುತ್ತಿದ್ದದ್ದು ಲೂಲು ಟ್ರಾವೆಲ್ಸು ಎನ್ನುವ ಅಪ್ರತಿಮ ಮಿನಿಸುಂದರಿ. ಕೆಂಪು ಹೆರಳಿನ, ನೀಳಮೂಗಿನ ಬಿನ್ನಾಣಗಿತ್ತಿ.

ಇಷ್ಟು ಹೊತ್ತಾದರೂ ಬಸ್ಸು ಬರದಿದ್ದುದನ್ನು ನೆನೆದು ಶಾಂತಳ ಕಣ್ಣುಗಳಲ್ಲಿ ತೀವ್ರವಾದ ತಹತಹ ಬೇರೂರಿಯೇ ಇತ್ತು. ಡ್ರೈವರ್ ಸುರೇಶ ಮತ್ತೆ ನೆನಪಾದ ಅವಳಿಗೆ. ಕಳೆದ ನಾಲ್ಕು ದಿನಗಳಿಂದ ಬಸ್ಸು ಇದೇ ದಾರಿಯಾಗಿ ವೇಳೆಯಲ್ಲಿ ಬರುತ್ತಿತ್ತಾದರೂ ಡ್ರೈವರ್ರು ಬೇರೆಯೇ ಇದ್ದ. ಸುರೇಶ ನಾಲ್ಕು ದಿನ ರಜೆ ಹಾಕಿದ್ದುದರಿಂದ ಶಾಂತಳಿಗೆ ತೀವ್ರವಾಗಿ ಅದೇನೋ ಕಳಕೊಂಡ ಭಾವ ಮೂಡದೇ ಇರುತ್ತದಾ? ಇವತ್ತಾದರೂ ಅವನು ಸಿಕ್ಕಾನು...

ಮಾತನಾಡಿಸಿಯಾನು ಅಂತ ಮತ್ತೆ ಬಸ್ಸಿನ ಹಾರ್ನಿಗಾಗಿ ಕಿವಿ ಕೊಟ್ಟಾಗ– ಕೂಗಿದ್ದು ಗುಡುಗು, ಬಂದದ್ದು ಅಮಲುಮಳೆ. ಅಷ್ಟೆ.ಸುಮ್ಮನೆ ಮಳೆ ಬಿದ್ದು ತಣ್ಣಗಾದ ಹಾದಿ ನೋಡಿದಳು, ಬೆಳಗು ಹರಿದಿತ್ತು, ದೂರದ ಪಶ್ಚಿಮದ ತಪ್ಪಲು ಮತ್ತಷ್ಟು ದೊಡ್ಡದಾಗಿ ಭಯನಕವಾಗಿ ಕಾಣುತ್ತಿತ್ತು. ಆ ದಾರಿಯಲ್ಲಿ ಮತ್ತೊಂದು ಹುಳವೂ ಇಲ್ಲವಾದ್ದರಿಂದ ಆ ಏಕಾಕಿತನದಲ್ಲಿ, ಶೂನ್ಯದಲ್ಲಿ, ನಿರೀಕ್ಷೆಗಳಲ್ಲಿ, ಸುರೇಶನ ನೆನಪಲ್ಲಿ, ಏನೇನೋ ಆಲೋಚನೆಗಳು, ಭ್ರಾಂತಿ–ತಲ್ಲಣಗಳಲ್ಲಿ ಬಿದ್ದು ತೊಪ್ಪೆಯಾದಳು.

ಅವಳ ಆಲೋಚನೆ, ಪ್ರಾರ್ಥನೆ, ತಲ್ಲಣ ಎಷ್ಟು ಆಳವಾಗಿತ್ತೆಂದರೆ, ಅವಳು ದಾರಿಯನ್ನು ಮರೆತಳು, ಬಸ್ಸು ಬರದೇ ಇದ್ದುದನ್ನು ಕಂಡು ಏನೇನೋ ಯೋಚಿಸಿದಳು– ಅಫಘಾತ, ಅವನಿಗೇನಾಯ್ತೋ? ಮುಂದೆ ನಂಗೇನಾಗುತ್ತದೋ? ನಾನ್ಯಾಕೆ ಹೀಗೆ? ನಾನೇನು ಮಾಡುತ್ತಿರುವೆ? ಹೀಗೆ ಪ್ರಶ್ನೆಗಳು ಕೊಲ್ಲುತ್ತಿದ್ದವು. ಅಲ್ಲಿ ಆ ಕ್ಷಣ ನೀರವದಲ್ಲಿ ಸೃಷ್ಟಿಯಾಗಿದ್ದ ಅನೂಹ್ಯ ವಾತಾವರಣವೇ ಅವಳನ್ನು ಅರ್ಧ ಭಯದಿಂದ ಸಾಯಿಸಿತ್ತು ಎಂದರೆ ಸುಳ್ಳಾಗದು. ಆಲೋಚನೆಯ ಪಾತಾಳ ಆಳಗಳಲ್ಲಿ ಕಳೆದೇ ಹೋಗಿದ್ದ ಶಾಂತಳಿಗೆ ಮತ್ತೆ ಎಚ್ಚರಾಗಿದ್ದು ಸುಲ್ಕೇರಿ ಕ್ರಾಸಿನಿಂದ ವಾಹನದ ಸದ್ದಾದಾಗ- ‘ಅಬ್ಬಾ ಬಂತಲ್ಲಾ ಲೂಲು ಟ್ರಾವೆಲ್ಸು’ ಅಂತ ‘ಸ್ಟಾಪ್’  ಎನ್ನುವಂತೆ ಕೈ ಬೀಸಿದಳು.

‘ಏನಕ್ಕಾ ಇದೇನು ಸರ್ವಿಸ್ ಬಸ್ಸಲ್ಲ... ಎಲ್ಲಿದ್ದಿ ನೀನು?’
ಲಾರಿ ಡ್ರೈವರ್ ಶಾಂತಳನ್ನು ವಿಚಿತ್ರ ಧಾಟಿಯಲ್ಲಿ ಹೇಳಿ ತುಸು ನಗುತ್ತಾ, ಮತ್ತೆ ಸ್ಟೇರಿಂಗು ಗೇರುಗಳ ಮಧ್ಯೆ ಕಾರ್ಯೊನ್ಮತ್ತನಾದ. ಶಾಂತ ನೀರಸವಾಗಿ ನಡುಗಿದಳು. ಮತ್ತದೇ ಘನಘೋರವಾದ ಯೋಚನೆ, ಭಾವುಕ ಕಲ್ಪನೆ, ಏನೋ ಸಂಭವಿಸಿತು ಅನ್ನುವ ಭ್ರಮೆಯ ಮಳೆ. ಹಾಗೆಯೇ ಯೋಚನೆಯ ಆಳ ಪಾತಾಳಕ್ಕಿಳಿದು ಹೋಗುವಾಗಲೆಲ್ಲಾ ದೂರದಲ್ಲಿ ಮೂಡುತ್ತಿದ್ದ ಸದ್ದನ್ನು ಕೇಳಿದ ಕೂಡಲೇ ಲೂಲು ಟ್ರಾವೆಲ್ಸು ಬಂತೆಂದು ಅನ್ನಿಸುವ ಭ್ರಮೆ, ಸುರೇಶ ಕಂಡಂತಾದ ಎನ್ನುವ ಕಾಣದ ಹಳಹಳಿಕೆ, ಕಾಲ ಮಧ್ಯಾಹ್ನವೋ? ಬೆಳ್ಳಂಬೆಳಗ್ಗೆಯೋ? ಪೇಲವ ಸಾಯಾಂಕಾಲವೋ? ರಾತ್ರಿ ತರಿಸುವ ಮುಸ್ಸಂಜೆಯೋ? ಎಳ್ಳಷ್ಟು ಗೊತ್ತಾಗದ ಹಾಗೆ ಅವಳೂ ಆ ಮೋಡವೂ ಕಳೆದು ಹೋಗಿದ್ದವು.

ಆ ಮಧ್ಯಾಹ್ನದ ನೀರವತೆ, ಶೂನ್ಯ, ತುಸುಮಳೆಯಿಂದ ಎರಡು ಪಕಳೆ ಬಿಸಿಲಿನಿಂದ ವಿಚಿತ್ರವಾಗಿ ಬದಲಾಗುತ್ತಿದ್ದ ಸುಲ್ಕೇರಿಯ ರಸ್ತೆ ಅವಳಿಗೆ ಅಪರಿಚಿತ ಅನ್ನಿಸಲು ಶುರುವಾಯ್ತು. ಈಗ ಬಿಸಿಲೆಲ್ಲಾ ಇಳಿದು ಮೋಡಗಳು ಭಯಂಕರವಾದವು. ಶಾಂತ ನಿಂತೇ ಇದ್ದಳು. ಬರೀ ಆಲೋಚನಾ ಸ್ಥಿತಿಯಲ್ಲಿಯೇ ಇದ್ದುದರಿಂದ ತನ್ನ ಕಾಲ ಶಕ್ತಿ ಊನವಾಗುತ್ತದೆ ಎಂದಾಗಲೀ, ಎಲ್ಲಾದರೂ ಕೂರಬೇಕು ಎನ್ನುವ ಯೋಚನೆಯಾಗಲೀ ಅವಳಿಗೆ ಬರಲೇ ಇಲ್ಲ. ಹೀಗೆ ಯೋಚಿಸುತ್ತಾ ಹೋದಂತೆ ಅವಳಿಗೆ ವಾಸ್ತವವೂ ಅಪರಿಚಿತ ಅನ್ನಿಸೋಕೆ ಶುರುವಾಯ್ತು... ‘ಅಯ್ಯೋ ನಂದು ಬರೀ ಭ್ರಮೆಯಾ? ಲೂಲು ಟ್ರಾವೆಲ್ಸು ಅನ್ನೋದು ನಿಜಕ್ಕೂ ಇದೆಯಾ? ನಂದು ಕನಸಾ? ಸುರೇಶ ಅನ್ನುವ ಹುಡುಗ ನನ್ನ ತೊರೆದೇ ಹೋದನಾ? ಯಾರೂ ಕಾಣದ ಹಾದಿಯಲ್ಲಿ ನಾನ್ಯಾಕೆ ಒಬ್ಬಳೇ ಸಾಯುತ್ತಿದ್ದೇನೆ? ಯಾಕೆ ಅರ್ಥವಾಗದ ಪ್ರಶ್ನೆಗಳು ನನ್ನ ಸಾಯಿಸುತ್ತಿದೆ’ ಅಂತ ಶಾಂತ ವಾಸ್ತವವನ್ನು ಭ್ರಮೆಯನ್ನೂ ಒಟ್ಟಾಗಿ ಜೋಡಿಸಿ ಹೋಗುತ್ತಿದ್ದಂತೆ ಅವಳ ಸ್ಥಿತಿ ಇನ್ನೂ ಜಟಿಲವಾಯ್ತು...

‘ಒಬ್ಬರೇ ಇರೋವಾಗ ಮೂಡುವ ಸೈಕಾಲಜಿಕಲ್ ಇಲ್ಲುಷನ್ ಅಂದರೆ ಇದೇನಾ?’ ಅಂತ ತನ್ನ ಮನಸ್ಸಿಗೇನೋ ರೋಗ ಬಡಿದಿದೆ ಎಂದು ಸಣ್ಣಗೇ ಕೂಗಲು ಆರಂಭಿಸಿದಳು. ಆ ಭಯಾನಕ ಮೌನದಲ್ಲಿ ಅವಳ ಕೂಗು ಅವಳಿಗೇ ಕೇಳಿಸಿ ಇನ್ನೂ ಎರಡು ಕೆ.ಜಿ ಯಷ್ಟೂ ಭಯಂಕರವಾಗಿ ಅನ್ನಿಸಿ ಮತ್ತೂ ಭಯವಾಯ್ತು ಅವಳಿಗೆ. ಕೊನೆಗೆ ಅವಳಿಗೆ ಅವಳೇ ಪ್ರಶ್ನೆಯಾದಳು... ಉತ್ತರವಾದಳು. ಕೊನೆಗೆ ನಿರುತ್ತರಳಾದಳು. ಸುಲ್ಕೇರಿಯ ಹಾದಿಯಲ್ಲಿ ಮೋಡ ಆಕಾಶಕ್ಕೆ ಪೂರ್ತಿ ತೆರೆ ಎಳೆಯೋದಕ್ಕೂ, ಸಹಜವಾಗಿ ಕತ್ತಲಾಗುವುದಕ್ಕೂ ಸರಿ ಹೋಯಿತು.
***

ಮೋಡ ಹಬ್ಬಿ ಜೋರು ಮಳೆ ಸುರಿದದ್ದರಿಂದ ಲೂಲು ಟ್ರಾವೆಲ್ಸಿನ ವೈಫರ್ ಸತತವಾಗಿ ಕನ್ನಡಿಯ ಮೇಲೆ ಹರಿಯುತ್ತಿದ್ದ ನೀರನ್ನು ಪಸಕ್ ಪಿಸಕ್ ಅಂತ ಸೀಳಿ ಚೆಲ್ಲುತ್ತಿತ್ತು. ಅದು ನೀರು ತಿರುಪುವ ಶಬ್ದ ಅದೇ ಮುಸ್ಸಂಜೆಯ ನಿಗೂಢ ಸಂಗೀತದಂತೆ ಭಾಸವಾಗುತ್ತಿತ್ತು ಸೀಟಿನಲ್ಲಿ ಕೂತ ಶ್ಯಾಮನಿಗೆ. ಸಾಯಂಕಾಲದ ಕೊನೆ ಬಸ್ಸಾದ್ದರಿಂದ ಕಾರ್ಕಳ ಪೇಟೆ ಕಡೆಗೆ ಹೋಗುವ ಮಂದಿ ನಾಲ್ಕೈದು ಜನ ಇದ್ದಿರಬಹುದಷ್ಟೇ.

ಅದರಲ್ಲಿ ಒಂದೆರಡು ಕೇಸು ಮಿಯ್ಯಾರಿನ ಸಾಗರ್ ಬಾರಿಗೆ ಹೋಗುವ ಎಣ್ಣೆ ಪಂಡಿತರು. ಅಲ್ಲಿ ಎಣ್ಣೆಶಾಸ್ತ್ರ ಮುಗಿಸಿ ಹೊಂಡದಲ್ಲೋ ಚರಂಡಿಯಲ್ಲೋ ಬಿದ್ದು ರಾತ್ರಿ ಕಳೆದು ಬೆಳಗಾದ ಮೇಲೆ ಮತ್ತೆ ಯಾವುದೋ ಲೋಕದ ಪಾತ್ರಧಾರಿಯಾಗಿ ಬಸ್ಸೇರಿ ಹೋಗಿಬಿಡುತ್ತಿದ್ದರು. ಇವತ್ತೂ ಅಷ್ಟೆ. ಲೂಲು ಟ್ರಾವೆಲ್ಸಿನಲ್ಲಿ ಇದ್ದದ್ದು ಡ್ರೈವರ್ರು ಸೇರಿಸಿ ಬರೀ ನಾಲ್ಕೇ ಜನ. ಒಬ್ಬ ಕಂಡಕ್ಟರ್ ಅಮರಣ್ಣ, ಮತ್ತೊಬ್ಬ ಕಡ್ಡಿನಾಗೇಶ, ಇನ್ನುಳಿದ್ದದ್ದು ಲೂಲು ಟ್ರಾವೆಲ್ಸಿಗೆ ಹೊಸ ಮುಖ– ಕತೆಗಾರ ಶ್ಯಾಮ. ಡ್ರೈವರ್ ಪಕ್ಕದ ಅಡ್ಡ ಸೀಟಿನಲ್ಲಿ ಕೂತಿದ್ದ ಶ್ಯಾಮನ ಹರೆಯದ ಮೀಸೆ ನೀಟಾಗಿ ಬಸ್ಸಿನ ಲೈಟುಗಳ ಮಧ್ಯೆ ಮಿಂಚುತ್ತಿತ್ತು.

ಅವನು ಅಮರಣ್ಣನ ಚೊಚ್ಚಲ ಪರಿಚಯ ಮಾಡಿಕೊಳ್ಳುತ್ತಾ ತನ್ನ ಇತ್ಯೋಪರಿ ವಿವರಿಸುತ್ತಿದ್ದ. ಈ ನಾಲ್ಕು ಮಂದಿಯನ್ನೂ ಒಡಲಲ್ಲಿರಿಸಿಕೊಂಡು 70 ಕಿ.ಮೀ ವೇಗದಲ್ಲಿ ಸಾಗುತ್ತಿದ್ದ ಲೂಲು ಟ್ರಾವೆಲ್ಸು ಮಳೆಯ ಜೊತೆ ಗುದ್ದಾಡಿಕೊಂಡು ಯಾವುದೋ ನಿಗೂಢತೆಯ ನಿಧಿಯನ್ನು ಭೇದಿಸಹೊರಟ ಅಗೋಚರ ಶಕ್ತಿಯಂತೆ ಸಾಗುತ್ತಿತ್ತು. ಆ ರಸ್ತೆಯನ್ನೇ ನಿಟ್ಟಿಸುತ್ತಾ ಡ್ರೈವರ್ ಸುರೇಶ ಶಾಂತಳನ್ನು ನೆನೆಪಿಸಿಕೊಳ್ಳುತ್ತಿದ್ದ.

ತಾನು ಡ್ರೈವು ಮಾಡುತ್ತಿದ್ದಾಗ ಅವಳ ಜೊತೆ ಕಳೆದ ಮಾತು, ಅವಳ ಮುಖದಲ್ಲಿದ್ದ ಅರ್ಥವಾಗದ ನೆರಳು, ಕೆಲವೊಮ್ಮೆ ಚೂರೂ ಅರಿವಿಗೇ ಬರದೇ ಹೋಗುತ್ತಿದ್ದ ಅವಳ ರಹಸ್ಯನಡೆ, ತಾನು ಬೇಜಾರಾಗಿದ್ದಾಗ ‘ಏನ್ ಇವತ್ತು ಭಾರೀ ಬೇಜಾರಲ್ಲಿದ್ದಿಯಾ?’ ಅಂತ ನಿರುಮ್ಮಳಳಾಗಿ ಕೇಳುತ್ತಿದ್ದ ಅವಳ ಮಾತಿನ ವೈಖರಿ, ಹೆಸರೇ ಗೊತ್ತಿಲ್ಲದ ಆಂತರ್ಯದ ಊರಲ್ಲಿ ಅವಳು ಲಗತ್ತಿಸಿದ ಹೆಜ್ಜೆ, ಎಲ್ಲವೂ ನೆನೆದಾಗ ಸುರೇಶನಿಗೆ ಒಂದು ನಮೂನೆಯಾಯಿತು.                                       

ತನ್ನ ಅಕ್ಕನೋ? ತಂಗಿಯೋ? ಗೆಳತಿಯೋ? ಪ್ರೇಯಸಿಯಂತೆಯೋ? ಅನ್ನಿಸುತ್ತಿದ್ದಾಗ ಸುರೇಶ ಅವ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಅವಳ ಸ್ವಚ್ಛಂದ ಮಾತನ್ನಷ್ಟೇ ಹೀರಿ ಪುಳಕಗೊಳ್ಳುತ್ತಿದ್ದ. ತಾನು ಏನಾದರೂ ಜಾಸ್ತಿ ಸಲುಗೆ ಬೆಳೆಸಿಕೊಂಡು ಅವಳು ಅದನ್ನೇನೋ ತಿಳಕೊಂಡು ಏನಾದರೂ ಮಾಡಿಕೊಂಡರೆ ಏನು ಗತಿ? ಪಾಪದ ಹುಡುಗಿ, ಇನ್ನೂ ಬೆಳೆಯಬೇಕು, ಬೆಳೆಯಲಿ. ಅವಳ ಪ್ರಾಯವೇ ಹಾಗೆ, ಎಲ್ಲವೂ ಚಂದವಾಗೇ ಕಾಣುತ್ತದೆ.

ಕಂಡಿದ್ದು ಸಿಗದಿದ್ದರೆ ಈ ಬದುಕಲ್ಲಿ ಏನೂ ಇಲ್ಲ ಅಂತ ಎಲ್ಲಿಗೋ ಹೋಗಿಬಿಡುವ ಪ್ರಾಯ... ಅಂತ ಸುರೇಶ ಚಿಂತಕನಂತೆ ತನ್ನಲ್ಲೇ ಅದೆಷ್ಟು ಸಲ ಹೇಳಿಕೊಂಡಿದ್ದಾನೋ ಅವನಿಗೆ ನೆನಪಿಲ್ಲ. ತನ್ನ ಕೆಲ ಆಪ್ತಚಾಲಕರು ಇಂತಹ ಹುಡುಗಿಯರನ್ನೂ ಸುಮ್ಮಸುಮ್ಮನೆ ಛೇಡಿಸುತ್ತಾ, ಲವ್ವು ಗಿವ್ವು ಅಂತೆಲ್ಲಾ ಉಗುಳುತ್ತಾ, ಇನ್ನೂ ಪ್ರಾಯಕ್ಕೆ ಬರದ, ಹಸಿಬಳ್ಳಿಗಳಂತಿರೋ ಹುಡುಗಿಯರನ್ನೂ, ಆ ಕ್ಷಣದ ಮೋಹ ಜಾಲದಲ್ಲಿ ಬಿದ್ದು, ಜೀವನ ಪೂರ್ತಿ ವ್ಯಥೆ ಪಡುವ ಪಾತರಗಿತ್ತಿಗಳನ್ನೂ ಹಾರಿಸಿಕೊಂಡು ಹೋಗಿದ್ದನ್ನು, ಕೊನೆಗೆ ಅವನು ಅವಳಿಗೆ ಡೈವೋರ್ಸು ಕೊಟ್ಟು- ‘ಹುಡುಗಿಯೇ ಮನೆಬಿಟ್ಟು ತೊಲಗು’ ಅಂತ ಬಾಣಲೆಗೆ ದೋಸೆಹಿಟ್ಟು ಹಾಕಿದಂತೆ ಹೇಳಿದುದನ್ನು ಸುರೇಶ ಅದೆಷ್ಟು ಸಲ ನೋಡಿಲ್ಲ.

ಮಿಲನ್ ಟ್ರಾವೆಲ್ಸಿನ ಸತ್ತಾರ್ ಆಲಿ ಅನ್ನುವ ಡ್ರೈವರ್ರು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಹುಡುಗಿಯನ್ನೂ ಹಾರಿಸಿಕೊಂಡು ಹೋಗಿ ಕೊನೆಗೆ ‘ಹೋಗು ಸಾಯಿ ಅತ್ಲಾಗೆ’ ಅಂತ ಓಡಿಸಿ ಕೊನೆಗೆ ಆ ಹುಡುಗಿ ಆತ್ಮಹತ್ಯೆ ಮಾಡಿಕೊಂಡಿದ್ದು– ‘ನಾನು ಆ ಡ್ರೈವರ್ ಜೊತೆನೇ ಮದುವೆಯಾಗೋದು’ ಅಂತ ಅಮ್ಮ ಅಪ್ಪನಿಗೆಲ್ಲಾ ನಮಸ್ಕಾರ ಹಾಕಿದ ಹುಡುಗಿಗೆ ಆ ಡ್ರೈವರ್ರು ಕೈಕೊಟ್ಟಿದ್ದು ನೆನೆದರೆ ಸುರೇಶನಿಗೆ ಇಂತಹ ಹಾಳು ಪಿಶಾಚಿಗಳ ಬಗ್ಗೆ ಜಿಗುಪ್ಸೆ ಮೂಡುತ್ತದೆ.

ಈಗಲೂ ಅಷ್ಟೇ, ಸುರೇಶ ಏನೋ ಗಹನವಾಗಿ ಚಿಂತಿಸುತ್ತಿದ್ದ. ಪಾಪ ಶಾಂತಳ ಬಗ್ಗೆ ನೆನೆದರೆ ಅವಳು ತನ್ನ ಬಗ್ಗೆ ಏನಾದರೂ ಕನಸು ಕಟ್ಟಿಕೊಂಡಿದ್ದಾಳೋ ಏನೋ? ಯೋಚಿಸಿ ಏನಾದರೂ ಮಾಡಿಕೊಂಡರೆ? ಈ ಅರಳದ ಮೊಗ್ಗುಗಳನ್ನು ನಂಬುವುದು ಹೇಗೆ? ಅಂತೆಲ್ಲಾ ಪ್ರಶ್ನೆಗಳು ಬಸ್ಸಿನ ವೈಫರ್ರಿನ ಎದುರೇ ಉದ್ಭವಿಸಿ ನೀರಿನೊಡನೆ ತೊಯ್ದವು. ಇವನೊಳಗೆ ಹೀಗೊಂದು ಆಲೋಚನಾ ಲಹರಿ ಸಾಗುತ್ತಿದ್ದರೆ ಹೊರಗೆ ಬಸ್ಸು ಒಂದೇ ಲಯದಲ್ಲಿ, ಅರೆನಗ್ನ ರಸ್ತೆ ಕಟ್ಟಿಕೊಡುವ  ಶ್ರುತಿಯಲ್ಲಿಯೇ ಸಾಗುತ್ತಿತ್ತು.

ಅಮರಣ್ಣನ ಪಕ್ಕ ಕೂತು ಡ್ರೈವರ್ ಸುರೇಶನನ್ನೇ ಏಕಚಿತ್ತದಿಂದ ನೋಡುತ್ತಿದ್ದ ಕತೆಗಾರ ಶ್ಯಾಮನಿಗೆ ‘ನನ್ನ ಕತೆಗೆ ಇವನಲ್ಲೇನೋ ಸಿಗುತ್ತದೆ, ಇವನ ಒಳಗೆ ಅಸದೃಶ ಚಟುವಟಿಕೆಯೇನೋ ಜರುಗುತ್ತಿದೆ, ಹೇಗಾದರೂ ತಡಕಾಡಬೇಕು ಇವನೊಳಗಿರುವ ಕತೆಯನ್ನು, ಸಿಗದಿದ್ದರೆ ಏನಾದರೂ ಸೃಷ್ಠಿಮಾಡಬೇಕು.

ಆದರೂ ಸೃಷ್ಟಿಕ್ರಿಯೆ ಅಷ್ಟು ಸುಲಭವಲ್ಲ ತಾನೇ?’ ಅಂತೆಲ್ಲಾ ಸುರೇಶನ ಮುಖದ ಮೇಲೆಯೇ ಜರುಗುತ್ತಿದ್ದ ಎಳೆಗಳನ್ನು ಶ್ಯಾಮ ಕೊಂಚ ಕೊಂಚವೇ ನೋಡಿದ. ತನ್ನೊಳಗೆ ಇನ್ನೇನು ಹುಟ್ಟುವ ಕತೆಯ ಸೂರ್ಯನಿಗಾಗಿ ಹಂಬಲಿಸಿದ. ಸುರೇಶ ಶಾಂತಳ ಬಗ್ಗೆ ಯೋಚಿಸುತ್ತಾ ಪಾಪ ಹುಡುಗಿ ಏನಾದರೂ ಮಾಡಿಕೊಂಡಳಾ? ಅಂತ ಭಯ ಬಿದ್ದ. ಶ್ಯಾಮ ಕತೆಯ ಬಗ್ಗೆಯೇ ಚಿಂತಿಸುತ್ತಿದ್ದ. ಮಳೆಯ ಸುರಂಗದ ನಡುವೆ ದಾರಿಮಾಡಿಕೊಳ್ಳುತ್ತಾ ಬಸ್ಸು ಸಾಗಿತು. ಆ ಮಳೆಗೆ ಲೂಲು ಟ್ರಾವೆಲ್ಸು ಸೀನುತ್ತಾ ತನ್ನ ಎಂದಿನ ವೈಖರಿಯಲ್ಲೇ ನಿರಾಯಾಸವಾಗಿ ಸಾಗುತ್ತಿತ್ತು.
***

‘ಸಾವು ಇವ್ರದ್ದು ಒಂದೆರಡು ನಿಮಿಷಾ ಲೇಟಾದ್ರೆ ಖಂಡಾಪಟ್ಟೆ ಬಯ್ತಾರೆ, ಎಲ್ಲರ್ನೂ ಹತ್ತಿಸ್ಬೇಡ್ವಾ? ಏನಾದ್ರೂ ಹೆಚ್ಚುಕಮ್ಮಿ ಆಗಿ ಪ್ರಾಯದವರು ಬಿದ್ರೆ ಇವನಪ್ಪ ಬರ್ತಾನಾ ನೋಡ್ಲಿಕ್ಕೆ?’– ಕಂಡಕ್ಟರ್ ಅಮರಣ್ಣ ಬಸ್ ಸ್ಟಾಪಿನಲ್ಲಿ ಟೈಮು ಟೈಮೆಂದು ಉರಿಬೀಳುವ ಟೈಮು ಕೀಪರ್ರುಗಳ ಮೇಲಿರೋ ಆಕ್ರೋಶವನ್ನು ಹೊರಹಾಕುತ್ತಿದ್ದ. ಸುರೇಶ ತನ್ನ ಸ್ವಂತದ ಆಲೋಚನೆಯಲ್ಲಿದ್ದ.

ಅಮರಣ್ಣ ಅವನತ್ತ ತಿರುಗಿ ‘ನಿಂಗೇಂತ ಮಾರಾಯಾ? ನಾಳೆಯಿಂದ ಬೇರೆ ಡ್ರೈವರ್ರು... ನೀನೆಲ್ಲೋ ಹೋಗ್ತಿ... ಆನಂತ್ರ ನಾನೇ ಅಲ್ವಾ ಸಾಯೋದು’. ಅಮರಣ್ಣ ಹೇಳಿದ್ದು ನೋಡಿ ಸುರೇಶನಿಗೆ, ‘ಇವತ್ತು ಈ ಬಸ್ಸಿಗೆ ನನ್ನ ಕೊನೆ ಸೇವೆ. ನಾಳೆಯಿಂದ ಯಾರೋ ಬರ್ತಾರೆ ಈ ಸೀಟಿಗೆ’ ಅಂತ ನೆನಪಾಯಿತು. ಅವನು ಯಾವತ್ತಿನ ನಾಳೆಗಳನ್ನು ನಿರೀಕ್ಷಿಸಿಕೊಂಡೇ ಬಸ್ಸು ಓಡಿಸುತ್ತಿದ್ದ. ಈಗ ನಾಳೆಗಳ ಬಗ್ಗೆ ಚಿಂತೆ ಹತ್ತಿತು. ಮುಂದಿನ ಕ್ಷಣ ಹೇಗಿರಬಹುದೆಂದು ಯೋಚಿಸಿದ. ಗಾಡಿ ಮುಂದೆ ಹೋಗುತ್ತಿದ್ದ ಹಾಗೆ ಶಾಂತಳ ನೆನಪಾಯ್ತು... ಮನಸ್ಸಿಗೆ ಏನೇನೋ ವೇದನೆಯಾಯ್ತು.

ಯಾಕೆಂದು ಗೊತ್ತಾಗಲ್ಲಿಲ್ಲ ಸುರೇಶನಿಗೆ. ಆಕೆ ಎಲ್ಲಾದರೂ ಸಿಗಬಹುದು ಅಂತ ಕಿಟಕಿಯಿಂದ ಹೊರಗೆ ನೋಡಿದ, ಕತ್ತಲಲ್ಲಿ ಒಂದು ಜಂತುಹುಳವೂ ಕಾಣಲಿಲ್ಲ ಅವನಿಗೆ. ಶ್ಯಾಮನ ಎದೆಯಾಳದ ಚಿಪ್ಪಲ್ಲಿ ಕತೆಯ ಮಗು ಆಗಲೇ ಜನಿಸಿತ್ತು. ಅವನ ಕಲ್ಪನೆಯ ತೀಕ್ಣತೆಗೋ ಅಥವಾ ಅವನು ಸುರೇಶನ ಮುಖದ ಮೇಲಿನ ಕುರುಹುಗಳನ್ನು ಅರ್ಥಮಾಡಿಕೊಂಡಿದ್ದರ ಪರಿಣಾಮವೋ? ಅವನು ಸೃಷ್ಠಿಸಿದ್ದ ಕತೆಯಲ್ಲಿ ಶಾಂತಳಂತೆಯೇ ಇರುವ ಒಬ್ಬಳು ಹುಡುಗಿ ಸುರೇಶನಿಗಾಗಿ ಮುಂದಿನ ಊರಿನಲ್ಲಿ ಕಾಯುತ್ತಾ ಕೂತಿದ್ದಳು.

ನಾಳೆಯಿಂದ ಈ ಬಸ್ಸಿನ ಬಂಧದಿಂದಲೂ, ತಿರುವುಮುರುವುಗಳ ಆತ್ಮೀಯತೆಯಿಂದಲೂ ಕಳಚಿಕೊಳ್ಳುವಾಗಿನ ಭಯ, ಬೇಸರ ಅಸಹನೆ, ಇವೆಲ್ಲವೂ ಶ್ಯಾಮ ಸೃಷ್ಟಿಸಿದ ಸುರೇಶನ ಕತೆಯಲ್ಲಿ ಒಂದಾಗಿ ಕೂತಿದ್ದವು. ಆದರೆ ಹುಟ್ಟಿದ ಕಥೆಗೆ ಪೂರ್ಣತೆ ಸಿಗದೇ ಅದಕ್ಕಾಗಿಯೇ ಒದ್ದಾಡುತ್ತಿದ್ದ ಶ್ಯಾಮ.

ಸುರೇಶ ಶಾಂತಳ ಕುರಿತು ಮತ್ತೆ ಮತ್ತೆ ಚಿಂತಿಸುತ್ತಾ ಅವಳೆಲ್ಲಿದ್ದಾಳೋ ಪಾಪ, ನಾನು ಸಿಗಲಿಲ್ಲ ಅಂತ ಏನಾದರೂ ಮಾಡಿಕೊಂಡರೆ? ಮತ್ತೆ ಹುಡುಗಿ ನಿಗೂಢ ನಾಪತ್ತೆ-ಪ್ರೇಮ ಪ್ರಕರಣ ಶಂಕೆ ಅಂತ ಏನಾದರೂ ಸುದ್ದಿ ಆಗಿಬಿಟ್ಟರೆ? ಛೇ ಹಾಗೇನು ಆಗಲಿಕ್ಕಿಲ್ಲ ಎಲ್ಲಾ ಭ್ರಮೆ! ಅಂತ ಸುರೇಶ ತನ್ನೊಳಗೆ ಒಂದು ಸಮಾಧಾನದ ನಿಟ್ಟುಸಿರು ಬಿಟ್ಟ.

ಸುರೇಶ ಒಂದೇ ಸಮನೇ ಡ್ರೈವು ಮಾಡುತ್ತಿದ್ದರೂ ಅವನೊಳಗೆ ಒಂದು ಪರಿಯ ಆವೇಶದಲ್ಲಿ ಕತೆ ಜರುಗುತ್ತಿತ್ತು. ಶಾಂತಳಿಗಾಗಿ ಹುಡುಕುತ್ತಿದ್ದ ಸುರೇಶನಿಗೆ ಅವಳೂ ತನ್ನನ್ನೂ ಹುಡುಕುತ್ತಿರಬಹುದಾ? ಎನ್ನುವ ಗೋಜಲು ಗೋಜಲಾದ ಪ್ರಶ್ನೆ ಹುಟ್ಟಿ ಒಂದು ಅಸಹಜ ನಿಲುವಿನೊಂದಿಗೆ ಕಳವಳ ಶುರುವಾಯ್ತು. ಉತ್ತರವಿರಲಿಲ್ಲ, ಆದರೆ ಶ್ಯಾಮನ ಕತೆಯಲ್ಲಿ ಇದಕ್ಕೆ ಉತ್ತರವಿತ್ತು. ಆದರೆ ಅದು ಅವನಿಗೆ ಬರೀ ಕಲ್ಪನೆಯಷ್ಟೆ. ಆದರೂ ಅವನು ವಾಸ್ತವವನ್ನು ಗೆದ್ದಿದ್ದ ಅನ್ನುವುದು ನಿಜವೇ ಆಗಿತ್ತು.

ಹೊರಗೆ ಮಳೆ ಆಗಾಗ ರಗಳೆ ಮಾಡುತ್ತಿದ್ದರೂ, ಸುಲ್ಕೇರಿಯ ಹಾದಿ ಹತ್ತಿರಾಗುವ ವೇಳೆಗೆ ಒಂದೆರಡು ಮಿಣುಕು, ಅಸ್ಪಷ್ಟ ಬೆಳಕು, ಊರಿನ ಅಸ್ತಿತ್ವ ತೋರಿಸುತ್ತಿತ್ತು. ಅದುವರೆಗೆ ಜೋಮು ಹಿಡಿದಂತಿದ್ದ ರಸ್ತೆಗೆ ಲೂಲು ಟ್ರಾವೆಲ್ಸಿನ ಹೆಡ್‌ಲೈಟಿನ ತೀಕ್ಷ್ಣ ಬೆಳಕು ಚೆಲ್ಲಿ ಅವು ಮರುಹುಟ್ಟು ಪಡೆದವರಾಗೇ ಎಚ್ಚೆತ್ತು ಕೂತವು. ಸುಲ್ಕೇರಿಯ ಪೋಸ್ಟಾಫೀಸನ್ನು ಕತ್ತಲಲ್ಲಿ ನಿರುಕಿಸಿದಾಗ ‘ಇಲ್ಲೇ ಅಲ್ವಾ? ಆ ತಂಗಿಯಂಥ ಹುಡುಗಿ ಸಿಕ್ಕಿದ್ದು’ ಅಂತ ಯೋಚನೆಯ ಕೆದಕುತ್ತಾ ಪುಟ್ಟಮಗು ಕಿಟಕಿಯಿಂದ ಜಗತ್ತನ್ನು ಸೋಜಿಗದಿಂದ ನೋಡುವಂತೆ ಸುರೇಶನ ಕಣ್ಣು ಕಿಟಕಿಯಿಂದ ಶಾಂತಳನ್ನು ಅವ್ಯಕ್ತ ಕಳವಳದಿಂದ ಹುಡುಕುತ್ತಿತ್ತು.

ಆ ರಾತ್ರಿಯಲ್ಲಿ ಒಂದೆರಡು ನಾಯಿಗಳು ಸುಲ್ಕೇರಿಯ ಪೋಸ್ಟಾಫೀಸಿನ ಮೆಟ್ಟಿಲಲ್ಲಿ ಕೂತು ಗೊರಕೆ ಹೋಡೆಯುತ್ತಿದ್ದವೇ ವಿನಃ ಬೇರೇನೂ ಕಾಣಲಿಲ್ಲ ಅವನಿಗೆ. ಅವಳನ್ನು ಹಿಂದೆ ಇಲ್ಲೇ ಎಲ್ಲೋ ನೋಡಿದಂತ ನೆನಪು ಭಾಸವಾಗಿ ಅವನು ಮತ್ತೆ ಮತ್ತೆ ಹುಡುಕಿದ. ಸುಲ್ಕೇರಿಯ ಯಾವನೋ ಪುಣ್ಯಾತ್ಮ ಬಸ್ಸು ಹತ್ತಿದ. ಸುರೇಶ ಹಾರ್ನು ಅದ್ದಿದ. ಮತ್ತಿನ್ಯಾರೂ ಬರಲಿಲ್ಲ. ಶಾಂತಳೂ...

ನಿರಾಶೆ ಸುರೇಶನ ಆಳದಲ್ಲಿ ಹೊಕ್ಕಿತ್ತು... ಏನೋ ಅಸಹಜ ನಿಗೂಢಮಯ ಭಾವ, ಮೂಕ ಪ್ರಾರ್ಥನೆ, ಚಡಪಡಿಕೆ, ಮತ್ತೊಂದು ಮಗದೊಂದು ಎಲ್ಲವೂ ಸೇರಿ ಒಂದು ಬೃಹತ್ ಶೂನ್ಯವೇ ಆಗಿಹೋದ.

‘ನಿನ್ ಮಾಮ ಬರ್ತಾನಾ ಬೇಗ ಹೋಗು ಮಾರಾಯಾ? ಬೇಗ’.
ಕಂಡಕ್ಟರ್ ಕಿರುಚಿದ್ದು ಸುರೇಶನ ಅಸ್ಪಷ್ಟ ಮನಸ್ಥಿತಿಗೆ ಅಷ್ಟೇನೂ ನಾಟದೇ ಹೋದರೂ ಬಸ್ಸು ವೇಗವಾಗೇ ಮುಂದೆ ಹೊರಟಿತು. ಶಾಂತ ಬರಲಿಲ್ಲ. ಶ್ಯಾಮ ಎಲ್ಲಾ ಸನ್ನಿವೇಶಗಳನ್ನು ಅಚ್ಚು ಹಾಕುತ್ತಲೇ ಹೋದ. ಅವನ ಕತೆಯ ಪ್ರಕಾರ ಸುರೇಶನ ಹುಡುಗಿ ಎಲ್ಲೋ ಅವನಿಗಾಗಿ ಕಾಯುತ್ತಾ ಕೂತು ಮಳೆ ಹಿಡಿದಿದ್ದಳು. ಇಳಿಜಾರಿನಲ್ಲಿ ಹೂಂಕರಿಸುತ್ತಾ ಸಾಗುತ್ತಿದ್ದ ಲೂಲು ಟ್ರಾವೆಲ್ಸಿನ ವೇಗದ ನಡುವೆ, ಮಳೆಬಿದ್ದು ತನ್ನ ಸದ್ದು ಹೆಚ್ಚಿಸಿಕೊಂಡ ನದಿ ಹರ್ಷಿಣಿಯ ಗದ್ದಲದ ನಡುವೆ, ಮುಸುಕೆಳೆದು ಕೂತ ಸುರೇಶನ ನಿರಾಶೆ, ಮೌನದಲ್ಲೇ ಸ್ನಾನ ಮಾಡುತ್ತಿದ್ದ ವೇದನೆ, ಯಾರಿಗೂ ಕಾಣಲಿಲ್ಲ.

ಸುಲ್ಕೇರಿ ಬಿಟ್ಟು ಕಾರ್ಕಳ ಹಾದಿ ಹಿಡಿಯುತ್ತಿದ್ದ ಬಸ್ಸನ್ನು, ಕತ್ತಲ ಘೋರ ತಿರುವಿನೊಳಗೆ ಹೊಕ್ಕ ಲೂಲು ಟ್ರಾವೆಲ್ಸಿನ ಹಿಂಬದಿಯ ಮರಿಬೆಳಕನ್ನು, ತಿರುವಿನೊಂದಿಗೆ ಅದು ಬಿಟ್ಟು ಹೋದ ಗಾಢ ನಿಟ್ಟುಸಿರನ್ನು... ಕೊನೆ ಪಕ್ಷ ಸುರೇಶನ ಮುಖದ ಮೇಲೆ ನಿಡುಸುಯ್ದ ಕರಾಳತೆಯನ್ನು ಆಕೆ ಎಲ್ಲಿಂದಾದರೂ ನೋಡಿರಬಹುದಾ? ಎನ್ನುವ ಪ್ರಶ್ನೆಯಷ್ಟೆ ದಟ್ಟವಾಗಿತ್ತು. ಕಾರ್ಕಳದ ಆನೆಕೆರೆ ಬಸದಿಯನ್ನು ಕತ್ತಲಲ್ಲಿ ನಿರುಕಿಸಿದ ಲೂಲು ಟ್ರಾವೆಲ್ಸಿನ ದೀಪಗಳು ಕೆರೆಗೆಬಿದ್ದು ಒಂದು ನಿರ್ಮಲವಾದ ಗತ್ತು ಲಭಿಸಿತ್ತು ಆನೆಕೆರೆಗೆ. ಸುರೇಶನ ಕೊನೆಯ ಡ್ಯೂಟಿಗೆ ಸಂತುಷ್ಟವಾದ ಲೂಲು ಟ್ರಾವೆಲ್ಸು ಕತ್ತಲಲ್ಲಿ ಗಾಢ ಆಕಳಿಕೆಯೊಂದನ್ನು ತೆಗೆಯುತ್ತಾ
ಬಸ್‌ಸ್ಟ್ಯಾಂಡಿನೆಡೆಗೆ ಜಾರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT