ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೇಪಾಕ್ಷಿ ಕಲ್ಲರಳಿ ಕಲೆಯಾಗಿ...

Last Updated 18 ಜುಲೈ 2015, 19:30 IST
ಅಕ್ಷರ ಗಾತ್ರ

ತಂಪಾದ ಗಾಳಿ ಆಹ್ಲಾದಮಯವಾಗಿ ಬೀಸುತ್ತಿದ್ದರೆ, ಮನಸ್ಸಿನಾಳದಲ್ಲಿ ಒಂದು ಪ್ರವಾಸ ಹೋಗಿ ಬರುವ ಬಯಕೆ ಲಗಾಟಿ ಹೊಡೆಯಲು ಆರಂಭಿಸಿತ್ತು. ಎಷ್ಟೇ ಮನಸ್ಸನ್ನು ಹತೋಟಿಗೆ ತರಲು ಯತ್ನಿಸಿದರೂ, ವರ್ಷಾಂತ್ಯದ ರಜೆ ಅವಧಿ ಯಾವುದಾದರೂ ತಂಪಾದ ಬೆಟ್ಟದ ತಪ್ಪಲಿನಲ್ಲಿ ಕಳೆಯಬೇಕೆಂದು ಬಯಸಿ ಬಿಟ್ಟಿತ್ತು. ಇದರ ಹಟಕ್ಕೆ ತಲೆಬಾಗಿ ಹೊರಟು ನಿಂತದ್ದು ಲೇಪಾಕ್ಷಿ ದರ್ಶನಕ್ಕೆ.

ಮನಸ್ಸಿನ ಆಳದಲ್ಲಿ ಬೇರೂರಿರುವ ಧಾರ್ಮಿಕ ಭಾವನೆಯನ್ನು ಇನ್ನಷ್ಟು ಉತ್ತೇಜಿಸುವ ಹಾಗೂ ಪ್ರವಾಸಕ್ಕೆ ತೆರಳಿದ್ದೇವೆಂದು ಹೇಳಿಕೊಳ್ಳಲು ಸಾಕಷ್ಟು ರಮಣೀಯ ತಾಣವನ್ನು ಒಳಗೊಂಡ ಉತ್ಕೃಷ್ಟ ತಾಣ ಇದು. ಒಮ್ಮೆ ಹೋದರೆ ಮತ್ತೊಮ್ಮೆ ಕಾಣಲೇಬೇಕೆನಿಸುವ ತಾಣ ಇದೆಂದರೂ ತಪ್ಪಾಗಲಾರದು.

ಅಂತೂ ಮನಸ್ಸಲ್ಲೇ ಎಲ್ಲಾ ನಿಶ್ಚಯಿಸಿಕೊಂಡು ಬೆಂಗಳೂರಿನಿಂದ ರೈಲೇರಿದ್ದೂ ಆಯಿತು. 120 ಕಿ.ಮೀ. ದೂರ ಬೆಂಗಳೂರಿನಿಂದ ಲೇಪಾಕ್ಷಿಗೆ. ರೈಲಲ್ಲಿ ಹೊರಟು ತಲುಪುವ ಮುನ್ನ ಮಾರ್ಗದುದ್ದಕ್ಕೂ ಕಂಡದ್ದು ಸುಂದರವಾದ ಪ್ರಕೃತಿ ಮಾತೆಯ ಅದ್ಭುತಗಳ ದರ್ಶನ. ಅಂತೂ ಲೇಪಾಕ್ಷಿ ತಲುಪಿ ರೈಲಿನಿಂದ ಇಳಿಯುತ್ತಿದ್ದಂತೆ ಒಂದು ಧಾರ್ಮಿಕ ಹಾಗೂ ಸಾಂಪ್ರದಾಯಿಕ ವಾತಾವರಣದ ಅನುಭವ ತಾನಾಗಿಯೇ ಆಗಲಾರಂಭಿಸುತ್ತದೆ. ಅಷ್ಟಾಗಿ ಆಧುನಿಕತೆಯನ್ನು ಒಳಗೊಳ್ಳದ ತಾಣ, ಸತ್ ಸಂಪ್ರದಾಯವನ್ನು ಮೈಗೂಡಿಸಿಕೊಂಡಿದ್ದು, ಅಪಾರ ಪ್ರವಾಸಿಗರನ್ನು ನಿತ್ಯ ಸೆಳೆಯುತ್ತಿದೆ.  

ದಕ್ಷಿಣದ ಭಾರತದ ಪ್ರಮುಖ ರಾಜ್ಯಗಳಲ್ಲಿ ಒಂದಾದ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿದೆ. ಆಂಧ್ರಪ್ರದೇಶದ ಹಿಂದುಪುರ ಪಟ್ಟಣದಿಂದ 15 ಕಿ.ಮೀ. ದೂರದಲ್ಲಿದೆ. ತುಂಬಾ ಚಿಕ್ಕ ಹಳ್ಳಿಯಾದರೂ ಹೇರಳ ಪ್ರಮಾಣದ ಐತಿಹಾಸಿಕ ಹಾಗೂ ಧಾರ್ಮಿಕ ಸ್ಥಳವನ್ನು ಇದು ಒಳಗೊಂಡಿದೆ. ಸ್ಥಳೀಯರ ಪಾಲಿಗೆ ಮಾತ್ರವಲ್ಲ, ಪ್ರವಾಸಿಗರ ಪಾಲಿಗೆ ಇದೊಂದು ಪವಿತ್ರ ಸ್ಥಳ. ಮೂರು ಪ್ರಮುಖ ದೇವಾಲಯಗಳಾದ ಶಿವ, ವಿಷ್ಣು ಹಾಗೂ ವೀರಭದ್ರ ಇಲ್ಲಿ ನೆಲೆಸಿದ್ದಾರೆ.

ಕೂರ್ಮ ಶಿಲೆ ಇಲ್ಲಿನ ಅತ್ಯಂತ ಜನಪ್ರಿಯ ತಾಣ. ಈ ಗುಡ್ಡದ ಮೇಲೆ ಶ್ರೀರಾಮ, ರಘುನಾಥ, ವೀರಭದ್ರ, ಪಾಪನಾಥೇಶ್ವರ ಹಾಗೂ ದೇವಿ ದುರ್ಗಾ ಮಾತೆಯ ಮಂದಿರಗಳು ಇವೆ. ಅಷ್ಟೇನು ಪ್ರಯಾಸವಾಗಿ ಏರುವ ತೊಂದರೆ ಇಲ್ಲ. ಅತ್ಯಾಕರ್ಷಕ ಕರಕುಶಲ ಪ್ರೌಢಿಮೆ ಇಲ್ಲಿ ಗಮನ ಸೆಳೆಯುತ್ತದೆ. ವಿಶ್ವಕರ್ಮ ಬ್ರಾಹ್ಮಣರ ಆಕರ್ಷಕ ವಾಸ್ತುಶಿಲ್ಪ ಇಲ್ಲಿ ಕಣ್ಮನ ಸೆಳೆಯುತ್ತದೆ. ವಿಶ್ವಕರ್ಮ ಜನಾಂಗದ ಶಿಲ್ಪಿಯಾಗಿರುವ ಅಮರಶಿಲ್ಪಿ ಜಕಣಾಚಾರಿ ಇಲ್ಲಿನ ಶಿಲ್ಪ ಹಾಗೂ ಕಂಬಗಳ ಕೆತ್ತನೆಯಲ್ಲಿ ಸಹಕಾರ ನೀಡಿದ್ದಾರೆ ಎನ್ನಲಾಗುತ್ತಿದೆ. ಇವರಲ್ಲದೇ ಜನಪ್ರಿಯ ಶಿಲ್ಪಿಗಳಾದ ಕಾಕೋಜು ಹಾಗೂ ಮೊರೋಜು ಕೂಡ ಇಲ್ಲಿನ ದೇವಾಲಯ ಗೋಡೆಯ ಮೇಲೆ ಶಿಲ್ಪಗಳನ್ನು ಸಿದ್ಧಪಡಿಸಲು ಸಹಕಾರ ನೀಡಿದ್ದಾರೆ ಎನ್ನಲಾಗುತ್ತದೆ.

ರಾಮಾಯಣ ಮಹಾಭಾರತದ ದೃಶ್ಯಗಳನ್ನು ಇಲ್ಲಿನ ದೇವಾಲಯಗಳ ಗೋಡೆಯಮೇಲೆ ಶಿಲ್ಪ ರೂಪದಲ್ಲಿ ಕೆತ್ತಲಾಗಿದೆ. ಇದನ್ನು ನೋಡುವುದೇ ಮನಮೋಹಕ. ಹೆಣ್ಣುಮಕ್ಕಳು ಅತ್ಯಂತ ಇಷ್ಟಪಡುವ ಲೇಪಾಕ್ಷಿ ಸೀರೆಗಳನ್ನು ಇಲ್ಲಿನ ಶಿಲ್ಪಗಳ ಕೆತ್ತನೆಯನ್ನೇ ಮಾದರಿಯಾಗಿಟ್ಟುಕೊಂಡು ಸಿದ್ಧಪಡಿಸಲಾಗಿದೆ. ನೇತಾಡುವ ಕಂಬ, ಕಲ್ಲಿನ ಸರಪಣಿ, ದುರ್ಗಾಪಾದ, ವಾಸ್ತು ಪುರುಷ, ನರ್ತಿಸುತ್ತಿರುವ ಮಹಿಳೆ ಸೇರಿದಂತೆ ಹಲವಾರು ಆಕರ್ಷಣೆಗಳು ಇಲ್ಲಿ ನೋಡುಗರನ್ನು ಸೆಳೆಯುತ್ತವೆ. ನೈಸರ್ಗಿಕ ಬಣ್ಣವನ್ನು ಇಲ್ಲಿನ ಶಿಲ್ಪಗಳಿಗೆ ಬಳಿಯಲಾಗಿದೆ. ಇಲ್ಲಿನ ಮುಖ್ಯ ಆಕರ್ಷಣೆಯಾದ ವೀರಭದ್ರ ದೇವಾಲಯಕ್ಕೆ ದಕ್ಷಿಣ ಭಾರತದ ಎಲ್ಲೆಡೆಯಿಂದ ಭಕ್ತರು ಆಗಮಿಸುತ್ತಾರೆ.

ವಾತಾವರಣ
ವರ್ಷದ ಎಲ್ಲಾ ಅವಧಿಯಲ್ಲೂ ಇಲ್ಲಿನ ವಾತಾವರಣ ಸಾಮಾನ್ಯವಾಗಿ ಇರುತ್ತದೆ. ಬೇಸಿಗೆಯಲ್ಲಿ ಸೆಖೆ ಜಾಸ್ತಿ. ಲೇಪಾಕ್ಷಿಗೆ ತಲುಪಲು ಇರುವ ಉತ್ತಮ ಸಂಪರ್ಕ ಕೊಂಡಿ ರಸ್ತೆ ಮಾರ್ಗ. ಈ ಸ್ಥಳ ಯಾವುದೇ ರೈಲು ಅಥವಾ ವಿಮಾನ ನಿಲ್ದಾಣವನ್ನು ಹೊಂದಿಲ್ಲ. ಪ್ರದೇಶದ ವಾಸ್ತುಶಿಲ್ಪ ಹಾಗೂ ಸಾಂಪ್ರದಾಯಿಕ ಶೈಲಿಯ ಮನೆಗಳನ್ನು ನೋಡಲಾದರೂ ಒಮ್ಮೆ ಭೇಟಿ ಕೊಡಬೇಕು.

ಮಾರ್ಗ ದರ್ಶನ
ತೆರಳಲು ರಸ್ತೆ ಮಾರ್ಗ ಆಯ್ಕೆ ಮಾಡಿಕೊಂಡರೆ ರಾಷ್ಟ್ರೀಯ ಹೆದ್ದಾರಿ 7 ಈ ಮೂಲಕ ಬರುವುದು ಅತ್ಯುತ್ತಮ. ಇದು ಬೆಂಗಳೂರಿನಿಂದ ಲೇಪಾಕ್ಷಿಗೆ ನೇರ ಸಂಪರ್ಕ ಕಲ್ಪಸುತ್ತದೆ. ಅನಂತಪುರಂನಿಂದ ಕೇವಲ 15 ಕಿ.ಮೀ. ದೂರದಲ್ಲಿ ಈ ಊರಿದೆ. ಹೈದ್ರಾಬಾದ್‌ನಿಂದ 476 ಕಿ.ಮೀ. ಹಾಗೂ ಬೆಂಗಳೂರಿನಿಂದ ಕೇವಲ 120 ಕಿ.ಮೀ. ದೂರದಲ್ಲಿದೆ. ಈ ಎಲ್ಲಾ ಕಡೆಗಳಿಂದ ಲೇಪಾಕ್ಷಿಗೆ ಹೇರಳ ಬಸ್ ಸಂಪರ್ಕ ಇದೆ.

ಲೇಪಾಕ್ಷಿಗೆ ರೈಲು ನಿಲ್ದಾಣ ಸೌಲಭ್ಯ ಇಲ್ಲ. ಅನಂತಪುರಂ ತಲುಪಿ ಅಲ್ಲಿಂದ ಲೇಪಾಕ್ಷಿ ಅನ್ಯ ವಾಹನದಲ್ಲಿ ಆಗಮಿಸಬೇಕು. ಸಾಕಷ್ಟು ವಾಹನಗಳು ಸಿಗುತ್ತವೆ. ಏಕೆಂದರೆ ಇಲ್ಲಿಗೆ ಬೆಂಗಳೂರು ಮಾತ್ರವಲ್ಲ ಹೈದ್ರಾಬಾದ್, ಚೆನ್ನೈ, ದಿಲ್ಲಿ ಸೇರಿದಂತೆ ರಾಷ್ಟ್ರದ ಹಲವೆಡೆಯಿಂದ ಪ್ರವಾಸಿಗರು ಆಗಮಿಸುತ್ತಾರೆ. ಲೇಪಾಕ್ಷಿಗೆ ಸಮೀಪದ ವಿಮಾನ ನಿಲ್ದಾಣ ಹೈದ್ರಾಬಾದ್ ಆಗಿದೆ. ಇದು ಡೊಮೆಸ್ಟಿಕ್ ಹಾಗೂ ಅಂತಾರಾಷ್ಟ್ರೀಯ ವಿಮಾನಗಳ ಆಗಮನ, ನಿರ್ಗಮನ ಸೌಲಭ್ಯ ಹೊಂದಿದೆ. ದೇಶದ ಹಾಗೂ ಅನ್ಯ ರಾಷ್ಟ್ರದ ಹಲವು ಭಾಗಗಳಿಂದ ಇಲ್ಲಿಗೆ ವಿಮಾನ ಸಂಪರ್ಕ ಉತ್ತಮವಾಗಿದೆ. ವಿಮಾನ ನಿಲ್ದಾಣಕ್ಕೆ ತಲುಪಿದ ಮೇಲೆ ಅಲ್ಲಿಂದ ಟ್ಯಾಕ್ಸಿ ಪಡೆದು ಲೇಪಾಕ್ಷಿ ತಲುಪಬಹುದು.

ಭೇಟಿಗೆ ಸುಸಂದರ್ಭ
ಅಕ್ಟೋಬರ್‌ನಿಂದ ಫೆಬ್ರುವರಿ ನಡುವಿನ ಅವಧಿಯಲ್ಲಿ ಲೇಪಾಕ್ಷಿಗೆ ಬರಬಹುದು. ಈ ಸಂದರ್ಭದಲ್ಲಿ ವಾತಾವರಣ ಅತ್ಯಂತ ಸಹನೀಯವಾಗಿರುತ್ತದೆ. ಹೊರಗೆ ಸುತ್ತಾಡಲು ಉತ್ತಮ ಪರಿಸರ ಈ ಸಮಯದಲ್ಲಿ ಇರುತ್ತದೆ. ಉತ್ತಮ ವಾತಾವರಣ ಇರುವ ಕಾರಣಕ್ಕಾಗಿಯೇ ಹಲವು ಪ್ರವಾಸಿಗರು ದಕ್ಷಿಣ ಭಾರತ ಪ್ರವಾಸವನ್ನು ಚಳಿಗಾಲದಲ್ಲಿ ಇರಿಸಿಕೊಳ್ಳುತ್ತಾರೆ. ಒಂದು ಜಾಕೆಟ್ ಅಥವಾ ಶಾಲು ಹಿಡಿದು ಬರುವುದು ಉತ್ತಮ. ಸಂಜೆ ಹಾಗೂ ರಾತ್ರಿ ಕೊಂಚ ಚಳಿ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT