ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಂಗಿಕ ಶಿಕ್ಷಣಕ್ಕೆ ವಿರೋಧ

ಮತ್ತೊಂದು ವಿವಾದದಲ್ಲಿ ಹರ್ಷವರ್ಧನ್‌
Last Updated 27 ಜೂನ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ‘ಶಾಲೆಯಲ್ಲಿ ಲೈಂಗಿಕ ಶಿಕ್ಷಣ ಬೇಡ’ ಎನ್ನುವ ಮೂಲಕ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಶುಕ್ರವಾರ ಮತ್ತೊಂದು ಹೊಸ ವಿವಾದ ಕ್ಕೆ ಸಿಲುಕಿದ್ದಾರೆ.

ಈ ಕುರಿತು ಸಚಿವರ  ವೈಯಕ್ತಿಕ ಅಂತರ್ಜಾಲ ತಾಣದಲ್ಲಿ ಹಲವಾರು ದಿನಗಳಿಂದ ಹರಿದಾಡುತ್ತಿರುವ ಹೇಳಿಕೆಗೆ ರಾಜಕೀಯ ಪಕ್ಷಗಳು ಸೇರಿದಂತೆ ದೇಶದ ವಿವಿಧ ವಲಯಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಶಾಲೆಯಲ್ಲಿ ಲೈಂಗಿಕ ಶಿಕ್ಷಣ ನಿರ್ಬಂಧಿಸುವ ಸಚಿವರ ಹೇಳಿಕೆಯನ್ನು ಲೇಖಕ ಚೇತನ್‌ ಭಗತ್‌ ಸೇರಿದಂತೆ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದು­ಕೊಂಡಿದ್ದಾರೆ.

ಸ್ವತಃ ವೈದ್ಯರೂ ಆಗಿರುವ ಹರ್ಷ­ವರ್ಧನ್‌ ಹೇಳಿಕೆಗೆ ಅನೇಕರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಈ ಮೊದಲು ಕಾಂಡೋಮ್ ಕುರಿತು ಹರ್ಷವರ್ಧನ್‌ ನೀಡಿದ್ದ ಹೇಳಿಕೆ ವಿವಾದ ತಣ್ಣಗಾಗುವ ಮೊದಲೇ  ಅವರು ಈಗ ಮತ್ತೊಂದು ಹೊಸ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ.

ತಮ್ಮ ಹೇಳಿಕೆ ಅವಾಂತರ ಸೃಷ್ಟಿಸಿರು­ವುದನ್ನು ಮನಗಂಡು   ಎಚ್ಚೆತ್ತುಕೊಂಡಿ­ರುವ ಆರೋಗ್ಯ   ಸಚಿವರು ತಕ್ಷಣವೇ ತೇಪೆ ಹಚ್ಚುವ ಕೆಲಸ ಮಾಡಿದ್ದಾರೆ. ಶಾಲೆಯಲ್ಲಿ ಲೈಂಗಿಕ ಶಿಕ್ಷಣ ನಿರ್ಬಂಧಿಸುವಂತೆ ಮಾಧ್ಯಮಗಳಲ್ಲಿ ಪ್ರಕಟವಾದ ಹೇಳಿಕೆಯನ್ನು ತಳ್ಳಿ ಹಾಕಿದ್ದಾರೆ.

‘ನನ್ನ ವೈಯಕ್ತಿಕ ಅಂತರ್ಜಾಲ ತಾಣದಲ್ಲಿ (www.drharshav­ardhan.com) ಪ್ರಕಟವಾಗಿರುವ ಹೇಳಿಕೆ  ಸಂಪೂರ್ಣ ನನ್ನದೇ ಅಭಿಪ್ರಾ­ಯವಾಗಿದೆ. 2007ರಲ್ಲಿ ಯುಪಿಎ ಸರ್ಕಾರ ವಯಸ್ಕರ ಲೈಂಗಿಕ ಶಿಕ್ಷಣ ಯೋಜನೆಯನ್ನು ಯಥಾವತ್ತಾಗಿ ಜಾರಿಗೊಳಿಸಲು ಮುಂದಾದಾಗ ವೈದ್ಯನಾಗಿ ವಿರೋಧ ವ್ಯಕ್ತಪಡಿಸಿದ್ದ ಅಭಿಪ್ರಾಯ ಅದು’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸದ್ಯ ಅಮೆರಿಕ ಪ್ರವಾಸದಲ್ಲಿರುವ ಸಚಿವರು, ‘ವೃತ್ತಿಯಲ್ಲಿ ವೈದ್ಯ­ನಾ­ಗಿರುವ ನಾನು ವೈಜ್ಞಾನಿಕ ವಿಚಾರಗಳಿಗೆ ಸದಾ ತೆರೆದುಕೊಂಡಿ­ದ್ದೇನೆ. ನಮ್ಮ ಸಂಸ್ಕೃತಿಗೆ ಅಪಚಾರವಾಗದ ವೈಜ್ಞಾನಿಕ ಹಾಗೂ ಮೌಲ್ಯ­ಯುತ ಶಿಕ್ಷಣ ಪದ್ಧತಿಗೆ ಸದಾ ಬೆಂಬಲವಿರುತ್ತದೆ’ ಎಂದು ಹೇಳಿದ್ದಾರೆ.

ಹರ್ಷ­ವರ್ಧನ್ ಅವರು 11 ಅಂಶ­­ಗಳನ್ನು ಪ್ರಸ್ತಾಪಿಸಿದ್ದರು.   ಅದರಲ್ಲಿ ‘ಶಾಲೆಯಲ್ಲಿ ಲೈಂಗಿಕ ಶಿಕ್ಷಣ ನಿರ್ಬಂಧಿಸಿ ಯೋಗವನ್ನು ಕಡ್ಡಾಯಗೊಳಿಸಬೇಕು’ ಎನ್ನುವ ವಿಷಯವೂ ಒಂದಾಗಿತ್ತು.

ಕಾಂಗ್ರೆಸ್‌ ಪಕ್ಷದ ವಕ್ತಾರ ಮನೀಶ್‌ ತಿವಾರಿ, ಸಿಪಿಐ ನಾಯಕ ಆನಿ ರಾಜಾ ಅವರು ಹರ್ಷವರ್ಧನ್‌ ಅವರ ಹೇಳಿಕೆ­ಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ‘ಸ್ವತಃ ವೈದ್ಯರೂ ಆಗಿರುವ ಹಾಗೂ ಆರೋಗ್ಯ ಸಚಿವ ಹರ್ಷವರ್ಧನ್‌ ಅವರ ಈ ಹೇಳಿಕೆಯಿಂದ ತೀವ್ರ ನಿರಾಸೆ­ಯಾಗಿದೆ‘ ಎಂದು ಲೇಖಕ ಚೇತನ್‌ ಭಗತ್‌ ಪ್ರತಿಕ್ರಿಯೆ ನೀಡಿದ್ದಾರೆ.

‘ಬಿಜೆಪಿ ದೇಶವನ್ನು ಮುಂದಕ್ಕೆ ಕೊಂಡೊಯ್ಯ­ಬೇಕೇ ಹೊರತು ಹಳತಾದ ಯೋಚನೆ­ಗಳಿಂದ ಹಿಂದಕ್ಕೆ ಕೊಂಡೊಯ್ಯಬಾರದು’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT